ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ಧಸಿರಿ ಇಥೆನಾಲ್ ಕಾರ್ಖಾನೆಗೆ ಪೂಜೆ 22ಕ್ಕೆ

ವಿಜಯಪುರ ಶಾಸಕ, ಸಿದ್ಧಸಿರಿ ಸೌಹಾರ್ದ ಸಹಕಾರಿ ಅಧ್ಯಕ್ಷ ಬಸನಗೌಡ ಪಾಟೀಲ ಯತ್ನಾಳ
Last Updated 16 ನವೆಂಬರ್ 2021, 16:37 IST
ಅಕ್ಷರ ಗಾತ್ರ

ಕಲಬುರಗಿ: ಜಿಲ್ಲೆಯ ಚಿಂಚೋಳಿಯಲ್ಲಿ ಸಿದ್ಧಸಿರಿ ಇಥೆನಾಲ್ ಹಾಗೂ ಪವರ್ ವಿಭಾಗದ ಪರಿವರ್ತಿತ ಕಾರ್ಖಾನೆಯ ವಾಸ್ತು ಪೂಜೆ, ಯಂತ್ರೋಪಕರಣಗಳು ಜೋಡಣಾ ಕಾರ್ಯಾರಂಭ ಹಾಗೂ ಸಿದ್ಧಸಿರಿ ಸಹಕಾರ ಸಂಸ್ಥೆಯ 136ನೇ ಶಾಖೆಯ ಉದ್ಘಾಟನಾ ಸಮಾರಂಭವನ್ನು ಇದೇ 22ರಂದು ಆಯೋಜಿಸಲಾಗಿದೆ ಎಂದು ವಿಜಯಪುರ ಶಾಸಕ ಹಾಗೂ ಸಿದ್ಧಸಿರಿ ಸೌಹಾರ್ದ ಸಹಕಾರಿ ಅಧ್ಯಕ್ಷ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚಿಂಚೋಳಿ ಷುಗರ್ಸ್‌ ಎಂದು ಕರೆಯಲಾಗುತ್ತಿದ್ದ ಸಕ್ಕರೆ ಕಾರ್ಖಾನೆ ಹಲವು ವರ್ಷಗಳಿಂದ ಮುಚ್ಚಿ ಹೋಗಿತ್ತು. ಅದನ್ನು ನಮ್ಮ ಸಂಸ್ಥೆ ₹ 37.46 ಕೋಟಿಗೆ ಖರೀದಿ ಮಾಡಿದೆ. ಮುಂದಿನ 11 ತಿಂಗಳೊಳಗಾಗಿ ಕಾರ್ಖಾನೆಯಲ್ಲಿ ಕಬ್ಬು ಅರೆಯಲು ಶುರು ಮಾಡುತ್ತೇವೆ. ಕಾರ್ಖಾನೆಗೆ ಸುಮಾರು 6ರಿಂದ 7 ಲಕ್ಷ ಟನ್ ಕಬ್ಬು ಬೇಕಾಗುತ್ತದೆ. ನಿತ್ಯ 5 ಸಾವಿರ ಟನ್ ಕಬ್ಬು ಅರೆಯಲಾಗುತ್ತದೆ. ಕೃಷಿ ಅಧಿಕಾರಿಗಳ ಸಹಯೋಗದಲ್ಲಿ ರೈತರು ಉತ್ತಮ ಗುಣಮಟ್ಟದ ಕಬ್ಬಿನ ಬೀಜಗಳನ್ನು ಖರೀದಿಸಲು ನೆರವಾಗುತ್ತೇವೆ. ಕಾರ್ಖಾನೆ ಆರಂಭದಿಂದಾಗಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ 10 ಸಾವಿರ ಜನರಿಗೆ ಉದ್ಯೋಗ ದೊರೆಯಲಿದೆ’ ಎಂದು ಹೇಳಿದರು.

‘ಈ ಭಾಗದ ಜನರು ಸಾಕಷ್ಟು ಶ್ರಮಜೀವಿಗಳಿದ್ದು, ಅವರ ಜೀವನ ಮಟ್ಟ ಸುಧಾರಿಸಿದರೆ ನಮಗೆ ಖುಷಿಯಾಗುತ್ತದೆ. ಕಾರ್ಖಾನೆಯಲ್ಲಿ ಕಬ್ಬು ಅರೆಯುವ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಹೆಚ್ಚು ಇಥೆನಾಲ್‌ ತಯಾರಿಸಲಾಗುವುದು. ಇದನ್ನು ಇಂಧನಕ್ಕೆ ಸೇರ್ಪಡೆ ಮಾಡಿದರೆ ರೈತರಿಗೆ ಉತ್ತಮ ಬೆಲೆ ದೊರೆಯಲಿದೆ’ ಎಂದರು.

‌‘ಮುಂದಿನ ದಿನಗಳಲ್ಲಿ ಸಿದ್ಧಸಿರಿ ಸಂಸ್ಥೆಯಿಂದ ಚಿಂಚೋಳಿಯಲ್ಲಿ ಸೂಪರ್ ಮಾರ್ಕೆಟ್, ಪಬ್ಲಿಕ್‌ ಸ್ಕೂಲ್‌ ಆರಂಭಿಸಲಾಗುವುದು. ವಿಜಯಪುರದಲ್ಲಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಸಿದ್ಧಸಿರಿ ಬ್ಯಾಂಕ್ ಶಾಖೆಯನ್ನು ಆರಂಭಿಸಿದ್ದು, ಇದಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಅದೇ ಮಾದರಿಯ ಶಾಖೆಯನ್ನು ಕಲಬುರಗಿ ಜಿಲ್ಲೆಗೂ ವಿಸ್ತರಿಸುವ ಚಿಂತನೆ ಇದೆ. ಕಲಬುರಗಿ ನಗರದಲ್ಲಿ ಐದು ಶಾಖೆಗಳಿದ್ದು, ಜೇವರ್ಗಿಯಲ್ಲಿ ಒಂದು ಶಾಖೆ ಹಾಗೂ ಸೂಪರ್‌ ಮಾರ್ಕೆಟ್‌ ₹ 1.5 ಕೋಟಿ ವೆಚ್ಚದಲ್ಲಿ ಸ್ವಂತ ಕಟ್ಟಡದಲ್ಲಿ ಆರಂಭಿಸಿದ್ದೇವೆ’ ಎಂದು ಅವರು ಹೇಳಿದರು.

22ರಂದು ಬೆಳಿಗ್ಗೆ 10ಕ್ಕೆ ಚಿಂಚೋಳಿಯಲ್ಲಿ ಸಿದ್ಧಸಿರಿ ಸೌಹಾರ್ದ ಸಹಕಾರಿ ಸಂಘದ ನೂತನ ಶಾಖೆಯನ್ನು ಹಾರಕೂಡ ಸಂಸ್ಥಾನ ಹಿರೇಮಠದ ಡಾ. ಚನ್ನವೀರ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಸಂಸದ ಡಾ. ಉಮೇಶ ಜಾಧವ ಉದ್ಘಾಟಿಸುವರು. ಬೆಳಿಗ್ಗೆ 11ಕ್ಕೆ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಇಥೆನಾಲ್ ಹಾಗೂ ಪವರ್ ವಿಭಾಗದ ವಾಸ್ತು ಪೂಜೆ ಮತ್ತು ಯಂತ್ರೋಪಕರಣಗಳ ಜೋಡಣಾ ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ, ಕೇಂದ್ರ ಸಚಿವ ಭಗವಂತ ಖೂಬಾ, ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಶಾಸಕರಾದ ಡಾ. ಅವಿನಾಶ ಜಾಧವ, ರಾಜಕುಮಾರ ಪಾಟೀಲ ತೆಲ್ಕೂರ, ಭಾಲ್ಕೇಶ್ವರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಪ್ರಕಾಶ ಖಂಡ್ರೆ ಭಾಗವಹಿಸುವರು ಎಂದರು.

ಸಾನ್ನಿಧ್ಯವನ್ನು ಬೀದರ್ ಗುಂಪಾ ಮಠದ ಡಾ. ಶಿವಕುಮಾರ ಸ್ವಾಮೀಜಿ, ಜಿಡಗಾ ಮಠದ ಡಾ. ಮುರುಘರಾಜೇಂದ್ರ ಸ್ವಾಮೀಜಿ, ಡಾ. ಚನ್ನವೀರ ಶಿವಾಚಾರ್ಯರು ವಹಿಸುವರು ಎಂದು ಹೇಳಿದರು.

ಆಡಳಿತ ಮಂಡಳಿ ನಿರ್ದೇಶಕರಾದ ಜಗದೀಶ ಕ್ಷತ್ರಿ, ಪ್ರಭುಗೌಡ ದೇಸಾಯಿ ಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT