ಮಂಗಳವಾರ, ನವೆಂಬರ್ 29, 2022
21 °C
ಕನ್ನಡ ಭಾಷೆ, ಸಂಸ್ಕೃತಿ ಕುರಿತ ವಿಚಾರ ಸಂಕಿರಣಕ್ಕೆ ಪ್ರೊ. ಅಗಸರ ಚಾಲನೆ

ಹೃದಯ ಅರಳಿಸುವ ಭಾಷೆ ಕನ್ನಡ: ಪ್ರೊ. ದಯಾನಂದ ಅಗಸರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ‘ಕನ್ನಡ ಭಾಷೆ ನಮ್ಮ ಉಸಿರು. ನಾವೆಲ್ಲ ಕನ್ನಡಿಗರು ಯಾವುದೇ ಭಾಷೆ ಕಲಿತರೂ ಕನ್ನಡವನ್ನೇ ಬಳಸಬೇಕು. ಜ್ಞಾನದ ದೃಷ್ಟಿಯಿಂದ ಹಲವಾರು ಭಾಷೆ ಕಲಿತರೂ ಅಡ್ಡಿಯಿಲ್ಲ, ಕನ್ನಡ ಮಾತ್ರ ಮರೆಯಬಾರದು. ನಮ್ಮ ತಾಯ್ನುಡಿಯನ್ನು ಯಾವಾಗಲೂ ಗೌರವಿಸಬೇಕು. ಕನ್ನಡ ಹೃದಯ ಅರಳಿಸುವ ಭಾಷೆ’ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದಯಾನಂದ ಅಗಸರ ಅಭಿಪ್ರಾಯಪಟ್ಟರು.

ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಕನ್ನಡ ಅಧ್ಯಯನ ಸಂಸ್ಥೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಆಯೋಜಿಸಿದ್ದ ಎರಡು ದಿನಗಳ ಕಲ್ಯಾಣ ಕರ್ನಾಟಕದ ಕನ್ನಡ ಭಾಷೆ ಮತ್ತು ಸಂಸ್ಕೃತಿ ವಿಷಯದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾಹಿತಿ ಪ್ರೊ. ವಿ.ಜಿ. ಪೂಜಾರ ಮಾತನಾಡಿ, ‘ಕನ್ನಡವು ಅತ್ಯಂತ ಹಳೆಯ ಭಾಷೆಗಳಲ್ಲಿ ಒಂದಾಗಿದೆ. ಹಳೆಯದಾದ ಬ್ರಾಹ್ಮಿ ಶಾಸನದಲ್ಲಿ ಇಸಿಲ ಎಂಬ ಕನ್ನಡ ಪದವನ್ನು ಬರೆದಿದ್ದೇ ಇದಕ್ಕೆ ಸಾಕ್ಷಿಯಾಗಿದೆ. ಕನ್ನಡವು ಇಂಗ್ಲಿಷ್ ಅಥವಾ ಹಿಂದಿಗೆ ವಿರೋಧಿ ಭಾಷೆಯಲ್ಲ. ಭಾಷೆಯನ್ನು ಯಾರೂ ಹೇಳಿ ಕೊಡಬೇಕಾಗಿಲ್ಲ. ನಮ್ಮ ನಡೆ, ನುಡಿ, ಜೀವನ ವಿಧಾನವೇ ಸಂಸ್ಕೃತಿಯಾಗಿದೆ. ಕನ್ನಡಿಗರು ಸಾಕಷ್ಟು ಔದಾರ್ಯವುಳ್ಳವರು, ಸಾಹಸಿಗಳು, ಕುಳಿತು ಓದದೆಯೇ ಕಾವ್ಯವನ್ನು ರಚಿಸಬಲ್ಲವರಾಗಿದ್ದಾರೆ ಎಂದು ಶಾಸನಗಳಲ್ಲಿ ಉಲ್ಲೇಖವಾಗಿದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಗುವಿವಿ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ. ಎಚ್.ಟಿ. ಪೋತೆ ಮಾತನಾಡಿ, ‘ಭಾಷಿಕ ಕನ್ನಡ ಭಾಷೆಯಲ್ಲಿ ಕಲ್ಯಾಣ ಕರ್ನಾಟಕದ ಭಾಷೆ, ಸಂಸ್ಕೃತಿ ವೈವಿಧ್ಯತೆಯಿದೆ. ಪ್ರಾಚೀನ ಕಾಲದಿಂದಲೂ ಈ ಭಾಗದಲ್ಲಿ ಅತ್ಯಂತ ಶಕ್ತಿಯುತವಾಗಿ ವೈಶಿಷ್ಟ್ಯ ಪೂರ್ಣವಾಗಿ ಬಳಕೆಗೊಳ್ಳುತ್ತಿದೆ. ಇಡೀ ಜಗತ್ತಿನ ಗಮನ ಸೆಳೆದ ಪ್ರದೇಶ ಇದಾಗಿದೆ. ವಿಶಿಷ್ಟ ಚಿಂತನೆಗಳನ್ನು ಬಿತ್ತಿದ ಬಹುತ್ವದ ನಾಡು ಮಾಡಬೇಕು. ಅನ್ನದ ಭಾಷೆಯಾಗಿ ಬೇರೆ ಭಾಷೆ ಕಲಿಯಬೇಕು. ಆದರೆ ಕನ್ನಡವನ್ನು ನಮ್ಮ ಹೃದಯದಲ್ಲಿಟ್ಟುಕೊಂಡು ಮೆರೆಸಬೇಕು’ ಎಂದು ಹೇಳಿದರು.

ಸಣ್ಣ ನೀರಾವರಿ ಇಲಾಖೆಯ ಅಧೀಕ್ಷಕ ಎಂಜಿನಿಯರ್ ಡಾ. ಸುರೇಶ ಎಲ್. ಶರ್ಮಾ ಮಾತನಾಡಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ ಮಾತನಾಡಿ, ಗುಲಬರ್ಗಾ ವಿಶ್ವವಿದ್ಯಾಲಯದ ಎಲ್ಲಾ ವಿಭಾಗಗಳಲ್ಲಿ ಪ್ರತಿದಿನ ತರಗತಿಯ ಆರಂಭಕ್ಕೆ ನಾಡಗೀತೆಯನ್ನು ಹಾಡುವುದು ಕಡ್ಡಾಯಗೊಳಿಸಲು ಆದೇಶ ಹೊರಡಿಸಬೇಕೆಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕುಲಪತಿ ಪ್ರೊ. ದಯಾನಂದ ಅಗಸರ, ‘ಈ ಕುರಿತು ಸಭೆಯಲ್ಲಿ ತೀರ್ಮಾನ ಮಾಡಿ, ಶೀಘ್ರವೇ ಆದೇಶ ಹೊರಡಿಸುತ್ತೇನೆ’ ಎಂದರು.

ಅಕ್ಷತಾ ಪ್ರಮೋದ ಪುರಾಣಿಕ ಕನ್ನಡ ಹಾಡಿಗೆ ಭರತ ನಾಟ್ಯ ಮಾಡಿದರು. ಡಾ. ಸಂತೋಷಕುಮಾರ ಕಂಬಾರ ನಿರೂಪಿಸಿ, ವಂದಿಸಿದರು.

ವಿವಿಧ ಗೋಷ್ಠಿಗಳಲ್ಲಿ ಡಾ. ಶ್ರೀಶೈಲ ನಾಗರಾಳ, ಡಾ. ಗವಿಸಿದ್ದಪ್ಪ ಪಾಟೀಲ, ಡಾ. ದಸ್ತಗೀರಸಾಬ್ ದಿನ್ನಿ, ಡಾ. ಅಣ್ಣಾಜಿ ಕೃಷ್ಣಾರೆಡ್ಡಿ ಕನ್ನಡ ಭಾಷೆ ಸಂಸ್ಕೃತಿಯ ಮೇಲೆ ಪ್ರಬಂಧ ಮಂಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು