ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶ್ರಾವಣದ ಕೊನೆಯ ಸೋಮವಾರ: ದೇವಸ್ಥಾನಗಳಲ್ಲಿ ವಿಶೇಷ ಪೂಜೆ

ಜಿಟಿಜಿಟಿ ಮಳೆಯಲ್ಲೂ ಕುಗ್ಗದ ಭಕ್ತರ ಉತ್ಸಾಹ: ದೇವರಿಗೆ ಕಾಯಿ, ಕರ್ಪೂರ ಅರ್ಪಣೆ
Published 2 ಸೆಪ್ಟೆಂಬರ್ 2024, 16:20 IST
Last Updated 2 ಸೆಪ್ಟೆಂಬರ್ 2024, 16:20 IST
ಅಕ್ಷರ ಗಾತ್ರ

ಕಲಬುರಗಿ: ಶ್ರಾವಣ ಮಾಸದ ಕೊನೆಯ ಸೋಮವಾರ ಪ್ರಯುಕ್ತ ನಗರ ಸೇರಿದಂತೆ ಜಿಲ್ಲೆಯ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಅಭಿಷೇಕ, ಹೂವಿನ ಅಲಂಕಾರ, ಮಹಾಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ಸೋಮವಾರ ಬೆನಕನ ಅಮಾವಾಸ್ಯೆಯೂ ಇದ್ದ ಕಾರಣ ಭಕ್ತರು ಕುಟುಂಬ ಸಮೇತರಾಗಿ ದೇವಸ್ಥಾನಗಳಿಗೆ ತೆರಳಿದರು. ದೇವರ ಹೆಸರಿನಲ್ಲಿ ತೆಂಗಿನಕಾಯಿ ಒಡೆದು, ಕರ್ಪೂರ, ಊದಿನಕಡ್ಡಿ ಬೆಳಗಿದರು. ನೈವೇದ್ಯ, ಹಣ್ಣು ಅರ್ಪಿಸಿದರು. ಲೋಭಾನ ಹಾಕಿ, ಆರತಿ ಬೆಳಗಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ದೇವರಿಗೆ ಕೈಮುಗಿದರು. ಜಿಟಿಜಿಟಿ ಮಳೆ ಸುರಿದರೂ ದೇವಸ್ಥಾನಗಳಲ್ಲಿ ಭಕ್ತರ ದಂಡು ಕಂಡುಬಂತು.

‘ಕಲ್ಯಾಣ’ ನಾಡಿನ ಭಕ್ತರ ಆರಾಧ್ಯದೈವ ಶರಣಬಸವೇಶ್ವರ ದೇವಸ್ಥಾನ ಸೇರಿದಂತೆ ನಗರದ ಕೋರಂಟಿ ಹನುಮಾನ ದೇವಸ್ಥಾನ, ರಾಮಮಂದಿರ, ರಾಮತೀರ್ಥ ಮಂದಿರ, ಸಾಯಿಮಂದಿರ, ಗಣೇಶ ಮಂದಿರ, ರಾಯರ ಮಠ, ವಿವಿಧೆಡೆಯ ಆಂಜನೇಯ ದೇವಸ್ಥಾನ, ಈಶ್ವರ ದೇವಸ್ಥಾನ, ಸಿದ್ಧಿ ವಿನಾಯಕ, ಅಂಬಾಭವಾನಿ, ಯಲ್ಲಮ್ಮದೇವಿ ದೇವಸ್ಥಾನಗಳಲ್ಲಿ ಮಹಿಳೆಯರು, ಮಕ್ಕಳಾದಿಯಾಗಿ ಭಕ್ತರು ಪೂಜೆ ಸಲ್ಲಿಸಿದರು.

ಜಿಲ್ಲೆಯ ಪ್ರಮುಖವಾದ ಚಿತ್ತಾಪುರದ ನಾಗಾವಿ ಯಲ್ಲಮ್ಮ, ಹಲಕರ್ಟಿ ವೀರಭದ್ರೇಶ್ವರ, ನಾಲವಾರ ಕೋರಿಸಿದ್ಧೇಶ್ವರ ಮಠ, ಸನ್ನತಿ ಚಂದ್ರಲಾಪರಮೇಶ್ವರಿ, ದೇವಲಗಾಣಗಾಪುರದ ದತ್ತಾತ್ರೇಯ, ಕೋರವಾರ ಅಣಿವೀರಭದ್ರೇಶ್ವರ, ರಟಕಲ್‌ ರೇವಣಸಿದ್ದೇಶ್ವರ, ಜೇವರ್ಗಿಯ ಮಹಾಲಕ್ಷ್ಮಿ ದೇವಸ್ಥಾನ ಸೇರಿ ವಿವಿಧ ದೇವಸ್ಥಾಗಳಲ್ಲಿ ಭಕ್ತರು ತಂಡೋಪತಂಡವಾಗಿ ತೆರಳಿ ದರ್ಶನ ಪಡೆದರು.

ನಗರದ ವಿವಿಧೆಡೆ ಸಂಘ–ಸಂಸ್ಥೆಗಳು ಒಂದು ತಿಂಗಳ ಪರ್ಯಂತ ನಡೆಸಿಕೊಂಡು ಬಂದ ಪ್ರವಚನ ಕಾರ್ಯಕ್ರಮಗಳು ಸೋಮವಾರ ಬಹುತೇಕ ಸಮಾರೋಪಗೊಂಡವು.

ಶರಣಬಸವೇಶ್ವರರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು
ಶರಣಬಸವೇಶ್ವರರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು
ಕಲಬುರಗಿಯ ಶರಣಬಸವೇಶ್ವರ ದೇವಸ್ಥಾನ ಆವರಣದಲ್ಲಿ ಪುರುವಂತರು ಪ್ರದರ್ಶಿಸಿದ ನೃತ್ಯ ಪ್ರದರ್ಶನ ಗಮನ ಸೆಳೆಯಿತು
ಕಲಬುರಗಿಯ ಶರಣಬಸವೇಶ್ವರ ದೇವಸ್ಥಾನ ಆವರಣದಲ್ಲಿ ಪುರುವಂತರು ಪ್ರದರ್ಶಿಸಿದ ನೃತ್ಯ ಪ್ರದರ್ಶನ ಗಮನ ಸೆಳೆಯಿತು
ಕಲಬುರಗಿಯ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಿಂದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು
ಕಲಬುರಗಿಯ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಿಂದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು

ಅಪ್ಪನ ದರ್ಶನಕ್ಕೆ ಜನಸಾಗರ

ಶರಣಬಸವೇಶ್ವರ ದೇವಸ್ಥಾನ ಆವರಣದಲ್ಲಿ ಸೋಮವಾರ ಜನಸಾಗರವೇ ಕಂಡುಬಂತು. ಹರಕೆ ಹೊತ್ತ ಭಕ್ತರು ಪಾದಯಾತ್ರೆ ಮೂಲಕ ಬಂದಿದ್ದರು. ವಿವಿಧ ಜಿಲ್ಲೆಗಳ ಸಾವಿರಾರು ಭಕ್ತರು ಬೆಳಿಗ್ಗೆಯಿಂದಲೇ ದೇವಸ್ಥಾನಕ್ಕೆ ಆಗಮಿಸಿದರು. ಎರಡು ಸಾಲುಗಳಲ್ಲಿ ನಿಂತು ಗರ್ಭಗುಡಿಯಲ್ಲಿದ್ದ ಶರಣಬಸವೇಶ್ವರರ ದರ್ಶನ ಪಡೆದರು. ಸರತಿಯಲ್ಲಿ ನಿಲ್ಲಲು ಆಗದ ಕೆಲವರು ದೇವಸ್ಥಾನ ಕಟ್ಟೆಗೆ ಹಣೆಮಣಿದು ನಮಿಸಿದರು. ಪಲ್ಲಕ್ಕಿ ಉತ್ಸವ: ದೇವಸ್ಥಾನದಲ್ಲಿ ನಸುಕಿನ ಜಾವ ವಿಶೇಷ ಪೂಜೆ ಅಭಿಷೇಕ ಕೈಗೊಳ್ಳಲಾಯಿತು. ಇಳಿಸಂಜೆ ವೇಳೆ ದೇವಸ್ಥಾನ ಆವರಣದಲ್ಲಿ ಅಪಾರ ಭಕ್ತರ ಮಧ್ಯೆ ಪಲ್ಲಕ್ಕಿ ಉತ್ಸವ ಜರುಗಿತು. ಪುರವಂತರ ಕಲಾಸೇವೆ ಗಮನಸೆಳೆಯಿತು.

ಪ್ರಸಾದ ವ್ಯವಸ್ಥೆ

ಕಲಬುರಗಿ ನಗರ ಸೇರಿದಂತೆ ಜಿಲ್ಲೆಯ ಪ್ರಮುಖ ದೇವಸ್ಥಾನಗಳಲ್ಲಿ ಅನ್ನಸಾಂಬಾರು ಶಿರಾ ಹುಗ್ಗಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಶರಣಬಸವೇಶ್ವರ ದೇವಸ್ಥಾನದಲ್ಲಿ ಭಕ್ತರೇ ಮನೆಯಿಂದ ಬಗೆಬಗೆಯ ಪ್ರಸಾದ ಸಿದ್ಧಪಡಿಸಿಕೊಂಡು ಬಂದು ಹಂಚಿದರು. ಕೆಲವರು ಬಾಳೆಹಣ್ಣು ವಿತರಿಸುವುದು ಕಂಡುಬಂತು. ಸಂಘ–ಸಂಸ್ಥೆಗಳವರು ಟೆಂಟ್‌ ಹಾಕಿ ಪ್ರಸಾದ ವಿತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT