ಮಂಗಳವಾರ, ಆಗಸ್ಟ್ 20, 2019
27 °C

ಸೀತನೂರ: ಹಂದಿಗಳಿಂದ ಬೆಳೆ ಹಾನಿ ಖಂಡಿಸಿ ಪ್ರತಿಭಟನೆ

Published:
Updated:
Prajavani

ಕಲಬುರ್ಗಿ: ತಾಲ್ಲೂಕಿನ ಸೀತನೂರ ಗ್ರಾಮದ ಹೊಲಗಳಿಗೆ ನುಗ್ಗುವ ಹಂದಿಗಳು ರೈತರ ಬೆಳೆಯನ್ನು ನಾಶ ಮಾಡಿವೆ. ಕೂಡಲೇ ಇವುಗಳನ್ನು ನಿಯಂತ್ರಿಸಬೇಕು ಎಂದು ಒತ್ತಾಯಿಸಿ ಗ್ರಾಮದ ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ನಗರದಲ್ಲಿ ಹಂದಿ ಸಾಕಣೆ ಮಾಡಿರುವ ಮಾಲೀಕರು ತಮ್ಮ ಹಂದಿಗಳನ್ನು ಬೇಕಾಬಿಟ್ಟಿಯಾಗಿ ಬಿಡುತ್ತಾರೆ. ಹೊಲಗಳಿಗೆ ಬರುವ ಹಂದಿಗಳು ಸಾಕಷ್ಟು ಹಾನಿ ಮಾಡುತ್ತಿವೆ. ಹಂದಿ ಮಾಲೀಕರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಹೊಲಗಳಿಗೆ ಬಿಡದಂತೆ ತಾಕೀತು ಮಾಡಬೇಕು ಎಂದು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದರು.‌

ನಗರದಲ್ಲಿ ಕೊಳವೆಬಾವಿ ನೀರು ಕುಡಿಯಲು ಯೋಗ್ಯವಾಗಿಲ್ಲ. ಅನಿವಾರ್ಯವಾಗಿ ಆ ನೀರನ್ನು ಕುಡಿಯುತ್ತಿರುವುದರಿಂದ ಗ್ರಾಮಸ್ಥರ ಆರೋಗ್ಯ ಹದಗೆಟ್ಟಿದೆ. ಇದರ ಬದಲಾಗಿ ಗ್ರಾಮದ ಹೊರವಲಯದಲ್ಲಿ ₹ 24.5 ವೆಚ್ಚದಲ್ಲಿ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆಯಡಿ ತೋಡಲಾದ ತೆರೆದ ಬಾವಿಯಿಂದ ನೀರನ್ನು ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮುಖ್ಯಮಂತ್ರಿ ಗ್ರಾಮವಿಕಾಸ ಯೋಜನೆಯಡಿ ಸೀತನೂರ–ಪಾಣೆಗಾಂವ ಗ್ರಾಮಗಳಲ್ಲಿ ತಲಾ ₹ 1 ಕೋಟಿ ವೆಚ್ಚದಲ್ಲಿ ರಸ್ತೆ, ಚರಂಡಿಗಳನ್ನು ನಿರ್ಮಿಸಲಾಗಿದೆ. ಇವುಗಳಿಗೆ ಕಳಪೆ ಗುಣಮಟ್ಟದ ಸಾಮಗ್ರಿಗಳನ್ನು ಬಳಸಲಾಗಿದೆ. ಹೀಗಾಗಿ, ಥರ್ಡ್‌ ಪಾರ್ಟಿ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

ನಂದಿಕೂರ ಗ್ರಾಮ ಪಂಚಾಯಿತಿ ಸದಸ್ಯ ಪವನಕುಮಾರ ವಳಕೇರಿ, ಬಾಬುರಾವ್‌ ಪಾಟೀಲ, ಮಲ್ಲಣ್ಣಗೌಡ ನಂದಿಕೂರ, ಮಕ್ಬೂಲ್‌ ಪಟೇಲ್‌, ಸಂಗನಗೌಡ, ಅಬ್ಬಾಸ್‌ ಅಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Post Comments (+)