ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ ನಗರದೆಲ್ಲೆಡೆ ಶಿವನಾಮ ಜಪ

Last Updated 1 ಮಾರ್ಚ್ 2022, 10:07 IST
ಅಕ್ಷರ ಗಾತ್ರ

ಕಲಬುರ್ಗಿ: ಕೊರೊನಾ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಸರಳವಾಗಿ ಆಚರಿಸಲಾಗಿದ್ದ ಮಹಾಶಿವರಾತ್ರಿಗೆ, ಈ ಬಾರಿ ವೈಭವ ಮರುಕಳಿಸಿತು. ನಗರದ ವಿವಿಧ ದೇವಸ್ಥಾನಗಳಿಗೆ ಮಂಗಳವಾರ ಭಕ್ತರು ತಂಡೋಪತಂಡವಾಗಿ ಬಂದರು. ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆದರು.

ನಸುಕಿನಲ್ಲೇ ಮನೆಗಳನ್ನು ಸ್ವಚ್ಛಗೊಳಿಸಿ, ರಂಗೋಲಿ ಹಾಕಿ ಶಿವಪೂಜೆ ಮಾಡಿದ ಗೃಹಿಣಿಯರು, ಕುಟುಂಬ ಸಮೇತರಾಗಿ ದೇವಸ್ಥಾನಗಳತ್ತ ಹೆಜ್ಜೆ ಹಾಕಿದರು.‌ ದೇವಸ್ಥಾನಗಳಲ್ಲಿ ಶಿವಲಿಂಗಕ್ಕೆ ಮಹಾರುದ್ರಾಭಿಷೇಕ, ತ್ರಿದಳ ಬಿಲ್ವಾರ್ಚನೆ, ಅರಿಸಿನ– ಕುಂಕುಮ ಅರ್ಚನೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯ ನೆರವೇರಿಸಿದರು.

ದೇವಸ್ಥಾನಗಳಲ್ಲಿ ಸೋಮವಾರ ರಾತ್ರಿಯಿಂದಲೇ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಗಿರಿಜಾಪ್ರಿಯನಿಗೆ ಮಹಾರುದ್ರಾಭಿಷೇಕ, ಮಹಾಜಪ, ಮಂತ್ರ ಘೋಷಗಳನ್ನು ಪಠಿಸಲಾಯಿತು. ಬಹುಪಾಲು ಕಡೆ ನೂರೊಂದು ಬಿಲ್ವದಳ, ಸಾವಿರ ಒಂದು, ಲಕ್ಷದೊಂದು... ಹೀಗೆ ವೈವಿಧ್ಯಮಯ ರೀತಿಯಲ್ಲಿ ಬಿಲ್ವದಳಗಳನ್ನು ಅರ್ಪಿಸುವ ಆಚರಣೆ ನಡೆಯಿತು.

ರಾಮತೀರ್ಥದಲ್ಲಿ ಭಕ್ತರ ದಂಡು: ಇಲ್ಲಿನ ಆಳಂದ ಚೌಕ್‌ದಲ್ಲಿ ರಿಂಗ್‌ ರಸ್ತೆಗೆ ಹೊಂದಿಕೊಂಡ ರಾಮತೀರ್ಥ ಮಂದಿರದಲ್ಲಿ ಜನಜಂಗುಳಿ ಇತ್ತು. ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ಮಾರ್ಗದ ವ್ಯವಸ್ಥೆ ಕಲ್ಪಿಸಲಾಗಿತ್ತು. ಮಲ್ಲಿಗೆ ಹೂ, ಚೆಂಡು ಹೂ, ಗುಲಾಬಿ, ದಾಸವಾಳ, ಸೇವಂತಿ ಹೂಗಳಿಂದ ಶಂಕರನಿಗೆ ಮಾಡಿದ ಅಲಂಕಾರ ಕಣ್ಮನ ಸೆಳೆಯಿತು.

ಬಿದ್ದಾಪುರ ಕಾಲೊನಿಯ ಕಾಶಿ ವಿಶ್ವನಾಥ ದೇವಸ್ಥಾನ, ರಾಘವೇಂದ್ರಸ್ವಾಮಿ ಮಠ, ಖೂಬಾ ಪ್ಲಾಟ್‌ನಲ್ಲಿರುವ ಶಿವಾಲಯ, ಲೋಹಾರ್‌ ಗಲ್ಲಿ, ಗೋದುತಾಯಿ ಕಾಲೊನಿ, ಶಹಾಬಜಾರ್‌, ಕೈಲಾಸ ನಗರ, ಗಂಗಾನಗರ, ರೇವಣಸಿದ್ಧೇಶ್ವರ ಕಾಲೊನಿ ಸೇರಿದಂತೆ ಎಲ್ಲ ಮಂದಿರಗಳಲ್ಲೂ ಇಡೀ ದಿನ ಶಿವ ಪುರಾಣ ಪಠಣ, ಗಾಯನ, ಕೀರ್ತನೆ, ಶಿವಭಜನೆ, ಪಂಚಾಮೃತ ಪ್ರಸಾದ ವಿತರಣೆ, ಪೂಜಾ ಕೈಂಕರ್ಯಗಳು ನೆರವೇರಿದವು.

ಅಡಿಕೆಯಿಂದ ಅಲಂಕೃತ ಶಿವಲಿಂಗ

ಮಹಾಶಿವರಾತ್ರಿ ಪ್ರಯುಕ್ತ ನಗರದ ಹೊರವಲಯದ ಅಮೃತ ಸರೋವರ ಪರಿಸರದಲ್ಲಿರುವ ಬ್ರಹ್ಮಕುಮಾರಿ ರಾಜಯೋಗ ಕೇಂದ್ರದಲ್ಲಿ ಅಡಿಕೆಯಿಂದ ಅಲಂಕರಿಸಿದ ಬೃಹತ್ ಶಿವಲಿಂಗ ವಿಶೇಷ ಆಕರ್ಷಣೆಯಾಗಿತ್ತು.

ಈ ಶಿವಲಿಂಗದ ಮುಂದೆ ನಿಂತು ಹಲವರು ಸೆಲ್ಫಿ ಕ್ಲಿಕ್ಕಿಸಿಕೊಂಡರು. ಒಳಾವರಣದಲ್ಲಿ ಪುಷ್ಪ, ಅರಳೆ, ರುದ್ರಾಕ್ಷಿ, ಅಡಿಕೆ ಇತ್ಯಾದಿಗಳಿಂದ ಹನ್ನೆರಡು ಜ್ಯೋತಿರ್ಲಿಂಗಗಳನ್ನು ಅಲಂಕಾರ ಮಾಡಲಾಗಿತ್ತು. ಬ್ರಹ್ಮಕುಮಾರ ಹಾಗೂ ಬ್ರಹ್ಮಕುಮಾರಿಯರು ಇಡೀ ದಿನ ಬಂದ ಭಕ್ತರಿಗೆ ಮಹಾಶಿವರಾತ್ರಿ ಸಂದೇಶ, ಆಚರಣೆಯ ಉದ್ದೇಶ ತಿಳಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT