ಭಾನುವಾರ, ಡಿಸೆಂಬರ್ 5, 2021
27 °C

ರುದ್ರಭೂಮಿಯಲ್ಲಿ ಶಿವಪೂಜಾ ಮಂದಿರ ಉದ್ಘಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ನಗರದ ನೆಹರೂ ಗಂಜ್‌ನ ಹೃದಯ ಭಾಗದಲ್ಲಿ 11 ಎಕರೆ ಜಾಗದ ರುದ್ರಭೂಮಿಯಲ್ಲಿ ನಿರ್ಮಿಸಲಾದ ಶಿವಪೂಜಾ ಮಂದಿರದ ಉದ್ಘಾಟನೆಯನ್ನು ಮೌನಯೋಗಿ ಜಡೆಯ ಶಾಂತಲಿಂಗೇಶ್ವರ ಸ್ವಾಮೀಜಿ ಗುರುವಾರ ಉದ್ಘಾಟಿಸಿದರು.

ಮಲ್ಲಿಕಾರ್ಜುನ ಪಂಚ ಮಂಡಳಿಯ ಶಿವಮುಕ್ತಿಧಾಮ ಗಂಜ್ ವೀರಶೈವ ರುದ್ರಭೂಮಿಯಲ್ಲಿ ನಿರ್ಮಿಸಲಾದ ಶಿವಪೂಜಾ ಮಂದಿರವನ್ನು ಪಂಚ ಮಂಡಳಿ ಸರ್ವ ಸದಸ್ಯರು ಹಾಗೂ ಭಕ್ತರ ಮತ್ತು ಗಣ್ಯರ ಸಮ್ಮುಖದಲ್ಲಿ ಉದ್ಘಾಟನೆ ನೆರವೇರಿಸಿದ ಸ್ವಾಮೀಜಿ, ‘ನಾವಿರುವ ಮನೆಗೆ ಹೆಚ್ಚಿನ ಮಹತ್ವ ಕೊಡುತ್ತೇವೆ. ಆದರೆ ಕಾಯಂ ಮನೆಯಾಗಿರುವ ರುದ್ರಭೂಮಿಗೆ ಅಗತ್ಯ ನೀಡುವುದು ಮಹತ್ವದ್ದಾಗಿದೆ. ಮಹಾನಗರ ಹಾಗೂ ಗ್ರಾಮೀಣ ಭಾಗದಲ್ಲಿ ರುದ್ರಭೂಮಿ ಇದೇ ತೆರನಾಗಿ ಅಭಿವೃದ್ಧಿಗೊಳ್ಳಬೇಕು’ ಎಂದು ಲಿಖಿತ ಸಂದೇಶದಲ್ಲಿ ತಿಳಿಸಿದರು.

ವಿಶೇಷತೆಗಳು: ನಾಲ್ಕು ವರ್ಷಗಳ ಹಿಂದೆ ಮೂಗು ಮುಚ್ಚಿಕೊಂಡು ಹೋಗುವಂತಹ ಸ್ಥಿತಿಯಲ್ಲಿದ್ದ ರುದ್ರಭೂಮಿ ಇಂದು ರಾಜ್ಯದಲ್ಲೇ ಮಾದರಿಯಾಗಿ ಹೊರ ಹೊಮ್ಮಿದೆ. ರುದ್ರಭೂಮಿಯಲ್ಲಿ ಸಿ.ಸಿ. ರಸ್ತೆ, ಉದ್ಯಾನವನ, ಪತ್ರಿವನ, ಪುಷ್ಪವನ, ಸ್ನಾನದ ಕೋಣೆ, ಮಹಿಳೆಯರಿಗೆ–ಪುರುಷರಿಗೆ ಶೌಚಾಲಯ ಕೋಣೆ ನಿರ್ಮಿಸಲಾಗಿದೆ. ಪ್ರಮುಖವಾಗಿ ರುದ್ರಭೂಮಿ ಸುತ್ತುಗೋಡೆಯುದ್ದಕ್ಕೂ ಗಿಡಮರಗಳನ್ನು ಸಹ ಬೆಳೆಸಲಾಗಿದೆ. ವಾಸ್ತುಶಿಲ್ಪಿ ಬಸವರಾಜ ಖಂಡೇರಾವ ಅವರು ನೀಲನಕ್ಷೆ ರೂಪಿಸಿದ್ದಾರೆ.

ಸ್ಮಶಾನ ಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಿದವರು ಸಮಾಧಿ ಕಟ್ಟುವಂತಿಲ್ಲ. ಇಷ್ಟು ದಿನ ಗಣ್ಯವ್ಯಕ್ತಿಗಳ ದೊಡ್ಡ ಸಮಾಧಿ ಕಟ್ಟಲಾಗುತ್ತಿತ್ತು. ಈಗಾಗಲೇ ಕಟ್ಟಿರುವ ಸಮಾಧಿಗಳನ್ನು ನೆಲಸಮ ಮಾಡಲಾಗಿದೆ.

ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ, ಎಚ್‌ಕೆಇ ಸಂಸ್ಥೆಯ ಮಾಜಿ ಅಧ್ಯಕ್ಷ ಬಸವರಾಜ ಭೀಮಳ್ಳಿ, ಪಂಚ ಮಂಡಳಿಯ ಅಧ್ಯಕ್ಷ ಜಿ.ಡಿ. ಅಣಕಲ್, ಪ್ರಮುಖರಾದ ಸೋಮಶೇಖರ ಚಿನಮಳ್ಳಿ, ಯುವರಾಜ ಸಂಗಪ್ಪ ವಾಡಿ, ಸಂತೋಷ ಗಂಗಸಿರಿ, ಡಾ. ಶಿವಾನಂದ ಭೀಮಳ್ಳಿ, ಬಸವರಾಜ ಖಂಡೇರಾವ್, ಉಮೇಶ ಶೆಟ್ಟಿ, ಎ.ಬಿ. ಪಾಟೀಲ ಬಮ್ಮನಳ್ಳಿ, ಮಲ್ಲಿಕಾರ್ಜನ ಅಣಕಲ್, ಉದಯ ದೇಗಾಂವ, ರಾಜಶೇಖರ ಪಾಟೀಲ, ಪ್ರಕಾಶ ಹಾಗೂ ರವಿ ಸರಸಂಬಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು