ಸೋಮವಾರ, ಜನವರಿ 24, 2022
28 °C
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಶ್ರದ್ಧಾಂಜಲಿ; ಗಣ್ಯರಿಂದ ನುಡಿನಮನ

ಕಲಬುರಗಿ: ಚಂದ್ರಶೇಖರ ಪಾಟೀಲ ನಾಡಿನ ಸಾಕ್ಷಿಪ್ರಜ್ಞೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಅವರಿಗೆ ಸೋಮವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ‘ಚಂದ್ರಶೇಖರ ಪಾಟೀಲ ಅವರು ನಾಡಿನ ಸಾಕ್ಷಿ ಪ್ರಜ್ಞೆಯಾಗಿದ್ದರು. ಅವರು ಅತ್ಯಂತ ನೇರವಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು. ಸಂಕ್ರಮಣ ಸಾಹಿತ್ಯಕ ಪತ್ರಿಕೆಯನ್ನು ತಮ್ಮ ಕೊನೆಯ ವರೆಗೂ ಮುನ್ನಡೆಸಿಕೊಂಡು ಬಂದಿದ್ದ ಅವರು, ಅನೇಕ ಬರಹಗಾರರನ್ನು ಬೆಳೆಸಿದ್ದಾರೆ’ ಎಂದರು.

ಮಕ್ಕಳ ಸಾಹಿತಿ ಎ.ಕೆ.ರಾಮೇಶ್ವರ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಲ್ಲಿಕಾರ್ಜುನ ವಡ್ಡಣಕೇರಿ, ಪತ್ರಕರ್ತ ಶಿವರಂಜನ್ ಸತ್ಯಂಪೇಟೆ, ಲೇಖಕಿ ಶಕುಂತಲಾ ಪಾಟೀಲ ಜಾವಳಿ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಸಿ ಶಿವರಾಜ ಅಂಡಗಿ ಅವರು ನುಡಿ ನಮನ ಸಲ್ಲಿಸಿದರು.

‘ಚಂಪಾ ಎಂದೇ ಖ್ಯಾತರಾಗಿದ್ದ ಚಂದ್ರಶೇಖರ ಪಾಟೀಲರು ಇಂಗ್ಲಿಷ್‌ ಅಧ್ಯಾಪಕರಾಗಿದ್ದರೂ ಕನ್ನಡ ಭಾಷೆಯಲ್ಲಿ ಪ್ರಭುತ್ವ ಸಾಧಿಸಿದ್ದರು. ಕಾವ್ಯ, ನಾಟಕ, ಪ್ರಬಂಧ ಸೇರಿದಂತೆ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಕೃಷಿ ಮಾಡಿದ್ದರು’ ಎಂದರು.

‘ಕನ್ನಡ ಕನ್ನಡ ಬರ‍್ರಿ ನಮ್ಮ ಸಂಗಡ‌’ ಎಂದು ಎಲ್ಲ ಕನ್ನಡಿಗರನ್ನು ಒಂದೂಗೂಡಿಸಿದ ಚಂಪಾ ಅವರು ‘ಪ್ರೀತಿ ಇಲ್ಲದೆ ನಾನು ಏನನ್ನೂ ಮಾಡಲಾರೆ. ದ್ವೇಷವನ್ನು ಕೂಡ’ ಎಂದು ಹೇಳುತ್ತಿದ್ದರು. ಇವರು ಇತರ ಸಾಹಿತಿಗಳ ಮಧ್ಯೆ ವೈಚಾರಿಕ ಭಿನ್ನಾಭಿಪ್ರಾಯ ಹೊಂದಿದ್ದರೇ ವಿನಃ ವೈಯಕ್ತಿಕ ಭಿನ್ನಾಭಿಪ್ರಾಯ ಹೊಂದಿರಲಿಲ್ಲ ಎಂದು ಹೇಳಿದರು.

ಪ್ರಮುಖರಾದ ಸೋಮಶೇಖರ ಮಠ, ದೇವೀಂದ್ರಪ್ಪ ಗಣಮುಖಿ, ಬಸಯ್ಯ ಸ್ವಾಮಿ ಹೊದಲೂರ, ಶ್ರೀಕಾಂತ ಪಾಟೀಲ ತಿಳಗೂಳ, ಎಂ.ಬಿ.ನಿಂಗಪ್ಪ, ಎಚ್.ಎಸ್‌.ಬರಗಾಲಿ, ಮಂಜುನಾಥ ಕಂಬಾಳಿಮಠ, ಬಿ.ಡಿ.ಕಲಬುರಗಿ, ಕಲ್ಯಾಣಕುಮಾರ ಶೀಲವಂತ, ಸಂದೀಪ ದೇಸಾಯಿ, ಸಂತೋಷ ಕುಡಳ್ಳಿ ಕಾಳಗಿ, ಪ್ರಭುಲಿಂಗ ಮೂಲಗೆ, ಶಿವಕವಿ ಹಿರೇಮಠ ಜೋಗೂರ, ರಾಜೇಂದ್ರ ತೆಗನೂರ. ಶಿವಲೀಲಾ ತೆಗನೂರ, ಭುವನೇಶ್ವರಿ ಹಳ್ಳಿಖೇಡ, ವಿನೋದ ಜೇನವೇರಿ, ಕಲ್ಯಾಣರಾವ ಪಾಟೀಲ, ಜಗದೀಶ ಮರಪಳ್ಳಿ ಮುಂತಾದವರು ಈ ಸಂದರ್ಭದಲ್ಲಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.