ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಧಾರ್ಮಿಕ ಕಟ್ಟಳೆ ಮುರಿದ ದಿಟ್ಟ ಲೇಖಕ’

ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆಯಿಂದ ಶರತ್‌ಚಂದ್ರರ ಚಟರ್ಜಿ ಕೃತಿಗಳ ಸಂವಾದ
Last Updated 15 ಸೆಪ್ಟೆಂಬರ್ 2019, 16:07 IST
ಅಕ್ಷರ ಗಾತ್ರ

ಕಲಬುರ್ಗಿ: ಬಂಗಾಳದ ಮೇರು ಲೇಖಕ ಶರತ್‍ಚಂದ್ರ ಚಟರ್ಜಿ ಸಾಮಾಜಿಕ ತಲ್ಲಣಗಳು, ತಳಮಳ, ರಾಜಕೀಯ ವಿಷಯಗಳನ್ನು ಸಾಹಿತ್ಯದ ವಸ್ತುವನ್ನಾಗಿಸಿಕೊಂಡರು. ಸಂಪ್ರದಾಯ, ಧಾರ್ಮಿಕ ಕಟ್ಟಳೆಗಳನ್ನು ವಿರೋಧಿಸಿದವರು ಎಂದು ‘ಆವಿಷ್ಕಾರ’ ಪ್ರಗತಿಪರ ಸಾಂಸ್ಕೃತಿಕ ವೇದಿಕೆಯ ರಾಜ್ಯ ಸಮಿತಿ ಸದಸ್ಯ ಎಸ್‌.ಎನ್‌.ಸ್ವಾಮಿ ಅಭಿಪ್ರಾಯಪಟ್ಟರು.

ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆಯು ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಶರತ್‍ಚಂದ್ರರ 144ನೇ ಜನ್ಮದಿನಾಚರಣೆ ಹಾಗೂ ಅವರ ಸಾಹಿತ್ಯ ಅವಲೋಕನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಶರತ್‌ರು ಆ ಕಾಲದಲ್ಲೇ ನಿಂತು ಭವಿಷ್ಯದೆಡೆಗೆ ನೋಡಿದವರು.ವಿಧವಾ ವಿವಾಹ, ಸ್ತ್ರೀ ಸ್ವಾತಂತ್ರ್ಯ, ಸಮಾನತೆಗಳನ್ನು ಎತ್ತಿಹಿಡಿದವರು. ಆದರೆ ಅದನ್ನು ರಸ ಮಾಧ್ಯಮದ ಮೂಲಕ ಜನರ ಹೃದಯಕ್ಕೆ ಕೊಂಡೊಯ್ದವರು. ಹಾಗೆಯೇ ಸಾಹಿತ್ಯಕವಾಗಿ ಪಾತ್ರಗಳ ಸಂಭಾಷಣೆಯಲ್ಲೇ ತಾತ್ವಿಕ ವಿಷಯಗಳನ್ನು ತಂದವರು’ ಎಂದರು.

‘ಸಂಪ್ರದಾಯಶರಣ ಮನೋಭಾವದಿಂದಾಗಿ ಹೆಣ್ಣುಮಕ್ಕಳನ್ನು ಹೇಗೋ ಮದುವೆ ಮಾಡಿ ಅಮಾನವೀಯ ಪರಿಸ್ಥಿತಿಗೆ ನೂಕುವುದನ್ನು ‘ಶ್ರೀಕಾಂತ’ ಕಾದಂಬರಿಯ ಅನ್ನದಾ ಹಾಗೂ ಬಂಗಾಳಿ ಮಾತನಾಡುವ ಬಿಹಾರಿ ಹೆಣ್ಣುಮಕ್ಕಳ ಚಿತ್ರಣದಲ್ಲಿ ತೋರಿಸಿದ್ದಾರೆ. ಮದುವೆ ಹಾಗೂ ಲೈಂಗಿಕ ಸಂಬಂಧಗಳಿಗೆ ಆಧಾರವಾಗಿ ಪ್ರೀತಿ, ಗೌರವ, ಘನತೆಗಳಿರಬೇಕು ಎನ್ನುವುದು ಶರತ್‍ಚಂದ್ರರ ವಾದ. ಇಲ್ಲಿ ಅವರು ಸಂಪ್ರದಾಯತೆಯನ್ನು ಧಿಕ್ಕರಿಸುತ್ತಲೇ ಸ್ವಚ್ಛಂದತೆಯ ಮನೋವೃತ್ತಿಯನ್ನು ಟೀಕಿಸಿದ್ದಾರೆ. ‘ಹಳ್ಳಿಯ ಸಮಾಜ’ದ ರಮಾ, ‘ಶ್ರೀಕಾಂತ’ದ ರಾಜಲಕ್ಷ್ಮಿ, ‘ಚರಿತ್ರಹೀನ’ದ ಸಾವಿತ್ರಿ ಪಾತ್ರಗಳಲ್ಲಿ ವಿಧವೆಯರಾದರೂ ಉದಾತ್ತ ನೀತಿ, ನಡವಳಿಕೆಯೊಂದಿಗೆ ಬಹಳ ನೀತಿಯುಕ್ತವಾಗಿ ಪ್ರೀತಿಸಿದರೂ ಧಾರ್ಮಿಕ ಕಟ್ಟಳೆಯಿಂದಾಗಿ ಮದುವೆಯಾಗದೆ ಹೋಗುವುದನ್ನು ಮನಮಿಡಿಯುವಂತೆ ಚಿತ್ರಿಸಿದ್ದಾರೆ. ಕನ್ನಡದಲ್ಲಿ ‘ಅಧಿಕಾರ’ ಹೆಸರಿನಲ್ಲಿ ಪ್ರಕಟವಾದ ‘ಪಥೇರ್ ದಾಬಿ’ ಕಾದಂಬರಿ ರಾಜಕೀಯ ವಿಚಾರಧಾರೆಯ ಸಂಘರ್ಷ, ಅದರಲ್ಲಿ ಸ್ತ್ರೀಯರ ಭಾಗವಹಿಸುವಿಕೆ, ಹಿಂಸೆ, ಅಹಿಂಸೆಯ ಪ್ರಶ್ನೆ, ದೇಶಪ್ರೇಮ, ಮುಂತಾದ ವಿಷಯಗಳು ಅತ್ಯಂತ ಸಾಹಿತ್ಯಕವಾಗಿ ಅಭಿವ್ಯಕ್ತಿಗೊಂಡಿರುವ ಅಪರೂಪದ ಕಾದಂಬರಿ’ ಎಂದು ವಿವರಿಸಿದರು.

ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಬಸವರಾಜ ಡೋಣೂರ ಮಾತನಾಡಿ, ‘ಶರತ್‍ಚಂದ್ರರು ತಮ್ಮ ಸಾಹಿತ್ಯದಲ್ಲಿ ಜನರ ನೋವುಗಳು, ಸಂಕಷ್ಟಗಳು ಅದರಲ್ಲೂ ಮುಖ್ಯವಾಗಿ ಮಹಿಳೆಯರ ಘನತೆಯ ಬಗ್ಗೆ ತುಂಬಾ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ. ಅವರ ಸಾಹಿತ್ಯ ಬದಲಾವಣೆಗಾಗಿಯ ಮನೋಭೂಮಿಕೆಯನ್ನು ಹದಗೊಳಿಸುತ್ತದೆ’ ಎಂದು ಹೇಳಿದರು.

ಪುಟ್ಟರಾಜ ಲಿಂಗಶೆಟ್ಟಿಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷತೆಯನ್ನು ಆವಿಷ್ಕಾರ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ವಿ.ಜಿ. ದೇಸಾಯಿ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಪ್ರೊ. ಅಂಬಾರಾವ ಉಪಳಾಂವಕರ್, ಡಾ. ರಮೇಶ ಲಂಡನ್‍ಕರ್, ಡಾ. ವಿಕ್ರಮ ವಿಸಾಜಿ, ಪ್ರೊ.ಜಿ.ಎಂ. ಮೇಟಿ, ಕಲ್ಯಾಣರಾವ ಭಕ್ಷಿ, ಮಡಿವಾಳಪ್ಪ ಹೇರೂರು, ರಂಗಸ್ವಾಮಿ, ಅಶ್ವಿನಿ, ರುಕ್ಮಿಣಿ ತಳೇವಾಡ, ಡಿ. ಕಲ್ಯಾಣರಾವ, ಪ್ರಕಾಶ ಬಿರಾದಾರ ಇತರ ಸಾಹಿತ್ಯಾಸಕ್ತರು ಭಾಗವಹಿಸಿದ್ದರು.

**

ಸಮಾಜದಲ್ಲಿ ಬೇರೂರಿರುವ ಕಂದಾಚಾರ, ಹಿಂದೂ ಧಾರ್ಮಿಕ ಸಾಂಪ್ರದಾಯಿಕತೆ, ಅಸಮಾನತೆ, ಶೋಷಣೆ, ಮೌಢ್ಯತೆಯ ವಿರುದ್ಧ ಜಡತ್ವವನ್ನು ಬಡಿದೆಬ್ಬಿಸುವಂತಹ ಶರತ್‍ಚಂದ್ರರ ಸಾಹಿತ್ಯವು ಇಂದಿಗೂ ಪ್ರಸ್ತುತ

ಡಾ. ಬಸವರಾಜ ಡೋಣೂರ,ಪ್ರಾಧ್ಯಾಪಕರು, ಕೇಂದ್ರೀಯ ವಿ.ವಿ. ಕಲಬುರ್ಗಿ

**

ಶರತ್‌ರ ಕಥೆ, ಕಾದಂಬರಿಗಳಲ್ಲಿ ಕ್ರಾಂತಿಕಾರಿ ಮಾನವತಾವಾದ, ವಸ್ತುವಾದಿ ಚಿಂತನೆ, ಪ್ರಗತಿಪರ ವಿಚಾರಧಾರೆ, ಶೋಷಿತ ಜನತೆಯ ಹಾಗೂ ಕಾರ್ಮಿಕರ ಪರವಾದ ನಿಲುವುಗಳು ರಸಮಯವಾಗಿ ಮೂಡಿ ಬರುತ್ತವೆ

ಎಸ್‌.ಎನ್‌.ಸ್ವಾಮಿ, ‘ಆವಿಷ್ಕಾರ’ ರಾಜ್ಯ ಸಮಿತಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT