ಮಂಗಳವಾರ, ಜುಲೈ 27, 2021
26 °C

ಸೇಡಂ: ಬಾರದ ಮೀಸಲು; ಆಕಾಂಕ್ಷಿಗಳಿಗೆ ನಿರಾಸೆ

ಅವಿನಾಶ ಎಸ್. ಬೋರಂಚಿ Updated:

ಅಕ್ಷರ ಗಾತ್ರ : | |

Prajavani

ಸೇಡಂ: ಚುನಾವಣಾ ಆಯೋಗ ಪ್ರಕಟಿಸಿದ್ದ ಜಿಲ್ಲಾ ಪಂಚಾಯಿತಿ ಚುನಾವಣೆಯ ಮೀಸಲಾತಿಯಲ್ಲಿ ಒಂದು ಸ್ಥಾನವು ಕೂಡ ಹಿಂದುಳಿದ ವರ್ಗಕ್ಕೆ ಬಾರದೆ ಇರುವುದರಿಂದ ತಾಲ್ಲೂಕಿನ ಹಿಂದುಳಿದ ವರ್ಗದ ಜನರಿಗೆ ನಿರಾಸೆ ತಂದಿದೆ ಎಂದು ಹಿಂದುಳಿದ ವರ್ಗಗಳ ಮುಖಂಡರು ಆರೋಪಿಸಿದ್ದಾರೆ.

ತಾಲ್ಲೂಕಿನಲ್ಲಿ ಒಟ್ಟು 6 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಿದ್ದು ಒಂದೇ ಒಂದು ಕ್ಷೇತ್ರದಲ್ಲಿಯೂ ಸಹ ಹಿಂದುಳಿದ ವರ್ಗದ ಮೀಸಲಾತಿ ಬಂದಿಲ್ಲ. ವಿಧಾನಸಭಾ ಕ್ಷೇತ್ರಕ್ಕೆ ಹೋಲಿಸಿದರೆ  8 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳು ಒಳಪಡುತ್ತವೆ. ಮೀಸಲಾತಿ ಬರದೆ ಇರುವುದರಿಂದ ಹಿಂದುಳಿದ ವರ್ಗಗಳ ಮುಖಂಡರು ಸ್ಪರ್ಧಿಸಲು ಮೀಸಲಾತಿ ಅಡ್ಡಿಯೊಡ್ಡಿದೆ.

ಈ ಹಿಂದೆ ನಡೆದ ಪ್ರತಿ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಹಿಂದುಳಿದ ವರ್ಗಗಕ್ಕೆ ಮೀಸಲಾತಿ ನೀಡಲಾಗಿದೆ.

ಆದರೆ ಇದೇ ವರ್ಷವೇ ಮೀಸಲಾತಿ ಬಂದಿಲ್ಲ ಎಂದು ಹಿಂದುಳಿದ ವರ್ಗದ ಜನರು ಟೀಕಿಸಿದ್ದಾರೆ.

ತಾಲ್ಲೂಕಿನಲ್ಲಿ ಈ ಹಿಂದೆ 5 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳು ಮಾತ್ರ ಇದ್ದವು. ಆದರೆ 2021ರ ಕ್ಷೇತ್ರ ಪುನರ್ವಿಂಗಡಣೆಯಿಂದಾಗಿ ಈ ವರ್ಷ 6 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳು ರಚನೆಯಾಗಿವೆ.

ಆಡಕಿ ಜಿಲ್ಲಾ ಪಂಚಾಯಿತಿ ಕ್ಷೇತ್ರವನ್ನು ಬದಲಿಸಿ, ಕುರಕುಂಟಾ ಮತ್ತು ಶಿಲಾರಕೋಟ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳನ್ನಾಗಿ ಚುನಾವಣಾ ಆಯೋಗವು ಪ್ರಕಟಿಸಿದೆ.

ಇದರಲ್ಲಿ ಕುರಕುಂಟಾ (ಸಾಮಾನ್ಯ ಮಹಿಳೆ)ಗೆ ಮೀಸಲಾಗಿದ್ದರೆ ಮಳಖೇಡ (ಸಾಮಾನ್ಯ), ಮುಧೋಳ (ಪರಿಶಿಷ್ಠ ಜಾತಿ ಮಹಿಳೆ), ಕೋಡ್ಲಾ (ಸಾಮಾನ್ಯ), ಕೋಲ್ಕುಂದಾ(ಪರಿಶಿಷ್ಠ ಜಾತಿ) ಮತ್ತು ಶಿಲಾರಕೋಟ (ಸಾಮಾನ್ಯ ಮಹಿಳೆ) ಮೀಸಲಾತಿಯನ್ನು ನಿಗದಿಪಡಿಸಿದರು.

ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸುಲೇಪೇಟ(ಸಾಮಾನ್ಯ) ಮತ್ತು ನಿಡಗುಂದಾ(ಸಾಮಾನ್ಯ ಮಹಿಳೆ) ವರ್ಗಕ್ಕೆ ಮೀಸಲಾತಿ ಪ್ರಕಟಗೊಂಡಿದೆ.

1995ರಿಂದ 2015ರ ವರೆಗೆ ನಡೆದ ಜಿಲ್ಲಾ ಪಂಚಾಯಿತಿ ಚುನಾವಣೆಯ ಇತಿಹಾಸವನ್ನು ನೋಡಿದಾಗ ಪ್ರತಿಬಾರಿಯೂ ಸಹ ಹಿಂದುಳಿದ ವರ್ಗದ ಜನರಿಗೆ ಮೀಸಲಾತಿ ಸಿಕ್ಕಿದೆ. ಪ್ರತಿಬಾರಿಯೂ ಚುಣಾವಣಾ ಆಯೋಗವೇ ಮೀಸಲಾತಿ ಪ್ರಕಟಿಸಿದೆ.

‘ಕೊರೊನಾದ ಮಹಾಮಾರಿಯ ಮಧ್ಯದಲ್ಲಿಯೂ ಸಹ ಒಂದಿಲ್ಲೊಂದು ಸೇವೆ ಮಾಡುವ ಮೂಲಕ ಜನರ ವಿಶ್ವಾಸಗಳಿಸಿ ಜಿಲ್ಲಾ ಪಂಚಾಯಿತಿ ಚುಣಾವಣೆಗೆ ಸ್ಪರ್ಧಿಸಬೇಕು. ಜನರ ಸೇವೆಗೆ ಅಣಿಯಾಗಬೇಕೆಂದು ಕನಸು ಕಟ್ಟಿಕೊಂಡಿದ್ದ ಹಿಂದುಳಿದ ವರ್ಗದ ಅನೇಕ ಜನರಲ್ಲಿ ನಿರಾಸೆ ಮೂಡಿಸಿದೆ.

ಹಿಂದುಳಿದ ವರ್ಗದ ಮುಖಂಡರುಗಳು ಈಚೆಗೆ ಸುದ್ದಿಗೋಷ್ಠಿ ನಡೆಸಿ ಮೀಸಲಾತಿ ಬದಲಿಸುವಂತೆ ಮನವಿ ಸಲ್ಲಿಸಿದ್ದಾರೆ. ಇದರ ಜೊತೆಗೆ ಪರೋಕ್ಷವಾಗಿಯೂ ಚುನಾವಣಾ ಆಯೋಗಕ್ಕೆ ಕೆಲವು ಕಡೆಗಳಲ್ಲಿ ಮೀಸಲಾತಿ ಬದಲಿಸುವಂತೆ ಮನವಿ ಸಲ್ಲಿಸಿದ್ದಾರೆಂದು ಮೂಲಗಳು ಅಭಿಪ್ರಾಯಪಟ್ಟಿವೆ.

ಮುಂಬರುವ ವಿಧಾನಸಭೆಯ ಚುನಾವಣೆಗೆ ದಿಕ್ಸೂಚಿ ಚುನಾವಣೆ ಎಂದೇ ಪರಿಗಣಿಸಿರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯೂ, ಈ ಭಾರಿ ಹಿಂದುಳಿದ ವರ್ಗಕ್ಕೆ ಮೀಸಲಾತಿ ಇಲ್ಲದೆ ಚುನಾವಣೆ ಹೇಗೆ ನಡೆಯಲಿದೆ, ಫಲಿತಾಂಶ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

***

ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಮೀಸಲಾತಿಯಲ್ಲಿ ಹಿಂದುಳಿದ ವರ್ಗಕ್ಕೆ ಅನ್ಯಾಯ ಮಾಡಿದಂತಾಗಿದೆ. ಮೀಸಲಾತಿ ಬದಲಿಸಿ ಹಿಂದುಳಿದ ವರ್ಗದವರಿಗೆ ಅವಕಾಶ ಒದಗಿಸಬೇಕು

- ಸಿದ್ದು ಬಾನಾರ್, ಎಪಿಎಂಸಿ ಮಾಜಿ ಅಧ್ಯಕ್ಷ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು