ಬುಧವಾರ, ನವೆಂಬರ್ 25, 2020
18 °C
ನೆರೆ ಪೀಡಿತ ಪ್ರದೇಶಗಳಿಗೆ ಪ್ರತಿ ಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ

ನೆರೆ ಸಂತ್ರಸ್ತರ ಸಮಸ್ಯೆಗೆ ಸ್ಪಂದಿಸುವಲ್ಲಿ ಸರ್ಕಾರ ವಿಫಲ: ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜೇವರ್ಗಿ: ಕಲಬುರ್ಗಿ ಹಾಗೂ ವಿಜಯಪುರ ಜಿಲ್ಲೆಯಲ್ಲಿ ಭೀಮಾ ಪ್ರವಾಹದಿಂದ ಸಂಕಷ್ಟಕ್ಕೀಡಾಗಿರುವ ಜನರ ಸಮಸ್ಯೆಗೆ ಸ್ಪಂದಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

ತಾಲ್ಲೂಕಿನ ಪ್ರವಾಹಪೀಡಿತ ಕಟ್ಟಿಸಂಗಾವಿ ಗ್ರಾಮಕ್ಕೆ ಸೋಮವಾರ ಭೇಟಿ ನೀಡಿದ ಅವರು ನೆರೆ ಹಾವಳಿಯಿಂದ ಹಾನಿಗೀಡಾದ ಮನೆಗಳ ಹಾಗೂ ಬೆಳೆ ಪರಿಶೀಲನೆ ಮಾಡಿದ ನಂತರ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಭೀಮಾನದಿಗೆ 8.50 ಲಕ್ಷ ಕ್ಯೂಸೆಕ್ ನೀರು ಹರಿಬಿಟ್ಟ ಪರಿಣಾಮ ಜೇವರ್ಗಿ ಸೇರಿದಂತೆ ಕಲಬುರ್ಗಿ, ಅಫಜಲಪುರ ಹಾಗೂ ನೆರೆಯ ವಿಜಯಪುರ ಜಿಲ್ಲೆಯ ನೂರಾರು ಗ್ರಾಮಗಳು ಜಲಾವೃತಗೊಂಡು ಲಕ್ಷಾಂತರ ಹೆಕ್ಟೇರ್ ಜಮೀನಿನಲ್ಲಿ ಬೆಳೆ ಹಾಗೂ ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋಗಿ ರೈತಾಪಿ ವರ್ಗ ತೀವ್ರ ಸಂಕಷ್ಟದಲ್ಲಿದೆ. ಇತ್ತೀಚೆಗೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಕಂದಾಯ ಸಚಿವ ಆರ್.ಅಶೋಕ ಅವರು ಕಾಟಾಚಾರಕ್ಕೆ ಭೇಟಿ ನೀಡಿ ನೆರೆಪೀಡಿತರ ಸಂಕಷ್ಟ ಆಲಿಸದೇ ಹೋಗಿದ್ದಾರೆ ಎಂದು ದೂರಿದರು.

ನಿದ್ದೆಗಣ್ಣಿನಲ್ಲಿರುವ ಇಂತಹ ರೈತ ವಿರೋಧಿ ನೀತಿ ಸರ್ಕಾರಕ್ಕೆ ಕಣ್ಣು ತೆರೆಸಬೇಕಾಗಿದೆ. ಕಳೆದ ಎರಡು ದಿನಗಳಿಂದ ಈ ಭಾಗದ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೋಟ್ಯಾಂತರ ರೂಪಾಯಿ ಬೆಳೆ ಹಾಗೂ ಆಸ್ತಿ, ಪಾಸ್ತಿ ಹಾನಿಯಾಗಿದೆ. ರಾಜ್ಯ ಸರ್ಕಾರ ಕೂಡಲೇ ನೆರೆ ಸಂತ್ರಸ್ತರ ನೆರವಿಗೆ ಧಾವಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಒತ್ತಾಯಿಸಿದರು.

ಅತಿವೃಷ್ಟಿ ಹಾಗೂ ಪ್ರವಾಹದಿಂದ ಬೆಳೆ ಹಾನೀಗೀಡಾದ ರೈತರಿಗೆ ರಾಜ್ಯ ಸರ್ಕಾರ ಕೂಡಲೇ ಪರಿಹಾರ ವಿತರಿಸಬೇಕು. ಮನೆಗಳು ಹಾನಿಗೀಡಾದ ಕುಟುಂಬದ ಸದಸ್ಯರಿಗೆ ರಾಜ್ಯ ಸರ್ಕಾರದ ವಸತಿ ಯೋಜನೆ ಅಡಿಯಲ್ಲಿ ಮನೆಗಳನ್ನು ನಿರ್ಮಿಸಿಕೊಡಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

ಇದೇ ಸಂದರ್ಭದಲ್ಲಿ ಕಟ್ಟಿಸಂಗಾವಿ ಗ್ರಾಮದ ನೆರೆ ಸಂತ್ರಸ್ತರು ಪ್ರವಾಹದಿಂದ ಮುಳುಗಡೆಯಾದ ಕಟ್ಟಿಸಂಗಾವಿ ಗ್ರಾಮ ಸ್ಥಳಾಂತರಿಸಬೇಕು ಹಾಗೂ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜೇವರ್ಗಿ ಶಾಸಕ ಡಾ.ಅಜಯಸಿಂಗ್, ಅಫಜಲ್‍ಪುರ ಶಾಸಕ ಎಂ.ವೈ.ಪಾಟೀಲ, ಶಹಾಪುರ ಶಾಸಕ ಶರಣಬಸಪ್ಪಗೌಡ ದರ್ಶನಾಪುರ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಜಗದೇವ ಗುತ್ತೇದಾರ, ಮಾಜಿ ಶಾಸಕರಾದ ಅಲ್ಲಮಪ್ರಭು ಪಾಟೀಲ, ಬಿ.ಆರ್.ಪಾಟೀಲ, ತಿಪ್ಪಣ್ಣಪ್ಪ ಕಮಕನೂರ, ಜೇವರ್ಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ಧಲಿಂಗರೆಡ್ಡಿ ಇಟಗಿ, ಯಡ್ರಾಮಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರುಕುಂಪಟೇಲ ಇಜೇರಿ, ಮುಖಂಡರಾದ ರಾಜಶೇಖರ ಸೀರಿ, ನೀಲಕಂಠರಾವ ಮೂಲಗೆ, ಶಿವಣ್ಣಗೌಡ ಮಂದರವಾಡ, ಮಹಿಬೂಬಪಟೇಲ ಕೋಬಾಳ, ಶಿವಶರಣಪ್ಪ ಕೋಬಾಳ, ರುಕುಂ ಪಟೇಲ ಕೂಡಿ, ಗುರುಲಿಂಗಯ್ಯಸ್ವಾಮಿ ಯನಗುಂಟಿ, ಮುನ್ನಾಪಟೇಲ ಯಾಳವಾರ, ಕಾಶಿಂ ಪಟೇಲ ಮುದಬಾಳ, ಬಾಷಾ ಪಟೇಲ ಬಣಮಿ, ಮೈಲಾರಿ ಬಣಮಿ, ಮರೆಪ್ಪ ಸರಡಗಿ ಸೇರಿದಂತೆ ಕೂಡಿ, ಕೋಬಾಳ, ಮಂದ್ರವಾಡ, ಕೋನಾ ಹಿಪ್ಪರಗಾ ಗ್ರಾಮಸ್ಥರು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು