ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂಚೋಳಿ: ಹೆದ್ದಾರಿಗಳ ಅಭಿವೃದ್ಧಿಗೆ ₹ 67 ಕೋಟಿ

Last Updated 25 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಚಿಂಚೋಳಿ: ತಾಲ್ಲೂಕಿನಲ್ಲಿ ನನೆಗುದಿಗೆ ಬಿದ್ದಿದ್ದ ರಾಜ್ಯ ಹೆದ್ದಾರಿಗಳ ಅಭಿವೃದ್ಧಿಗೆ ಕಾಲಕೂಡಿ ಬಂದಿದ್ದು ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ₹67 ಕೋಟಿ ಮಂಜೂರಾಗಿದೆ.

ಚಿಂಚೋಳಿ– ತಾಂಡೂರು ಅಂತರ ರಾಜ್ಯ ರಸ್ತೆ ಅಭಿವೃದ್ಧಿಗೆ ₹3.09 ಕೋಟಿ ಮಂಜೂರು ಮಾಡಿದ್ದು ಈಗಾಗಲೇ 6.6 ಕಿ.ಮೀ ರಸ್ತೆ ಡಾಂಬರೀಕರಣ ಪೂರ್ಣಗೊಳಿಸಲಾಗಿದೆ.

ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಚಿಂಚೋಳಿಯ ಬಸವೇಶ್ವರ ವೃತ್ತದಿಂದ ಕುಂಚಾವರಂ ಕ್ರಾಸ್‌ವರೆಗೆ ರಸ್ತೆ ಅಭಿವೃದ್ಧಿಗೆ ₹4 ಕೋಟಿ ಮಂಜೂರಾಗಿದ್ದು ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಕಾಮಗಾರಿ ಪ್ರಾರಂಭವಾಗಬೇಕಿದೆ.

ಚಿಂಚೋಳಿ ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಸಕ್ಕರೆ ಕಾರ್ಖಾನೆವರೆಗಿನ ರಸ್ತೆಯನ್ನು ₹3.09 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದ್ದು ಕಾಮಗಾರಿ ಮುಕ್ತಾಯದ ಹಂತದಲ್ಲಿದೆ ಎಂದು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಗುರುರಾಜ ಜೋಷಿ ‘ಪ್ರಜಾವಾಣಿ’ಗೆ ತಿಳಿಸಿದರು.

ಅಪೆಂಡಿಕ್ಸ್-ಇ ಅಡಿಯಲ್ಲಿ ಕೈಗೆತ್ತಿಕೊಂಡ ಫಿರೋಜಾಬಾದ– ಕಮಲಾಪುರ ರಾಜ್ಯ ಹೆದ್ದಾರಿ– 125ರಲ್ಲಿ ಚಂದನಕೇರಾ– ಚೇಂಗಟಾ ರಸ್ತೆಗೆ ₹16 ಕೋಟಿ, ರಾಜ್ಯ ಹೆದ್ದಾರಿ– 122ಕ್ಕೆ ಸೇರಿದ ಕುಸ್ರಂಪಳ್ಳಿ ಗಡಿಯಿಂದ ಕೊಳ್ಳೂರು ಕ್ರಾಸ್‌ವರೆಗಿನ ರಸ್ತೆ ಅಭಿವೃದ್ಧಿಗೆ ₹5 ಕೋಟಿ, ರಾಜ್ಯ ಹೆದ್ದಾರಿ– 75ಕ್ಕೆ ಸೇರಿದ ಚನ್ನೂರು ಬಳಿ ರಸ್ತೆ ಸುಧಾರಣೆಗೆ ₹1.4 ಕೋಟಿ, ತಾಲ್ಲೂಕಿನ ಶಾದಿಪುರ ಬಳಿ ಬಾಕಿ ಉಳಿದಿದ್ದ 2 ಕಿ.ಮೀ ರಸ್ತೆಗೆ ₹2.5 ಕೋಟಿ ಮಂಜೂರಾಗಿದ್ದು ಕಾಮಗಾರಿ ನಡೆಯುತ್ತಿದೆ ಎಂದರು.

ರಾಜ್ಯ ಹೆದ್ದಾರಿಗಳ ಜತೆಗೆ ಜಿಲ್ಲಾ ಮುಖ್ಯ ರಸ್ತೆಗಳಿಗೂ ಶುಕ್ರದೆಸೆ ಆರಂಭವಾಗಿದೆ. ಇವುಗಳ ಸುಧಾರಣೆಗೆ ₹5.10 ಕೋಟಿ ಮಂಜೂರಾಗಿದೆ. ಚಿಂಚೋಳಿಯ ಚಂದಾಪುರದಲ್ಲಿ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಆಸ್ಪತ್ರೆಯಿಂದ ಗಾಂಧಿ ವೃತ್ತದವರೆಗೆ ₹2.5 ಕೋಟಿ ಮಂಜೂರು ಮಾಡಲಾಗಿದೆ. ರಾಜ್ಯ ಹೆದ್ದಾರಿ–149ರಲ್ಲಿ ಶಹಾಪುರ– ಶಿವರಾಂಪುರ ಹಾಗೂ ರಾಜ್ಯ ಹೆದ್ದಾರಿ–75ರಲ್ಲಿ ವಿವಿಧೆಡೆ ಸೇತುವೆಗಳ ನಿರ್ಮಾಣಕ್ಕೆ ₹2.6 ಕೋಟಿ ಮಂಜೂರಾಗಿದೆ ಎಂದು ವಿವರಿಸಿದರು.

ವಿಶೇಷ ಅಭಿವೃದ್ಧಿ ಕಾಮಗಾರಿಗಳನ್ನು ₹8.36 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಇವುಗಳಲ್ಲಿ 2 ಕಾಮಗಾರಿ ಪೂರ್ಣಗೊಂಡಿದ್ದು ಉಳಿದ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದರು.

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಡಿಯಲ್ಲಿ ₹11.12 ಕೋಟಿ ಮಂಜೂರಾಗಿದೆ. 13 ಕಾಮಗಾರಿಗಳು ಅಂತಿಮ ಹಂತದಲ್ಲಿವೆ. ಕೆಕೆಡಿಬಿಯ 2019-20ನೇ ಸಾಲಿನ ₹7.5 ಕೋಟಿ ಮೊತ್ತದ ಕಾಮಗಾರಿ ಟೆಂಡರ್ ಪ್ರಕ್ರಿಯೆಯಲ್ಲಿವೆ. ಡಿಎಂಎಫ್ ಯೋಜನೆ ಅಡಿಯಲ್ಲಿ ₹1.40 ಕೋಟಿ ಮತ್ತು ಸಮಾಜ ಕಲ್ಯಾಣ ಇಲಾಖೆಯ ಎಸ್‌ಸಿಪಿ ಟಿಎಸ್‌ಪಿ ಅಡಿಯಲ್ಲಿ ಮೂಲಸೌಕರ್ಯಗಳಿಗಾಗಿ ₹1.40 ಕೋಟಿ ಮಂಜೂರಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT