ಬುಧವಾರ, ಮಾರ್ಚ್ 29, 2023
32 °C

ನೋಂದಣಿ ಕಚೇರಿಗಳಲ್ಲಿ ಸರ್ವರ್ ದೋಷ; ಗೊಂದಲದ ಗೂಡು

ಮಲ್ಲಿಕಾರ್ಜುನ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ಪದೇ ಪದೇ ಸರ್ವರ್‌ ದೋಷದ ಕಾರಣ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಚೇರಿಗಳು ಗೊಂದಲದ ಗೂಡಾಗಿವೆ. ತಂತ್ರಾಂಶ ಆಧಾರಿತ ಹೊಸ ವ್ಯವಸ್ಥೆ ಜಾರಿಗೆ ಬಂದು ವರ್ಷ ಕಳೆದರೂ ತಾಂತ್ರಿಕ ಸಮಸ್ಯೆಗಳ ಮೂಲ ಪತ್ತೆಹಚ್ಚಿ ಇತ್ಯರ್ಥಪಡಿಸಿಕೊಳ್ಳಲು ಇದುವರೆಗೂ ಸಾಧ್ಯವಾಗಿಲ್ಲ.

ಜಿಲ್ಲೆಯಲ್ಲಿ ಕಲಬುರಗಿ, ಸೇಡಂ, ಚಿತ್ತಾಪುರ, ಜೇವರ್ಗಿ, ಚಿಂಚೋಳಿ ಸೇರಿ ಏಳು ಉಪನೋಂದಣಿ ಕಚೇರಿಗಳಿವೆ. ಬಹುತೇಕ ಕಚೇರಿಗಳಲ್ಲಿ ಆಸ್ತಿ ನೋಂದಣಿಗೆ ಆಗಾಗ ಸರ್ವರ್ ಡೌನ್‌ ಸಮಸ್ಯೆ ಕಾಡುತ್ತಿದೆ. ಇದರಿಂದ ದಾಖಲೆಗಳನ್ನು ಪಡೆಯಲು ಜನರು ನಿತ್ಯ ಪರದಾಡುವಂತಾಗಿದೆ.

2003ರಲ್ಲಿ ಕಾವೇರಿ ತಂತ್ರಾಂಶವನ್ನು ಪುಣೆ ಮೂಲದ ಸಿ–ಡಾಕ್‌ (C-DAC) ಅಭಿವೃದ್ಧಿಪಡಿಸಿತ್ತು. ಈಗ ಅದರ ನಿರ್ವಹಣೆ ಜವಾಬ್ದಾರಿ ಬೇರೊಂದು ಸಂಸ್ಥೆ ಹೊತ್ತುಕೊಂಡಿದೆ. 3–4 ಇಲಾಖೆಗಳ ತಂತ್ರಾಂಶಗಳ ಮೇಲೆ ನೋಂದಣಿ ಇಲಾಖೆ ಅವಲಂಬಿತವಾಗಿದೆ. ತಾಂತ್ರಿಕ ವರ್ಗ, ಆನ್‌ಲೈನ್ ಸೇವೆ ಮತ್ತು ನೆಟ್‌ವರ್ಕ್‌ ಪೂರೈಕೆದಾರರ ನಡುವೆ ಸಮನ್ವಯದ ಕೊರತೆ ಕಂಡುಬರುತ್ತಿದೆ. ನೋಂದಣಿ ಇಲಾಖೆಯು ತನ್ನ ಪ್ರಕ್ರಿಯೆ ಪೂರ್ಣಗೊಳಿಸಲು ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ನಗರಾಭಿವೃದ್ಧಿ ಇಲಾಖೆಯ ತಂತ್ರಾಂಶಗಳನ್ನು ಅವಲಂಬಿಸಬೇಕಾಗಿದೆ. ಇದರಲ್ಲಿ ಯಾವುದಾದರು ಒಂದು ವಿಭಾಗದಲ್ಲಿ ಸಮಸ್ಯೆ ಎದುರಾದರೂ ನೋಂದಣಿ ಪ್ರಕ್ರಿಯೆಗೆ ಹಿನ್ನಡೆ ಆಗುತ್ತದೆ.

‘ಎಲ್ಲವನ್ನೂ ಸಕಾಲದಲ್ಲಿ ಅಪ್‌ಲೋಡ್‌ ಮಾಡುವುದರಿಂದ ಸರ್ವರ್‌ ಸಮಸ್ಯೆ ಆಗುತ್ತಿರುತ್ತದೆ. ಆ ಸಮಯದಲ್ಲಿ ಅರ್ಜಿದಾರರ ಒಟಿಪಿ ಬರುವುದು ತಡವಾಗುತ್ತದೆ. ಕೆಲ ಸಮಯದ ಬಳಿಕ ಸರಿ ಹೋಗುತ್ತದೆ. ಜನರು ತಾಳ್ಮೆಯಿಂದ ಇಲಾಖೆಗೆ ಸಹಕರಿಸಬೇಕು. ಸರ್ಕಾರ ತಾಂತ್ರಿಕ ಮತ್ತು ಸರ್ವರ್‌ ಸೇವೆ ಜವಾಬ್ದಾರಿಯನ್ನು ಬೇರೊಂದು ಸೇವಾದಾತರಿಗೆ ವಹಿಸಿದೆ. ಸರ್ವರ್ ಸಮಸ್ಯೆ ಆದಾಗ ಬಿಎಸ್‌ಎನ್‌ಎಲ್‌ ಮತ್ತು ಕೆ ಸ್ವಾನ್ (ಕರ್ನಾಟಕ ರಾಜ್ಯ ವಿಸ್ತೃತ ಜಾಲ ಯೋಜನೆ) ಜತೆಗೂಡಿ ಕೆಲಸ ಮಾಡಬೇಕು. ಆದರೆ, ಅಲ್ಲಿ ಕೆಲವು ಲೋಪದೋಷಗಳು ಇರಬಹುದು. ಹೀಗಾಗಿ, ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ಭಾವನೆ ಬರುತ್ತದೆ’ ಎಂದು ಜಿಲ್ಲಾ ನೋಂದಣಿ ಹಾಗೂ ಮುದ್ರಾಂಕ ಉಪ ಆಯುಕ್ತ ಮಹಮ್ಮದ್ ಅಬ್ದುಲ್ ಆಸಿಫ್ ಅವರು ಹೇಳುತ್ತಾರೆ.

ಮೂಲಸೌಕರ್ಯಗಳಿಗೆ ಬಜೆಟ್‌ ಕೊರತೆ

’ಬಜೆಟ್‌ ನೀಡದೆ ಮೂರು ವರ್ಷವಾಯಿತು. ಈಚೆಗೆ ಟೆಂಡರ್ ಕರೆದಿದ್ದು ಇದೂವರೆಗೆ ಹೊಸ ಬ್ಯಾಟರಿ ಪೂರೈಕೆ ಆಗಿಲ್ಲ. ಒಂದು ವರ್ಷದೊಳಗೆ ಅಳವಡಿಸಿ ಕೊಡುವುದಾಗಿ ಹೇಳಿದ್ದಾರೆ. ಎಲ್ಲ ಕಂಪ್ಯೂಟರ್‌ಗಳ ಬಳಕೆ ಸಾಮರ್ಥ್ಯದ ಅವಧಿ ಮೀರಿವೆ. ಪದೇಪದೇ ತಾಂತ್ರಿಕ ದೋಷ ಕಂಡುಬರುತ್ತದೆ. ತಿಂಗಳಲ್ಲಿ ಒಂದೆರಡು ಕಂಪ್ಯೂಟರ್ ಹಾಳಾಗುತ್ತವೆ. ಹೊಸ ಸಿಸ್ಟಮ್, ಸಾಫ್ಟ್‌ವೇರ್ ಬಂದರೆ ವೇಗವಾಗಿ ನೋಂದಣಿ ಪ್ರಕ್ರಿಯೆ ಮಾಡಬಹುದು. ಆಗ ನೋಂದಣಿ ಸಂಖ್ಯೆಯೂ ಹೆಚ್ಚಾಗುತ್ತದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

’ಸರ್ವರ್ ಸಮಸ್ಯೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಅದು ‘ಅಪ್ಲಿಕೇಷನ್‌’ಗಳಿಗೆ ಸಬಂಧಿಸಿದ ದೋಷ. ಪ್ರತಿಯೊಂದು ತಾಲ್ಲೂಕು ಮಟ್ಟದ ಉಪನೋಂದಣಿ ಕಚೇರಿಗಳಲ್ಲಿ ಇಬ್ಬರು ಎಂಜಿನಿಯರ್‌ಗಳು ಇದ್ದಾರೆ. ಯಾವುದೇ ತರಹದ ಡೇಟಾ ಮತ್ತು ನೆಟ್‌ವರ್ಕ್‌ ದೋಷ ಕಂಡುಬಂದರೆ ತಕ್ಷಣವೇ ಪರಿಶೀಲಿಸಿ ಅವರು ಪರಿಹರಿಸುತ್ತಾರೆ’ ಎಂದು  ಕೆ–ಸ್ವಾನ್‌ ಜಿಲ್ಲಾ ನೋಡಲ್ ಅಧಿಕಾರಿ ಪ್ರೇಮ್ ಹೇಳುತ್ತಾರೆ.

’ಮಳೆ ಬಂದರೆ, ಫ್ಲಾಪಿಂಗ್‌ ಆಗಿದ್ದರೇ ನೆಟ್‌ವರ್ಕ್‌ ಸಮಸ್ಯೆ ಆಗುತ್ತದೆ. ಒಂದು ವೇಳೆ ಬಿಎಸ್‌ಎನ್‌ಎಲ್‌ ನೆಟ್‌ವರ್ಕ್‌ ಡೌನ್ ಆದರೆ ಬದಲಿ ಐಎಸ್‌ಪಿ ವ್ಯವಸ್ಥೆ ಇದೆ. ಯಾವುದೇ ಇಲಾಖೆಗಳಿಂದ ಕರೆ ಬಂದರೆ ಮುತುವರ್ಜಿ ವಹಿಸಿ ತಕ್ಷಣವೇ ಪರಿಹರಿಸುತ್ತೇವೆ. ಕೆಲವೊಮ್ಮೆ ಕಚೇರಿಗೆ ಹೋಗಿ ನೋಡಿದರೇ ನೆಟ್‌ವರ್ಕ್‌ಗಿಂತ ಆಂತರಿಕವಾದ ಸಿಸ್ಟಮ್‌ ಸಮಸ್ಯೆ, ಐಪಿ ಸಂಪರ್ಕ ಕಡಿತ ಆಗಿರುತ್ತೆ. ಕರೆ ಬಂದ ಐದು ನಿಮಿಷದ ಒಳಗೆ ನೆಟ್‌ವರ್ಕ್‌ ಸಮಸ್ಯೆ ಬಗೆಹರಿಸುತ್ತೇವೆ’ ಎಂದು ಅವರು ತಿಳಿಸಿದರು.

’ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಆಸ್ತಿ ಆಗಿದ್ದರೆ, ಪಿಡಿಒ ಅವರೇ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ (ಆರ್‌ಡಿಪಿಆರ್) ಯಲ್ಲಿ ಅರ್ಜಿಗಳನ್ನು ಅಪ್‌ಲೋಡ್‌ ಮಾಡಬೇಕು. ಬಳಿಕ ಆರ್‌ಡಿಪಿಆರ್‌ ಸಿಬ್ಬಂದಿ ಅದನ್ನು ಪರಿಶೀಲಿಸಿ ಅಪ್‌ ಡೇಟ್‌ ಮಾಡಿ ಕಾವೇರಿ ತಂತ್ರಾಂಶಕ್ಕೆ ಜೋಡಿಸಬೇಕು. ಆ ಬಳಿಕ ಅರ್ಜಿದಾರ ನಮ್ಮ ಬಳಿ ಬಂದರೆ ದಾಖಲಾತಿಗಳನ್ನು ವಿಲೇವಾರಿ ಮಾಡುತ್ತೇವೆ. ಆದರೆ, ಬಹುತೇಕ ಪಿಡಿಒಗಳು ಅರ್ಜಿಗಳನ್ನು ಅಪ್‌ಲೋಡ್ ಮಾಡದೆಯೇ ನಮ್ಮ ಬಳಿ ಕಳುಹಿಸುತ್ತಾರೆ. ಕಾವೇರಿ ತಂತ್ರಾಂಶ ತೆರೆದು ನೋಡಿದರೂ ಅವರು ಅಪ್‌ಲೋಡ್ ಮಾಡಿದ ದಾಖಲಾತಿಗಳೇ ಕಾಣುವುದಿಲ್ಲ’ ಎನ್ನುವುದು   ಕಚೇರಿ ಸಿಬ್ಬಂದಿ ಸತೀಶ ಕುಮಾರ ಅವರ ಆಕ್ಷೇಪವಾಗಿದೆ.

ಕಂದಾಯ ಭೂಮಿ ನಿವೇಶನ ನೋಂದಣಿಗೆ ಸರ್ಕಾರ ತಡೆ

’ಕಂದಾಯ ಭೂಮಿ ನಿವೇಶನ ನೋಂದಣಿಗೆ ಸರ್ಕಾರ ತಡೆಯೊಡ್ಡಿದೆ. ದಿಢೀರನೇ ಬದಲಾಗುವ ಇಂತಹ ನಿಯಮಗಳಿಂದ ವಾರ್ಷಿಕ ಗುರಿ ಸಾಧನೆಗೆ ಹಿನ್ನಡೆ ಆಗುತ್ತಿದೆ. ಕಚೇರಿಯಲ್ಲಿ ಸಿಬ್ಬಂದಿ ಕೊರತೆ ಇದೆ. ಅನಿವಾರ್ಯವಾಗಿ ಹೆಚ್ಚುವರಿ ಅವಧಿ ಕೆಲಸ ಮಾಡುತ್ತೇವೆ. ನಿತ್ಯ 80ರಿಂದ 100 ನೋಂದಣಿ ಆಗುತ್ತವೆ. ಪ್ರತಿಭಟನೆ, ಬಂದ್, ಹಬ್ಬದ ದಿನಗಳಲ್ಲಿ ಕಡಿಮೆ ಜನ ಬರುವುದರಿಂದ, 50–60 ನೋಂದಣಿ ಆಗುತ್ತವೆ. ಬಹುತೇಕ ಪರಿಕರಗಳು 10–15 ವರ್ಷ ಹಳೆಯದಾಗಿದ್ದು, ಕೆಲವೊಮ್ಮೆ ಅವು ಸಮರ್ಪಕವಾಗಿ ಕಾರ್ಯ ನಿರ್ವಹಿಸುವುದಿಲ್ಲ ಎನ್ನುತ್ತಾರೆ ಉಪನೋಂದಣಿ ಕಚೇರಿಯ ಮತ್ತೊಬ್ಬ ಸಿಬ್ಬಂದಿ.

‘ಭವಿಷ್ಯದ ಹಿತದೃಷ್ಟಿಯಿಂದ ಪ್ರತಿ ದಿನದ ಡೇಟಾವನ್ನು ಸಿಡಿಗಳಲ್ಲಿ ಸಂಗ್ರಹಿಸ ಲಾಗುತ್ತದೆ. ಡೇಟಾ ವರ್ಗಾವಣೆಯ ವೇಳೆ ಸರ್ವರ್‌ ಸಮಸ್ಯೆ ಆಗುತ್ತದೆ. ಕೆಲ ಸಮಯದವರೆಗೆ ನೋಂದಣಿ ಕಾರ್ಯ ನಿಲ್ಲಿಸಿ, ಕೆಸ್ವಾನ್‌ ಸಿಬ್ಬಂದಿಗೆ ಟಿಕೆಟ್‌ ಫೈಲ್‌ ಮಾಡುತ್ತೇವೆ. ಸರ್ವರ್ ದೋಷ ಇತ್ಯರ್ಥವು ಕೆಲವೊಮ್ಮೆ ವಿಳಂಬ ಆಗುತ್ತದೆ. ಸಿಡಿ ರೈಟಿಂಗ್, ಕಾಮನ್ ಅಪ್ಲಿಕೇಷನ್, ಬ್ಯಾಕಪ್‌ ಸ್ಟೋರೆಜ್‌ನಂತಹ ತಾಂತ್ರಿಕ ಸಮಸ್ಯೆಗಳು ಆಗಾಗ ಸಂಭವಿಸುತ್ತಲೇ ಇರುತ್ತವೆ’ ಎನ್ನುತ್ತಾರೆ ಕಚೇರಿಯ ತಾಂತ್ರಿಕ ಸಿಬ್ಬಂದಿ.

₹12.31 ಕೋಟಿ ಹೆಚ್ಚುವರಿ ಜಮೆ

ಕಲಬುರಗಿ ಉಪನೋಂದಣಾಧಿಕಾರಿ ವ್ಯಾಪ್ತಿ ಕಚೇರಿಯಲ್ಲಿ 2019–20ನೇ ಸಾಲಿನ ವಿತ್ತೀಯ ವರ್ಷದಲ್ಲಿ ಮುದ್ರಾಂಕ, ಸ್ಕ್ಯಾನಿಂಗ್, ನೋಂದಣಿ ಮತ್ತು ಇತರೆ ಶುಲ್ಕ ಸೇರಿ ₹65.57 ಕೋಟಿ ಸಂಗ್ರಹವಾಗಿತ್ತು. ಕೋವಿಡ್‌ ವರ್ಷದ 2020–21ನೇ ಹಣಕಾಸು ವರ್ಷದಲ್ಲಿ ₹77.45 ಕೋಟಿ ಹರಿದುಬಂದಿದೆ.

2021–22ನೇ ಸಾಲಿನ ಸೆಪ್ಟೆಂಬರ್‌ವರೆಗೂ ₹ 42.56 ಕೋಟಿ ಜಮೆಯಾಗಿದೆ. ಕಳೆದ ಆರ್ಥಿಕ ವರ್ಷದ ಇದೇ ಅವಧಿಗಿಂತ ₹12.31 ಕೋಟಿ ಅಧಿಕ ಮೊತ್ತ ಸಂಗ್ರಹವಾಗಿದೆ. ಈ ವರ್ಷದ ಬಜೆಟ್‌ನಲ್ಲಿ ₹20 ಲಕ್ಷ ವರೆಗಿನ ಮೌಲ್ಯದ ಫ್ಲ್ಯಾಟ್‌ಗಳ ಮೊದಲನೇ ನೋಂದಣಿ ಶುಲ್ಕ ಶೇ 5ರಿಂದ ಶೇ 2ಕ್ಕೆ ಹಾಗೂ ₹20ರಿಂದ ₹35 ಲಕ್ಷ ಮೌಲ್ಯದ ಫ್ಲಾಟ್‌ಗಳ ಶುಲ್ಕ ಶೇ 3ಕ್ಕೆ ಇಳಿಕೆ ಮಾಡಲಾಯಿತು. ಇದರಿಂದ ಕೋವಿಡ್‌ನಿಂದ ಬೇಡಿಕೆ ಕಳೆದುಕೊಂಡ ವಸತಿ ಉದ್ಯಮಕ್ಕೆ ಪ್ರೋತ್ಸಾಹ ಸಿಕ್ಕಂತಾಗಿದೆ. ಹೊಸದಾಗಿ 15 ಫ್ಲ್ಯಾಟ್‌ಗಳ ನೋಂದಣಿ ಪ್ರಸ್ತಾವನೆಗಾಗಿ ಬೆಂಗಳೂರಿಗೆ ಕಳುಹಿಸಲಾಗಿದೆ. ಒಂದು ಫ್ಲ್ಯಾಟ್‌ಗೆ ಅನುಮೋದನೆ ದೊರೆತಿದೆ.

ಇಕ್ಕಟ್ಟಾದ ನಗರ ಕಚೇರಿ

ಪಹಣಿ, ಆಸ್ತಿ, ವಿವಾಹ ನೋಂದಣಿ, ಇತರೆ ಸರ್ಕಾರಿ ಸೌಲಭ್ಯಗಳ ನೋಂದಣಿಗಾಗಿ ನಿತ್ಯ ಕಚೇರಿಗೆ ರೈತರು, ವಿದ್ಯಾರ್ಥಿಗಳು, ವೃದ್ಧರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಇಕ್ಕಟ್ಟಾದ ಚಿಕ್ಕ ಕಚೇರಿಯ ಒಳಗೆ ಹಾಗೂ ಹೊರಗೆ ನಿಲ್ಲಲೂ ಸ್ಥಳಾವಕಾಶ ಇರುವುದಿಲ್ಲ. ಹೆಚ್ಚುವರಿ ನೋಂದಣಾಧಿಕಾರಿ, ಕಂಪ್ಯೂಟರ್ ಆಪರೇಟರ್‌, ಪ್ರಥಮದರ್ಜೆ ಸಹಾಯಕ, ಪ್ರಿಂಟರ್ ಆಪರೇಟರ್ ಒಂದೇ ಕೋಣೆಯಲ್ಲಿ ಕೆಲಸ ಮಾಡುತ್ತಾರೆ. ಅಂಗವಿಕಲರು ಗಾಲಿ ಕುರ್ಚಿಯೊಂದಿಗೆ ಒಳಬಂದರೆ ಬೇರೆ ಯಾರೂ ಓಡಾಡದಂತಹ ಪರಿಸ್ಥಿತಿ ನಿರ್ಮಾಣ ಆಗುತ್ತದೆ.

ವರ್ಷಕ್ಕೆ ₹ 4 ಕೋಟಿ ವರಮಾನ: ಕುರ್ಚಿಯೇ ಇಲ್ಲ

ಚಿಂಚೋಳಿ: ಪಟ್ಟಣದಲ್ಲಿನ ಉಪನೋಂದಣಾಧಿಕಾರಿ ಕಚೇರಿಯಿಂದ ಸರ್ಕಾರಕ್ಕೆ ವಾರ್ಷಿಕ ₹ 4 ಕೋಟಿ ವರಮಾನ ಸಂದಾಯ ಆಗುತ್ತದೆ. ಇಷ್ಟೊಂದು ಆದಾಯ ತರುವ ಕಚೇರಿಯಲ್ಲಿ ಖುರ್ಚಿಯೇ ಇಲ್ಲ.

ಕಚೇರಿಗೆ ಬರುವ ವಕೀಲರು, ರೈತರು, ದಲ್ಲಾಳಿಗಳು, ಮಾಧ್ಯಮದವರು ಅಧಿಕಾರಿಗಳ ಮುಂದೆ ನಿಂತು ಮಾತನಾಡುವ ಸ್ಥಿತಿಯಿದೆ. ಇದರ ಜತೆಗೆ ಇತರ ಸೌಕರ್ಯಗಳ ಕೊರತೆಯೂ ಇದೆ. ಹಳೆ ದಾಖಲೆಗಳನ್ನು ಅಲ್ಮಾರಿಗಳ ಮೇಲೆ ಗಂಟು ಕಟ್ಟಿ ಇರಿಸಲಾಗಿದೆ. ದಾಖಲೆಗಳ ಸಂಗ್ರಹಕ್ಕೆ ಪ್ರತ್ಯೇಕ ಕೊಠಡಿ ಇಲ್ಲ.

ಯುಪಿಎಸ್‌ ಬ್ಯಾಟರಿಗಳು ಹಳೆಯದಾಗಿದ್ದು, ವಿದ್ಯುತ್ ಕಡಿತವಾದರೆ ನೋಂದಣಿ ಪ್ರಕ್ರಿಯೆ ಸ್ಥಗಿತವಾಗುತ್ತದೆ. ಜನರೇಟರ್ ಇದ್ದರೂ ಅದನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಸಿಬ್ಬಂದಿ ಕೊರತೆಯಿಂದ ಜನರು ಮತ್ತು ಇರುವ ನೌಕರರು ಬಸವಳಿದಿದ್ದಾರೆ.

ಕಚೇರಿಯಲ್ಲಿ ಒಟ್ಟು 6 ಜನ ಸಿಬ್ಬಂದಿ ಇದ್ದು, ಉಪನೋಂದಣಾಧಿಕಾರಿ ಮತ್ತು ದ್ವಿತೀಯ ದರ್ಜೆ ಸಹಾಯಕ ಮಾತ್ರವೇ ಕಾಯಂ ನೌಕರರು. ಹೊರ ಗುತ್ತಿಗೆ ಮೇಲೆ ನಾಲ್ವರು ಇದ್ದಾರೆ. ಇಬ್ಬರೇ ಆಪರೇಟರ್ ಇದ್ದಾರೆ. ಬೆಳಿಗ್ಗೆ ನೋಂದಣಿ ಆದರೂ ದಸ್ತಾವೇಜು ಪಡೆಯಲು ಜನರು ಸಂಜೆವರೆಗೂ ಕಾಯಬೇಕಿದೆ. ದೂರದ ಗ್ರಾಮಗಳಿಂದ ಬರುವ ಜನರಿಗೆ ಊರಿಗೆ ಮರಳಲು ತೊಂದರೆ ಆಗುತ್ತಿದೆ. ಹೀಗಾಗಿ, ಆಪರೇಟರ್‌ ಸಂಖ್ಯೆ ಹೆಚ್ಚಿಸಬೇಕು ಎನ್ನುತ್ತಾರೆ ಸ್ಥಳೀಯರು.

ಬ್ಯಾಂಕ್‌ನಲ್ಲಿ ಸರ್ವರ್ ಸಮಸ್ಯೆ ಎದುರಾದರೆ ಇಲ್ಲಿ‌ ನೋಂದಣಿ ಸ್ಥಗಿತವಾಗುತ್ತದೆ. ಕಾರಣ ಪಾವತಿಸಿ ಚಲನ್ ತರಲು ಆಗುವುದಿಲ್ಲ. ಹಕ್ಕು ವರ್ಗಾವಣೆಯ ₹40 ಶುಲ್ಕ ಭರಿಸಲು ಬ್ಯಾಂಕ್‌ನಲ್ಲಿ ಸರತಿ ಸಾಲಿನಲ್ಲಿ ನಿಂತು, ಕಚೇರಿಗೆ ಮತ್ತೊಂದು ಸರತಿಯಲ್ಲಿ ನಿಂತು ನೋಂದಣಿಗೆ ಕಾಯಬೇಕು. ಇದಕ್ಕೆ ಇಡೀ ದಿನ‌ ಹೋಗುತ್ತಿದೆ. ಹೀಗಾಗಿ, ಕಡಿಮೆ ಮೊತ್ತದ ನೋಂದಣಿಗೆ ಆಫ್‌ಲೈನ್ ಹಣ ಪಡೆಯುವ ವ್ಯವಸ್ಥೆ ಆಗಬೇಕು. ಇದರಿಂದ ಜನರಿಗೆ ತ್ವರಿತ ಸೇವೆ ಒದಗಿಸಬಹುದು ಎನ್ನುತ್ತವೆ ಕಚೇರಿ ಮೂಲಗಳು.

ಕಚೇರಿಗೆ ₹4 ಕೋಟಿ ಆದಾಯ ಭೂನೋಂದಣಿಯಿಂದಲೇ ಬರುತ್ತದೆ. ತಿಂಗಳಿಗೆ 25ರಿಂದ 30 ವಿವಾಹ‌ ನೋಂದಣಿ ಆಗುತ್ತವೆ.

ಕಚೇರಿ ಭಾಗ್ಯವಿಲ್ಲದ ಕಾಳಗಿ

ಕಾಳಗಿ: ತಾಲ್ಲೂಕು ಕೇಂದ್ರವಾಗಿ ಘೋಷಣೆಯಾಗಿ 8 ವರ್ಷ ಕಳೆದರೂ ಜನರು ನೆರೆಯ ತಾಲ್ಲೂಕುಗಳ ಮೇಲೆ ಅವಲಂಬಿತರಾಗಿದ್ದಾರೆ.

ಹೊಸ ತಾಲ್ಲೂಕು ರಚನೆಯಾದ ಬಳಿಕ ಚಿತ್ತಾಪುರ ಮತ್ತು ಚಿಂಚೋಳಿಯಿಂದ 61 ಗ್ರಾಮಗಳನ್ನು ಕಾಳಗಿಗೆ ಸೇರ್ಪಡೆ ಮಾಡಲಾಯಿತು. ಹಳೆ ಕಟ್ಟಡಗಳಲ್ಲಿ ತಹಶೀಲ್ ಕಚೇರಿ, ತಾಲ್ಲೂಕು ಕಚೇರಿ ಕಾರ್ಯ ನಿರ್ವಹಿಸುತ್ತಿವೆ.

ಪಟ್ಟಣದಲ್ಲಿ ಉಪನೋಂದಣಿ ಕಚೇರಿ ಸ್ಥಾಪನೆಗೆ ಸರ್ಕಾರಿ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಕಿಂಚಿತ್ತೂ ಕಾಳಜಿವಹಿಸುತ್ತಿಲ್ಲ. ಭೂಮಿ ಖರೀದಿ, ಗಿರವಿ, ಸಂಘ-ಸಂಸ್ಥೆ, ಮದುವೆ ನೋಂದಣಿಗಾಗಿ 38 ಹಳ್ಳಿಗರು ಚಿತ್ತಾಪುರಕ್ಕೆ ತೆರಳುತ್ತಾರೆ. ಉಳಿದ 23 ಗ್ರಾಮಗಳ ಜನರು ಚಿಂಚೋಳಿಗೆ ಹೋಗುತ್ತಾರೆ. ಇದರಿಂದ ಜನರಿಗೆ ಸಮಯದ ಜತೆಗೆ ಆರ್ಥಿಕ ಹೊರೆಯಾಗಿದೆ. ಕಚೇರಿಯಲ್ಲಿ ತಾಂತ್ರಿಕ ಮತ್ತು ಆಡಳಿತಾತ್ಮಕ ಸಮಸ್ಯೆಗಳು ಇಲ್ಲಿನವರನ್ನು ಹೈರಾಣಾಗಿಸಿವೆ ಎನ್ನುತ್ತಾರೆ ಸ್ಥಳೀಯರು.

ಉಪನೋಂದಣಿ ಕಚೇರಿ ಸ್ಥಾಪಿಸದಿರುವುದಕ್ಕೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ. ಕ್ಷೇತ್ರ ಪ್ರತಿನಿಧಿಸುವ ಯಾರೊಬ್ಬ ಜನಪ್ರತಿನಿಧಿಯೂ ಈ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ತಾಲ್ಲೂಕಿಗೆ ಮತ್ತೆ 16 ಹಳ್ಳಿಗಳ ಸೇರ್ಪಡೆ ಅಂತಿಮ ಹಂತದಲ್ಲಿದೆ. ನಮ್ಮ ಅಲೆದಾಟದ ಗೋಳು ಕೇಳುವವರು ಯಾರು ಎಂಬ ಅಂಬೋಣ ಜನರದ್ದು.

ಅಗತ್ಯ ಸೌಕರ್ಯಗಳ ಕೊರತೆ

ಆಳಂದ: ಪಟ್ಟಣದ ತಹಶೀಲ್ದಾರ್‌ ಕಚೇರಿ ಆವರಣದಲ್ಲಿ ಉಪ ನೋಂದಣಾಧಿಕಾರಿ ಕಚೇರಿ ಇದ್ದು, ಅಗತ್ಯ ಸೌಕರ್ಯಗಳಿಂದ ವಂಚಿತವಾಗಿದೆ. ಪೂರ್ಣ ಪ್ರಮಾಣ ಸಿಬ್ಬಂದಿ ಕೊರತೆ ಇದ್ದು, ಏಜೆನ್ಸಿ ಮೂಲಕ ನೇಮಕ ಮಾಡಿಕೊಳ್ಳಲಾಗಿದೆ. ಕೋವಿಡ್‌ ಸಂಕಷ್ಟ ಇದ್ದರೂ ನೋಂದಣಿ ಪ್ರಕ್ರಿಯೆಗೆ ಅಡ್ಡಿಯಾಗಿಲ್ಲ. ರೈತರ, ವರ್ತಕರಿಂದ ಉತ್ತಮ ಆದಾಯ ಹರಿದು ಬಂದಿದೆ.

ನೂತನ ಮಿನಿ ವಿಧಾನ ಸೌಧದ ಕಟ್ಟಡ ನಿರ್ಮಾಣ ಪೂರ್ಣಗೊಂಡಿದೆ. ಉಪನೋಂದಣಿ ಕಚೇರಿ ಸ್ಥಳಾಂತರದ ಆತಂಕ ಹಲವರಲ್ಲಿ ಕಾಡುತ್ತಿದೆ. ಈಗಿನ ತಹಶೀಲ್ದಾರ್ ಕಚೇರಿಯನ್ನು ಉಪ ನೋಂದಣಾಧಿಕಾರಿಗಳ ಕಚೇರಿಗೆ ಹಸ್ತಾಂತರಿಸಬೇಕು. ಇದರಿಂದ ಜನರೆ ತೊಂದರೆ ಆಗುವುದು ತಪ್ಪುತ್ತದೆ ಎನ್ನುತ್ತಾರೆ ನಿವಾಸಿ ಏಕ್ಬಾಲ್ ಬಿಲಗುಂದಿ.

*

ಸರ್ವರ್ ಸಮಸ್ಯೆ ನಿವಾರಣೆಗೆ ’ಕೆಸ್ವಾನ್‌’ ಕಚೇರಿಯಲ್ಲಿ ಪ್ರತ್ಯೇಕ ಸಿಬ್ಬಂದಿ ಇದ್ದಾರೆ. ಕಚೇರಿಗಳಲ್ಲಿ ಸರ್ವರ್ ಡೌನ್ ಆದರೆ ಅವರಿಗೆ ಮೇಲ್ ಮಾಡಿ ತಿಳಿಸುತ್ತೇವೆ. ಅವರು ಸರ್ವರ್ ಅನ್ನು ಪರಿಶೀಲಿಸಿ ಇತ್ಯರ್ಥಪಡಿಸುತ್ತಾರೆ. ಕೆಲ ಸಮಯದ ಬಳಿಕ ಸರಿ ಹೋಗುತ್ತದೆ

–ಮಹಮ್ಮದ್ ಅಬ್ದುಲ್ ಆಸಿಫ್, ಜಿಲ್ಲಾ ನೋಂದಣಿ ಹಾಗೂ ಮುದ್ರಾಂಕ ಉಪ ಆಯುಕ್ತ

*

ಲಸಿಕೆಯ ನಂತರ ನೋಂದಣಿ ಕಾರ್ಯಗಳು ಸಹಜ ಸ್ಥಿತಿಗೆ ಬಂದಿವೆ. ಜನರು ಮೊದಲಿನಂತೆ ಕಚೇರಿಗೆ ಬರುತ್ತಿದ್ದಾರೆ. ಕಳೆದ ವರ್ಷಕ್ಕಿಂತ ಈ ವರ್ಷ ವಹಿವಾಟು ಬೆಳವಣಿಗೆ ಕಾಣುತ್ತಿದೆ. ಹೊಸ ಸಿಸ್ಟಮ್‌ ಬಂದರೆ ಈಗಿನ ಕೆಲಸ ಇನ್ನಷ್ಟು ವೇಗಗೊಳ್ಳಲಿದೆ

- ಬಿ.ಶ್ರೀಕಾಂತ, ಹೆಚ್ಚುವರಿ ನೋಂದಣಾಧಿಕಾರಿ

*

ನಗರದ ಕಚೇರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಿದ್ದಾರೆ. ಕಮಲಾಪುರದಲ್ಲಿ ನೂತನ ಉಪನೋಂದಣಿ ಕಚೇರಿ ಸ್ಥಾಪನೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಹೊಸ ನೇಮಕಾತಿಯ ಬಳಿಕ ಕಚೇರಿ ಆರಂಭವಾಗುವ ನಿರೀಕ್ಷೆ ಇದೆ

–ಸತೀಶ ಕುಮಾರ, ಪ್ರಥಮದರ್ಜೆ ಸಹಾಯಕ, ಉಪನೋಂದಣಾಧಿಕಾರಿ ಕಚೇರಿ

*

ಜಮೀನು ಖರೀದಿಯ ದಾಖಲಾತಿಗಳನ್ನು ವಾರದ ಹಿಂದೆಯೇ ಕಚೇರಿಗೆ ಸಲ್ಲಿಸಿದ್ದೆವು. ಬೆಳಿಗ್ಗೆ ಕಚೇರಿಗೆ ಬಂದರೆ ಸರ್ವರ್ ಸಮಸ್ಯೆಯಿಂದ ಅರ್ಜಿಗಳು ಅಪ್‌ಲೋಡ್ ಆಗುತ್ತಿಲ್ಲ. ಬಂದ ದಿನವೇ ನೋಂದಣಿ ಪ್ರಕ್ರಿಯೆ ಮುಗಿದರೆ ಅನುಕೂಲ

–ನಾಗಣ್ಣ ಬಸವರಾಜ, ಕೆರೆಭೋಸಗ ಗ್ರಾಮದ ನಿವಾಸಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು