ಕಲಬುರಗಿ: ಬಂದಾ ನವಾಜ್ ದರ್ಗಾಕ್ಕೆ ಸಿದ್ದರಾಮಯ್ಯ ಭೇಟಿ

ಕಲಬುರಗಿ: ಹಿಂದೂ–ಮುಸ್ಲಿಮರ ಭಾವೈಕ್ಯದ ಕೇಂದ್ರವಾದ ನಗರದ ಖಾಜಾ ಬಂದಾ ನವಾಜ್ ದರ್ಗಾಕ್ಕೆ ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಪ್ರಜಾಧ್ವನಿ ಯಾತ್ರೆ ಸಮಾವೇಶದ ಅಂಗವಾಗಿ ಜಿಲ್ಲಾ ಪ್ರವಾಸದಲ್ಲಿರುವ ಸಿದ್ದರಾಮಯ್ಯ ಅವರು ಬುಧವಾರ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿ, ಚಾದರ್ ಅರ್ಪಿಸಿ ಭಕ್ತಿ ಸಮರ್ಪಣೆ ಮಾಡಿದರು.
ಖಾಜಾ ಬಂದಾ ನವಾಜ್ ದರ್ಗಾ ಸರ್ವ ಧರ್ಮ ಸಮನ್ವಯದ ಅಸಂಖ್ಯಾತ ಭಕ್ತರ ಶ್ರದ್ಧಾ ಕೇಂದ್ರವಾಗಿದೆ. ರಾಜ್ಯದಲ್ಲಿ ಸಹೋದರತ್ವ, ಸುಖ, ಶಾಂತಿ ಹಾಗೂ ಸಮೃದ್ಧಿಗಾಗಿ ಪ್ರಾರ್ಥಿಸಿ, ಹೊರ ಬಂದ ಬಳಿಕ ದರ್ಗಾ ಆವರಣದಲ್ಲಿ ಸುತ್ತಾಡಿದರು. ಅಲ್ಲಿನ ಐತಿಹಾಸಿಕ ಕಟ್ಟಡಗಳ ಸೌಂದರ್ಯವನ್ನು ವೀಕ್ಷಿಸಿದರು.
ಶೇಖರೋಜಾದಲ್ಲಿರುವ ದರ್ಗಾಕ್ಕೂ ಭೇಟಿ, ಚಾದರ್ ಅರ್ಪಿಸಿದರು. ದರ್ಗಾದ ಮಹ್ಮದ್ ಅಲ್ ಅಲಿಹುಸೇನ್ ಮತ್ತು ಡಾ.ಮುಸ್ತಾ ಹುಸೇನ್ ಅವರು ಬರ ಮಾಡಿಕೊಂಡು ದರ್ಗಾ ಪರವಾಗಿ ಸನ್ಮಾನಿಸಿದರು.
ಬಳಿಕ ಮಾತನಾಡಿದ ಸಿದ್ದರಾಮಯ್ಯ, ‘ರಾಜ್ಯದ ಏಳು ಕೋಟಿ ಜನರ ಒಳಿತಿಗಾಗಿ ಎಲ್ಲ ಜಾತಿ, ಧರ್ಮದವರು ಸೌಹಾರ್ದತೆಯಿಂದ ಬಾಳುವ ವಾತಾವರಣ ಸೃಷ್ಟಿಯಾಗಲಿ. ಮುಂಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಲಭಿಸುವಂತೆ ಪ್ರಾರ್ಥಿಸಿದ್ದೇನೆ’ ಎಂದರು.
‘ಕಲಬುರಗಿಗೆ ಬಂದಾಗೊಮ್ಮೆ ದರ್ಗಾಕ್ಕೆ ಭೇಟಿ ನೀಡುವ ಸಂಪ್ರದಾಯವನ್ನು ಪಾಲಿಸಿಕೊಂಡು ಬರುತ್ತಿದ್ದೇನೆ. ಇಲ್ಲಿಗೆ ಭೇಟಿ ನೀಡಿದಾಗ ದರ್ಗಾ ಸಮಿತಿಯವರು ಹಾಗೂ ಸ್ಥಳೀಯರು ತೋರಿಸುವ ಪ್ರೀತಿ ವಿಶ್ವಾಸಕ್ಕೆ ಋಣಿಯಾಗಿದ್ದೇನೆ’ ಎಂದು ಹೇಳಿದರು.
ವಿಧಾನ ಪರಿಷತ್ ಪ್ರತಿಪಕ್ಷದ ಮುಖ್ಯ ಸಚೇತಕ ಪ್ರಕಾಶ ರಾಠೋಡ, ಶಾಸಕರಾದ ಜಮೀರ್ ಅಹಮದ್ ಖಾನ್, ಪ್ರಿಯಾಂಕ್ ಖರ್ಗೆ, ಖನೀಜ್ ಫಾತಿಮಾ, ಜಿಲ್ಲಾ ಘಟಕದ ಅಧ್ಯಕ್ಷ ಜಗದೇವ ಗುತ್ತೇದಾರ, ಯುವ ಮುಖಂಡ ಫರಾಜುಲ್ ಇಸ್ಲಾಂ, ಪಾಲಿಕೆ ಸದಸ್ಯರಾದ ಅಜೀಮ್ ಶಿರ್ನಿಫಿರೋಸ್, ಗೌಸ್ ಮತ್ತಿಮಡು, ಅಜ್ಮಲ್ ಗೋಲಾ, ತಾಹೇರ್ ಅಲಿ, ಪ್ರಮುಖರಾದ ಮಜರ್ ಅಲಿಖಾನ್, ಫಾರೂಕ್ ಮಣಿಯಾರ್, ಆದಿಲ್ ಸುಲೇಮಾನ್, ಅಬ್ದುಲ್‌ಖದೀರ್ ಚುಂಗೆ, ಆಸೀಮ್ ಹುಸೇನ್, ವಾಹೀದ್‌ಅಲಿ ಫಾತೆಖಾನಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.