ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಸರ್ಕಾರದ ಶಿಕ್ಷಣ ನೀತಿಗೆ ಖಂಡನೆ; ಎಸ್‌ಎಫ್‌ಐ ಪ್ರತಿಭಟನೆ

Last Updated 8 ಸೆಪ್ಟೆಂಬರ್ 2022, 7:36 IST
ಅಕ್ಷರ ಗಾತ್ರ

ಕಲಬುರಗಿ: ರಾಜ್ಯ ಸರ್ಕಾರದ ಶಿಕ್ಷಣ ವಿರೋಧಿ ನೀತಿಗಳಿಂದ ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಸಂಸ್ಥೆಗಳು ಸಂಕಷ್ಟಕ್ಕೆ ಸಿಲುಕಿವೆ ಎಂದು ಆರೋಪಿಸಿ ಭಾರತ ವಿದ್ಯಾರ್ಥಿ ಫೆಡರೇಷನ್‌(ಎಸ್‌ಎಫ್‌ಐ) ಜಿಲ್ಲಾ ಸಮಿತಿ ಸದಸ್ಯರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಕೋವಿಡ್ ಬಳಿಕ ಸರ್ಕಾರಿ ಶಾಲೆಗಳಿಗೆ ಸೇರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಈ ಶೈಕ್ಷಣಿಕ ವರ್ಷದಲ್ಲಿ 10 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಶಾಲೆಯಿಂದ ಹೊರಗೆ ಉಳಿದಿದ್ದಾರೆ. ಇವರನ್ನು ಶಾಲೆಗೆ ಕರೆತಂದು ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಮಾಡುವ ಬದಲು, ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಮಾದರಿ ಶಾಲೆಯ ನೆಪದಲ್ಲಿ 13,800 ಶಾಲೆಗಳನ್ನು ಮುಚ್ಚಲು ತೀರ್ಮಾನಿಸಿದ್ದು ಸರಿಯಲ್ಲ ಎಂದು ಪ್ರತಿಭಟನಾನಿರತರು ಟೀಕಿಸಿದರು.

ಸರ್ಕಾರಿ ಶಾಲೆಗಳು ಮುಚ್ಚಿದರೆ ರಾಜ್ಯದ ಶೇ 31ರಷ್ಟು ಗ್ರಾಮಗಳು ಶಾಲೆಗಳಿಂದ ವಂಚಿತವಾಗಲಿವೆ. ಇದರಿಂದ ಬಡವರು, ತಳ ಸಮುದಾಯದ ಮಕ್ಕಳು ಶಿಕ್ಷಣದಿಂದ ದೂರವಾಗುತ್ತಾರೆ ಎಂದು ದೂರಿದರು.

ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ವಸತಿ ನಿಲಯಗಳನ್ನು ತೆರೆಯಬೇಕು. ಅನಗತ್ಯವಾದ ಕೌನ್ಸಿಲಿಂಗ್ ಪದ್ಧತಿಯನ್ನು ಕೈಬಿಡಬೇಕು. ಅರ್ಜಿ ಹಾಕಿದ ಪ್ರತಿ ವಿದ್ಯಾರ್ಥಿಗೆ ಪ್ರವೇಶ ಕೊಡಬೇಕು. ಗುಣಮಟ್ಟದ ಆಹಾರ ನೀಡಲು ಕೇರಳ ಮಾದರಿಯಲ್ಲಿ ಮಾಸಿಕ ಆಹಾರ ಭತ್ಯೆ ಕನಿಷ್ಠ ₹3,500ಕ್ಕೆ ಏರಿಕೆ ಮಾಡಬೇಕು ಎಂದು ಮನವಿ ಮಾಡಿದರು.

ಸೈಕಲ್, ಸಮಸ್ತ್ರ, ವಿದ್ಯಾರ್ಥಿ ವೇತನ, ವಿದ್ಯಾಸಿರಿ, ಪಠ್ಯಪುಸ್ತಕ, ಫೆಲೊಶಿಪ್‌ನಂತಹ ಪ್ರೋತ್ಸಾಹಕ ಯೋಜನಗಳು ಎರಡು ವರ್ಷಗಳಿಂದ ಬಾಕಿ ಉಳಿದಿವೆ. ಕೂಡಲೇ ಆರಂಭ ಮಾಡಬೇಕು. ಅವೈಜ್ಞಾನಿಕ ಪಠ್ಯಪುಸ್ತಕ ಮರು ಪರಿಷ್ಕರಣೆಯನ್ನು ಕೈಬಿಡಬೇಕು. ತುಮಕೂರು ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಲಾದ ಸಾರ್ವಕರ್ ಅಧ್ಯಯನ ಪೀಠ ರದ್ದು ಮಾಡಬೇಕು ಎಂದು ಒತ್ತಾಯಿಸಿದರು.

ಸರ್ಕಾರಿ ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳಲ್ಲಿನ ಬೋಧಕರ ಕೊರತೆಯಿಂದಾಗಿ ಗುಣಮಟ್ಟದ ಕಲಿಕೆಗೆ ಹಿನ್ನಡೆಯಾಗುತ್ತಿದೆ. ಕೂಡಲೇ ಇದನ್ನು ಸರಿಪಡಿಸಬೇಕು. ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರದ ಬಗ್ಗೆ ಪ್ರಧಾನಿ ಅವರಿಗೆ ಪತ್ರ ಬರೆಯಲಾಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ರಾಜ್ಯ ಸಮಿತಿ ಸದಸ್ಯರಾದ ಸುಜಾತಾ, ಮಾಳಪ್ಪ ಕುಸನೂರು, ರೇಸ್ಮಾ ಕುಸನೂರು ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT