ಸೋಮವಾರ, ಸೆಪ್ಟೆಂಬರ್ 20, 2021
27 °C

ಬಿಡುಗಡೆ ಆಗದ ಖ್ಯಾತ ನಟರ ಸಿನಿಮಾಗಳು, ಕೋವಿಡ್ 3ನೇ ಅಲೆ ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ನಗರದ ಮಲ್ಟಿಪ್ಲೆಕ್ಸ್‌ಗಳು, ಚಿತ್ರಮಂದಿರಗಳ ಪೈಕಿ ಮಿರಾಜ್‌ ಸಿನಿಮಾಸ್‌ನಲ್ಲಿ ಗುರುವಾರದಿಂದ ಸಿನಿಮಾ ಪ್ರದರ್ಶನ ಆರಂಭವಾಗಿದೆ. ಆದರೆ, ಪ್ರೇಕ್ಷಕರು ಮಾತ್ರ ಮೊದಲಿನಂತೆ ಬರುತ್ತಿಲ್ಲ.

ಮಿರಾಜ್ ಸಿನಿಮಾಸ್‌ನಲ್ಲಿ ಮೂರು ಸ್ಕ್ರೀನ್‌ಗಳಿವೆ. ಅದರಲ್ಲಿ ಒಂದು ಸ್ಕ್ರೀನ್‌ನಲ್ಲಿ ಪ್ರದರ್ಶನ ಆರಂಭಿಸಲಾಗಿದೆ. ದಿನಕ್ಕೆ ನಾಲ್ಕು ಪ್ರದರ್ಶನಗಳು ಇರಲಿವೆ ಎಂದು ಮಿರಾಜ್ ಸಿನಿಮಾಸ್‌ನ ವ್ಯವಸ್ಥಾಪಕ ಅಮಿತ್ ತಿಳಿಸಿದರು.

ಒಂದು ಸ್ಕ್ರೀನ್‌ನಲ್ಲಿ 316 ಆಸನಗಳು ಇವೆ. ಸರ್ಕಾರ ಶೇ 50 ರಷ್ಟು ಪ್ರೇಕ್ಷಕರೊಂದಿಗೆ ಮಾತ್ರ ಪ್ರದರ್ಶನ ಆರಂಭಿಸಲು ಸೂಚಿಸಿದೆ. ಅದರಂತೆ ಅಂತರ ಕಾಪಾಡಿ 156 ಆಸನಗಳ ವ್ಯವಸ್ಥೆ ಮಾಡಲಾಗಿದೆ. ಗುರುವಾರ 50 ಪ್ರೇಕ್ಷಕರು ಚಿ‌ತ್ರ ವೀಕ್ಷಿಸಿದರು. ಶುಕ್ರವಾರ 60ಕ್ಕಿಂತ ಹೆಚ್ಚು ಪ್ರೇಕ್ಷಕರಿದ್ದರು ಎಂದರು.

‘ದ ಸೂಸೈಡ್ ಸ್ಕ್ವಾಡ್‘ ಎಂಬ ಇಂಗ್ಲಿಷ್ ಸಿನಿಮಾ ಪ‌್ರದರ್ಶನವಾಗುತ್ತಿದೆ. ಕೊರೊನಾ ಮೂರನೇ ಅಲೆಯ ಆತಂಕ, ಹೊಸ ಸಿನಿಮಾಗಳು ಇಲ್ಲದಿರುವುದರಿಂದ ಪ್ರೇಕ್ಷಕರು ಹೆಚ್ಚು ಬರುತ್ತಿಲ್ಲ ಎಂದು ಹೇಳಿದರು.

ಆಗಸ್ಟ್‌ 16ರಂದು ಫಾಸ್ಟ್ ಅಂಡ್ ಫ್ಯೂರಿಯಸ್ –9, ಆಗಸ್ಟ್ 19ರಂದು ಅಕ್ಷಯ್ ಕುಮಾರ್ ಅಭಿನಯದ ಬೆಲ್ ಬಾಟಮ್ ಹಿಂದಿ ಸಿನಿಮಾಗಳು ಬಿಡುಗಡೆ ಆಗಲಿವೆ. ಅದರ ಜತೆಗೆ ಕನ್ನಡದ ಕೋಟಿಗೊಬ್ಬ–3, ಭಜರಂಗಿ–2, ವಿಕ್ರಾಂತ್ ರೋಣ ಸೇರಿದಂತೆ ಖ್ಯಾತ ನಟರ ಸಿನಿಮಾಗಳು ಬಿಡುಗಡೆ ಆಗುವ ಸಾಧ್ಯತೆ ಇದೆ. ಆ ನಂತರ ಹೆಚ್ಚು ಪ್ರೇಕ್ಷಕರು ಬರುವ ನಿರೀಕ್ಷೆ ಇದೆ ಎಂದರು.

ಕೋವಿಡ್ ಮೂರನೇ ಅಲೆಯ ಆತಂಕ ಇರುವುದರಿಂದ ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ಕಿಂಗ್‌ಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಶೇ 20ರಷ್ಟು ಪ್ರೇಕ್ಷಕರು ಮಾತ್ರ ಟಿಕೆಟ್ ಕೌಂಟರ್‌ನಲ್ಲಿ ಟಿಕೆಟ್ ಖರೀದಿಸುತ್ತಿದ್ದಾರೆ ಎಂದು ತಿಳಿಸಿದರು.

ಈ ಮೊದಲು ಒಂದು ಪ್ರದರ್ಶನ ಆರಂಭವಾದ ನಂತರ 15 ನಿಮಿಷ ಬಿಡುವು ನೀಡಲಾಗುತ್ತಿತ್ತು. ಈಗ ಅರ್ಧ ಗಂಟೆ ವಿರಾಮ ನೀಡಲಾಗುತ್ತದೆ. ಈ ಅವಧಿಯಲ್ಲಿ ಎಲ್ಲ ಆಸನಗಳಿಗೆ ಸ್ಯಾನಿಟೈಸ್ ಮಾಡಲಾಗುವುದು. ನಮ್ಮ ಮಲ್ಟಿಪ್ಲೆಕ್ಸ್‌ನಲ್ಲಿ 21 ಜನ ಸಿಬ್ಬಂದಿ ಇದ್ದು, ಎಲ್ಲರಿಗೂ ಕೋವಿಡ್ ಲಸಿಕೆ ಕೊಡಿಸಲಾಗಿದೆ ಎಂದರು.

ಅಂತರ ಕಾಪಾಡುವಂತೆ, ಮಾಸ್ಕ್ ಧರಿಸುವಂತೆ ಗ್ರಾಹಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಒಂದು ವೇಳೆ ಪ್ರೇಕ್ಷಕರು ಮಾಸ್ಕ್ ಧರಿಸದೆ ಬಂದಿದ್ದರೆ ಅವರಿಗೆ ನಾವೇ ಉಚಿತವಾಗಿ ಮಾಸ್ಕ್ ನೀಡುತ್ತೇವೆ ಎಂದು ಹೇಳಿದರು.

‘ಸರ್ಕಾರ ಚಿತ್ರಮಂದಿರಗಳನ್ನು ಆರಂಭಿಸಲು ಅನುಮತಿ ನೀಡಿದ್ದರೂ ನಾವು ಪ್ರದರ್ಶನ ಆರಂಭಿಸಿಲ್ಲ. ಶೇ 50 ರಷ್ಟು ಪ್ರೇಕ್ಷಕರೊಂದಿಗೆ ಪ್ರದರ್ಶನ ಆರಂಭವಾದರೆ ಲಾಭಕ್ಕಿಂತ ನಷ್ಟವೇ ಹೆಚ್ಚು‘ ಎನ್ನುತ್ತಾರೆ ಸಂಗಮ ಚಿತ್ರಮಂದಿರದ ವ್ಯವಸ್ಥಾಪಕ ಶ್ರೀಕಾಂತ ಪಾಟೀಲ.

‘ಆಗಸ್ಟ್ 20ರಂದು ಸಲಗ ಸಿನಿಮಾ ಬಿಡುಗಡೆ ಆಗುವ ಸಾಧ್ಯತೆ ಇದೆ. ಅಂದೇ ಪ್ರದರ್ಶನ ಅರಂಭಿಸಲು ಚಿಂತನೆ ನಡೆಸಿದ್ದೇವೆ‘ ಎಂದು ಅವರು ಹೇಳಿದರು.

ಕೋವಿಡ್ ಮೂರನೇ ಅಲೆಯ ಆತಂಕ ಇರುವುದರಿಂದ ಸರ್ಕಾರ ಮತ್ತೆ ನೈಟ್ ಕರ್ಫ್ಯೂ ಜಾರಿ ಮಾಡಿದೆ. ಹೀಗಾಗಿ ಶನಿವಾರ, ಭಾನುವಾರ ಪ್ರದರ್ಶನ ಇರುವುದಿಲ್ಲ

-ಅಮಿತ್, ವ್ಯವಸ್ಥಾಪಕ, ಮಿರಾಜ್ ಸಿನಿಮಾಸ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು