ಹರಿದುಬಂದ ಭಕ್ತರ ದಂಡು, ಶೋಭಾಯಾತ್ರೆಗೆ ರಂಗು

7
ಸತ್ಯಾತ್ಮತೀರ್ಥರ ಚಾತುರ್ಮಾಸ್ಯ, ಸತ್ಯಪ್ರಮೋದ ತೀರ್ಥರ ಜನ್ಮಶತಮಾನೋತ್ಸವಕ್ಕೆ ಚಾಲನೆ

ಹರಿದುಬಂದ ಭಕ್ತರ ದಂಡು, ಶೋಭಾಯಾತ್ರೆಗೆ ರಂಗು

Published:
Updated:
Deccan Herald

ಕಲಬುರ್ಗಿ: ಉತ್ತರಾದಿ ಮಠಾಧೀಶ ಸತ್ಯಾತ್ಮತೀರ್ಥ ಶ್ರೀಗಳ ಚಾತುರ್ಮಾಸ್ಯ ಮಹೋತ್ಸವ ಹಾಗೂ ಸತ್ಯಪ್ರಮೋದತೀರ್ಥರ ಜನ್ಮ ಶತಮಾನೋತ್ಸವ ಅಂಗವಾಗಿ ನಗರದಲ್ಲಿ ಭಾನುವಾರ ನಡೆದ ವೈಭವದ ಶೋಭಾಯಾತ್ರೆಗೆ ಸಾವಿರಾರು ಭಕ್ತರು ಸಾಕ್ಷಿಯಾದರು.

ಪಾಲಿಕೆ ಆವರಣದಲ್ಲಿ ಶ್ರೀಗಳ ಪಾದಪೂಜೆ ನೆರವೇರಿದ ಬಳಿಕ, ಶ್ರೀಪಾದಪುತ್ರ ರಂಗಾಚಾರ್‌ ಗುತ್ತಲ ಅವರು ಮೆರವಣಿಗೆಗೆ ಚಾಲನೆ ನೀಡಿದರು. ತೆರೆದ ಲಾರಿಯ ಮೇಲೆ ನಿರ್ಮಿಸಿದ ನವಿಲಾಕೃತಿಯ ಮಂಟಪದಲ್ಲಿ ಸ್ವಾಮೀಜಿ ಆಸೀನರಾದರು. ಭಕ್ತರು ಜೈಕಾರ ಮೊಳಗಿಸುತ್ತ, ಹಾಡುತ್ತ, ಕುಣಿಯುತ್ತ ಮೆರವಣಿಗೆಯಲ್ಲಿ ಸಾಗಿದರು. ವಿವಿಧ ವಾದ್ಯವೃಂದದವರು ಮೆರವಣಿಗೆಗೆ ಕಳೆತಂದರು.

ಅಲಂಕೃತ ಒಂಟೆಗಳ ಜೋಡಿ ಹಾಗೂ ವಧುವಿನಂತೆ ಸಿಂಗಾರಗೊಳಿಸಿದ ಡಜನ್‌ ಕುದುರೆಗಳು ಯಾತ್ರೆಯ ಮುಂಚೂಣಿಯಲ್ಲಿದ್ದವು. ಮಕ್ಕಳು ಕುದರೆ ಸವಾರಿ ಮಾಡಿ ಹಿಗ್ಗಿದರು. ಇದರ ಹಿಂದೆ ಬಂದ ಮಹಾರಾಷ್ಟ್ರದ ಡೋಲು ತಂಡದವರ ಡೊಳ್ಳಂಗ್‌, ಚಿಪ್ಪಂಗ್‌, ಡೊಳ್ಳಂಗ್‌ ಚಿಪ್ಪಂಗ್‌... ಸದ್ದಿಗೆ ಭಕ್ತರು ಹುಮ್ಮಸ್ಸಿನಿಂದ ಕುಣಿದರು. ಕೇಸರಿ ಧ್ವಜಗಳನ್ನು ಮೇಲಕ್ಕೆತ್ತಿ ಹಾರಾಡಿಸುತ್ತ ಡೊಳ್ಳಿನ ಬೀಟ್‌ಗಳಿಗೆ ತಕ್ಕಂತೆ ಹೆಜ್ಜೆಹಾಕಿದರು.

ಮಹಿಳೆಯರಂತೂ ಹುಮ್ಮಸ್ಸು ಇಮ್ಮಡಿಗೊಂಡಂತೆ ಭಜನೆ, ಕೋಲಾಟ, ನೃತ್ಯ, ಗಾಯನ, ವೇದಘೋಷ, ಮಂತ್ರಪಠಣ ಮಾಡುತ್ತ, ಪೂರ್ಣಕಲಶ ಹೊತ್ತು ಸಾಗಿದರು. 10 ತಂಡಗಳಲ್ಲಿದ್ದ ವಿವಿಧ ಬಣ್ಣಗಳ ಸೀರೆಯುಟ್ಟ ವನಿತೆಯರು ಮಾರ್ಗದುದ್ದಕ್ಕೂ ಕೋಲಾಟ ಆಡಿ ಸಂಭ್ರಮಿಸಿದರು. ಪುರುಷರು ಶುಭ್ರ ಪಂಚೆ– ಶಲ್ಯ ತೊಟ್ಟು ಲವಲವಿಕೆಯಿಂದ ಓಡಾಡಿದರು. ತರುಣಿಯರು ಸಾಂಪ್ರದಾಯಿಕ ಲಂಗ–ದಾವಣಿ, ಮರಾಠಿ ಶೈಲಿಯ ಕಚ್ಚೆಸೀರೆ, ದೊಡ್ಡ ಮೂಗುತಿಗಳಲ್ಲಿ ಮಿಂಚಿದರು. ರಾಮ, ಲಕ್ಷ್ಮಣ, ಹನುಮ, ಕೃಷ್ಣ– ರಾಧೆಯರ ಪೋಷಾಕು ತೊಟ್ಟ ಚಿಣ್ಣರ ಸಂಭ್ರಮಕ್ಕೆ ಪಾರವೇ ಇಲ್ಲ.

ಇವರ ಹಿಂದೆ ಬಂದ ಮಹಾರಾಷ್ಟ್ರದ ವಾರ್ಕರಿಗಳ ಭಕ್ತಿಗೀತೆ ಗಾಯನ ಹಾಗೂ ಮೃದಂಗ, ತಾಳ, ತಂಬೂರಿ ನಾದ ಭಕ್ತಿಪರವಶ ಮಾಡಿತು. ಜ್ಞಾನೋಬಾ ತುಕಾರಾಂ, ವಿಠ್ಠಲ– ವಿಠ್ಠಲ ಪಾಂಡುರಂಗ ವಿಠ್ಠಲ... ಎಂದು ಸ್ಮರಿಸುತ್ತ ಸಾಗಿದರು. ಹರೇ ಶ್ರೀನಿವಾಸ, ಹರೇ ವಾಸುದೇವ, ಹರೇರಾಮ ಹರೇಕೃಷ್ಣ ಹರೇಹರೇ, ಗೋವಿಂದ– ಗೋಪಾಲ ಎಂಬ ಸ್ಮರಣೆ ನಿರಂತರ ಮೊಳಗಿದವು.

ರಾಜ್ಯ ಹಾಗೂ ಹೊರರಾಜ್ಯಗಳಿಂದ ಬಂದ ವಿವಿಧ ಭಜನಾ ಮಂಡಳಿಯವರು ದಾಸರ ಪದ ಹಾಡಿ ರಂಜಿಸಿದರು. ಯುವಕರು ಬಣ್ಣಬಣ್ಣದ ಬಾನ–ಬಿರುಸು, ಪಟಾಕಿ ಸಿಡಿಸಿದರು.

ಮುಂಬೈನ ಸತ್ಯಜ್ಞಾನ ವಿದ್ಯಾಪೀಠದ ಕುಲಪತಿ ವಿದ್ಯಾಸಿಂಹ ಆಚಾರ್ಯ ಮಾಹುಲಿ, ಪಂಡಿತ್‌ ವಿದ್ಯಾಧೀಶ ಆಚಾರ್ಯ ಗುತ್ತಲ, ಚಾತುರ್ಮಾಸ್ಯ ಸೇವಾ ಸಮಿತಿ ಅಧ್ಯಕ್ಷ ದೇವರಾವ್‌ ದೇಶಮುಖ, ಮುಖಂಡರಾದ ಭೀಮಸೇನರಾವ್‌ ಮಾಡ್ಯಾಳಕರ್, ಗೋಪಾಲಾಚಾರ್ಯ ಅಕಮಂಚಿ, ವಿನೋದಾಚಾರ್ಯ ಗಲಗಲಿ, ಪಾಂಡುರಂಗ ಯುವಕ ಮಂಡಳಿ, ಸತ್ಯಾತ್ಮ ಸೇವಾ ಭಜನಾ ಮಂಡಳಿ, ಸತ್ಯಾನಂದ ಭಜನಾ ಮಂಡಳಿ, ಪಾರಾಯಣ ಸಂಘ, ವಾರ್ಕರಿಗಳ ತಂಡಗಳ ಮುಖಂಡರು ನೇತೃತ್ವ ವಹಿಸಿದ್ದರು.

ಇಲ್ಲಿನ ಬ್ರಹ್ಮಪುರದಲ್ಲಿರುವ ಉತ್ತರಾದಿ ಮಠದಲ್ಲಿ ಸೆಪ್ಟೆಂಬರ್‌ 25ರವರೆಗೆ ಚಾತುರ್ಮಾಸ್ಯ ಮಹೋತ್ಸವ ನಡೆಯಲಿದೆ. ಪ್ರತಿ ವರ್ಷ ದೇಶದ ಒಂದು ನಗರದಲ್ಲಿ ಮಾತ್ರ ಈ ಕಾರ್ಯಕ್ರಮ ನಡೆಯುತ್ತದೆ. ಈ ಬಾರಿ ಕಲಬುರ್ಗಿಯಲ್ಲಿ ಆಯೋಜನೆ ಮಾಡಿದ್ದರಿಂದ ಹೈದರಾಬಾದ್‌ ಕರ್ನಾಟಕ ಭಾಗ, ಮಹಾರಾಷ್ಟ್ರ, ಆಂಧ್ರ, ತೆಲಂಗಾಣ ರಾಜ್ಯಗಳ ಭಕ್ತರೂ ಸೇರಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !