ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯನವರಿಗೆ ಮತಿಭ್ರಮಣೆ: ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ

Last Updated 19 ಅಕ್ಟೋಬರ್ 2021, 4:08 IST
ಅಕ್ಷರ ಗಾತ್ರ

ಕಲಬುರಗಿ: ‘ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಆರ್‌ಎಸ್‌ಎಸ್‌ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಏಕ ವಚನದಲ್ಲಿ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರಿಗೆ ಮತಿಭ್ರಮಣೆ ಆಗಿರುವುದರಿಂದ ಹೀಗೆ ಮಾತನಾಡುತ್ತಿರಬಹುದು’ ಎಂದು ಬಿಜೆಪಿ ರಾಜ್ಯ ವಕ್ತಾರ, ಸೇಡಂ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಆರೋಪಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಧಿಕಾರವಿಲ್ಲದೆ ಕಾಂಗ್ರೆಸ್ ಪಕ್ಷದ ನಾಯಕರು ಹಪಹಪಿಸುತ್ತಿದ್ದಾರೆ. ಒಂದು ವೇಳೆ ಕಾಂಗ್ರೆಸ್ ನಾಯಕರ ಏಕ ವಚನದ ಹೇಳಿಕೆಗಳು ಮುಂದುವರೆದರೆ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಪಕ್ಷದ ನಾಯಕರ ಕಾರ್ಯಕ್ರಮಗಳಿಗೆ ಮುತ್ತಿಗೆ ಹಾಕಲಾಗುವುದು’ ಎಂದು ಎಚ್ಚರಿಸಿದರು.

‘ವಿಶ್ವದ ಅತಿ ದೊಡ್ಡ ಸಂಘಟನೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ. ಈ ಸಂಘಟನೆಯನ್ನು ದೇಶದ ಮೋದಲನೇ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರು ಗಣರಾಜ್ಯೋತ್ಸವ ಅಂಗವಾಗಿ ಪಥ ಸಂಚಲನ ಮಾಡಲು ಆಹ್ವಾನ ನೀಡಿದ್ದರು. ಆದರೆ ಅವರದೇ ಪಕ್ಷದ ನಾಯಕರು ಅಂತಹ ಸಂಘಟನೆ ಬಗ್ಗೆ ಈ ಪರಿಯಾಗಿ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಬೇಕು’ ಎಂದರು.

‘ಕಾಂಗ್ರೆಸ್ ಪಕ್ಷದ ನಾಯಕರು ಆರೆಸ್ಸೆಸ್ ಹಾಗೂ ಪ್ರಧಾನಿ ಬಗ್ಗೆ ಹಗುರವಾಗಿ ಮಾತನಾಡಿ ಅವರ ಪಕ್ಷದ ಆವನತಿಗೆ ಅವರೇ ಕಾರಣವಾಗುತ್ತಿದ್ದಾರೆ. ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಅಸ್ತಿತ್ವವನ್ನು ಕಳೆದುಕೊಂಡು ಅಧೋಗತಿಗೆ ತಲುಪಿದೆ. ಅಲ್ಪ ಸಂಖ್ಯಾತ, ಹಿಂದುಳಿದ ಹಾಗೂ ದಲಿತರ ವಿಶ್ವಾಸವನ್ನು ಈಗಾಗಲೇ ಕಳೆದುಕೊಂಡು ಹೀನಾಯ ಸ್ಥಿತಿಗೆ ತಲುಪಿದೆ. ಹೇಳಿಕೆ ಕೊಡುವಾಗ ನಾಲಿಗೆ ಮೇಲೆ ಹಿಡಿತ ಇಟ್ಟುಕೊಳ್ಳಬೇಕು’ ಎಂದು ಹೇಳಿದರು.

‘ಕಾಂಗ್ರೆಸ್ ಪಕ್ಷದಲ್ಲಿ ಈಗಾಗಲೇ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ ಅವರ ನಾಲ್ಕು ಬಣಗಳಾಗಿವೆ. ಅವರಲ್ಲೇ ಒಬ್ಬರ ಮೇಲೆ ಒಬ್ಬರಿಗೆ ಅಸಮಾಧಾನ ಇದೆ. ಹೀಗಾಗಿ ತಮ್ಮ ಮನೆಯ ಅಂಗಳವನ್ನು ಮೊದಲ ಸರಿಮಾಡಿಕೊಂಡು, ನಮ್ಮ ಅಂಗಳಕ್ಕೆ ಬರಲಿ’ ವ್ಯಂಗ್ಯವಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮಹಾನಗರ ಘಟಕದ ಅಧ್ಯಕ್ಷ ಸಿದ್ದಾಜಿ ಪಾಟೀಲ, ಶಿವರಾಜ ಪಾಟೀಲ, ಬಸವರಾಜ ಬೆಣ್ಣೂರ, ಶಿವಯೋಗಿ ರುಸ್ತಂಪುರ ಇದ್ದರು.

‘ಕಾಂಗ್ರೆಸ್ ಒತ್ತಡದಿಂದ ಇನ್‌ಸ್ಪೆಕ್ಟರ್ ಅಮಾನತು’

‘ಹಲ್ಲೆ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡರ ಒತ್ತಡಕ್ಕೆ ಮಣಿದು ಈಶಾನ್ಯ ವಲಯ ಐಜಿಪಿ ಮನೀಷ್ ಖರ್ಬೀಕರ್ ಅವರು ಮುಧೋಳ ಠಾಣೆ ಪೊಲೀಸ್‌ ಇನ್‌ಸ್ಪೆಕ್ಟರ್ ಆನಂದಕುಮಾರ್ ಅವರನ್ನು ಅಮಾನತು ಮಾಡಿದ್ದಾರೆ’ ಎಂದು ರಾಜಕುಮಾರ ಪಾಟೀಲ ತೆಲ್ಕೂರ ದೂರಿದರು.

ಈ ಪ್ರಕರಣದಲ್ಲಿ ಇನ್‌ಸ್ಪೆಕ್ಟರ್‌ ಅವರದ್ದು ಯಾವುದೇ ಲೋಪ ಇಲ್ಲ. ಆದರೆ, ಕಾಂಗ್ರೆಸ್ ಒತ್ತಡದಿಂದ ಐಜಿ ಮತ್ತು ಎಸ್ಪಿ ಇಬ್ಬರೂ ಶಾಮೀಲಾಗಿ ಅಮಾನತು ಮಾಡಿದ್ದಾರೆ ಎಂದರು.

‘ರಾಜಕಾರಣ ಮಾಡಲು ಕಾಂಗ್ರೆಸ್‌ಗೆ ಯಾವುದೇ ವಿಷಯಗಳು ಇಲ್ಲ. ಹೀಗಾಗಿ ಈ ಘಟನೆಯನ್ನು ದುರ್ಬಳಕೆ ಮಾಡಲು ಪ್ರಯತ್ನಿಸುತ್ತಿದೆ. ಹಲ್ಲೆಗೊಳಗಾದ ಯುವಕನಿಗೆ ಪೊಲೀಸ್ ಇಲಾಖೆ ತಕ್ಷಣವೇ ಸೂಕ್ತ ರಕ್ಷಣೆ ನೀಡಬೇಕು. ಇಲ್ಲವಾದಲ್ಲಿ ಆ ಯುವಕನನ್ನು ಕಾಂಗ್ರೆಸ್‌ನವರು ತಮ್ಮ ರಾಜಕೀಯಕ್ಕಾಗಿ ಸಾಯಿಸಿದರೂ ಸಾಯಿಸಬಹುದು’ ಎಂದು ಒತ್ತಾಯಿಸಿದರು.

‘ಮಾಜಿ ಸಚಿವ ಶರಣಪ್ರಕಾಶ ಪಾಟೀಲ ಸತ್ಯಹರಿಚಂದ್ರರೇ?, ಸೇಡಂನಲ್ಲಿ ಮಟಕಾ, ಕ್ಲಬ್‌ಗಳು ಆರಂಭವಾಗಿದ್ದೇ ಇವರ ಕಾಲದಲ್ಲಿ. ಈ ಹಿಂದೆ ಅವರ ಆಸ್ತಿ ಎಷ್ಟು ಇತ್ತು. ಈಗ ಎಷ್ಟಿದೆ ಎಂದು ಬಹಿರಂಗ ಪಡಿಸಲಿ’ ಎಂದು ಸವಾಲು ಹಾಕಿದರು. ‌

‘ನಾನು ರಸ್ತೆ ತಡೆ ಮಾಡಿಲ್ಲ. ನಾನು ಬರುವ ಮುಂಚೆಯೇ ಪ್ರತಿಭಟನೆ ಮಾಡಲಾಗುತ್ತಿತ್ತು. ನಾನು ಸ್ಥಳಕ್ಕೆ ಹೋಗಿದ್ದೆ ಅಷ್ಟೇ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT