ಶುಕ್ರವಾರ, ಮೇ 27, 2022
30 °C
ಎನ್‌.ವಿ. ಕಾಲೇಜಿನಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ

ಆಸಕ್ತಿಗೆ ಇಂಬು ನೀಡಿದ ಮಾದರಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಇಲ್ಲಿನ ನೂತನ ವಿದ್ಯಾಲಯ ಸಂಸ್ಥೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಗುಲಬರ್ಗಾ ವಿಶ್ವವಿದ್ಯಾಲಯ ಮಟ್ಟದ ವಿಜ್ಞಾನ ವಸ್ತುಪ್ರದರ್ಶನ ವಿದ್ಯಾರ್ಥಿಗಳ ಆಸಕ್ತಿಗಳಿಗೆ ಇಂಬು ನೀಡಿತು. ‘ಮನುಕುಲಕ್ಕಾಗಿ ವಿಜ್ಞಾನ ಆವಿಷ್ಕಾರ’ ಎಂಬ ಯೋಜನೆ ಅಡಿ ಐದು ಪ್ರತ್ಯೇಕ ವಿಭಾಗಗಳಲ್ಲಿ ವಿದ್ಯಾರ್ಥಿಗಳು 60ಕ್ಕೂ ಹೆಚ್ಚು ಮಾದರಿಗಳನ್ನು ಪ್ರದರ್ಶಿಸಿದರು.

ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ಮಾದರಿ ಪ್ರದರ್ಶಿಸಿದ ವಿ.ಜಿ. ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರಾದ ಸಾನೋಲ್ಲಿ ನಫೀಜ್‌ ಫಾರಾ ಹಾಗೂ ಭೂಮಿಕಾ ತಮ್ಮ ಉತ್ತಮ ನಿರೂಪಣೆ ಮೂಲಕ ಗಮನ ಸೆಳೆದರು. ಇದೇ ಕಾಲೇಜಿನ ಪರ್ವಿನ್‌ ಸುಹಾನಾ ಹಾಗೂ ಪ್ರೀತಿ ಅವರ ಪ್ರಯೋಗಿಸಿದ ‘ಜೈವಿಕ ಇಂಧನ ಉತ್ಪಾದನೆ’ ಮಾದರಿ ತೀರ್ಪುಗಾರರ ಪ್ರಶಂಸೆಗೂ ಪಾತ್ರವಾಯಿತು. ಸುಹಾಸಿನಿ ಅವರ ಮಾರ್ಗದರ್ಶನದಲ್ಲಿ ಸಿದ್ಧಗೊಂಡ ಈ ಮಾದರಿ ಕೃಷಿ ಕ್ಷೇತ್ರದಲ್ಲೂ ಹೇಗೆ ಇಂಧನ ಪೂರಕ ಕೆಲಸಗಳನ್ನು ನಿರ್ವಹಿಸಬಹುದು ಎಂಬುದನ್ನು ಪ್ರತಿಬಿಂಬಿಸಿತು.

ಶರಣಬಸವೇಶ್ವರ ವಿಜ್ಞಾನ ಪದವಿ ಕಾಲೇಜಿನ ಅನೂಪ್‌ ಉಡಗಿ ಹಾಗೂ ವಿವೇಕ ಪಾಟೀಲ ಅವರ ಜೋಡಿಯು, ವೈರಾಣು ಸೋಂಕು ಹಾಗೂ ಅದರ ಮುಕ್ತಿಗೆ ವ್ಯಾಕ್ಸಿನ್‌ಗಳು ಹೇಗೆ ಕೆಲಸ ಮಾಡುತ್ತವೆ ಎಂಬ ಮಾದರಿ ಮೂಲಕ ಜೀವಿಜ್ಞಾನದ ಕೌತುಕಗಳನ್ನು ಬಿಚ್ಚಿಟ್ಟರು. ಸ್ನೇಹಾ ಹಾಗೂ ಐಶ್ವರ್ಯ ‘ಸಂಯುಕ್ತ ಕೃಷಿ’ಯ ಮೂಲಕ ಅತಿ ಹೆಚ್ಚಿನ ಆಹಾರ ಉತ್ಪಾದನೆಯ ಸಾಧ್ಯತೆಗಳನ್ನು ತೆರೆದಿಟ್ಟರು.

ಕಲಬುರ್ಗಿಯ ಸರ್ಕಾರಿ ಪದವಿ ಕಾಲೇಜಿನ ಉಷಾ, ಯಶೋದಾ, ಕೌಶಲ್ಯ ಅವರು ’ನಮ್ಮ ಭವಿಷ್ಯ ನಮ್ಮ ಕೈಯಲ್ಲಿ‘ ಎಂಬ ಅರಿವು ಮೂಡಿಸಿದರು. ಬೀದರ್‌ನ ಕರ್ನಾಟಕ ಪದವಿ ಕಾಲೇಜಿನ ನೇಹಾ, ಕಾಂಚನಾ ಅವರು ಕ್ಷುದ್ರಗ್ರಹಗಳ ಮೇಲೆ ನಡೆಸಬಹುದಾದ ಗಣಿಗಾರಿಕೆ ಮೇಲೆ ಬೆಳಕು ಚೆಲ್ಲಿದರು. ರಾಯಚೂರು ಸರ್ಕಾರಿ ಮಹಿಳಾ ಪದವಿ ಕಾಲೇಜಿನ ಶ್ವೇತಾ, ಪಲ್ಲವಿ, ಸಿಂಧನೂರಿನ ವಿಕಾಸ್‌ ಹಾಗೂ ವರಪ್ರಸಾದ್‌ ಪ್ರದರ್ಶಿಸಿದ ‘ಮಾಲಿನ್ಯ ನಿಯಂತ್ರಣ’ ಹಾಗೂ ‘ಚರಂಡಿ ತ್ಯಾಜ್ಯದ ಗಮನಾರ್ಹ ಬಳಕೆ’ಯ ಮಾದರಿಗಳು ಕಣ್ಣು–ಮನ ಸೆಳೆದವು.

ಎನ್‌.ವಿ. ಕಾಲೇಜಿನ ಭಾಗ್ಯಶ್ರೀ ಪಾಟೀಲ ಹಾಗೂ ಭಾಗ್ಯಶ್ರೀ ಪೂಜಾರಿ, ಶ್ರೀವತ್ಸ ಸರದೇಶಪಾಂಡೆ, ಹರ್ಷಿತಾ ಕುಲಕರ್ಣಿ ಅವರ ಎರಡು ತಂಡಗಳು ಮಿಶ್ರ ಬೇಸಾಯಿ, ಜೈವಿಕ ಇಂಧನ, ಮಳೆ ನೀರು ಮರುಬಳಕೆ, ಪರಿಸರ ಸ್ನೇಹಿ ತಂತ್ರಜ್ಞಾನ ಬಳಿಕೆ ಮುಂತಾದ ವಿಷಯಗಳ ಮೇಲೆ ವಿವರಣೆ ನೀಡಿ ಸೈ ಎಣಿಸಿಕೊಂಡರು.

ಗ್ರಾಮೀಣ ವಿದ್ಯಾರ್ಥಿಗಳು: ಸೇಡಂನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿಗಳಾದ ಪ್ರಿಯಾಂಕಾ ಹಾಗೂ ಸುಷ್ಮಾ ಅವರ ಪ್ರಯೋಗ ಕೂಡ ಗ್ರಾಮೀಣ ವಿದ್ಯಾರ್ಥಿಗಳ ವಿಜ್ಞಾನ ಆಸಕ್ತಿಗೆ ಕನ್ನಡಿ ಹಿಡಿಯಿತು. ತ್ಯಾಜ್ಯಗಳನ್ನು ಮರುಬಳಕೆ ಮಾಡಿಕೊಳ್ಳುವ ವಿಧಾನಗಳನ್ನು ಮನದಟ್ಟು ಮಾಡಿದರು. ಶಿವಾಣಿ, ಭರತ್‌, ಶಾರದಾ, ಮುಸ್ತಾಕ್‌ ಸೇರಿ ಒಟ್ಟು ಐದು ತಂಡಗಳು ಪಾಲ್ಗೊಂಡವು.

ಉದ್ಘಾಟನೆ: ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ, ಕಾಲೇಜು ಶಿಕ್ಷಣ ಇಲಾಖೆ, ನೂತನ ವಿದ್ಯಾಲಯ ಸಂಸ್ಥೆಯ ಆಶ್ರಯದಲ್ಲಿ ಆಯೋಜಿಸಿದ್ದ ಪ್ರದರ್ಶನವನ್ನು ಗುಲಬರ್ಗಾ ವಿ.ವಿ ಕುಲಪತಿ ಪ್ರೊ.ದಯಾನಂದ ಅಗಸರ ಉದ್ಘಾಟಿಸಿದರು. ಸಂಸ್ಥೆಯ ಅಧ್ಯಕ್ಷ ಡಾ.ಗೌತಮ್‌ ಆರ್‌. ಜಹಾಗಿರದಾರ್‌ ಅಧ್ಯಕ್ಷತೆ ವಹಿಸಿದ್ದರು. ಪರಿಷತ್ತಿನ ಅಧ್ಯಕ್ಷ ಗಿರೀಶ ಕಡ್ಲೇವಾಡ, ಸದಸ್ಯರಾದ ದಾನಿ ಬಾಬುರಾವ್, ಸೂರ್ಯಪ್ರಕಾಶ ಘನಾತೆ, ಪ್ರಕಾಶ ಲಕ್ಕಶೆಟ್ಟಿ, ಮಹಾರುದ್ರಪ್ಪ ಅಣದೂರೆ ವೇದಿಕೆ ಮೇಲಿದ್ದರು.‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು