ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂತಿ ರಾಶಿ: ಹೊನ್ನ ಬಿತ್ತೆವೋ ಹೊಳಿ ಸಾಲ...

Last Updated 8 ಆಗಸ್ಟ್ 2022, 5:06 IST
ಅಕ್ಷರ ಗಾತ್ರ

ಕಲಬುರಗಿ: ‘ಬೆಳ್ಳನ ಎರಡೆತ್ತು ಬೆಳ್ಳಿಯ ಬಾರಕೋಲು
ಬಂಗಾರದ ಕಡ್ಡಿ ಬಲಗೈಯಾಗ ಹಿಡಕೊಂಡು
ಹೊನ್ನ ಬಿತ್ತೆನೇ ಹೊಳಿ ಸಾಲ...’

ಹೀಗೆ ಜಾನಪದ ಸೊಗಡಿನ ಹಂತಿ ಪದಗಳನ್ನು ಹಾಡುತ್ತಾ ಶರಣಬಸವೇಶ್ವರರು ಗರಿಕೆಯ ಹೊಲದಲ್ಲಿ ರಾಶಿ ಮಾಡಿದ ಪರಿಯನ್ನು ಸಾರಿದರು.

ಶ್ರಾವಣ ಮಾಸದ ಪ್ರಯುಕ್ತ ಶರಣಬಸವೇಶ್ವರ ಸಂಸ್ಥಾನದಲ್ಲಿ ಶರಣಬಸವೇಶ್ವರರ ಪುರಾಣ ನಡೆಯುತ್ತಿದೆ. ಮಹಾದಾಸೋಹಿಯ ಕಾಯಕದ ನೆನಪಿಗಾಗಿ ಪುರಾಣದ 11ನೇ ದಿನವಾದ ಭಾನುವಾರ ರಾಶಿಯ ಕಣ ಮಾಡಿ, ನಡುಮೇಟಿ ನಿಲ್ಲಿಸಿ ಹಂತಿ ಮಾಡಿ,ಜೋಡಿ ಎತ್ತುಗಳನ್ನು ಕಟ್ಟಿ ಸಂಭ್ರಮದಿಂದ ರಾಶಿ ಮಾಡಲಾಯಿತು.

ಅಂದು ಶರಣಬಸವೇಶ್ವರರು ಕೃಷಿ ಕೆಲಸಕ್ಕೆ ಬಳಸುತ್ತಿದ್ದಂತಹ ಕುಂಟೆ, ನೇಗಿಲು, ಕುಡ, ಕೂರಿಗೆ, ನೊಗ, ಹಗ್ಗ, ಲೊಗ್ಗರಣೆ, ಬಾರಕೋಲು, ರೌವ್‌ಗೋಲು, ಕುಡುಗೋಲು ಸೇರಿದಂತೆ ವಿವಿಧ ಸಲಕರಣೆಗಳನ್ನುಪುರಾಣದ ಹಂತಿಯಲ್ಲಿ ಬಳಸಲಾಯಿತು.

ಆಧುನಿಕ ಬೇಸಾಯದಲ್ಲಿ ಯಂತ್ರೋಪಕರಣಗಳ ಬಳಕೆವ್ಯಾಪಕವಾಗಿದ್ದು, ಹಳೆಯ ಕೃಷಿ ಸಾಮಗ್ರಿಗಳು ಕ್ಷೀಣಿಸಿವೆ. ಹೀಗಾಗಿ, ಹಂತಿಯಲ್ಲಿ ಬಳಸಿದ್ದ ಸಾಂಪ್ರದಾಯಿಕ ಕೃಷಿ ಸಾಮಗ್ರಿಗಳು ಭಕ್ತರನ್ನು ಬಹುವಾಗಿ ಆಕರ್ಷಿಸಿದವು.

ದೇವಸ್ಥಾನದ ಆವರಣದಲ್ಲಿ ಜೋಳದ ಕಣ ನಿರ್ಮಿಸಲಾಯಿತು. ಜೋಳದ ಗೂಡು ಮುರಿದು, ಜೋಳದ ತೆನೆಗಳು ಗುಡ್ಡೆಹಾಕಿದ ಮಾದರಿಯಲ್ಲಿ ಭಕ್ತರು ತಂದಿದ್ದ ಜೋಳದ ಕಾಳುಗಳನ್ನು ಸುರಿಯಲಾಯಿತು. ಅದರಲ್ಲಿ ಜೋಡೆತ್ತುಗಳಿಗೆ ಹಂತಿ ಹೂಡಿ ಕಟ್ಟಿ ಹಲವು ಸುತ್ತುಗಳು ತಿರುಗಿದವು. ಈ ವೇಳೆ ರೈತರು, ಭಕ್ತರು ಹಂತಿ ಪದಗಳನ್ನು ಮನದುಂಬಿ ಹಾಡುತ್ತಾ ಕಣ್ಮರೆಯಾದ ಗ್ರಾಮೀಣ ಸೊಗಡಿನ ಹಂತಿಯ ರಾಶಿಯನ್ನು ಮರುಸೃಷ್ಟಿಸಿದರು.

ಕಣದ ಸುತ್ತಲು ನೇರದಿದ್ದ ಭಕ್ತರು ಹಂತಿಯನ್ನು ನೋಡಿ ಸಂತಸ ಪಟ್ಟರು. ಕೆಲವರು ತಮ್ಮ ಮೊಬೈಲ್‌ಗಳಲ್ಲಿ ಸೆರೆಹಿಡಿದು, ಗೆಳೆಯರೊಂದಿಗೆ ದೃಶ್ಯಗಳನ್ನು ಹಂಚಿಕೊಂಡರು. ಶಾಲಾ ಮಕ್ಕಳು ಕುತೂಹಲದಿಂದ ನೋಡುತ್ತಾ, ಎತ್ತುಗಳನ್ನು ಹಿಡಿದು ಏನು ಮಾಡುತ್ತಿದ್ದಾರೆ? ಇದು ಎಂತಹ ಆಚರಣೆ ಎಂದು ಪೋಷಕರನ್ನು ಪ್ರಶ್ನಿಸಿದರು.

ಹಂತಿ ಹೊಡೆಯುವ ಕಾರ್ಯಕ್ರಮದಲ್ಲಿ ದಾಕ್ಷಾಯಣಿ ಅವ್ವ, ಮಹೇಶ್ವರಿ ಎಸ್. ಅಪ್ಪ, ಕೋಮಲ ಎಸ್. ಅಪ್ಪ, ಶಿವಾನಿ ಎಸ್ ಅಪ್ಪ, 9ನೇ ಪೀಠಾಧಿಪತಿ ದೊಡ್ಡಪ್ಪ ಅಪ್ಪ, ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಇದ್ದರು.

ಕಾಯಕ, ದಾಸೋಹದ ಸಂದೇಶ

ನೇಗಿಲ ನಂಬಿದ ಸೋತವರಿಲ್ಲ. ಆಳಾಗಿ ದುಡಿದು ಅರಸನಾಗಿ ಉಣ್ಣುವವನು ನೇಗಿಲ ಯೋಗಿ. ಎಲ್ಲರಿಗೂ ಅನ್ನ ಹಾಕುವ ಅನ್ನಪೂರ್ಣೆಯ ಪುತ್ರ ರೈತ. ಇಂತಹುದೆ ನೇಗಿಲಿನ ಕಾಯಕ ನಂಬಿ ಹಸಿದು ಬಂದವರಿಗೆ ಅನ್ನ ಹಾಕಿದ ಶರಣಬಸವೇಶ್ವರರ ಸಂಸ್ಥಾನ ರೈತನೇ ದೇಶದ ಬೆನ್ನೆಲುಬು ಎಂಬ ಸಂದೇಶ ಸಾರಿತು.

18ನೇ ಶತಮಾನದಲ್ಲಿ ಶರಣಬಸವೇಶ್ವರರು ಗರಿಕೇಯ ಹೋಲದಲ್ಲಿ ಶುದ್ಧ ಮನಸ್ಸಿನಿಂದ ಬಿತ್ತನೆ ಮಾಡಿ, ಉತ್ತಮ ಬೆಳೆ ಬೆಳೆದರು. ಅದನ್ನು ಗ್ರಾಮದವರಿಗೆ ಹಂಚಿದರು. ಕೊಟ್ಟಿದ್ದು ದಾಸೋಹ, ಮಾಡಿದ ಕಾಯಕ, ಪಡೆದದ್ದು ಪ್ರಸಾದ ಎಂಬ ಭಾವನೆ ಶರಣಬಸವೇಶ್ವರರದ್ದು. ಇದೇ ಪರಿಕಲ್ಪನೆಯನ್ನು ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿ ಡಾ.ಶರಣಬಸವಪ್ಪ ಅಪ್ಪ, 9ನೇ ಪೀಠಾಧಿಪತಿ ದೊಡ್ಡಪ್ಪ ಅಪ್ಪ ಹಾಗೂ ಮಾತೋಶ್ರೀ ಡಾ.ದಾಕ್ಷಾಯಿಣಿ ಅವ್ವ ಮುನ್ನೆಡೆಸಿಕೊಂಡು ಬರುತ್ತಿರುವುದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT