ಬುಧವಾರ, ಜನವರಿ 22, 2020
25 °C
ಕಲ್ಯಾಣ ಕರ್ನಾಟಕ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದಿಂದ ಬೃಹತ್‌ ಪ್ರತಿಭಟನೆ

ಖಾಸಗಿ ಶಾಲೆಗಳು ಸಂಪೂರ್ಣ ಬಂದ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: 1995ರ ನಂತರ ಪ್ರಾರಂಭವಾದ ಎಲ್ಲ ಶಾಲೆಗಳನ್ನು ಅನುದಾನಕ್ಕೊಳಪಡಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಕಲ್ಯಾಣ ಕರ್ನಾಟಕ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ನೇತೃತ್ವದಲ್ಲಿ ಸಾವಿರಾರು ಶಿಕ್ಷಕ–ಶಿಕ್ಷಕಿಯರು ಶಾಲೆಗಳನ್ನು ಬಂದ್‌ ಮಾಡಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್‌ ಪ್ರತಿಭಟನೆ ನಡೆಸಿದರು.

ಖಾಸಗಿ ಶಾಲೆಗಳಿಗೆ ರಜೆ ಕೊಟ್ಟಿರುವ ಮಾಹಿತಿ ಇಲ್ಲದ ಹಲವು ವಿದ್ಯಾರ್ಥಿಗಳು ಶಾಲೆಗೆ ತೆರಳಿ ವಾಪಸ್‌ ಬಂದರು.

1995ರಿಂದ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ವಯಸ್ಸು ಮೀರುತ್ತಿದ್ದು, ಬೇಗನೇ ಶಾಲೆಗಳನ್ನು ಅನುದಾನಕ್ಕೊಳಪಡಿಸುವ ಮೂಲಕ ಬಡ ಸಿಬ್ಬಂದಿಗೆ ನ್ಯಾಯ ಒದಗಿಸಬೇಕು ಎಂದು ಒಕ್ಕೂಟದ ಸದಸ್ಯರು ಒತ್ತಾಯಿಸಿದರು.

371 ಜೆ ಅಡಿ ಕಲ್ಯಾಣ ಕರ್ನಾಟಕ ಭಾಗದ ಖಾಸಗಿ ಶಾಲೆಗಳಿಗೆ ಕೆಕೆಆರ್‌ಡಿಬಿಯಿಂದ ಅನುದಾನ ನೀಡಬೇಕು. ಖಾಸಗಿ ಶಾಲೆಯ ಶಿಕ್ಷಕರಿಗೆ ಕನಿಷ್ಠ ವೇತನ ಕೊಡಬೇಕು. ಅಭಿವೃದ್ಧಿ ಮಂಡಳಿಯಿಂದ ನೀಡುವ ಅನುದಾನಕ್ಕೆ ಸರ್ಕಾರಿ ಶಾಲೆ, ಅನುದಾನಿತ ಶಾಲೆ ಹಾಗೂ ಖಾಸಗಿ ಶಾಲೆಗಳೆಂಬ ಭೇದಭಾವ ಮಾಡಬಾರದು. ಖಾಸಗಿ ಶಾಲೆಗಳಲ್ಲಿ ಎಲ್ಲ ಮಕ್ಕಳ, ಶಿಕ್ಷಕರ ಹಾಗೂ ಶಾಲೆಯ ಭೌತಿಕ ಮಾಹಿತಿಯನ್ನು ಸ್ಯಾಟ್ಸ್‌ ತಂತ್ರಾಂಶದಲ್ಲಿ ಹಾಕುತ್ತಿರುವುದರಿಂದ ಹಾಗೂ ಯೂ ಡೈಸ್ ಪ್ಲಸ್‌ನ ಮಾಹಿತಿಗಳನ್ನು ಸಲ್ಲಿಸುತ್ತಿರುವುದರಿಂದ ಹಾಗೂ ಎಲ್ಲ ಮಾಹಿತಿಗಳು ಲಭ್ಯವಾಗುವುದರಿಂದ ಮಾನ್ಯತೆ ನವೀಕರಣದ ಅವಶ್ಯಕತೆ ಇದೆಯೇ ಎಂದು ಪ್ರಶ್ನಿಸಿದರು.

ಪ್ರತಿವರ್ಷವೂ ಮಾನ್ಯತೆ ನವೀಕರಣದ ಹೆಸರಿನಲ್ಲಿ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ. ಆದ್ದರಿಂದ ಖಾಸಗಿ ಶಾಲೆಗಳ ಮಾನ್ಯತೆ ನವೀಕರಣ ಪದ್ಧತಿ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.

ಸರ್ಕಾರಿ ಶಾಲೆ ಮಕ್ಕಳಿಗೆ ಸಿಗುವ ಎಲ್ಲ ಸೌಲಭ್ಯಗಳನ್ನು ಖಾಸಗಿ ಶಾಲೆ ಮಕ್ಕಳಿಗೂ ಕೊಡಬೇಕು. ಮೊದಲಿನಂತೆ ಆರ್‌ಟಿಇ ಅಡಿ ಖಾಸಗಿ ಶಾಲೆಗಳಲ್ಲಿ ಪ್ರವೇಶ ಪಡೆಯುವಂತೆ ನಿಯಮಗಳನ್ನು ಬದಲಿಸಬೇಕು. ಶೈಕ್ಷಣಿಕ ಉದ್ದೇಶಕ್ಕಾಗಿ 109ರಡಿ ಭು ಪರಿವರ್ತನೆ ಕಾಯ್ದೆಯನ್ನು ಸರಳಗೊಳಿಸಬೇಕು ಮತ್ತು ನೋಂದಣಿ, ಪರಿವರ್ತನೆಯನ್ನು ಉಚಿತವಾಗಿ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ನಿರ್ಮಲ ಕರ್ನಾಟಕ ಯೋಜನೆಯಡಿ ಶೈಕ್ಷಣಿಕ ಸಂಸ್ಥೆಗಳಿಗೆ ಶೌಚಾಲಯಗಳನ್ನು ಕಟ್ಟಿಸಿಕೊಡಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಒಕ್ಕೂಟದ ಅಧ್ಯಕ್ಷ ಸುನೀಲ ಹುಡಗಿ, ಕಾರ್ಯದರ್ಶಿ ಅರುಣಕುಮಾರ ಎಸ್‌.ಪಿ, ಚನ್ನಬಸಪ್ಪ ಗಾರಂಪಳ್ಳಿ, ರಾಜಶೇಖರ, ಬಸವರಾಜ ದಿಗ್ಗಾಂವಿ, ಚಕೋರ ಮೆಹತಾ, ನೌಶಾದ್‌ ಇರಾನಿ, ಚಿತ್ತಾಪುರದ ಶಿವಕುಮಾರ ಘಾವರಿಯಾ, ಸೇಡಂನ ವಿಜಯಕುಮಾರ ಗುತ್ತೇದಾರ, ಆಳಂದದ ಬಾಬುರಾವ್ ಸುಳ್ಳದ, ರವಿ ಕುಲಕರ್ಣಿ, ಶಹಾಬಾದ್‌ನ ಮಹೇಶ ಧರಿ, ಕಾಶೀನಾಥ ಮಡಿವಾಳ, ಭೀಮಶೆಟ್ಟಿ ಮುರಡಾ, ಸಿದ್ದಾರೆಡ್ಡಿ ಕಾಳಗಿ, ಅಪ್ಪಾರಾವ್‌ ಹೆಗ್ಗಿ, ನವೀನ್‌ ಕುಮಾರ್‌ ಮುನ್ನೂರ, ಸಾಹೇಬಗೌಡ ಪುರದಾಳ ನೇತೃತ್ವ ವಹಿಸಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು