‘ಕೃತಿ ಓದುವುದು ಬುದ್ಧಿ-ಭಾವಗಳ ಆಲಿಂಗನ’

7

‘ಕೃತಿ ಓದುವುದು ಬುದ್ಧಿ-ಭಾವಗಳ ಆಲಿಂಗನ’

Published:
Updated:
Deccan Herald

ಕಲಬುರ್ಗಿ: ‘ಒಂದು ಕೃತಿ ಓದುವುದೆಂದರೆ ಅಪರಿಚಿತ ವ್ಯಕ್ತಿಯನ್ನು ಭೇಟಿಯಾಗಿ ಮಾತನಾಡಿದಂತೆ. ಕುವೆಂಪು ಹೇಳುವಂತೆ ಅದೊಂದು ರೀತಿಯಲ್ಲಿ ಓದುಗರ ವಿಹಾರ ಯಾತ್ರೆ, ಬುದ್ಧಿ-ಭಾವಗಳ ಆಲಿಂಗನ’ ಎಂದು ಕವಯತ್ರಿ ಕಾವ್ಯಶ್ರೀ ಮಹಾಗಾಂವಕರ್ ಹೇಳಿದರು.

ಇಲ್ಲಿಯ ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಸಂಸ್ಥೆಯಿಂದ ಗುರುವಾರ ಆಯೋಜಿಸಿದ್ದ ಚಿಂತನ-ಮಂಥನ ಕಾರ್ಯಕ್ರಮದಲ್ಲಿ ಡಾ. ಮಧುಮಾಲಾ ಲಿಗಾಡೆ ಅವರ ‘ನೀಲಾಂಬರದಲ್ಲಿ ಲೀನ’ ಕಾದಂಬರಿ ಕುರಿತು ಅವರು ಮಾತನಾಡಿದರು.

‘12ನೇ ಶತಮಾನದ ಜನ ಜೀವನವನ್ನು ನಮ್ಮ ಕಣ್ಣೆದುರಿಗೆ ತಂದು ನಿಲ್ಲಿಸುವ ಕಾದಂಬರಿಕಾರರು ಓದುಗರ ಮನಸ್ಸು ಹದಗೊಳಿಸುವ ಕೆಲಸ ಮಾಡಿದ್ದಾರೆ. ಬಸವಣ್ಣನವರ ವಿಚಾರಪತ್ನಿಯಾಗಿದ್ದ ನೀಲಾಂಬಿಕೆಯನ್ನು ತಮ್ಮ ಕಾದಂಬರಿಯ ವಸ್ತುವನ್ನಾಗಿಸಿಕೊಂಡು ಹಲವು ಪಾತ್ರ, ವಿವಿಧ ಸನ್ನಿವೇಶ ಸೃಷ್ಟಿ ಮಾಡುವ ಮೂಲಕ ಓದುಗರಿಗೆ ಅತ್ಯಂತ ಆಪ್ತವಾಗುವಂತೆ ಚಿತ್ರಿಸಿದ್ದಾರೆ’ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಹಿರಿಯ ಸಾಹಿತಿ ಪ. ಮಾನು ಸಗರ ಮಾತನಾಡಿ, ಸಾಹಿತ್ಯ ಬಿತ್ತಿದರೆ ಬೀಜ. ತೂರಿದರೆ ರಾಶಿಯ ಕಣಜ. ಸೃಜನಶೀಲ ಸಾಹಿತ್ಯದಿಂದ ಮನಸ್ಸು ತಿಳಿಯಾಗುತ್ತದೆ. ಮನಸ್ಸಿನಲ್ಲಿ ಮನೆ ಮಾಡಿರುವ ಆತಂಕ, ದುಗುಡ ದೂರವಾಗುತ್ತವೆ. ಗಟ್ಟಿಯಾದ ಸಾಹಿತ್ಯ ಚಿರಸ್ಥಾಯಿಯಾಗಿರುತ್ತದೆ ಎಂದರು.

ಕಾದಂಬರಿಕಾರ್ತಿ ಡಾ. ಮಧುಮಾಲಾ ಲಿಗಾಡೆ ಮಾತನಾಡಿ, 12ನೇ ಶತಮಾನದ ಬಸವಾದಿ ಶರಣರ ವಚನಗಳನ್ನು ಆಧಾರವಾಗಿಟ್ಟುಕೊಂಡು ಕೃತಿ ರಚಿಸಲಾಗಿದ್ದು, ನೀಲಾಂಬಿಕೆಯ ಕೊನೆಯ ದಿನಗಳ ಸಂಕಟ, ತಳಮಳವೇ ಈ ಕೃತಿ ರಚನೆಗೆ ಪ್ರೇರಣೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಡಾ. ಚಿ.ಸಿ. ನಿಂಗಣ್ಣ ಮಾತನಾಡಿದರು. ಪ್ರಕಾಶಕ ಬಸವರಾಜ ಕೋನೆಕ್ ಸ್ವಾಗತಿಸಿದರು. ಸಂಚಾಲಕ ಡಾ. ಶ್ರೀಶೈಲ ನಾಗರಾಳ ನಿರೂಪಿಸಿದರು. ಡಾ.ಶರಣಬಸಪ್ಪ ವಡ್ಡನಕೇರಿ ವಂದಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !