ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಪಿಎಸ್‌ಸಿ: ಎರಡನೇ ದಿನವೂ ಗೊಂದಲ

ಒಎಂಆರ್‌ ಸೀಟ್‌ಗಳನ್ನು ಖಾಲಿಯಾಗೇ ಸಲ್ಲಿಸಿದ ಕೆಲ ಅಭ್ಯರ್ಥಿಗಳು, ಇದು ಗೋಲ್‌ಮಾಲ್‌ಗೆ ದಾರಿ– ಹಲವರು ಪ್ರತಿರೋಧ
Last Updated 9 ಜೂನ್ 2019, 16:55 IST
ಅಕ್ಷರ ಗಾತ್ರ

ಕಲಬುರ್ಗಿ: ಪ್ರಥಮದರ್ಜೆ ಹಾಗೂ ದ್ವಿತೀಯ ದರ್ಜೆ ಸಹಾಯಕರ ನೇಮಕಾತಿಗಾಗಿ ಕರ್ನಾಟಕ ಲೋಕಸೇವಾ ಆಯೋಗ ಭಾನುವಾರ ನಡೆಸಿದ ಪರೀಕ್ಷೆಯಲ್ಲೂ ಅಧ್ವಾನವಾಗಿದೆ. ನಗರದ ಬಾಲಾಜಿ ಪಾಲಿಟೆಕ್ನಿಕ್‌ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಕೆಲವು ಅಭ್ಯರ್ಥಿಗಳು ತಮ್ಮ ಒಎಂಆರ್‌ ಸೀಟ್‌ಅನ್ನು ಖಾಲಿಯಾಗೇ ಮರಳಿಸುವ ಮೂಲಕ ಗೊಂದಲ ಸೃಷ್ಟಿ ಮಾಡಿದರು.

ಈ ಕಾಲೇಜಿನ ಕೇಂದ್ರದಲ್ಲಿ ಪರೀಕ್ಷೆ ಪರೀಕ್ಷೆ ಬರೆದ ಕೆಲ ಅಭ್ಯರ್ಥಿಗಳು ತಮ್ಮ ಒಎಂಆರ್‌ ಸೀಟ್‌ಗಳಲ್ಲಿ ಯಾವುದೇ ಉತ್ತರವನ್ನು ಫುಲ್‌ಪಿಲ್‌ ಮಾಡದೇ, ಖಾಲಿ ಕೊಟ್ಟಿದ್ದರು. ಪರೀಕ್ಷೆ ಮುಗಿದ ಬಳಿಕ, ಎಲ್ಲರೂ ಹೋದ ಮೇಲೆ ಉತ್ತರಗಳನ್ನು ತುಂಬುವ ಉದ್ದೇಶದಿಂದ ಹೀಗೆ ಮಾಡಲಾಗಿದೆ ಎಂದು ಇತರ ಕೆಲವು ಅಭ್ಯರ್ಥಿಗಳು ತಕರಾರು ತೆಗೆದರು. ಇದರಿಂದ ಪ್ರತಿಭಾವಂತರಿಗೆ ಅನ್ಯಾಯವಾಗುತ್ತದೆ ಎಂದು ಪ್ರತಿಭಟನೆ ನಡೆಸಿದರು.

‘ಈ ಎಲ್ಲ ಬೆಳವಣಿಗೆಗಳನ್ನು ಮೊಬೈಲ್‌ನಲ್ಲಿ ವಿಡಿಯೊ ಮಾಡುತ್ತಿದ್ದ ಕೆಲವು ಅಭ್ಯರ್ಥಿಗಳನ್ನು ಹೊರಗಿನ ವ್ಯಕ್ತಿಗಳು ಬೆದರಿಸಿದರು. ಹೀಗೆ ದಬ್ಬಾಳಿಕೆ ಮಾಡಲು ಬಂದವರಿಗೆ ಕಾಲೇಜು ಆಡಳಿತ ಮಂಡಳಿಯರು ಕೂಡ ಸಾಥ್‌ ನೀಡಿದರು’ ಎಂದು ಪ್ರತಿಭಟನಾ ನಿರತರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ತೀವ್ರವಾಗಿ ಪ್ರತಿಭಟನೆ ನಡೆಸಿದ ನಂತರ ಪರೀಕ್ಷೆ ಸಿಬ್ಬಂದಿ ಖಾಲಿ ಇದ್ದ ಒಎಂಆರ್‌ ಸೀಟ್‌ಗಳ ಮೇಲೆ ಕೆಂಪು ಗೆರೆ ಎಳೆದರು. ಅಭ್ಯರ್ಥಿಗಳ ಬಳಿ ಕ್ಷಮೆ ಕೂಡ ಕೇಳಿದರು. ಇದೇ ಕಾಲೇಜಿನಲ್ಲಿ ಈ ಹಿಂದೆ ಕೂಡ ಅಧ್ವಾನಗಳು ನಡೆದಿವೆ. ಆದರೂ ಕೆಪಿಎಸ್‌ಸಿ ಅಧಿಕಾರಿಗಳು ಇಂಥ ಕಾಲೇಜಿನಲ್ಲಿ ಪರೀಕ್ಷೆ ನಡೆಸಲು ಅವಕಾಶ ನೀಡಿದ್ದು ಖಂಡನಾರ್ಹ’ ಎಂದೂ ಅಭ್ಯರ್ಥಿಗಳು ಆಕ್ರೋಶ ಹೊರ ಹಾಕಿದರು.

ಶನಿವಾರ ಕೂಡ, ನಗರದ ಕೋಟನೂರು (ಡಿ) ಸೇಂಟ್‌ ಮೇರಿ ಸ್ಕೂಲ್‌ನಲ್ಲಿ ನಡೆದ ಪರೀಕ್ಷಾ ಕೇಂದ್ರದಲ್ಲಿ ‘ಆಧಾರ್ ಕಾರ್ಡ್‌’ ತರದ 20 ಅಭ್ಯರ್ಥಿಗಳನ್ನು ಪರೀಕ್ಷಾ ಕೊಠಡಿಯಿಂದ ಹೊರ ಕಳುಹಿಸಿದ ಬಗ್ಗೆ ಸಾಕಷ್ಟು ಗೊಂದಲಗಳು ಉಂಟಾಗಿತ್ತು. ತಮ್ಮನ್ನು ಪರೀಕ್ಷೆಯಿಂದ ವಂಚಿತರಾಗಿ ಮಾಡಲಾಗಿದೆ ಎಂದು ಹಲವರು ಅಳಲು ತೋಡಿಕೊಂಡಿದ್ದರು.

ಅಗತ್ಯ ದಾಖಲೆ ಇಲ್ಲದಿದ್ದರೆ ಮಾತ್ರ ನಕಾರ:
ಆಧಾರ್‌ ಕಾರ್ಡ್‌ ತರದವರನ್ನು ಪರೀಕ್ಷಾ ಕೊಠಡಿಯಿಂದ ಹೊರ ಕಳುಹಿಸಿದ ಬಗ್ಗೆ ಪ್ರತಿಕ್ರಿಯೆ ನೀಡಿದಶಿಷ್ಟಾಚಾರ ತಹಶೀಲ್ದಾರ್‌ ಪ್ರಕಾಶ ಚಿಂಚೋಳಿಕರ್‌ ಅವರು, ‘ಕೋಟನೂರು (ಡಿ) ಸೇಂಟ್‌ ಮೇರಿ ಸ್ಕೂಲ್‌ನಲ್ಲಿ ನಡೆದ ಪರೀಕ್ಷಾ ಕೇಂದ್ರಕ್ಕೆ ನಾನು ಹೋಗಿಲ್ಲ. ಅಲ್ಲಿನ ಅಭ್ಯರ್ಥಿಗಳನ್ನು ಹೊರಗೆ ಕಳಿಹಿಸಿದ್ದು ನಾನಲ್ಲ. ಆ ಜವಾಬ್ದಾರಿ ನಿರ್ವಹಿಸಿದ್ದು ಕೇಂದ್ರದ ಮೇಲ್ವಿಚಾರಕಿ. ಹಾಗಾಗಿ, ಅವರಿಂದಲೇ ಮಾಹಿತಿ ಪಡೆದು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು’ ಎಂದರು.

‘ಯಾರ ಬಳಿ ಆಧಾರ್‌ ಕಾರ್ಡ್‌ ಇರುವುದಿಲ್ಲವೋ ಅಂಥವರು ಪಾನ್‌ಕಾರ್ಡ್‌, ಮತದಾರರ ಗುರುತಿನ ಚೀಟಿ, ವಾಹನ ಚಾಲನಾ ಪರವಾನಗಿ, ಸರ್ಕಾರಿ ನೌಕರಿಯ ಗುರುತಿನ ಕಾರ್ಡ್‌ ನೀಡಬಹುದು. ಇದರ ಜತೆಗೇ, ಆನ್‌ಲೈನ್‌ನಲ್ಲಿ ಅರ್ಜಿ ಹಾಕಿದ ಸ್ವೀಕೃತ ಪತ್ರ (ಅಕ್ನಾಲಾಡ್ಜ್‌ಮೆಂಟ್‌)ದ ಪ್ರತಿಯನ್ನೂ ಪರೀಕ್ಷಾ ವೇಳೆ ತರಬೇಕು. ಇದನ್ನು ತರದವರಿಗೆ ಮಾತ್ರ ಪರೀಕ್ಷೆ ಬರೆಯಲು ಅವಕಾಶ ಇರುವುದಿಲ್ಲ. ಈ ಬಗ್ಗೆ ಮುಂಚಿತವಾಗಿಯೇ ಮಾಹಿತಿ ನೀಡಲಾಗಿದೆ. ಆದರೂ ಎಲ್ಲಿ ಲೋಪವಾಗಿದೆ ಎಂದು ಪರಿಶೀಲಿಸಲಾಗುವುದು’ ಎಂದರು.

‘ಸೋಮವಾರ ಕೂಡ ನಗರದ 48 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 22,240 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಯಾರು ಆಧಾರ್‌ ಕಾರ್ಡ್‌ನ ಜೆರಾಕ್ಸ್‌ ಪ್ರತಿಗಳನ್ನು ತಂದಿದ್ದಾರೋ ಅವರಿಗೆ ಕೂಡ ಪರೀಕ್ಷೆ ಬರೆಯಲು ಅವಕಾಶ ನೀಡಿದ್ದೇವೆ’ ಎಂದೂ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT