ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ ಸ್ಥಾನದ ಬರ ನೀಗಿಸಿದ ಖರ್ಗೆ–ಸಿದ್ದರಾಮಯ್ಯ

ಕಲ್ಯಾಣ ಕರ್ನಾಟಕದ ಎಂಟು ಜಿಲ್ಲೆಗಳಿಗೂ ಪ್ರಾತಿನಿಧ್ಯ; ಕಲಬುರಗಿ, ಬೀದರ್‌ಗೆ ಡಬಲ್ ಧಮಾಕಾ
Published 27 ಮೇ 2023, 16:22 IST
Last Updated 27 ಮೇ 2023, 16:22 IST
ಅಕ್ಷರ ಗಾತ್ರ

ಮನೋಜಕುಮಾರ್ ಗುದ್ದಿ

ಕಲಬುರಗಿ: ಹಿಂದಿನ ಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನವಿಲ್ಲದೇ ಅಭಿವೃದ್ಧಿಗೆ ಗರ ಬಡಿದಂತಿದ್ದ ಕಲ್ಯಾಣ ಕರ್ನಾಟಕಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಒತ್ತಾಸೆಯ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಭಾಗದ ಎಲ್ಲ ಜಿಲ್ಲೆಗಳಿಗೂ ಪ್ರಾತಿನಿಧ್ಯ ನೀಡುವ ಮೂಲಕ ಕಳೆದ ಸರ್ಕಾರದಲ್ಲಿ ಆಗಿದ್ದ ನಷ್ಟವನ್ನು ಭರ್ತಿ ಮಾಡುವ ಪ್ರಯತ್ನ ಮಾಡಿದ್ದಾರೆ.

ಕಲಬುರಗಿ, ಬೀದರ್ ಜಿಲ್ಲೆಗಳಿಗೆ ತಲಾ ಎರಡು ಸಚಿವ ಸ್ಥಾನಗಳನ್ನು ನೀಡುವ ಮೂಲಕ ಭರ್ಜರಿ ಉಡುಗೊರೆ ನೀಡಿದ್ದರೆ, ಯಾದಗಿರಿ, ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳಿಗೆ ತಲಾ ಒಂದೊಂದು ಸಚಿವ ಸ್ಥಾನ ನೀಡುವ ಮೂಲಕ ಅತಿ ಹೆಚ್ಚು ಶಾಸಕರನ್ನು ಆಯ್ಕೆ ಮಾಡಿದ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿ ಮೊದಲ ಬಾರಿಗೆ ಕಲಬುರಗಿಗೆ ಬಂದ ಬಳಿಕ ಕಾಂಗ್ರೆಸ್ ಬೃಹತ್ ಕಲ್ಯಾಣ ಕ್ರಾಂತಿ ಸಮಾವೇಶವನ್ನು ನಗರದ ಎನ್.ವಿ. ಮೈದಾನದಲ್ಲಿ ಆಯೋಜಿಸಿತ್ತು. ಅಂದಿನಿಂದಲೇ ಚುನಾವಣಾ ಸಿದ್ಧತೆಗೂ ಚಾಲನೆ ನೀಡಿದಂತಾಗಿತ್ತು. ಆ ಸಭೆಯಲ್ಲಿ ಮಾತನಾಡಿದ್ದ ಖರ್ಗೆ ಅವರು ನಮ್ಮ ಪಕ್ಷದ ಸರ್ಕಾರ ಬಂದರೆ ಸಂಪುಟದಲ್ಲಿ ಹೆಚ್ಚಿನ ಪ್ರಾತಿನಿಧ್ಯ ನೀಡುವುದರ ಜೊತೆಗೆ ಈ ಭಾಗದ ಸಮಗ್ರ ಅಭಿವೃದ್ಧಿಗೆ ವಿಶೇಷ ಕಾರ್ಯಕ್ರಮ ರೂಪಿಸಲಾಗುವುದು ಎಂದಿದ್ದರು. 

ಚುನಾವಣೆ ಘೋಷಣೆಯಾದ ಬಳಿಕ ತಮ್ಮ 80ರ ಇಳಿ ವಯಸ್ಸಿನಲ್ಲೂ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಸಂಚರಿಸಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದ ಖರ್ಗೆ ಅವರು ಒಂದು ಹಂತದಲ್ಲಿ ತಮ್ಮ ಪ್ರತಿಷ್ಠೆಯನ್ನೇ ಪಣಕ್ಕಿಟ್ಟಿದ್ದರು. ಈಗಾಗಲೇ 2019ರಲ್ಲಿ ನನ್ನನ್ನು ಒಂದು ಬಾರಿ ಸೋಲಿಸಿದ್ದೀರಿ. ಪಕ್ಷದ ಅಭ್ಯರ್ಥಿಗಳು ಸೋತರೆ ನಾನು ಮತ್ತೊಮ್ಮೆ ಸೋತಂತೆ ಎನ್ನುವ ಭಾವನಾತ್ಮಕ ಮಾತುಗಳನ್ನು ಆಡಿದ್ದರು. ಹೀಗಾಗಿ, ಕಲಬುರಗಿ, ಬೀದರ್, ಯಾದಗಿರಿ, ಕೊಪ್ಪಳ, ರಾಯಚೂರು, ಬಳ್ಳಾರಿ ಜಿಲ್ಲೆಗಳಲ್ಲಿ ಪಕ್ಷವು ಅಭೂತಪೂರ್ವ ಸಾಧನೆ ಮಾಡಿತ್ತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಮಾಣವಚನ ಸ್ವೀಕರಿಸಿದ ಸಂದರ್ಭದಲ್ಲಿ ಮೊದಲ ಹಂತದಲ್ಲಿಯೇ ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಅವರನ್ನು ಸಚಿವರನ್ನಾಗಿ ನೇಮಕ ಮಾಡಲಾಯಿತು. ಶನಿವಾರ ನಡೆದ ಎರಡನೇ ಹಂತದ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಬೀದರ್ ಜಿಲ್ಲೆ ಭಾಲ್ಕಿ ಶಾಸಕ ಈಶ್ವರ ಖಂಡ್ರೆ, ಬೀದರ್ ಶಾಸಕ ರಹೀಂ ಖಾನ್, ಕಲಬುರಗಿ ಜಿಲ್ಲೆಯ ಸೇಡಂ ಶಾಸಕ ಡಾ. ಶರಣಪ್ರಕಾಶ ಪಾಟೀಲ, ಯಾದಗಿರಿ ಜಿಲ್ಲೆ ಶಹಾಪುರ ಶಾಸಕ ಶರಣಬಸಪ್ಪ ದರ್ಶನಾಪುರ, ರಾಯಚೂರಿನ ಎನ್.ಎಸ್. ಬೋಸರಾಜು, ಕೊಪ್ಪಳ ಜಿಲ್ಲೆ ಕನಕಗಿರಿ ಕ್ಷೇತ್ರದ ಶಿವರಾಜ ತಂಗಡಗಿ ಹಾಗೂ ಬಳ್ಳಾರಿ ಗ್ರಾಮೀಣ ಶಾಸಕ ಬಿ. ನಾಗೇಂದ್ರ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ.

ಬಿಜೆಪಿಯಲ್ಲಿ ಇಬ್ಬರಿಗಷ್ಟೇ ಸಚಿವ ಸ್ಥಾನ: ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಕಲ್ಯಾಣ ಕರ್ನಾಟಕದ ಇಬ್ಬರಿಗಷ್ಟೇ ಸಂಪುಟದಲ್ಲಿ ಸ್ಥಾನ ನೀಡಲಾಗಿತ್ತು. ಸ್ವತಃ ಐದು ಶಾಸಕರನ್ನು ನೀಡಿದ್ದ, ವಿಭಾಗೀಯ ಕೇಂದ್ರ ಕಲಬುರಗಿ ಜಿಲ್ಲೆಯಲ್ಲಿ ಒಬ್ಬರಿಗೂ ಸಚಿವ ಸ್ಥಾನ ನೀಡಿರಲಿಲ್ಲ.

ಬೀದರ್ ಜಿಲ್ಲೆ ಔರಾದ್ ಕ್ಷೇತ್ರದ ಪ್ರಭು ಚವ್ಹಾಣ ಹಾಗೂ ವಿಜಯ ನಗರ ಶಾಸಕ ಆನಂದ್ ಸಿಂಗ್ ಅವರಿಗೆ ಮಾತ್ರ ಸಂಪುಟದಲ್ಲಿ ಸ್ಥಾನ ನೀಡಲಾಗಿತ್ತು. ಹೀಗಾಗಿ, ಕಲಬುರಗಿ, ಯಾದಗಿರಿ, ಕೊಪ್ಪಳ, ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆಗಳು ಪ್ರಾತಿನಿಧ್ಯವಿಲ್ಲದೇ ಸೊರಗಿದ್ದವು. ಇಬ್ಬರು ಸಚಿವರಿಗೂ ತಮ್ಮ ಜಿಲ್ಲೆಯ ಉಸ್ತುವಾರಿ ಬದಲು ಬೇರೆ ಜಿಲ್ಲೆಗಳ ಉಸ್ತುವಾರಿ ನೀಡಲಾಗಿತ್ತು. ಇದರಿಂದಾಗಿ ಅಭಿವೃದ್ಧಿ ಕೆಲಸಗಳ ಬಗ್ಗೆ ಯಾವ ಆಸಕ್ತಿಯೂ ಇರಲಿಲ್ಲ ಎಂಬ ಆರೋಪಗಳು ಕೇಳಿ ಬಂದಿದ್ದವು.

ಕಲಬುರಗಿ ಜಿಲ್ಲೆಗೆ ಬಿಜೆಪಿ ಸರ್ಕಾರದ ಅವಧಿ ಮುಗಿಯುವುದರೊಳಗಾಗಿ ಗೋವಿಂದ ಕಾರಜೋಳ ಹಾಗೂ ಮುರುಗೇಶ ನಿರಾಣಿ ಹೀಗೆ ಇಬ್ಬರು ಸಚಿವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಲಾಗಿತ್ತು. ಸಕಾಲಕ್ಕೆ ಕೆಡಿಪಿ ಸಭೆ, ಪ್ರಗತಿ ಪರಿಶೀಲನಾ ಸಭೆ ನಡೆಯದ ಕಾರಣ ಅಭಿವೃದ್ಧಿ ಕುಂಠಿತಗೊಂಡಿತ್ತು.

ಸಿದ್ದರಾಮಯ್ಯ
ಸಿದ್ದರಾಮಯ್ಯ

ಸಚಿವರ ಎದುರು ಬೆಟ್ಟದಷ್ಟು ಸವಾಲು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವ ಸಚಿವರ ಎದುರು ಸಾಕಷ್ಟು ಸವಾಲುಗಳೂ ಇವೆ. ಮುಖ್ಯವಾಗಿ ಈ ಭಾಗದ ಕಾಮಧೇನು ಎನಿಸಿರುವ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಹೆಚ್ಚುವರಿ ಅನುದಾನವನ್ನು ಬಿಡುಗಡೆ ಮಾಡಿಸಿ ಅಭಿವೃದ್ಧಿ ಕಾರ್ಯಗಳನ್ನು ಚುರುಕಿನಿಂಡ ನಡೆಸಬೇಕಿದೆ. ಸಚಿವರಾಗಿರುವ ಡಾ. ಶರಣಪ್ರಕಾಶ ಪಾಟೀಲ ಹಾಗೂ ಎನ್.ಎಸ್. ಬೋಸರಾಜು ಅವರು ಮೊದಲು ಎಚ್‌ಕೆಆರ್‌ಡಿಬಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅನುಭವ ಉಳ್ಳವರು. ಮಂಡಳಿಗೆ ಜಿಲ್ಲೆಯಲ್ಲಿ ಪ್ರತ್ಯೇಕ ಎಂಜಿನಿಯರಿಂಗ್ ವಿಭಾಗ ಇಲ್ಲದೇ ಇರುವುದರಿಂದ ಸಕಾಲಕ್ಕೆ ಕಾಮಗಾರಿಗಳು ಮುಗಿಯುತ್ತಿಲ್ಲ. ಹೀಗಾಗಿ ತುರ್ತಾಗಿ ಎಂಜಿನಿಯರಿಂಗ್ ವಿಭಾಗವನ್ನು ರಚಿಸಲು ಕ್ರಮ ಕೈಗೊಳ್ಳಬೇಕಿದೆ. ಮಂಡಳಿಯ ಅಧ್ಯಕ್ಷರು ಹಾಗೂ ಸದಸ್ಯರನ್ನು ತಕ್ಷಣ ನೇಮಕ ಮಾಡುವಂತೆ ಸರ್ಕಾರದ ಮೇಲೆ ಒಟ್ಟಾಗಿ ಒತ್ತಡ ಹೇರಬೇಕಿದೆ. ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರು ಮಂಡಳಿಗೆ ಬಜೆಟ್‌ನಲ್ಲಿ ₹ 5 ಸಾವಿರ ಕೋಟಿ ಘೋಷಿಸಿದ್ದರು. ಆದರೆ ₹ 3 ಸಾವಿರ ಕೋಟಿಗೆ ಮಾತ್ರ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಹೀಗಾಗಿ ಉಳಿದ ಹಣವನ್ನು ಬಿಡುಗಡೆಗೊಳಿಸಲು ತಮ್ಮದೇ ಸರ್ಕಾರದ ಮನವೊಲಿಸಬೇಕಿದೆ. ಕಲಬುರಗಿ ಮಹಾನಗರ ಪಾಲಿಕೆ ಇತ್ತೀಚೆಗಷ್ಟೇ ಅಸ್ತಿತ್ವಕ್ಕೆ ಬಂದಿದ್ದು ಪಾಲಿಕೆಗೆ ಹೆಚ್ಚಿನ ಆರ್ಥಿಕ ಸಂಪನ್ಮೂಲವನ್ನು ಒದಗಿಸುವ ಮೂಲಕ ನಗರದ ಸಮಗ್ರ ಅಭಿವೃದ್ಧಿ ಮಾಡುವ ಸವಾಲು ಡಾ. ಶರಣಪ್ರಕಾಶ ಪಾಟೀಲ ಹಾಗೂ ಪ್ರಿಯಾಂಕ್ ಖರ್ಗೆ ಅವರ ಮೇಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT