ಗುರುವಾರ , ನವೆಂಬರ್ 21, 2019
21 °C
ಎಐಎಂಎಸ್‌ಎಸ್‌, ಎಐಡಿಎಸ್‌ಒ, ಎಐಡಿವೈಒ ಸಂಘಟನೆಗಳಿಂದ ಮೆರವಣಿಗೆ

ಶಿಬಾರಾಣಿ ಸಾವು: ನಿಷ್ಪಕ್ಷಪಾತ ತನಿಖೆಗೆ ಒತ್ತಾಯ

Published:
Updated:
Prajavani

ಕಲಬುರ್ಗಿ: ನಗರದ ಫೈನ್‌ ಆರ್ಟ್‌ ವಿದ್ಯಾರ್ಥಿನಿ ಶಿಬಾರಾಣಿ (22) ಅವರು ಗರ್ಭಪಾತ ಮಾಡಿಸಿಕೊಳ್ಳುವ ಸಂದರ್ಭದಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಸಾವಿಗೀಡಾದ ಪ್ರಕರಣವನ್ನು ನಿಷ್ಪ‍ಕ್ಷಪಾತವಾಗಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಎಐಎಂಎಸ್‌ಎಸ್‌, ಎಐಡಿಎಸ್‌ಒ ಹಾಗೂ ಎಐಡಿವೈಒ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಪ್ರಿಯಕರ ರವಿಕುಮಾರ್‌ನಿಂದಾಗಿ ಗರ್ಭಿಣಿಯಾಗಿದ್ದ ಶಿಬಾರಾಣಿ ಆತನ ಸಲಹೆಯಂತೆ ಗರ್ಭಪಾತ ಮಾಡಿಸಿಕೊಳ್ಳುವ ಸಂದರ್ಭದಲ್ಲಿ ಅತಿಯಾದ ಡೋಸ್‌ನಿಂದ ಸಾವನ್ನಪ್ಪಿದ್ದಾರೆ ಎಂಬ ಮಾತುಗಳಿವೆ. ನಂತರ ಶವವನ್ನು ರವಿಕುಮಾರ್‌ ತೆಲಂಗಾಣಕ್ಕೆ ಗೆಳೆಯನೊಂದಿಗೆ ಕೊಂಡೊಯ್ದು ಪೆಟ್ರೋಲ್‌ ಹಾಕಿ ಸುಟ್ಟುಹಾಕಿದ್ದಾನೆ. ಈಗಾಗಲೇ ರವಿಕುಮಾರ್‌ನನ್ನು ಪೊಲೀಸರು ಬಂಧಿಸಿದ್ದು, ಗರ್ಭಪಾತ ಮಾಡಿಸಲು ಮುಂದಾದ ವೈದ್ಯರಿಗೂ ಕಠಿಣ ಶಿಕ್ಷೆ ವಿಧಿಸಬೇಕು. ಮಹಿಳೆಯರಿಗೆ ಸೂಕ್ತ ಭದ್ರತೆ ಒದಗಿಸಬೇಕು. ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಮಹಿಳೆಯರ ಮೇಲೆ ಇಂತಹ ಕೃತ್ಯಗಳು ಇಂದು ಭಯವಿಲ್ಲದೇ ನಡೆಯುತ್ತಿವೆ. ಇದಕ್ಕೆ ಸರ್ಕಾರಗಳು ಮೌನ ವಹಿಸಿರುವುದೇ ಮುಖ್ಯ ಕಾರಣ. ಒಂದೆಡೆ ಮಾಧ್ಯಮಗಳಲ್ಲಿ ಕುಸಂಸ್ಕೃತಿಯನ್ನು ಬಿತ್ತುವ ಕಾರ್ಯಕ್ರಮಗಳಿಂದ ಸಂಬಂಧಗಳಲ್ಲಿ ಹಗುರತೆ ಬರುತ್ತಿದ್ದು, ಅನೈತಿಕ ಸಂಬಂಧಗಳನ್ನು ಸ್ವಚ್ಛಂದವಾಗಿ ತೋರಿಸಿ ಪ್ರೇರೇಪಿಸಲಾಗುತ್ತದೆ. ಇದರ ಪರಿಣಾಮದಿಂದಲೇ ಒಂದೆಡೆ ಮಹಿಳೆಯರು ಘನತೆಗೆ ಧಕ್ಕೆ ತರುವುದರೊಂದಿಗೆ ಅವರ ಮೇಲೆ ಅತ್ಯಾಚಾರ, ದೌರ್ಜನ್ಯಗಳು ಹಾಗೂ ಕೊಲೆಗಳಾದರೂ ಸಮಾಜವು ಮಾನವ ಸಂವೇದನೆಯನ್ನೇ ಕಳೆದುಕೊಂಡು ಹೋಗುವಂತೆ ಮಾಡಲಾಗುತ್ತಿದೆ. ಸಹೋದರತೆ ಮತ್ತು ಭ್ರಾತೃತ್ವಗಳೇ ಮಾಯವಾಗಿವೆ. ಹೀಗಾಗಿ ಪ್ರತಿದಿನವೂ ಇಂತಹ ಕ್ರೂರ ದಾಳಿಗಳಿಗೆ ಹೆಣ್ಣುಮಕ್ಕಳು ಬಲಿಯಾಗುತ್ತಿರುವುದು ನೋವಿನ ಸಂಗತಿ ಎಂದರು.

ಶಿಬಾರಾಣಿ ಕುಟುಂಬ ಸದಸ್ಯರು, ಸೋಷಲಿಸ್ಟ್‌ ಯೂನಿಟಿ ಸೆಂಟರ್‌ ಆಫ್‌ ಇಂಡಿಯಾ ಕಮ್ಯುನಿಸ್ಟ್‌ ಪಕ್ಷದ ಮುಖಂಡ ಎಸ್‌.ಎಂ. ಶರ್ಮಾ, ಎಐಎಂಎಸ್‌ಎಸ್‌ ಜಿಲ್ಲಾ ಅಧ್ಯಕ್ಷೆ ಗುಂಡಮ್ಮ ಮಡಿವಾಳ, ಎಐಡಿಎಸ್‌ಒ ಜಿಲ್ಲಾ ಘಟಕದ ಅಧ್ಯಕ್ಷೆ ಹಣಮಂತ ಎಸ್‌.ಎಚ್‌., ಎಐಡಿವೈಒ ಜಿಲ್ಲಾ ಘಟಕದ ಅಧ್ಯಕ್ಷ ಮಹೇಶ ನಾಡಗೌಡ, ವಿವಿಧ ಸಂಘಟನೆಗಳ ಮುಖಂಡರಾದ ಜಗನ್ನಾಥ ಎಸ್‌.ಎಚ್‌., ನಿಂಗಣ್ಣ ಎಸ್. ಜಂಬಗಿ, ಗೌರಮ್ಮ ಸಿ.ಕೆ., ಈರಣ್ಣ ಇಸಬಾ, ಈಶ್ವರ, ಭೀಮಾಶಂಕರ, ಸ್ನೇಹಾ ಕಟ್ಟಿಮನಿ, ಶಿಲ್ಪಾ ಬಿ.ಕೆ., ರೂಪಾ, ಗೌತಮ, ವೆಂಕಟೇಶ, ಗೋದಾವರಿ, ಕರ್ಣ, ಹೊನ್ನಮ್ಮ ಹಾಗೂ ಸಾಬಮ್ಮ ಇದ್ದರು.

ಪ್ರತಿಕ್ರಿಯಿಸಿ (+)