ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಸಿಸಿ ಬ್ಯಾಂಕ್ ಪುನಶ್ಚೇತನಕ್ಕೆ ₹ 500 ಕೋಟಿ ತರುವೆ: ತೆಲ್ಕೂರ

Last Updated 8 ಜನವರಿ 2021, 10:15 IST
ಅಕ್ಷರ ಗಾತ್ರ

ಕಲಬುರ್ಗಿ: ಸಕಾಲಕ್ಕೆ ಸಾಲ ವಸೂಲಾತಿಯಾಗದ್ದರಿಂದ ನಷ್ಟದ ಸುಳಿಯಲ್ಲಿರುವ ಕಲಬುರ್ಗಿ-ಯಾದಗಿರಿ‌ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಪುನಶ್ಚೇತನಕ್ಕೆ ರಾಜ್ಯ ಸರ್ಕಾರದಿಂದ ₹ 500 ಕೋಟಿ ಹಣಕಾಸು ‌ನೆರವು ತರುವೆ ಎಂದು ಬ್ಯಾಂಕ್ ನೂತನ ಅಧ್ಯಕ್ಷ, ಸೇಡಂ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಭರವಸೆ ನೀಡಿದರು.

ಬ್ಯಾಂಕ್ ಅಧ್ಯಕ್ಷರಾಗಿ ಚುನಾಯಿತರಾದ‌ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಬೆಂಬಲಿತ ನಾಲ್ವರು ‌ನಿರ್ದೇಶಕರು ಆಯ್ಕೆಯಾಗಿದ್ದರೂ ಉಳಿದ ನಿರ್ದೇಶಕರು ಬೆಂಬಲಿಸುವ ‌ಮೂಲಕ ನನ್ನನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ. ಅವರ ವಿಶ್ವಾಸವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಶ್ರಮ ವಹಿಸುತ್ತೇನೆ. ಇಲ್ಲಿ ಪಕ್ಷದ ಆಧಾರದ ಮೇಲೆ ಚುನಾವಣೆ ನಡೆದಿಲ್ಲವಾದ್ದರಿಂದ ಇದು ಆಪರೇಷನ್ ಕಮಲ ಆಗುವುದಿಲ್ಲ. ಮೂವರು ನಿರ್ದೇಶಕರು ಕಳೆದ ಸಹಕಾರ ಸಂಘಗಳ ನಿಯಮಗಳನ್ನು ಉಲ್ಲಂಘಿಸಿದ್ದರಿಂದ ಅವರನ್ನು ಅನರ್ಹರನ್ನಾಗಿಸಲಾಗಿದೆ. ಇದರಲ್ಲಿ ಸರ್ಕಾರ ‌ಅಧಿಕಾರ ದುರುಪಯೋಗ ಮಾಡಿಕೊಂಡಿಲ್ಲ ಎಂದು‌ ಸಮಜಾಯಿಷಿ ನೀಡಿದರು.

ಬ್ಯಾಂಕ್ ನಿರ್ದೇಶಕ ಶಿವಾನಂದ ಮಾನಕರ, ಬಿಜೆಪಿ ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಶಹರ ಅಧ್ಯಕ್ಷ ಸಿದ್ದಾಜಿ ಪಾಟೀಲ, ವಿಧಾನಪರಿಷತ್ ‌ಮಾಜಿ ಸದಸ್ಯ ಅಮರನಾಥ ‌ಪಾಟೀಲ ಇದ್ದರು.

ಬಿಜೆಪಿ ಕಾರ್ಯಕರ್ತರು ಬ್ಯಾಂಕ್ ಹೊರಭಾಗದಲ್ಲಿ ‌ವಿಜಯೋತ್ಸವ ಆಚರಿಸಿದರು.

ಅಧಿಕಾರ ದುರುಪಯೋಗ: ನಮ್ಮನ್ನು ರಾತ್ರೋರಾತ್ರಿ ‌ಅನರ್ಹಗೊಳಿಸುವ ಮೂಲಕ ಬಿಜೆಪಿ ಅಧಿಕಾರ ದುರ್ಬಳಕೆ ಮಾಡಿಕೊಂಡಿದೆ.‌ ಶಾಸಕರು ಅಧ್ಯಕ್ಷರಾಗಿ ಆಯ್ಕೆಯಾಗಲು ಇಂತಹ ವಾಮಮಾರ್ಗ ತುಳಿಯುವ ಅಗತ್ಯವಿರಲಿಲ್ಲ ಎಂದು ಅನರ್ಹ ನಿರ್ದೇಶಕ, ಬ್ಯಾಂಕ್ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಸೋಮಶೇಖರ ‌ಗೋನಾಯಕ ಟೀಕಿಸಿದರು.

ಸಾಲವನ್ನು ಮರುಪಾವತಿ ಮಾಡದ್ದಕ್ಕೆ ನಿರ್ದೇಶಕರನ್ನು ಅನರ್ಹ ಮಾಡುವುದಾಗಿದ್ದರೆ ಹಿಂದಿನ ಅವಧಿಯಲ್ಲಿದ್ದ ಎಲ್ಲ ನಿರ್ದೇಶಕರನ್ನೂ ಅನರ್ಹ ಮಾಡಬೇಕಿತ್ತು. ಹಾಗೇಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.

ಚುನಾವಣಾ ಅಧಿಕಾರಿಗಳೂ ಬಿಜೆಪಿ ಪರವಾಗಿ ಕೆಲಸ ಮಾಡಿದ್ದಾರೆ.‌ ಬ್ಯಾಂಕ್ ನಿರ್ದೇಶಕರು ಎಂದು ನಾವು ಹೇಳಿದರೂ ಪೊಲೀಸರು ನಮ್ಮನ್ನು ತಡೆದರು. ಚುನಾವಣೆ ನಡೆದು ತಿಂಗಳಾದರೂ ಪ್ರಮಾಣಪತ್ರ ನೀಡದೇ ಇರಲು ಕಾರಣವೇನು ಎಂದರು‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT