ಬುಧವಾರ, ಏಪ್ರಿಲ್ 21, 2021
30 °C
ಸಿದ್ಧಗಂಗಾ ಶ್ರೀಗಳ 114ನೇ ಜನ್ಮ ದಿನ, ಗುರುವಂದನೆ, ಪ್ರಶಸ್ತಿ ಪ್ರದಾನ ಸಮಾರಂಭ

‘ಸಿದ್ಧಗಂಗಾ ಶ್ರೀ ಕಟ್ಟಿದ್ದು ಅದ್ಭುತ ಸಮಾಜ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಶಿಕ್ಷಣದ ಜತೆಗೆ ಸಂಸ್ಕಾರ ನೀಡಿದರೆ ನಾವು ಎಂಥ ಅದ್ಭುತ ಸಮಾಜ ಕಟ್ಟಬಹುದು ಎಂಬುದಕ್ಕೆ ತುಮಕೂರು ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರ ಕೆಲಸಗಳೇ ಸಾಕ್ಷಿ’ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಭಾರಿ ಕುಲಪತಿ ಮಲ್ಲಿಕಾರ್ಜುನ ಅಳಗವಾಡಿ ಹೇಳಿದರು.

ತುಮಕೂರು ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘ ಮತ್ತು ಜಿಲ್ಲಾ ವೀರಶೈವ ಸಮಾಜದ ವತಿಯಿಂದ ಸಿದ್ಧಗಂಗಾ ಶ್ರೀಗಳ 114ನೇ ಜನ್ಮ ದಿನದ ಅಂಗವಾಗಿ ನಗರದಲ್ಲಿ ಗುರುವಾರ ಏರ್ಪಡಿಸಿದ್ದ ಗುರುವಂದನಾ ಮತ್ತು ‘ಶಿವಕುಮಾರ ಶ್ರೀ’ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಸಿದ್ಧಗಂಗಾ ಸ್ವಾಮೀಜಿ ಕಾಯಕ, ದಾಸೋಹ, ಶಿಕ್ಷಣಕ್ಕೆ ನೀಡಿದ ಕೊಡುಗೆ ಅಪಾರ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದು, ಅವರ ತತ್ವಾದರ್ಶಗಳನ್ನು ಪಾಲಿಸುವ ಮೂಲಕ ಹೊಸ ಮಾಜ ನಿರ್ಮಿಸುವ ಕೆಲಸ ಮಾಡೋಣ’ ಎಂದೂ ಕರೆ ನೀಡಿದರು.

ಸಾನ್ನಿಧ್ಯ ವಹಿಸಿದ್ದ ಶ್ರೀಶೈಲ ಸಾರಂಗ ಮಠದ ಡಾ.ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ‘ಶಿವಕುಮಾರ ಸ್ವಾಮೀಜಿ ಆಧುನಿಕ ಬಸವಣ್ಣನ ಅವತಾರ. ಅನ್ನ ಅರಿವು– ದಸೋಹ– ಕಾಯಕ ಈ ಮೂರನ್ನೂ ಮಾಡಿಕೊಂಡು ಬಂದವರು. ನಾಡಿನಲ್ಲಿಯೇ ಅತಿ ಹೆಚ್ಚಿನ ಮಕ್ಕಳಿಗೆ ಶಿಕ್ಷಣ ಹಾಗೂ ಅನ್ನ ದಾಸೋಹ ವ್ಯವಸ್ಥೆ ಕಲ್ಪಿಸಿರುವ ಸ್ವಾಮೀಜಿಗಳಿಗೆ ಸರ್ಕಾರ ‘ಭಾರತ ರತ್ನ’ ನೀಡದಿರುವುದಕ್ಕೆ ಬೇಸರ ಪಡಬೇಕಿಲ್ಲ; ಏಕೆಂದರೆ ಅವರು ‘ವಿಶ್ವರತ್ನ’ ಆಗಿದ್ದಾರೆ. ಅವರ ಸಂಸ್ಥೆಗಳಲ್ಲಿ ಶಿಕ್ಷಣ ಕಲಿತರವರು ವಿಶ್ವದ ಮೂಲೆಮೂಲೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ’ ಎಂದರು.

ಹೈದರಾಬಾದ್‌ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಭೀಮಶಂಕರ ಬಿಲಗುಂದಿ ಅವರ ಪರವಾಗಿ ಅವರ ಪುತ್ರ ಸಂತೋಷ ಬಿಲಗುಂದಿ ಅವರಿಗೆ ‘ಸಿದ್ಧಗಂಗಾ ಶ್ರೀ’ ಪ್ರಶಸ್ತಿ ಹಾಗೂ ಸಮಾಜ ಸೇವೆ ಮಾಡಿದ ಕಲ್ಯಾಣಪ್ಪ ಪಾಟೀಲ ಮಳಖೇಡ ಅವರಿಗೆ ‘ಶಿವಕುಮಾರ ಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಎಚ್‍ಕೆಸಿಸಿಐ ನೂತನ ಅಧ್ಯಕ್ಷ ಪ್ರಶಾಂತ ಮಾನಕರ್, ಕಾರ್ಯದರ್ಶಿ ಶರಣು ಪಪ್ಪಾ,  ಎಚ್‍ಕೆಇ ಉಪಾಧ್ಯಕ್ಷ ಡಾ.ಎಸ್.ಆರ್. ಹರವಾಳ, ಸರ್ಕಾರಿ ನೌಕರರ ಗೃಹ ನಿರ್ಮಾಣ ಸಂಘದ ಅಧ್ಯಕ್ಷ ನಾಗಪ್ಪ ಹೊನ್ನಳ್ಳಿ, ರೋಟರಿ ಕ್ಲಬ್ ಶಾಲೆಯ ಆಡಳಿತ ಸಮಿತಿ ನೂತನ ಅಧ್ಯಕ್ಷರಾದ ಚಂದ್ರಶೇಖರ ತಳ್ಳಳ್ಳಿ ಸೇರಿದಂತೆ ನಾಲ್ಕು ಸಂಸ್ಥೆಗಳ ನೂತನ ಆಡಳಿತ ಮಂಡಳಿ ಸದಸ್ಯರನ್ನು ಮತ್ತು ಹಳೆಯ ವಿದ್ಯಾರ್ಥಿಗಳಾಗಿರುವ ಕೆಆರ್‌ಡಿಸಿಎಲ್ ಎಂಜಿನಿಯರ್ ಹಣಮಂತ ಗುತ್ತೇದಾರ, ಉದನೂರ ಗ್ರಾಮ ಪಂಚಾಯಿತಿ ಸದಸ್ಯ ಶಿವರಾಜ ಉದನೂರ, ಹೈನೋದ್ಯಮಿ ಸಿದ್ದು ಅವರನ್ನು ಸನ್ಮಾನಿಸಲಾಯಿತು. ನಂದಗೋಕುಲ ಮಕ್ಕಳಿಗೆ ಹಣ್ಣು ಮತ್ತು ನಗದು ವಿತರಿಸಿ ಗೌರವಿಸಲಾಯಿತು.

ಸಂಸ್ಥೆ ಅಧ್ಯಧ್ಯಕ್ಷ ಅರುಣಕುಮಾರ ಪಾಟೀಲ ಕೊಡಲಹಂಗರಗಾ ಅಧ್ಯಕ್ಷತೆ ವಹಿಸಿದ್ದರು. ವೀರಶೈವ ಸಮಾಜ ಕಾರ್ಯದರ್ಶಿ ಡಾ.ಶ್ರೀಶೈಲ ಘೂಳಿ, ಸಿದ್ಧಗಂಗಾ ಹಳೆಯ ವಿದ್ಯಾರ್ಥಿಗಳ ಸಂಘದ ಪ್ರಧಾನ ಕಾರ್ಯದರ್ಶಿ ದೇವೇಂದ್ರಪ್ಪ ಆವಂಟಿ, ಸಂಘದ ಪ್ರಮುಖ ಚನ್ನಬಸಯ್ಯ ಗುರುವಿನ, ಹಳೆಯ ವಿದ್ಯಾರ್ಥಿಗಳಾದ ಜಗದೇವಪ್ಪ ಹಲಕರ್ಟಿ, ರುದ್ರಮುನಿ ಪುರಾಣಿಕ, ಈಶ್ವರ ಪನಶೆಟ್ಟಿ, ಕರಬಸಯ್ಯ ಮರಪಳ್ಳಿ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.