ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ಸ್ವಚ್ಛತೆಗೆ ಕಾಯುತ್ತಿದೆ ಅಪ್ಪನ ಕೆರೆ

55 ಎಕರೆ ಪ್ರದೇಶದಲ್ಲಿರುವ ಕೆರೆ ಹೂಳು ತೆಗೆಯಲು ಇದು ಸಕಾಲ; ವೈವಿಧ್ಯಮಯ ಜೀವ–ಜಲ ತಾಣ
Last Updated 12 ಮೇ 2020, 19:30 IST
ಅಕ್ಷರ ಗಾತ್ರ

ಕಲಬುರ್ಗಿ: ನಗರದ ಶರಣಬಸವೇಶ್ವರ (ಅಪ್ಪನ ಕೆರೆ) ಕೆರೆಯಲ್ಲಿ ನೀರಿನ ಸಂಗ್ರಹ ಕಡಿಮೆ ಆಗಿದ್ದು, ಹೂಳು ತೆಗೆದು ಸ್ವಚ್ಛಗೊಳಿಸಲು ಇದು ಸಕಾಲವಾಗಿದೆ. 2004–05ರಲ್ಲಿ ಕೆರೆಯನ್ನು ಅಭಿವೃದ್ಧಿಪಡಿಸಲಾಯಿತು. ಆ ನಂತರ ಹೂಳು ತೆಗೆದಿಲ್ಲ.

ಒಟ್ಟು 55 ಎಕರೆ ಕೆರೆ ಪ್ರದೇಶ ಇದೆ. ಇದರಲ್ಲಿ 47 ಎಕರೆಯಲ್ಲಿ ನೀರು ಸಂಗ್ರಹವಾಗುತ್ತದೆ. ಉಳಿದ ನಾಲ್ಕು ಎಕರೆಯಲ್ಲಿ ಒಡ್ಡು ಮತ್ತು ಪಿಚ್ಚಿಂಗ್ ಮತ್ತು ಇನ್ನುಳಿದ ನಾಲ್ಕು ಎಕರೆಯಲ್ಲಿ ಉದ್ಯಾನ ನಿರ್ಮಿಸಲಾಗಿದೆ.

ಕೆರೆಯಲ್ಲಿ ಹೂಳು ತುಂಬಿರುವುದರಿಂದ ಹೆಚ್ಚು ನೀರು ಸಂಗ್ರಹವಾಗುತ್ತಿಲ್ಲ. ಅಲ್ಲದೆ, ಬೋಟಿಂಗ್ ನಡೆಸಲು ಸಹ ಸಾಧ್ಯವಾಗುತ್ತಿಲ್ಲ.

ಮಳೆ ನೀರು ಕೆರೆಗೆ ಪ್ರಮುಖ ಆಧಾರವಾಗಿದೆ. ಮಳೆ ಬಂದಾಗ ಕೆರೆಯಲ್ಲಿ ನೀರು ತುಂಬಿಕೊಳ್ಳುತ್ತದೆ. ಆರಂಭದಲ್ಲಿ ಎರಡು, ಮೂರು ಬಾರಿ ಮಳೆ ಆದಾಗ ಆ ನೀರನ್ನು ನೇರವಾಗಿ ಕೆರೆಗೆ ಬಿಡುವುದಿಲ್ಲ. ಆ ನಂತರ ಬರುವ ನೀರನ್ನು ಕೆರೆಗೆ ಬಿಡಲಾಗುತ್ತದೆ. ಇದರಿಂದ ಹೆಚ್ಚು ಕೆಸರು ಕೆರೆ ಸೇರುವುದಿಲ್ಲ. ಮಳೆ ನೀರು ಬಿಡಲು ಉಪ ಕಾಲುವೆಗಳನ್ನು ನಿರ್ಮಿಸಲಾಗಿದೆ ಎನ್ನುತ್ತಾರೆ ಸಿಬ್ಬಂದಿ.

ಸರಡಗಿ ಬ್ಯಾರೇಜ್‌ನಿಂದ ನಗರಕ್ಕೆ ನೀರು ಪೂರೈಸಲಾಗುತ್ತದೆ. ಆ ನೀರನ್ನು ಶೋರ್ ಗುಂಬಜ್‌ ಬಳಿ ನಿರ್ಮಿಸಲಾಗಿರುವ ನೀರು ಶುದ್ಧೀಕರಣ ಘಟಕದಲ್ಲಿ ಶುದ್ಧೀಕರಿಸಲಾಗುತ್ತದೆ. ಅಲ್ಲಿಂದ ಬರುವ ಅಶುದ್ಧ ನೀರನ್ನು ಪೈಪ್‌ಲೈನ್‌ ಮೂಲಕ ಕೆರೆಗೆ ಬಿಡಲಾಗುತ್ತದೆ. ಹೀಗಾಗಿ, ಕೆರೆಯಲ್ಲಿ ಸದಾ ನೀರಿರುತ್ತದೆ. ಆದರೆ, ಮೂರು ಎಕರೆಗೂ ಹೆಚ್ಚು ಪ್ರದೇಶದಲ್ಲಿ ಹೂಳು ತುಂಬಿಕೊಂಡಿದ್ದು, ಹುಲ್ಲು ಬೆಳೆದಿದೆ.

‘ಘಟಕದಲ್ಲಿ ನಿರ್ವಹಣೆ ಕೊರತೆಯಿಂದ ನೀರಿನ ಜತೆಗೆ ಕೆಸರು ಸಹ ಕೆರೆ ಸೇರುತ್ತಿದ್ದು, ಇದರಿಂದ ಕೆರೆಯಲ್ಲಿ ಹೂಳು ತುಂಬಿಕೊಂಡಿದೆ. ಪೈಪ್‌ಲೈನ್‌ ಅಲ್ಲಲ್ಲಿ ಒಡೆದಿರುವುದರಿಂದ ನೀರು ಸೋರಿಕೆ ಆಗುತ್ತಿದ್ದು, ಹೆಚ್ಚು ನೀರು ಬರುತ್ತಿಲ್ಲ. ಹೀಗಾಗಿ, ಈ ಬೇಸಿಗೆಯಲ್ಲಿ ನೀರು ಕಡಿಮೆ ಆಗಿದೆ’ ಎನ್ನುವುದು ಮೂಲಗಳ ವಿವರಣೆ.

ಕೆರೆಯಲ್ಲಿ ನೀರು ಸಂಗ್ರಹವಾದರೆ ಅದರ ಸುತ್ತ ಐದು ಕಿ.ಮೀ. ವ್ಯಾಪ್ತಿಯಲ್ಲಿ ಅಂತರ್ಜಲಮಟ್ಟ ಹೆಚ್ಚುತ್ತದೆ. ಇದರಿಂದ ಬೇಸಿಗೆಯಲ್ಲಿ ಈ ವ್ಯಾಪ್ತಿಯಲ್ಲಿ ಇರುವ ಕೊಳವೆಬಾವಿಗಳು ಬತ್ತುವುದಿಲ್ಲ.

ಕೆರೆಯಲ್ಲಿ ಹೂಳು ತುಂಬಿರುವುದರಿಂದ ಎರಡು ವರ್ಷಗಳಿಂದ ಬೋಟಿಂಗ್ ಮಾಡಲು ಅವಕಾಶ ನೀಡುತ್ತಿಲ್ಲ. ಹೂಳು ತೆಗೆದು ಸ್ವಚ್ಛಗೊಳಿಸಿದರೆ ಬೋಟಿಂಗ್ ಆರಂಭಿಸಬಹುದಾಗಿದೆ. ಅಲ್ಲದೆ, ಕೆಸರು ಕೆರೆ ಸೇರುವುದನ್ನು ತಡೆಯಲು ಸಿಲ್ಟ್‌ ಟ್ರ್ಯಾಪ್ ಸಹ ನಿರ್ಮಿಸಬೇಕಿದೆ.

ಕೆರೆಯ ಉದ್ಯಾನದ ಒಳಗೆ ನಿರ್ಮಿಸಿರುವ ಫುಡ್‌ ಕೋರ್ಟ್ (ಆಹಾರ ಮಳಿಗೆ) ಅನ್ನು ಬಂದ್ ಮಾಡಲಾಗಿದೆ. ವಾಯುವಿಹಾರಕ್ಕೆ ಬರುವ ಜನರಿಗಾಗಿ ನಿರ್ಮಿಸಿದ್ದ ಹೊರಾಂಗಣ ಜಿಮ್‌, ಮಕ್ಕಳ ಆಟಿಕೆಗಳು, ಶೌಚಾಲಯಗಳು ನಿರ್ವಹಣೆ ಇಲ್ಲದೆ ಹಾಳಾಗಿವೆ.

ಸ್ವಚ್ಛವಾಗದ ಕಲ್ಯಾಣಿ: ಕೆರೆ ಆವರಣದಲ್ಲಿ ನಿರ್ಮಿಸಲಾಗಿರುವ ಕಲ್ಯಾಣಿಯಲ್ಲಿ ಪ್ರತಿ ವರ್ಷ ಗಣೇಶ ಹಬ್ಬದ ನಂತರ ಮೂರ್ತಿಗಳು, ದಸರಾ, ದೀಪಾವಳಿ ಸಂದರ್ಭದಲ್ಲಿ ಪೂಜಾ ಸಾಮಗ್ರಿಗಳನ್ನು ವಿಸರ್ಜನೆ ಮಾಡಲಾಗುತ್ತದೆ. ಆದರೆ, ಕಳೆದ ವರ್ಷ ವಿಸರ್ಜನೆಯಿಂದಾಗಿ ಕಲ್ಯಾಣಿಯಲ್ಲಿ ತುಂಬಿಕೊಂಡಿರುವ ಹೂಳನ್ನು ಈವರೆಗೂ ತೆಗೆದಿಲ್ಲ. ಇದರಿಂದ ಸುತ್ತಲಿನ ಪರಿಸರ ಗಬ್ಬೆದ್ದು ನಾರುತ್ತಿದೆ.

ಸಿಬ್ಬಂದಿಗೆ ವೇತನ ಇಲ್ಲ:ಕೆರೆ ಉದ್ಯಾನದ ನಿರ್ವಹಣೆಗೆ ಹತ್ತು ಜನ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಅವರಿಗೆ ಮಾರ್ಚ್ ಹಾಗೂ ಏಪ್ರಿಲ್ ತಿಂಗಳ ವೇತನ ನೀಡಿಲ್ಲ.

‘ಲಾಕ್‌ಡೌನ್ ಆದ ನಂತರ ನಮಗೆ ವೇತನ ನೀಡಿಲ್ಲ. ಇದರಿಂದ ತೊಂದರೆಯಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ವೇತನ ನೀಡಲು ಕ್ರಮ ಕೈಗೊಳ್ಳಬೇಕು’ ಎಂಬುದು ಸಿಬ್ಬಂದಿಯ ಒತ್ತಾಯ.

ಕಲ್ಲು ಪಿಚ್ಚಿಂಗ್ ಮಾಡಿಸಬೇಕು: ಕೆರೆಯ ಮಧ್ಯಭಾಗದಲ್ಲಿ 30 ಗುಂಟೆ ಪ್ರದೇಶದಲ್ಲಿ ನಡುಗಡ್ಡೆ ನಿರ್ಮಿಸಿ ಚೆರ್ರಿ ಸೇರಿ ವಿವಿಧ ಜಾತಿಯ ಮರಗಳನ್ನು ಬೆಳೆಸಲಾಗಿದೆ. ಇದು ಕೆರೆಯ ಸೌಂದರ್ಯ ಹೆಚ್ಚಿಸಿದೆ.

ಪ್ರತಿ ವರ್ಷ ನವೆಂಬರ್‌ನಿಂದ ಜನವರಿ ತಿಂಗಳವರೆಗೆ ಬೇರೆ ರಾಜ್ಯ ಮತ್ತು ವಿದೇಶಗಳಿಂದ ವಿವಿಧ ಜಾತಿಯ ಪಕ್ಷಿಗಳು ಇಲ್ಲಿಗೆ ವಲಸೆ ಬರುತ್ತವೆ.

ನಡುಗಡ್ಡೆ ಸುತ್ತ ನೀರಿನ ಹೊಡೆತದಿಂದ ಕೊರೆತ ಉಂಟಾಗಿದೆ. ಇದನ್ನು ತಪ್ಪಿಸಲು ಸುತ್ತ ಕಲ್ಲು ಪಿಚ್ಚಿಂಗ್ ಮಾಡಬೇಕಿದೆ.

ಪ್ರತ್ಯೇಕ ಅನುದಾನ ಇಲ್ಲ: ಕೆರೆಯ ಹೂಳು ತೆಗೆಯಲು ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ ಪ್ರತ್ಯೇಕ ಅನುದಾನ ಇಲ್ಲ ಎನ್ನುತ್ತಾರೆ ಪ್ರಾಧಿಕಾರದ ಅಧಿಕಾರಿಗಳು.

ಸದ್ಯ ಕೆರೆಯ ಹೂಳು ತೆಗೆಯಲು ಯಾವುದೇ ಯೋಜನೆ ರೂಪಿಸಿಲ್ಲ. ಜಿಲ್ಲಾಧಿಕಾರಿ ಅವರು ಪ್ರಾಧಿಕಾರಕ್ಕೆ ಜಿಲ್ಲಾಮಟ್ಟದಲ್ಲಿ ಅಧ್ಯಕ್ಷರಾಗಿರುತ್ತಾರೆ. ಇದನ್ನು ಅವರ ಗಮನಕ್ಕೆ ತರಲಾಗುವುದು ಎಂದರು.

ಕೆರೆಯ ಉದ್ಯಾನದಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗೆ ನಿರ್ಮಿಸಲಾಗಿರುವ ಕಲ್ಯಾಣಿಯಲ್ಲೂ ಹೂಳು ತುಂಬಿದ್ದು, ಅದನ್ನು ಸ್ವಚ್ಛಗೊಳಿಸುವಂತೆ ಮಹಾನಗರ ಪಾಲಿಕೆಗೆ ಪತ್ರ ಬರೆಯಲಾಗುವುದು. ಸಿಬ್ಬಂದಿಗೆ ವೇತನ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT