ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯದ ಜತೆಗೆ ಸಾಹಿತಿಗಳ ವರ್ಗೀಕರಣ: ಡಾ. ಅರವಿಂದ ಮಾಲಗತ್ತಿ ಬೇಸರ

Last Updated 16 ಅಕ್ಟೋಬರ್ 2018, 13:05 IST
ಅಕ್ಷರ ಗಾತ್ರ

ಕಲಬುರ್ಗಿ: ‘ಸಾಹಿತ್ಯದ ಜತೆಗೆ ಸಾಹಿತಿಗಳನ್ನು ಕೂಡ ಅಕಾಡೆಮಿಕ್– ನಾನ್ ಅಕಾಡೆಮಿಕ್ ಸಾಹಿತಿಗಳು ಎಂದು ವರ್ಗೀಕರಿಸಲಾಗಿದ್ದು, ಒಬ್ಬರು ಇನ್ನೊಬ್ಬರನ್ನು ದೂಷಿಸುವ ಪರಿಕಲ್ಪನೆ ಬೆಳೆದುಕೊಂಡು ಬಂದಿದೆ’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ಅರವಿಂದ ಮಾಲಗತ್ತಿ ಬೇಸರ ವ್ಯಕ್ತಪಡಿಸಿದರು.

ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಕನ್ನಡ ಅಧ್ಯಯನ ಸಂಸ್ಥೆ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಕನ್ನಡ ಸಾಹಿತ್ಯದ ಇತ್ತೀಚಿನ ಪ್ರವೃತ್ತಿಗಳು’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘10 ವರ್ಷಗಳಿಂದ ಈಚೆಗಿನ ಅವಧಿಯಲ್ಲಿ ಸಾಹಿತಿಗಳನ್ನು ಅಕಾಡೆಮಿಕ್– ನಾನ್ ಅಕಾಡೆಮಿಕ್ ಎಂದು ನಿಖರವಾಗಿ ವರ್ಗೀಕರಿಸಲಾಗಿದೆ. ವಿಶ್ವವಿದ್ಯಾಲಯದಲ್ಲಿರುವ ಅಧ್ಯಾಪಕರ ಬಗ್ಗೆ ನಾನ್–ಅಕಾಡೆಮಿಕ್ ಸಾಹಿತಿಗಳು ಕೆಂಗಣ್ಣು ಬೀರುತ್ತಾರೆ. ಕಾರ್ಪೋರೇಟ್ ವಲಯದ ಸಾಹಿತಿಗಳೂ ನಮ್ಮ ಮಧ್ಯೆ ಇದ್ದಾರೆ. ಐಟಿ–ಬಿಟಿಗೆ ಸಂಬಂಧಿಸಿದ ಲೇಖಕರ ವರ್ಗವೂ ನಮ್ಮಲ್ಲಿದೆ. ಐಟಿ–ಬಿಟಿ ಕ್ಷೇತ್ರದ ಲೇಖಕರು ಜಾತಿಯ ಬಗ್ಗೆ ಮಾತನಾಡುವುದಿಲ್ಲ. ಆದರೆ, ಮೀಸಲಾತಿ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸುತ್ತಾರೆ. ಮೀಸಲಾತಿಯಿಂದಲೇ ದೇಶ ಹೀಗಾಗಿದೆ ಎಂದು ಬಿಂಬಿಸುತ್ತಾರೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ತಂತ್ರಜ್ಞಾನದ ಪರಿಭಾಷೆಯಿಂದ ಉತ್ಕೃಷ್ಟ ಸಾಹಿತ್ಯ ರೂಪುಗೊಳ್ಳುತ್ತಿದೆ. ಅನಿವಾಸಿ ಭಾರತೀಯರ ಬರಹಗಳು ಪ್ರಬುದ್ಧತೆಯಿಂದ ಕೂಡಿದ್ದು, ಅಪ್ಯಾಯವೆನಿಸುತ್ತವೆ. ಗೋಪಾಲಕೃಷ್ಣ ಅಡಿಗ ಮತ್ತು ವಿ.ಕೃ.ಗೋಕಾಕರ ಕಾಲದ ನವ್ಯ ಸಾಹಿತ್ಯ ಒತ್ತಾಯಪೂರ್ವಕ ನವ್ಯವಾಗಿದ್ದು, ನಿಜವಾದ ನವ್ಯ ಈಗ ಆರಂಭವಾಗಿದೆ ಎಂದು ಅನಿಸುತ್ತದೆ. ಜೀವನದ ನಿಜವಾದ ಅನುಭವಗಳೊಂದಿಗೆ ಅವರು ಮುಖಾಮುಖಿಯಾಗುತ್ತಿದ್ದಾರೆ. ವಿದೇಶಗಳಿಂದ ವಾಪಸು ಬಂದಿರುವ ಐಟಿ–ಬಿಟಿ ನೌಕರರು ಹಳಹಳಿಕೆಯ ಸಾಹಿತ್ಯವನ್ನು ರಚಿಸುತ್ತಿದ್ದಾರೆ’ ಎಂದು ತಿಳಿಸಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ರಹಮತ್ ತರೀಕೆರೆ ಮಾತನಾಡಿ, ‘ಪ್ರಕಟಿತ ಸಾಹಿತ್ಯ ಮಾತ್ರ ಕನ್ನಡ ಸಾಹಿತ್ಯವಲ್ಲ. ವಾಚಕರ ವಾಣಿಗೆ ಬರೆದಿರುವುದು ಸೇರಿದಂತೆ ಎಲ್ಲಾ ಪ್ರಕಾರದ ಬರಹಗಳನ್ನು ಸಾಹಿತ್ಯ ಎಂದು ಪರಿಗಣಿಸಬೇಕು. ಪ್ರಕಟಿತ ಕೃತಿಗಳ ಓದುಗರ ಸಂಖ್ಯೆ ಕಡಿಮೆ ಆಗುತ್ತಿದ್ದರೂ ಡಿಜಿಟಲ್ ಓದುಗರ ಸಂಖ್ಯೆ ಹೆಚ್ಚುತ್ತಿದೆ. ಫೇಸ್‌ಬುಕ್, ವಾಟ್ಸ್‌ಆ್ಯಪ್‌ನಲ್ಲೇ ಕಾವ್ಯ, ಕಥೆಗಳು ಸೃಷ್ಟಿಯಾಗುತ್ತಿವೆ. ಕಿಂಡಲ್‌ನಲ್ಲೇ ಸಾವಿರ ಪುಟಗಳನ್ನು ಓದಬಹುದಾಗಿದೆ. ಆನ್‌ಲೈನ್ ಮಾರುಕಟ್ಟೆಯಲ್ಲಿ ಪುಸ್ತಕಗಳ ಖರೀದಿ ಹೊಸ ದಾಖಲೆಯನ್ನೇ ನಿರ್ಮಿಸಿದೆ’ ಎಂದರು.

‘ಸಾಹಿತ್ಯವು ಸಮೃದ್ಧಿಯ ಜತೆಗೆ ಆರೋಗ್ಯಕರವಾಗಿದೆಯೇ ಎಂದು ಪ್ರಶ್ನಿಸಿಕೊಳ್ಳಬೇಕಿದೆ. ಡಾ. ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶ್ ಹತ್ಯೆ ಹಾಗೂ ವಿವಿಧ ವಿಷಯಗಳ ಬಗೆಗಿನ ಅನಾರೋಗ್ಯಕರ ಚರ್ಚೆಯನ್ನು ನೋಡಿದರೆ ಚಿಂತನಶೀಲ ಮನಸ್ಸನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ಭಾಸವಾಗುತ್ತದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಸಂಚಾಲಕರಾದ ಡಾ. ಶಿವಗಂಗಾ ರುಮ್ಮಾ, ಡಾ. ವಿಕ್ರಮ ವಿಸಾಜಿ, ರಿಜಿಸ್ಟ್ರಾರ್ ಕರಿಯಪ್ಪ ಎನ್. ಇದ್ದರು.

ಸಂಶೋಧಕರು ಬರುತ್ತಿಲ್ಲ..!

‘ವಿಶ್ವವಿದ್ಯಾಲಯಗಳಿಂದ ಸಾವಿರಾರು ಪಿಎಚ್.ಡಿಗಳು ಬರುತ್ತಿವೆ. ಆದರೆ, ಸಂಶೋಧಕರು ಹೊರಬರುತ್ತಿಲ್ಲ. ದೊಡ್ಡ ಕಾದಂಬರಿಗಳು ಬರುತ್ತಿವೆ. ಆದರೆ, ಒಳ್ಳೆಯ ಕಾದಂಬರಿಗಳು ಬರುತ್ತಿಲ್ಲ’ ಎಂದು ಡಾ. ರಹಮತ್ ತರೀಕೆರೆ ಆತಂಕ ವ್ಯಕ್ತಪಡಿಸಿದರು.

‘ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನ ಸಿಕ್ಕಿದೆ. ಆದರೆ, ಅದನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಹೋಗುವ ಯುವ ಸಾಹಿತಿಗಳ ಪಡೆಯನ್ನು ನಾವು ರಚಿಸಿಲ್ಲ. ಕನ್ನಡದ ಲೇಖಕರನ್ನು ದೇಶ, ವಿದೇಶದ ಲೇಖಕರನ್ನಾಗಿ ಮಾಡಿಲ್ಲ. ನೆರೆಯ ಆಂಧ್ರಪ್ರದೇಶ, ತಮಿಳುನಾಡಿಗೆ ಹೋದರೆ ಅಲ್ಲಿಯ ಜನರಿಗೆ ಕುವೆಂಪು, ಶಿವರಾಮ ಕಾರಂತರು ಗೊತ್ತಿಲ್ಲ. ಹೀಗಾದರೆ ಸಾಹಿತ್ಯವನ್ನು ಬೆಳೆಸುವುದು ಹೇಗೆ’ ಎಂದು ಪ್ರಶ್ನಿಸಿದರು.

‘ವಿ.ವಿಯಲ್ಲಿ ಆಂತರಿಕ ಕಾನೂನು’

‘ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಆಂತರಿಕ ಕಾನೂನು ಜಾರಿಯಲ್ಲಿದೆ. ಹೀಗಾಗಿ ಬಸವಾದಿ ಶರಣರ ಅಧ್ಯಯನ ಕೇಂದ್ರಕ್ಕೆ ದಲಿತ ಪ್ರಾಧ್ಯಾಪಕರೊಬ್ಬರು ಅಧ್ಯಕ್ಷರಾಗಲು ಸಾಧ್ಯವಾಗಲಿಲ್ಲ’ ಎಂದು ಡಾ. ಎಚ್.ಟಿ.ಪೋತೆ ಕಳವಳ ವ್ಯಕ್ತಪಡಿಸಿದರು.

‘ಗಾಂಧೀಜಿ 150 ಕಾರ್ಯಕ್ರಮದಲ್ಲಿ ಅಸ್ಪೃಶ್ಯತೆ ಬಗ್ಗೆ ಉಪನ್ಯಾಸ ಇಟ್ಟುಕೊಳ್ಳೋಣ ಎಂದಿದ್ದಕ್ಕೆ ಯಾರೂ ಒಪ್ಪಲಿಲ್ಲ. ಬಾಲಕನೊಬ್ಬ ತನ್ನ ಜನ್ಮ ದಿನದಂದು ಮೋದಿ ಚಿತ್ರವಿರುವ ಕೇಕ್ ಕತ್ತರಿಸಿದ್ದು ಮೋದಿಗೆ ಗೊತ್ತಾಗುತ್ತದೆ, ಅದಕ್ಕೆ ಪ್ರತಿಕ್ರಿಯೆ ನೀಡುತ್ತಾರೆ. ಆದರೆ, ದಲಿತ ಮಹಿಳೆಯರ ಮೇಲಿನ ದೌರ್ಜನ್ಯ, ಊನಾ ಪ್ರಕರಣಗಳು ಅವರ ಗಮನಕ್ಕೆ ಬರುವುದಿಲ್ಲ’ ಎಂದು ಮಾರ್ಮಿಕವಾಗಿ ನುಡಿದರು.

ವಿಮರ್ಶಕ ದಾರಿ ತಪ್ಪಿದರೆ..

‘ವಿಮರ್ಶೆ ಸಾಹಿತ್ಯದ ಮೇಟಿ. ವಿಮರ್ಶಕರು ದಾರಿ ತಪ್ಪಿದರೆ ಸಾಹಿತ್ಯವೂ ದಾರಿ ತಪ್ಪುತ್ತದೆ’ ಎಂದು ಡಾ. ಅರವಿಂದ ಮಾಲಗತ್ತಿ ಹೇಳಿದರು.

‘ವಿಮರ್ಶಕರಿಗೆ ಮೂರನೇ ಕಣ್ಣು ಇರಬೇಕು. ಆದರೆ, ಮೂರನೇ ಕಣ್ಣು ಇರುವ ಎಷ್ಟು ಜನ ವಿಮರ್ಶಕರು ಇದ್ದಾರೆ’ ಎಂದು ಪ್ರಶ್ನಿಸಿದ ಅವರು, ‘ಎರಡು ಕಣ್ಣು ಇರುವ ವಿಮರ್ಶಕರು ನಿಜವಾಗಿ ವಿಮರ್ಶೆ ಮಾಡಿದರೆ ಮುಂದೆ ಅವರೇ ಮೂರನೇ ಕಣ್ಣಿನ ವಿಮರ್ಶಕರಾಗುತ್ತಾರೆ. ಭೂತ–ವರ್ತಮಾನವನ್ನು ಸಮಗ್ರವಾಗಿ ಬಲ್ಲವರು ಮಾತ್ರ ಭವಿಷ್ಯವನ್ನು ಹಿಡಿದಿಡಲು ಸಾಧ್ಯವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT