ಸೇಡಂ: ತಾಲ್ಲೂಕಿನ ಮಳಖೇಡ ಗ್ರಾಮದಲ್ಲಿ ರಾಷ್ಟ್ರಕೂಟರ ಕಾಲದಲ್ಲಿ ನಿರ್ಮಾಣಗೊಂಡಿದ್ದ ಐತಿಹಾಸಿಕ ಕೋಟೆಯ ಗೋಡೆಯು ನಿರಂತರ ಸುರಿದ ಮಳೆಯಿಂದಾಗಿ ಶನಿವಾರ ಭಾಗಶಃ ಧರೆಗುರುಳಿದೆ.
ರಾಷ್ಟ್ರಕೂಟರ ರಾಜಧಾನಿಯಾಗಿದ್ದ ಮಳಖೇಡದ ಕೋಟೆಯ ಗೋಡೆಗಳು ನಿರಂತರ ಮಳೆಗೆ ತೇವಗೊಂಡಿದ್ದವು. ಶನಿವಾರ ಬೆಳಿಗ್ಗೆ ಏಕಾಏಕಿ ಕೋಟೆಯ ಗೋಡೆ ಕುಸಿದಿದೆ. ಕೋಟೆಯ ಪಕ್ಕದಲ್ಲಿ ನೆಲಸಿದ್ದ ನಿವಾಸಿಗಳು ಇದರಿಂದ ಆತಂಕಗೊಂಡಿದ್ದಾರೆ. ಕೋಟೆ ಪಕ್ಕದಲ್ಲೇ ಇದ್ದ ಶೌಚಾಲಯಕ್ಕೆ ಮಹಿಳೆಯರು ತೆರಳುತ್ತಿದ್ದ ಸಂದರ್ಭದಲ್ಲೇ ಗೋಡೆ ಕುಸಿದು, ಕಲ್ಲುಗಳು ಉರುಳಿ ಬಿದ್ದಿವೆ. ಅದೃಷ್ಟವಶಾತ್ ಯಾರಿಗೂ ಪ್ರಾಣ ಹಾನಿಯಾಗಿಲ್ಲ.
ತಹಶೀಲ್ದಾರ್ ಭೇಟಿ:
ಮಳಖೇಡ ಕೋಟೆಗೆ ತಹಶೀಲ್ದಾರ್ ಶ್ರೀಯಾಂಕ ಧನಶ್ರೀ ಭೇಟಿ ನೀಡಿ ಪರಿಶೀಲಿಸಿದರು. ಸ್ಥಳೀಯರಿಂದ ಮಾಹಿತಿ ಪಡೆದುಕೊಂಡರು.
‘ಕೋಟೆಗೆ ಸಮೀಪದಲ್ಲಿರುವ ನಿವಾಸಿಗಳು ಭಯ ಪಡಬೇಕಾಗಿಲ್ಲ. ಜಾಗರೂಕರಾಗಿರಬೇಕು’ ಎಂದು ಧೈರ್ಯ ತುಂಬಿದರು. ‘ಕೋಟೆಯೊಳಗೆ ಯಾರೂ ತೆರಳದಂತೆ ಪೊಲೀಸ್ ಇಲಾಖೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.
ಸ್ಥಳಾಂತರಕ್ಕೆ ಸೂಚನೆ:
ಕೋಟೆಗೆ ಹೊಂದಿಕೊಂಡಿರುವ ಕೆಲ ಮನೆಗಳ ನಿವಾಸಿಗಳೊಂದಿಗೆ ಚರ್ಚಿಸಿದ ತಹಶೀಲ್ದಾರ್ ಶ್ರೀಯಾಂಕ ಮತ್ತು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಚನ್ನಪ್ಪ ರಾಯಣ್ಣನವರ್ ಅವರು, ‘ಸುರಕ್ಷತೆ ದೃಷ್ಟಿಯಿಂದ ಬೇರೆ ಕಡೆ ಸ್ಥಳಾಂತರಗೊಳ್ಳಬೇಕು. ಸ್ಥಳದ ಕೊರತೆಯಿದ್ದರೆ ಸಮುದಾಯ ಭವನದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡುತ್ತೇವೆ’ ಎಂದು ಭರವಸೆ ನೀಡಿದರು. ಐತಿಹಾಸಿಕ ಮಳಖೇಡ ಕೋಟೆಯ ಇನ್ನಷ್ಟು ಭಾಗ ಬೀಳುವ ಸಾಧ್ಯತೆಯಿದ್ದು ಸರ್ಕಾರ ಮುನ್ನಚ್ಚರಿಕೆ ಕ್ರಮ ಕೈಗೊಂಡು ಕೋಟೆಯನ್ನು ಸಂರಕ್ಷಿಸಬೇಕು ವಿಜಯಕುಮಾರ ರೆಡ್ಡಿ ಮಳಖೇಡ ನಿವಾಸಿ
ಐತಿಹಾಸಿಕ ಮಳಖೇಡ ಕೋಟೆಯ ಇನ್ನಷ್ಟು ಭಾಗ ಬೀಳುವ ಸಾಧ್ಯತೆಯಿದ್ದು ಸರ್ಕಾರ ಮುನ್ನಚ್ಚರಿಕೆ ಕ್ರಮ ಕೈಗೊಂಡು ಕೋಟೆಯನ್ನು ಸಂರಕ್ಷಿಸಬೇಕುವಿಜಯಕುಮಾರ ರೆಡ್ಡಿ ಮಳಖೇಡ ನಿವಾಸಿ
ಮಳಖೇಡ ಕೋಟೆ ನವೀಕರಣ ಕಾಮಗಾರಿ ಕಳಪೆಯಾಗಿದೆ. ಸಂಬಂಧಪಟ್ಟ ಎಂಜಿನಿಯರ್‌ಗಳ ಮೇಲೆ ಕ್ರಮ ಕೈಗೊಳ್ಳಬೇಕು. ಗುತ್ತಿಗೆದಾರನಿಂದ ಹೊಸದಾಗಿ ಗೋಡೆ ನಿರ್ಮಿಸಬೇಕುರಾಜು ಕಟ್ಟಿ ಸ್ಥಳೀಯ ನಿವಾಸಿ
ರಾಷ್ಟ್ರಕೂಟರ ರಾಜ ಅಮೋಘವರ್ಷ ನೃಪತುಂಗ ಮಳಖೇಡ (ಮಾನ್ಯಖೇಟ)ವನ್ನು ರಾಜಧಾನಿಯನ್ನಾಗಿ ಮಾಡಿಕೊಂಡಿದ್ದ. ಆಸ್ಥಾನದಲ್ಲಿದ್ದ ಕವಿ ಶ್ರೀವಿಜಯ ‘ಕವಿರಾಜ ಮಾರ್ಗ’ ಗ್ರಂಥ ಬರೆದಿದ್ದ. ಇದು ಕನ್ನಡದ ಮೊದಲ ಉಪಲಬ್ಧ ಕೃತಿಯಾಗಿದೆ. ಇಂತಹ ಐತಿಹಾಸಿಕ ಚರಿತ್ರೆಯುಳ್ಳ ಮಳಖೇಡ ಕೋಟೆಯನ್ನು 2016–18ರ ಅವಧಿಯಲ್ಲಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು ₹ 5 ಕೋಟಿ ಅನುದಾನ ತಂದು ಜೀರ್ಣೋದ್ಧಾರ ಮಾಡಿಸಿದ್ದರು. ಆಗಿನ ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ ಅವರು ₹ 1 ಕೋಟಿ ಅನುದಾನ ನೀಡಿದ್ದರು. 2018ರಲ್ಲಿ ಸರ್ಕಾರದಿಂದ ರಾಷ್ಟ್ರಕೂಟರ ಉತ್ಸವವನ್ನೂ ನಡೆಸಲಾಗಿತ್ತು. ಮಳೆ ಸುರಿದಿದ್ದರಿಂದ ನವೀಕರಣಗೊಂಡ ಗೋಡೆಯೇ ಬಿದ್ದಿದೆ. ಹಳೆಯ ಗೋಡೆಗಳು ಇನ್ನೂ ಸುರಕ್ಷಿತವಾಗಿದೆ. ಇದು ಚರ್ಚೆಗೆ ಗ್ರಾಸವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.