ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ದಿನ ಶಿವರಾತ್ರಿ– ಉರುಸ್‌: ಆಳಂದಲ್ಲಿ ಬಿಗುವಿನ ವಾತಾವರಣ

ಪರಸ್ಪರ ಎದುರಾಗಿ ನಿಂತಿದ್ದಾರೆ ಹಿಂದೂ– ಮುಸ್ಲಿಂ ಕಾರ್ಯಕರ್ತರು
Last Updated 1 ಮಾರ್ಚ್ 2022, 9:17 IST
ಅಕ್ಷರ ಗಾತ್ರ

ಆಳಂದ (ಕಲಬುರಗಿ ಜಿಲ್ಲೆ): ಹಿಂದೂ– ಮುಸ್ಲಿಂ ಸಂಘಟನೆಗಳ ವಿವಾದದ ಕೇಂದ್ರವಾದ, ಇಲ್ಲಿನ ಲಾಡ್ಲೆ ಮಶಾಕ ದರ್ಗಾ ಆವರಣದಲ್ಲಿ ಮಂಗಳವಾರ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಮಹಾಶಿವರಾತ್ರಿ ಆಚರಣೆಗೆ ಸೇರಿದ ಅಪಾರ ಸಂಖ್ಯೆಯ ಹಿಂದೂಗಳು ಹಾಗೂ ಉರುಸ್‌ ಆಚರಣೆಗೆ ಪಟ್ಟುಹಿಡಿದಿರುವ ಮುಸ್ಲೀಮರ ಗುಂಪುಗಳು ನೂರಡಿ ಅಂತರದಲ್ಲಿ ಪರಸ್ಪರ ಎದುರಾಗಿ ನಿಂತಿವೆ.

ಈ ದರ್ಗಾ ಆವರಣದಲ್ಲಿರುವ ಗುರು ರಾಘವಚೈತನ್ಯ ಅವರ ಲಿಂಗವನ್ನು ಶುದ್ಧೀಕರಣ ಮಾಡಿ, ಅಭಿಷೇಕ ಮಾಡಲು ಶ್ರೀರಾಮ ಸೇನೆ ಕರೆ ನೀಡಿತ್ತು. ಆದರೆ, ಮಾರ್ಚ್‌ 1ರಂದೇ ದರ್ಗಾದಲ್ಲಿ ಲಾಡ್ಲೆ ಮಶಾಕರ ಸಂದಲ್‌ ಮೆರವಣಿಗೆ ಇದ್ದು, ಬೇರೆ ಯಾವುದೇ ಧರ್ಮದ ಕಾರ್ಯಕ್ರಮಕ್ಕೂ ಅವಕಾಶ ನೀಡುವುದಿಲ್ಲ ಎಂದು ದರ್ಗಾ ಸಮಿತಿಯವರು, ದರ್ಗಾದ ಗೇಟ್‌ ಹಾಕಿದ್ದಾರೆ.

ಇದರಿಂದ ಆಕ್ರೋಶ ವ್ಯಕ್ತಪಡಿಸಿದ ಶ್ರೀರಾಮ ಸೇನೆ ಹಾಗೂ ಬಿಜೆಪಿ ಕಾರ್ಯಕರ್ತರು ಮೆರವಣಿಗೆ ಮೂಲಕ ಹೋಗಿ ಲಿಂಗವನ್ನು ಶುದ್ಧೀಕರಣ ಮಾಡಿಯೇ ಸಿದ್ಧ ಎಂದು ಪಟ್ಟುಹಿಡಿದರು. ಕೇಂದ್ರ ಸಚಿವ ಭಗವಂತ ಖೂಬಾ, ಶಾಸಕರಾದ ಬಸವರಾಜ ಮತ್ತಿಮೂಡ, ರಾಜಕುಮಾರ ಪಾಟೀಲ ತೇಲ್ಕೂರ, ಸುಭಾಷ ಗುತ್ತೇದಾರ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ, ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಸ್ಥಳೀಯ ಮುಖಂಡ ಆನಂದರಾವ್‌ ಪಾಟೀಲ, ಕಡಗಂಚಿ ಮಠದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ಅಪಾರ ಸಂಖ್ಯೆಯ ಹಿಂದೂ ಕಾರ್ಯಕರ್ತರು ದರ್ಗಾ ಎದುರಿಗೆ ಬಂದು ಸೇರಿದ್ದಾರೆ. ಪಟ್ಟಣದ ತುಂಬ ಕೇಸರಿ ಧ್ವಜಗಳ ಹಾರಾಟ, ಜೈಕಾರಗಳೇ ಕೇಳಿಸುತ್ತಿವೆ.

ಹಿಂದೂ ಕಾರ್ಯಕರ್ತರು ಮಂಗಳವಾರ ಬೆಳಿಗ್ಗೆ ಆಳಂದದ ಬಸ್‌ ನಿಲ್ದಾಣದಿಂದಲೇ ಬಹೃತ್‌ ಮೆರವಣಿಗೆ ಆರಂಭಿಸಿದರು. ಆದರೆ, ತಾಲ್ಲೂಕಿನಾದ್ಯಂತ ನಿಷೇಧಾಜ್ಞೆ ವಿಧಿಸಿರುವ ಕಾರಣ ಪೊಲೀಸರು ಮೆರವಣಿಗೆಗೆ ಅವಕಾಶ ನೀಡಲಿಲ್ಲ. ಬದಲಾಗಿ, 11 ಜನರು ಮಾತ್ರ ದರ್ಗಾ ಒಳಗೆ ಹೋಗಿ ಅಲ್ಲಿನ ಲಿಂಗದ ಶುದ್ಧೀಕರಣ ಹಾಗೂ ಅಭಿಷೇಕ ಮಾಡಲು ಅವಕಾಶ ನೀಡಲಾಗವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಇಶಾ ಪಂತ್‌ ಮುಖಂಡರಿಗೆ ಮನವರಿಕೆ ಮಾಡಿದರು.

ಇದಕ್ಕೆ ಬಿಜೆಪಿ ಮುಖಂಡರು ಒಪ್ಪಿಗೆ ಸೂಚಿಸಿದರು. ಆದರೆ, ಯಾರೊಬ್ಬರಿಗೂ ಪ್ರವೇಶ ನೀಡುವುದಿಲ್ಲ ಎಂದು ದರ್ಗಾ ಸಮಿತಿಯವರು ಪಟ್ಟುಹಿಡಿದಿದ್ದಾರೆ. ಇದರಿಂದ ಇಡೀ ಪಟ್ಟಣದ ವಾತಾವರಣ ತ್ವೇಷಮಯವಾಗಿದೆ. ಎಲ್ಲೆಂದರಲ್ಲಿ ಪೊಲೀಸ್‌ ಬಿಗಿ ಬಂದೊಬಸ್ತ್‌ ಏರ್ಪಡಿಸಲಾಗಿದೆ. ಎಸ್ಪಿ ಇಶಾ ಪಂತ್‌ ಅವರು ಎರಡೂ ಧರ್ಮಗಳ ಮುಖಂಡರಲ್ಲಿ ಸೌಹಾರ್ದ ಮೂಡಿಲು ಯತ್ನ ನಡೆಸಿದ್ದಾರೆ.

ಡ್ರೋಣ್‌ ಮೂಲಕ ಕಣ್ಗಾವಲು: ದರ್ಗಾ ಒಳಗಡೆ ಅಪಾರ ಸಂಖ್ಯೆಯ ಮುಸ್ಲಿಂ ಪುರುಷರು, ಮಹಿಳೆಯರೂ ಸೇರಿದ್ದಾರೆ. ಹಲವು ಜನ ಅವರವರ ಮನೆಗಳ ಮೇಲೆ ಗುಂಪಾಗಿ ಸೇರಿದ್ದಾರೆ. ಈ ಎಲ್ಲ ಘಟನೆಗಳ ಕಣ್ಗಾವಲಿಗಾಗಿ ಪೊಲೀಸರು ಡ್ರೋಣ್‌ ಬಳಸಿದ್ದಾರೆ. ಕೆಲವು ಮನೆಗಳ ಮೇಲೆ ಬಡಿಗೆ, ಕಲ್ಲುಗಳನ್ನು ಸಂಗ್ರಹಿಸಿ ಇಡಲಾಗಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ವಿವಾದಕ್ಕೆ ಕಾರಣವೇನು?

ಅಳಂದದ ಸೂಫಿ ಸಂತ ಲಾಡ್ಲೆ ಮಶಾಕ ಅನ್ಸಾರಿ ಅವರ ದರ್ಗಾ ಜಿಲ್ಲೆಯ ಅತಿ ದೊಡ್ಡ ದರ್ಗಾಗಳಲ್ಲಿ ಒಂದು. ಇದರ ಆವರಣದಲ್ಲಿ ಗುರು ರಾಘವಚೈತನ್ಯ ಅವರ ಲಿಂಗವೂ ಇದೆ. ಹಲವಾರು ವರ್ಷಗಳಿಂದ ಮುಸ್ಲಿಮರು ಉರುಸ್‌ ಹಾಗೂ ಹಿಂದೂಗಳು ಲಿಂಗದ ಪೂಜೆ ಮಾಡಿಕೊಂಡು ಬಂದಿದ್ದಾರೆ. ಆದರೆ, 2021ರ ನವೆಂಬರ್‌ 8ರಂದು ಕಿಡಿಗೇಡಿಯೊಬ್ಬ ಲಿಂಗದ ಹತ್ತಿರ ಗಲೀಜು ಮಾಡಿದ್ದು, ಘರ್ಷಣೆಗೆ ಕಾರಣವಾಗಿದೆ.

‘ಲಿಂಗಕ್ಕೆ ಅವಮಾನ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು’ ಎಂದು ಆಗ್ರಹಿಸಿ ಶ್ರೀರಾಮ ಸೇನೆಯ ರಾಜ್ಯ ಘಟಕದ ಅಧ್ಯಕ್ಷ, ಆಂದೋಲಾದ ಸಿದ್ಧಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಬೃಹತ್‌ ಪ್ರತಿಭಟನೆ ಕೂಡ ಮಾಡಲಾಗಿತ್ತು. ಮಹಾಶಿವರಾತ್ರಿಯ ದಿನವೇ ಹಿಂದೂಗಳು ದರ್ಗಾ ಒಳಗೆ ನುಗ್ಗಿ ಈ ಲಿಂಗದ ಶುದ್ಧೀಕರಣ ಮಾಡುತ್ತೇವೆ. ಇದಕ್ಕಾಗಿ ಕಲಬುರಗಿಯಿಂದ ಆಳಂದವರೆಗೆ ಮೆರವಣಿಗೆ ಮಾಡುತ್ತೇವೆ ಎಂದು ಘೋಷಿಸಿದ್ದರು.

ನಿಷೇಧಾಜ್ಞೆ ಮಧ್ಯೆಯೂ ಮೆರವಣಿಗೆ

ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಕಲಬರಗಿ ನಗರ ಹಾಗೂ ಆಳಂದ ತಾಲ್ಲೂಕಿನಾದ್ಯಂತ ಮಾರ್ಚ್‌ 1ರಂದು ನಿಷೇಧಾಜ್ಞೆ ವಿಧಿಸಿದ್ದಾರೆ. ಆದರೂ ಆಳಂದ ಪಟ್ಟಣದಲ್ಲಿ ಎರಡೂ ಧರ್ಮದವರು ಅಪಾರ ಸಂಖ್ಯೆಯಲ್ಲಿ ಗುಂಪಾಗಿ ಸೇರಿದ್ದಾರೆ.

ಪಟ್ಟಣದ ಯಾವುದೇ ದೇವಸ್ಥಾನದಲ್ಲೂ ಮಹಾಶಿವರಾತ್ರಿಯ ಸಂಭ್ರಮ ಕಂಡುಬರಲಿಲ್ಲ. ಎಲ್ಲ ಅಂಗಡಿ ಮುಂಗಟ್ಟುಗಳನ್ನು ಬಂದ್‌ ಮಾಡಲಾಗಿದೆ.

ಇದೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಹ್ವಾನಿತರಾಗಿದ್ದ ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ ಹಾಗೂ ಹಿಂದುತ್ವ ಪರ ಭಾಷಣಗಾರ್ತಿ ಚೈತ್ರಾ ಕುಂದಾಪುರ ಅವರಿಗೆ ಜಿಲ್ಲೆಗೆ ಪ್ರವೇಶ ನಿಷೇಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT