ಕಲಬುರ್ಗಿ: ಮಹಿಳಾ ಪೊಲೀಸ್ ಪಡೆ ಕಾರ್ಯಾರಂಭ

7
ನಗರ ನಿಯಂತ್ರಣ ಕೇಂದ್ರಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಚಾಲನೆ

ಕಲಬುರ್ಗಿ: ಮಹಿಳಾ ಪೊಲೀಸ್ ಪಡೆ ಕಾರ್ಯಾರಂಭ

Published:
Updated:
Deccan Herald

ಕಲಬುರ್ಗಿ: ನೊಂದ ಮಹಿಳೆಯರಿಗೆ ಸಾಂತ್ವನ ಹೇಳಲು ಹಾಗೂ ಅಪರಾಧ ತಡೆಗಟ್ಟುವಿಕೆ, ಸಂಚಾರ ನಿಯಂತ್ರಣ ಬಗ್ಗೆ ಜಾಗೃತಿ ಮೂಡಿಸಲು ‘ಮಹಿಳಾ ಪಡೆ’ಯೊಂದು ಸಜ್ಜಾಗಿದ್ದು, ಬುಧವಾರ ಅದಕ್ಕೆ ಚಾಲನೆ ನೀಡಲಾಯಿತು.

ನಗರದ ಸೂಪರ್ ಮಾರ್ಕೆಟ್‌ನಲ್ಲಿರುವ ಹಳೆ ಚೌಕ್ ಪೊಲೀಸ್ ಠಾಣೆ ಕಟ್ಟಡದಲ್ಲಿ ನಿಯಂತ್ರಣ ಕೇಂದ್ರ, ನಿರ್ಭಯಾ ಕೇಂದ್ರ, ನಾಗರಿಕರ ಜಾಗೃತಿ ಕೇಂದ್ರ ಮತ್ತು ಕೌನ್ಸೆಲಿಂಗ್ ಕೇಂದ್ರಗಳನ್ನು ಒಳಗೊಂಡ ನಗರ ನಿಯಂತ್ರಣ ಕೇಂದ್ರವನ್ನು ಆರಂಭಿಸಲಾಗಿದೆ.

ಮಹಿಳಾ ಹಾಗೂ ಪುರುಷ ಕಾನ್‌ಸ್ಟೆಬಲ್‌ಗಳಿಗೆ ವಿಶೇಷ ತರಬೇತಿ, ಬೈಕ್ ಮತ್ತು ಕಾರು ಚಾಲನೆ ತರಬೇತಿ ನೀಡಲಾಗಿದೆ. ಪುರುಷ ಕಾನ್‌ಸ್ಟೆಬಲ್‌ಗಳಿಗಾಗಿ 33 ಸೈಕಲ್‌ಗಳನ್ನು ಖರೀದಿಸಲಾಗಿದೆ.

ನಗರದಲ್ಲಿ ಗಸ್ತಿನಲ್ಲಿರುವ ಎಲ್ಲಾ ವಾಹನಗಳನ್ನು ನಿಯಂತ್ರಣ ಕೇಂದ್ರದಿಂದ ನಿಯಂತ್ರಿಸಲಾಗುತ್ತದೆ. ಆಪತ್ತಿನ ಸಮಯದಲ್ಲಿ ಯಾರಾದರೂ ಕರೆ ಮಾಡಿದರೆ ತಕ್ಷಣ ಅವರ ನೆರವಿಗೆ ಧಾವಿಸುವ ವ್ಯವಸ್ಥೆಯನ್ನು ಮಾಡಲಾಗಿದೆ. ಈ ವಾಹನಗಳನ್ನು ಜಿಪಿಎಸ್ ಮತ್ತು ವೈರ್‌ಲೆಸ್‌ ಮೂಲಕ ಸಂಪರ್ಕಿಸಲಾಗುತ್ತದೆ.

ನಾಗರಿಕರ ಜಾಗೃತಿ ಕೇಂದ್ರದಲ್ಲಿ ಅಪರಾಧ ಚಟುವಟಿಕೆಗಳು ಮತ್ತು ಅವುಗಳಿಂದ ಪಾರಾಗುವ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಸಂಚಾರ ದಟ್ಟಣೆ, ವೈಯಕ್ತಿಕ ಮತ್ತು ಆಸ್ತಿ ರಕ್ಷಣೆ ಬಗ್ಗೆ ಸಾಮಾನ್ಯ ಜನರು ಮತ್ತು ಮಕ್ಕಳಿಗೆ ತಿಳಿವಳಿಕೆ ನೀಡಲಾಗುತ್ತದೆ.

ಚುಡಾಯಿಸುವಿಕೆ, ಲೈಂಗಿಕ ದೌರ್ಜನ್ಯ ಮತ್ತು ಲೈಂಗಿಕ ಹಲ್ಲೆಯ ಬಗ್ಗೆ ನಿರ್ಭಯಾ ಕೇಂದ್ರದಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ಇದಲ್ಲದೆ ನೆರವಿಗೆ ಧಾವಿಸಲು ಎರಡು ಪಿಂಕ್ ಕಾರುಗಳಿದ್ದು, ಮಹಿಳಾ ಚಾಲಕಿ ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಮಹಿಳೆ, ಮಕ್ಕಳು ಮತ್ತು ಹಿರಿಯ ನಾಗರಿಕರಿಗಾಗಿ ಕೌನ್ಸೆಲಿಂಗ್ ಕೇಂದ್ರವನ್ನು ಆರಂಭಿಸಲಾಗಿದೆ. ಈ ಕೇಂದ್ರದಲ್ಲಿ ಸಾಂತ್ವನ ಹೇಳಿ, ಅಗತ್ಯ ನೆರವು ನೀಡಲಾಗುತ್ತದೆ.

ಸಚಿವ ಚಾಲನೆ: ನಗರ ನಿಯಂತ್ರಣ ಕೇಂದ್ರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಚಾಲನೆ ನೀಡಿದರು. ಶಾಸಕಿ ಕನ್ನೀಜ್ ಫಾತಿಮಾ, ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್, ಈಶಾನ್ಯ ವಲಯ ಐಜಿಪಿ ಮನೀಷ್ ಕರ್ಬೀಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿಕುಮಾರ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ, ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಬಿ.ಜೆ. ಇದ್ದರು.

ಯಾವೆಲ್ಲ ವಾಹನಗಳಿಗೆ?

4 ಬೈಕ್ - ಮಹಿಳಾ ಕಾನ್‌ಸ್ಟೆಬಲ್‌ಗಳಿಗೆ

21 ಬೈಕ್ - ಪುರುಷ ಕಾನ್‌ಸ್ಟೆಬಲ್‌ಗಳಿಗೆ

33 ಸೈಕಲ್ - ಕಾನ್‌ಸ್ಟೆಬಲ್‌ಗಳಿಗೆ

14 - ಗಸ್ತು ಕಾರುಗಳು

4 - ನಿರ್ಭಯಾ ಬೈಕ್‌

2 - ನಿರ್ಭಯಾ ಕಾರುಗಳು

***

ನಗರದ ಸಾರ್ವಜನಿಕರಿಗೆ ಅದರಲ್ಲೂ ಮಹಿಳೆಯರಿಗೆ ಅನುಕೂಲವಾಗಲೆಂದು ನಗರ ನಿಯಂತ್ರಣ ಕೇಂದ್ರವನ್ನು ಆರಂಭಿಸಲಾಗಿದೆ. ಇದಕ್ಕಾಗಿ ಪ್ರತ್ಯೇಕ ಸಿಬ್ಬಂದಿ ನಿಯೋಜಿಸಲಾಗಿದೆ.
ಎನ್.ಶಶಿಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

***

ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಪ್ರಥಮ ಬಾರಿಗೆ ನಗರ ನಿಯಂತ್ರಣ ಕೇಂದ್ರವನ್ನು ಆರಂಭಿಸಲಾಗಿದೆ. ತುರ್ತು ಸಂದರ್ಭದಲ್ಲಿ ಇಲ್ಲಿಯ ಸಿಬ್ಬಂದಿ ಸಾರ್ವಜನಿಕರಿಗೆ ರಕ್ಷಣೆ ಒದಗಿಸಲಿದ್ದಾರೆ.
ಪ್ರಿಯಾಂಕ್ ಖರ್ಗೆ, ಜಿಲ್ಲಾ ಉಸ್ತುವಾರಿ ಸಚಿವ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !