ಮಂಗಳವಾರ, ಮಾರ್ಚ್ 31, 2020
19 °C
ಮಾತೆ ಮಾಣಿಕೇಶ್ವರಿ ಅವರ ಅಂತಿಮ ಆಸೆ ಬಹಿರಂಗಪಡಿಸಿದ ಟ್ರಸ್ಟ್ ಕಾರ್ಯದರ್ಶಿ ಶಿವಯ್ಯಾ ಸ್ವಾಮಿ

ಶ್ರೀಶೈಲ ಮಲ್ಲಿಕಾರ್ಜುನನ ದರ್ಶನ ಬಯಸಿದ್ದ ಮಾತೆ

ಮನೋಜಕುಮಾರ್‌ ಗುದ್ದಿ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಸ್ವಯಂ ಸಾಧಕಿಯಾಗಿದ್ದ ಮಹಾಯೋಗಿನಿ ಅಮ್ಮನವರು ತಮ್ಮ ಕೊನೆಯ ದಿನಗಳಲ್ಲಿ ಶ್ರೀಶೈಲ ಮಲ್ಲಿಕಾರ್ಜುನನ ದರ್ಶನ ಪಡೆಯಬೇಕು ಎಂದು ಬಯಸಿದ್ದರು. ಅದಕ್ಕಾಗಿ ಏಪ್ರಿಲ್‌ 27ರಂದು ಹೆಲಿಕಾಪ್ಟರ್ ಮೂಲಕ ಕರೆದೊಯ್ಯಲು ಸಿದ್ಧತೆಯೂ ನಡೆದಿತ್ತು. ಆದರೆ, ಅಷ್ಟರಲ್ಲಿ ಅಮ್ಮ ಆ ಮಲ್ಲಿಕಾರ್ಜುನನಲ್ಲಿಯೇ ಲೀನವಾದರು’.

ಹೀಗೆ ಹೇಳುತ್ತಲೇ ಕಣ್ಣೀರಾದರು ಮಾತಾ ಆಶ್ರಮ ಟ್ರಸ್ಟ್‌ನ ಕಾರ್ಯದರ್ಶಿ ಶಿವಯ್ಯಾ ಸ್ವಾಮಿ.

ಸುಮಾರು 30 ವರ್ಷಗಳಿಂದ ಮಾತೆ ಮಾಣಿಕೇಶ್ವರಿ ಅವರ ಆಶ್ರಮದ ಮೇಲ್ವಿಚಾರಕರಾಗಿರುವ ಶಿವಯ್ಯಾ ಸ್ವಾಮಿ ಅವರ ಎದುರು ಕೆಲ ದಿನಗಳ ಹಿಂದೆ ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದರಂತೆ. ಅದಕ್ಕೆ ತಕ್ಷಣ ಒಪ್ಪಿ ಇಲ್ಲಿಂದ ಹೆಲಿಕಾಪ್ಟರ್‌ ಮೂಲಕ ಶ್ರೀಶೈಲಕ್ಕೆ ಕರೆದೊಯ್ಯುವ ಬಗ್ಗೆಯೂ ತೀರ್ಮಾನಿಸಲಾಗಿತ್ತು. ಪಂಚಕೋಟಿ ಲಿಂಗವನ್ನು ಆಶ್ರಮದಲ್ಲಿ ಸ್ಥಾಪಿಸಬೇಕು ಎಂಬ ಅವರ ಆಸೆ ಇದೀಗ ಈಡೇರುತ್ತಿದೆ. ಶೇ 50ರಷ್ಟು ಕೆಲಸ ಕಾರ್ಯಗಳು ಮುಗಿದಿದ್ದು, ಕೆಲ ದಿನಗಳಲ್ಲಿಯೇ ಭಕ್ತರ ಸಹಕಾರದಿಂದ ಪಂಚ ಕೋಟಿ ಲಿಂಗದ ಕನಸು ಸಾಕಾರಗೊಳ್ಳಲಿದೆ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಅಮ್ಮ ಅವರ ದಿನಚರಿಯನ್ನು ಬಿಚ್ಚಿಟ್ಟ ಅವರು, ‘ಮಾತೆ ಮಾಣಿಕಮ್ಮ ಯಾವಾಗಲೂ ಧ್ಯಾನದಲ್ಲಿ ಮುಳುಗಿರುತ್ತಿದ್ದರು. ದಿವ್ಯ ಶಕ್ತಿಯನ್ನು ಬಳಸಿಕೊಂಡು ಉಸಿರನ್ನು ನಿಯಂತ್ರಿಸುವುದನ್ನು ಅವರು ಅರಿತಿದ್ದರು. ನಸುಕಿನಲ್ಲಿಯೇ ಎದ್ದು ಧ್ಯಾನದಲ್ಲಿ ತೊಡಗಿದರೆಂದರೆ ಧ್ಯಾನದಿಂದ ವಾಪಸ್‌ ಯಾವಾಗ ಹೊರಬರುತ್ತಾರೆ ಎಂಬುದನ್ನು ಹೇಳಲು ಅಸಾಧ್ಯವಾಗುತ್ತಿತ್ತು. ಆಹಾರ, ನೀರನ್ನು ತ್ಯಜಿಸಿ ವರ್ಷಗಟ್ಟಲೇ ಬದುಕಿದ್ದ ವ್ಯಕ್ತಿಯನ್ನು ನನ್ನ ಜೀವಿತಾವಧಿಯಲ್ಲಿಯೇ ಕಂಡಿಲ್ಲ’ ಎಂದರು.

ಅಹಿಂಸಾ ಪರಮೋಧರ್ಮ ಎಂದು ಬೋಧಿಸಿದಂತೆಯೇ ಕೊನೆವರೆಗೂ ತಮ್ಮ ಭಕ್ತರಿಗೆ ಅದನ್ನೇ ಉಪದೇಶಿಸಿದರು. ಇವರ ಮಾತುಗಳಿಂದ ಪ್ರಭಾವಿತಗೊಂಡು ಸಾವಿರಾರು ಭಕ್ತರು ಪ್ರಾಣಿ ಹಿಂಸೆ ತ್ಯಜಿಸಿದರು. ಮಾಂಸಾಹಾರವನ್ನೂ ಬಿಟ್ಟರು. ಭಕ್ತರಿಗೆ ಸಾಕಷ್ಟು ಅನುಗ್ರಹ ನೀಡುತ್ತಿದ್ದ ಮಾತೆ ಯಾವುದೇ ಫಲಾಪೇಕ್ಷೆಯನ್ನು ಎಂದೂ ಬಯಸಿದವರಲ್ಲ. ಅವರ ಆಸಕ್ತಿಯ ಫಲವಾಗಿಯೇ ಇಂದು ಬಡಮಕ್ಕಳಿಗೆ ಶಿಕ್ಷಣ ದೊರೆಯುತ್ತಿದೆ. ಗೋಶಾಲೆ ತೆರೆಯಲಾಗಿದೆ. ಇದನ್ನು ಮುಂದುವರಿಸಿಕೊಂಡು ಹೋಗಲು ಟ್ರಸ್ಟ್‌ ಸಿದ್ಧವಾಗಿದೆ. ಮುಂದೆಯೂ ಭಕ್ತರು ಆಶ್ರಮಕ್ಕೆ ಬರುತ್ತಾ ಇರಬೇಕು. ಏಕೆಂದರೆ ಅಮ್ಮ ಎಲ್ಲಿಯೂ ಹೋಗಿಲ್ಲ. ಇಲ್ಲಿಯೇ ಸುತ್ತಾಡುತ್ತಿರುತ್ತಾರೆ. ಭಕ್ತರ ಬವಣೆಗಳಿಗೆ ಸ್ಪಂದಿಸುತ್ತಾರೆ ಎಂದು ಹೇಳಿದರು.

ಸೂರ್ಯನಂದಿ ಬೆಟ್ಟದತ್ತ ದೌಡು: ಮಾಧ್ಯಮಗಳ ಮೂಲಕ ಅಮ್ಮನವರು ಲಿಂಗೈಕ್ಯರಾದ ಮಾಹಿತಿ ಪಡೆದ ಅಪಾರ ಭಕ್ತರು ಬೆಳಿಗ್ಗೆಯಿಂದಲೇ ಮಾತಾ ಆಶ್ರಮಕ್ಕೆ ಕುಟುಂಬ ಸಮೇತರಾಗಿ ಬಂದು ದರ್ಶನ ಪಡೆದರು. ಪೊಲೀಸರು ಬ್ಯಾರಿಕೇಡ್‌ ಹಾಕಿ ಸಾಲಾಗಿ ಭಕ್ತರು ಪಾರ್ಥೀವ ಶರೀರದ ಬಳಿ ಬರಲು ಅವಕಾಶ ಮಾಡಿಕೊಟ್ಟರು. ನಂತರ ಅಲ್ಲಿಂದ ಪ್ರಸಾದ ಸ್ವೀಕರಿಸಲು ತೆರಳುವಂತೆ ವ್ಯವಸ್ಥೆ ಮಾಡಲಾಗಿತ್ತು. ನೂರಾರು ಭಕ್ತರು ಮಾಣಿಕೇಶ್ವರಿ ಅವರನ್ನು ಕಾಣುತ್ತಲೇ ಕಣ್ಣೀರುಗರೆದರು. ಸ್ವಯಂಸೇವಕರು ಅವರನ್ನು ಸಮಾಧಾನಪಡಿಸಿ ಮುಂದೆ ಕಳಿಸಿದರು.

ಹೆಚ್ಚುವರಿ ಎಸ್ಪಿ ಪ್ರಸನ್ನ ದೇಸಾಯಿ ನೇತೃತ್ವದಲ್ಲಿ ಶನಿವಾರ ರಾತ್ರಿಯಿಂದಲೇ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದೆ. ಕೆಎಸ್‌ಆರ್‌ಪಿ ತುಕಡಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು