ಸೋಮವಾರ, ಆಗಸ್ಟ್ 2, 2021
28 °C
ವೃಂದ ನೇಮಕಾತಿ ತಡೆಗೆ ಆಕ್ರೋಶ, ಶುದ್ಧ ಕುಡಿಯುವ ನೀರು ಪೂರೈಕೆಗೆ ಆಗ್ರಹ, ಕೋವಿಡ್‌ ಜನರಿಕೆ ಔಷಧಿ ತಯಾರಿಕೆಗೆ ಒತ್ತಡ

ವಿವಿಧ ಬೇಡಿಕೆ: ಕಲಬುರ್ಗಿ ನಗರದಲ್ಲಿ ಸರಣಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ, ನಗರದಲ್ಲಿ ಮಂಗಳವಾರ ಐದು ಸಂಘಟಗಳು ಸರಣಿ ಪ್ರತಿಭಟನೆ ನಡೆಸಿದವು. ಹೊರಾಟಗಾರರು ಜಿಲ್ಲಾಧಿಕಾರಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿ, ಮಹಾನಗರ ಪಾಲಿಕೆ ಅಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ವೃಂದ ನೇಮಕಾತಿ ತಡೆಗೆ ಆಕ್ರೋಶ

ಕೋವಿಡ್‌ ನೆಪದಲ್ಲಿ ಕಲ್ಯಾಣ ಕರ್ನಾಟಕ ಭಾಗದ ವೃಂದ ನೇಮಕಾತಿ, ಬ್ಯಾಕ್‌ಲಾಗ್‌ ಹಾಗೂ ನೇರ ನೇಮಕಾತಿಗಳನ್ನು ತಡೆ ಹಿಡಿದಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ, ಕರ್ನಾಟಕ ನವನಿರ್ಮಾಣ ಸೇನೆ ಕಾರ್ಯಕರ್ತರು ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್‌ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಸರ್ಕಾರವು ಪೂರ್ವ ನಿಯೋಜಿತವಾಗಿ ಕ್ರಮ ಕೈಗೊಂಡು ಕೋವಿಡ್‌ ನಿಯಂತ್ರಣ ಮಾಡಲಿಲ್ಲ. ಅದರ ಪರಿಣಾಮ ಉಂಟಾದ ಆರ್ಥಿಕ ಹೊರೆಯನ್ನು ಕಲ್ಯಾಣ ಕರ್ನಾಟಕ ಭಾಗದ ಜನರ ಮೇಲೆ ಹೇರುವುದು ಯಾವ ನ್ಯಾಯ? ಪ್ರತಿ ಬಾರಿ ಬಿಜೆಪಿ ಸರ್ಕಾರ ಒಂದಲ್ಲ ಒಂದು ನೆಪ ಹೇಳಿಕೊಂಡು ಈ ಭಾಗವನ್ನು ನಿರ್ಲಕ್ಷ್ಯ ಮಾಡುತ್ತಲೇ ಬಂದಿದೆ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಹೈದರಾಬಾದ್‌ ಕರ್ನಾಟಕ ಎಂಬ ಹೆಸರನ್ನು ಮಾತ್ರ ಬದಲಾಯಿಸಿದ್ದಾರೆ. ಅದಕ್ಕೆ ಬೇಕಾದ ಯಾವ ಸೌಲಭ್ಯವನ್ನೂ ನೀಡಿಲ್ಲ. 371ಜೆ ಕೂಡ ಪರಿಣಾಮಕಾರಿಯಾಗಿ ಅನುಷ್ಠಾನ ಆಗಿಲ್ಲ. ಸಚಿವ ಸಂಪುಟ ವಿಸ್ತರಣೆಯಲ್ಲೂ ನಿರ್ಲಕ್ಷ್ಯ ಮಾಡಲಾಗಿದೆ. ಮುಖ್ಯಮಂತ್ರಿಗಳ ಉದ್ದೇಶ ಏನು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ತಡೆ ಹಿಡಿದ ನೇಮಕಾತಿಗಳನ್ನು ಕೂಡಲೇ ಮರು ಆರಂಭಿಸಬೇಕು. ಉಲ್ಲದಿದ್ದರೆ ನಿರಂತರ ಹೋರಾಟ ಎದುರಿಸಬೇಕಾಗುತ್ತದೆ ಎಂದೂ ದೂರಿದರು.

ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ರವಿ ಎಸ್‌. ದೇಗಾಂವ, ಉಪಾಧ್ಯಕ್ಷ ಸಂತೋಷ ಪಾಟೀಲ, ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ಪಾಟೀಲ, ಉಪಾಧ್ಯಕ್ಷ ರಾಜೇಶ್ವರಿ, ದಿಲೀಪ‍ ಚಿರುಸಾವಳಗಿ, ಶರತ್‌ ಹಿರೇಮಠ, ಪ್ರಶಾಂತ ಕೋರಿ ಇದ್ದರು.

ವಿನಾಯಿತಿಗೆ ಲಾರಿ ಮಾಲೀಕರ ಮನವಿ

ಕೋವಿಡ್‌ ಕಾರಣದಿಂದಾಗಿ ಲಾರಿ ಸಂಚಾರ ನಿಂತು ಹೋಗಿದ್ದು, ವಾಹನಗಳ ಮಾಲೀಕರು ಕೂಡ ಸಂಕಷ್ಟದ ದಿನಗಳನ್ನು ಎದುರಿಸುತ್ತಿದ್ದಾರೆ. ಕಾರಣ, ಬರುವ ನವೆಂಬರ್‌ವರೆಗೆ ಪರವಾನಗಿ ಶುಲ್ಕ, ತೆರಿಗೆ ವಸೂಲಿ ಹಾಗೂ ದಂಡ ಹಾಕುವ ಕ್ರಮದಿಂದ ವಿನಾಯಿತಿ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾ ಲಾರಿ ಮಾಲೀಕರ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು.

ಇಲ್ಲಿನ ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಒ) ಕಚೇರಿ ಮುಂದೆ ಕೆಲ ಕಾಲ ಪ್ರತಿಭಟನೆ ನಡೆಸಿದ ಲಾರಿಗಳ ಮಾಲೀಕರು, ಲಾಕ್‌ಡೌನ್ ಸಂದರ್ಭದಲ್ಲಿ ಲಾರಿಗಳು ಸ್ಥಗಿತಗೊಂಡು ಬಹಳ ನಷ್ಟ ಅನುಭವಿಸಿದ್ದೇವೆ. ಕೋವಿಡ್‌ ಭಯದಿಂದಾಗಿ ವಾಹನ ಚಾಲಕರು, ಕೆಲಸಗಾರರೂ ಬರುತ್ತಿಲ್ಲ. ಅಂತರರಾಜ್ಯ ಸಂಚಾರ, ವ್ಯಾಪಾರ, ವಹಿವಾಟು ಕೂಡ ಇನ್ನೂ ಚೇತರಿಸಿಕೊಂಡಿಲ್ಲ. ಸಾಲ ಮಾಡಿ ವಾಹನ ಖರೀದಿಸಿದ ಹಲವರು ಬೀದಿಗೆ ಬೀಳುವಂತಾಗಿದೆ. ಆದ್ದರಿಂದ ಜಿಲ್ಲಾಡಳಿತ ಪರವಾನಗಿ ನೀಡಲು, ನವೀಕರಣಕ್ಕೆ ಶುಲ್ಕ ವಿನಾಯಿತಿ ನೀಡಬೇಕು. ದಂಡ ಹಾಗೂ ತೆರಿಗೆ ಕೈ ಬಿಡಬೇಕು ಎಂದು ಆಗ್ರಹಿಸಿದರು.

ಸಂಘದ ಅಧ್ಯಕ್ಷ ಹಣಮಂತ ರೆಡ್ಡಿ, ಉಪಾಧ್ಯಕ್ಷ ಪ್ರಕಾಶ ಖೇಮಜಿ, ಕಾರ್ಯದರ್ಶಿ ಜಗನ್ನಾಥ ಪಾಟೀಲ ನೃತೃತ್ವ ವಹಿಸಿದ್ದರು.

ಮಲಿನ ನೀರು ಪೂರೈಕೆ ಆಕ್ರೋಶ

ಕಳೆದ ಒಂದು ವಾರದಿಂದ ನಗರದಲ್ಲಿ ಅತ್ಯಂತ ಮಲಿನ ನೀರು ಪೂರೈಸಲಾಗುತ್ತಿದೆ. ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಜೆಡಿಎಸ್‌ ಜಿಲ್ಲಾ ಯುವ ಘಟಕದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಮುಖಂಡರು, ‘ಮಳೆಗಾಲ ಬಂದರೂ ಬಹುಪಾಲು ಪ್ರದೇಶಗಳಿಗೆ ಸರಿಯಾಗಿ ನೀರು ಪೂರೈಸುತ್ತಿಲ್ಲ. ಪೂರೈಸುವ ಕಡೆಗೆ ಕೊಳಚೆ ಮಿಶ್ರಣವಾಗಿ ಬರುತ್ತಿದೆ. ಇದಕ್ಕೆ ಯಾರು ಹೊಣೆ’ ಎಂದೂ ದೂರಿದರು.

‘ನೀರು ಪೂರೈಕೆ ಜವಾಬ್ದಾರಿ ಹೊತ್ತ ಮಹಾನಗರ ಪಾಲಿಕೆ ಹಾಗೂ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು. ಪ್ರತಿ ದಿನ ನಗರದಾದ್ಯಂತ ಶುದ್ಧ ನೀರು ಪೂರೈಸಬೇಕು ಎಂದೂ ಆಗ್ರಹಿಸಿದರು.

ಪಕ್ಷದ ಮುಖಂಡರಾದ ಅಲೀಮ್‌ ಇನಾಮದಾರ, ಅರವಿಂದ ರಂಜರಿ, ಪ್ರವೀಣ ಎಲ್‌. ಯಾದವ, ಸಯ್ಯದ್‌ ಅಬೂಬಾಕರ್‌, ಅತ್ತರ್‌ ಪರ್ವೇಜ್‌, ಮೊಹಮದ್‌ ಫಿರೋಜ್‌ ಅಹ್ಮದ್‌, ಅಲಾಂದಾರ್‌ ಝೀಡಿ, ಹಬೀಬ್‌, ಯಾಸೀಮ್‌ ಖಾದ್ರಿ, ಇಕ್ಬಾಲ್‌ ಅಹಮದ್‌ ಪ್ರತಿಭಟನೆಯಲ್ಲಿ ಇದ್ದರು.

ಕೋವಿಡ್‌: ಜನರಿಕ್‌ ಔಷಧ ತಯಾರಿಕೆಗೆ ಆಗ್ರಹ

ಕಲಬುರ್ಗಿ: ಕೊರೊನಾ ವೈರಾಣು ನಿರೋಧಕ ಔಷಧಿ (ರೆಮ್ಮ ಡಿಸಿವರ್‌)ಯನ್ನು ಕಡಿಮೆ ಬೆಲೆಗೆ ಸಿಗುವಂತೆ ಜನರಿಕ್‌ ಔಷಧಿಯಾಗಿ ಉತ್ಪಾದಿಸಬೇಕು ಎಂದು ಆಗ್ರಹಿಸಿ ಭಾರತ ಕಮ್ಯುನಿಸ್ಟ್‌ ಪಕ್ಷದ (ಮಾರ್ಕ್ಸ್‌ವಾದಿ) ಜಿಲ್ಲಾ ಘಟಕದ ಮುಖಂಡರು ಮಂಗಳವಾರ ಪ್ರತಿಭಟನೆ ನಡೆಸಿದರು.

ಔಷಧ ತಯಾರಿಕಾ ಕಂಪನಿಗಳು ಇದರ ಕೃತಕ ಅಭಾವ ಸೃಷ್ಟಿಸಿ ಜನರನ್ನು ಸುಲಿಗೆ ಮಾಡುವ ಸಂಭವವಿದೆ. ಇದರಿಂದ ಜನರನ್ನು ಪಾರು ಮಾಡಲು ಕೇಂದ್ರ ಸರ್ಕಾರವೇ ಇದರ ಉತ್ಪಾದನೆಗೆ ಕೈ ಹಾಕಬೇಕು. ಗಿಲಿಯಡ್‌ ಎಂಬ ಕಂಪನಿಯು ಈ ಔಷಧಿ ತಯಾರಿಕಾ ಪೇಟೆಂಟ್‌ ಪಡೆದಿದೆ. ಐದು ದಿನ ನೀಡಬೇಕಾದ ಔಷಧಿಗೆ ಅಮೆರಿಕದಲ್ಲಿ ₹ 2.25 ಲಕ್ಷ ಎಂದು ಅಂದಾಜಿಸಲಾಗಿದೆ. ಭಾರತದಲ್ಲಿ ಇದರ ಉತ್ಪಾದನೆಗೆ ಐದು ಕಂಪನಿಗಳು ಮುಂದಾಗಿವೆ ಎಂಬ ದಟ್ಟ ಸುದ್ದಿ ಇದೆ. ₹ 30 ಸಾವಿರದಷ್ಟು ರಿಯಾಯಿತಿ ದರದಲ್ಲಿ ಉತ್ಪಾದನೆ ಮಾಡುವುದಾಗಿ ಕಂಪನಿಗಳು ಮುಂದೆ ಬಂದಿವೆ. ಆದರೆ, ತಜ್ಞರ ಪ್ರಕಾರ ಇದಕ್ಕೆ ತಗುಲುವುದು ಕೇವಲ ₹ 100 ಮಾತ್ರ. ಹಾಗಾಗಿ, ಈ ಲೂಟಿಗೆ ಕೇಂದ್ರ ಸರ್ಕಾರ ಅವಕಾಶ ನೀಡಬಾರದು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

‍ಪಕ್ಷದ ಜಿಲ್ಲಾ ಘಟಕದ ಕಾರ್ಯದರ್ಶಿ ಶರಣಬಸಪ್ಪ ಮಮಶೆಟ್ಟಿ, ಮುಖಂಡರಾದ ಗಂಗಮ್ಮ ಬಿರಾದಾರ, ಮೇಘರಾಜ ಕಠಾರೆ, ನಾಗಯ್ಯ ಸ್ವಾಮಿ, ಎಂ.ಬಿ. ಸಜ್ಜನ, ಆನಂದ ಎನ್‌.ಜೆ. ಇದ್ದರು.

ಕಬ್ಬಿನ ಬಾಕಿ ಬಿಲ್‌ ನೀಡಲು ಆಗ್ರಹ

ಕಲಬುರ್ಗಿ: ಯಾದಗಿರಿ ಜಿಲ್ಲೆಯ ವಡಗೇರಾದಲ್ಲಿರುವ ಕೋರ್‌ಗ್ರೀನ್‌ ಸಕ್ಕರೆ ಕಾರ್ಖಾನೆಯಿಂದ ಜಿಲ್ಲೆಯ ಕಬ್ಬು ಬೆಳೆಗಾರರ ಬಾಕಿ ಬಿಲ್‌ ಕೊಡಿಸಬೇಕು ಎಂದು ಆಗ್ರಹಿಸಿ ಕಲಬುರ್ಗಿ ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಸದಸ್ಯರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಕಾರ್ಖಾನೆಗೆ ಕಬ್ಬು ಸಾಗಿಸಿ ಐದು ತಿಂಗಳು ಕಳೆದಿವೆ. ಆದರೂ ಬಿಲ್‌ ನೀಡಿಲ್ಲ. ಕಾಯ್ದೆ ಪ್ರಕಾರ ಕಬ್ಬು ಪೂರೈಸಿದ 14 ದಿನದೊಳಗೆ ಬಿಲ್‌ ನೀಡಬೇಕು. ಆದರೆ, ಜಿಲ್ಲೆಯ ಕಬ್ಬು ಬೆಳೆಗಾರರನ್ನು ಈ ಕಾರ್ಖಾನೆಯವರು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಮನವಿಯಲ್ಲಿ ದೂರಿದ್ದಾರೆ.

ಸದ್ಯ ಮುಂಗಾರು ಚಟುವಟಿಕೆಗಳು ಚುರುಕುಗೊಂಡಿವೆ. ಬಿತ್ತನೆಬೀಜ, ರಸಗೊಬ್ಬರ, ಕೂಲಿಯಾಳು, ನೀರಾವರಿ ಮುಂತಾದ ಕಾರಣಕ್ಕೆ ರೈತರಿಗೆ ಹಣದ ಅವಶ್ಯಕತೆ ಇದೆ. ಮಾತ್ರವಲ್; ವಿವಿಧ ಬ್ಯಾಂಕ್‌ಗಳಲ್ಲಿ ಪಡೆದ ಸಾಲ ಮರುಪಾವತಿ ಮಾಡಿ ಹೊಸ ಸಾಲ ಪಡೆಯುವುದು ಅಗತ್ಯವಾಗಿದೆ. ಆದ್ದರಿಂದ ಕೂಡಲೇ ಬಿಲ್‌ ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.‌

2018–19ರ ಸಾಲಿನಲ್ಲಿ ಸಾಗಿಸಿದ ಕಬ್ಬಿಗೆ ಪ್ರತಿ ಟನ್‌ಗೆ ₹ 250ರಂತೆ ಕಾರ್ಖಾನೆ ಬಾಕಿ ಉಳಿಸಿಕೊಂಡಿದೆ. 18 ತಿಂಗಳು ಕಳೆದರೂ ಬಾಕಿ ಹಣ ಕೂಡ ಕೊಟ್ಟಿಲ್ಲ. ಅಲ್ಲದೇ, 2013–14ನೇ ಸಾಲಿನಲ್ಲಿ ಉಳಿದ ಬಾಕಿಗೆ ಪ್ರತಿ ಟನ್‌ಗೆ ₹ 100 ಸೇರಿಸಿ ಕೊಡುವಂತೆ ಕಲಬುರ್ಗಿ ಹೈಕೋರ್ಟ್‌ ಪೀಠ ಆದೇಶ ನೀಡಿದೆ. ಇದು ಸುಮಾರು ₹ 6.50 ಕೋಟಿಯಷ್ಟು ಬಾಕಿ ಇದ್ದು, ಅದನ್ನೂ ಏಕಕಾಲಕ್ಕೆ ಸಂದಾಯ ಮಾಡಬೇಕು. ಇಲ್ಲದಿದ್ದರೆ ಮತ್ತೊಮ್ಮೆ ಕೋರ್ಟ್‌ ಮೊರೆ ಹೋಗಬೇಕಾಗುತ್ತದೆ ಎಂದು ರೈತರು ಎಚ್ಚರಿಸಿದ್ದಾರೆ.

ಸಂಘದ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಕುಲಕರ್ಣಿ, ವಿವಿಧ ಘಟಕಗಳ ಮುಖಂಡರಾದ ಯಶವಂತರಾಯ, ಶರಣಕುಮಾರ ಬಿಲ್ಲಾಡ, ಅನಂತ ಪಿ. ಜೈನ, ಮಲ್ಲಿಕಾರ್ಜುನ ಬಿರಾದಾರ, ಸಂತೋಷಕುಮಾರ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.