ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳೆಗೇರಿ ಪ್ರದೇಶದಲ್ಲಿ ಬದುಕುವುದೇ ಸಾಹಸ

ಮೂಲಸೌಕರ್ಯವಿಲ್ಲದೇ ಒಂದೊಂದು ದಿನ ಕಳೆಯೋದು ಕಷ್ಟ
Last Updated 11 ನವೆಂಬರ್ 2019, 9:43 IST
ಅಕ್ಷರ ಗಾತ್ರ

ಕಲಬುರ್ಗಿ: ಕತ್ತಲಲ್ಲೇ ಬದುಕು ಸಾಗಿಸುವ ಜನ, ಒಳ ಚರಂಡಿ ಇಲ್ಲದೆ ಮನೆಯಲ್ಲಿ ನುಗ್ಗುವ ನೀರು, ಎಲ್ಲಿ ಬೇಕೆಂದಲ್ಲಿ ತ್ಯಾಜ್ಯ ರಾಶಿ, ಮೂಲಸೌಕರ್ಯಗಳ ಕೊರತೆ. ಇದು ನಗರದಲ್ಲಿನ ಕೊಳೆಗೇರಿ ಪ್ರದೇಶದ ಸ್ಥಿತಿ. ನಗರ ನಿತ್ಯ ಶುಚಿಗೊಳಿಸುವ ಬಹುತೇಕ ಕಾರ್ಮಿಕರು ಇಲ್ಲೇ ವಾಸವಿದ್ದಾರೆ!

ಪುಟ್ಟ ಕೋಣೆಯಂತಿರುವ ಈ ಗುಡಿಸಲಿನಲ್ಲಿ ಒಬ್ಬರು ಕಾಲು ಚಾಚಿ ಮಲಗಿದರೆ, ಮತ್ತೊಬ್ಬರಿಗೆ ತಗುಲುತ್ತದೆ. ಎದ್ದು ನಿಂತರೆ ಛಾವಣಿ ಶೀಟು ತಲೆಗೆ ತಾಗುತ್ತದೆ. ಅದರಲ್ಲೇ ಅಡುಗೆ, ಊಟ ಮಾಡಬೇಕು ಮತ್ತು ಮಲಗಬೇಕು. ಅಗತ್ಯ ವಸ್ತುಗಳನ್ನೂ ಅಷ್ಟರಲ್ಲೇ ಹೊಂದಿಸಿ ಇಟ್ಟುಕೊಳ್ಳಬೇಕು.

ಬೇಸಿಗೆಯಲ್ಲಿ ನೀರಿನ ಸಮಸ್ಯೆ ಭಾದಿಸಿದರೆ, ಮಳೆಗಾಲದಲ್ಲಿ ಅನೈರ್ಮಲ್ಯದ ಸಮಸ್ಯೆ. ಬಡಾವಣೆ ಸುತ್ತಲಿನ ಗಿಡ–ಗಂಟಿಗಳ ಮರೆಯೇ ಸ್ಥಳೀಯರ ಶೌಚಕ್ಕೆ ಆಸರೆ.

ಹೀಗೆ ನಗರದಲ್ಲಿ53 ಕೊಳೆಗೇರಿಗಳಿದ್ದು, 58 ಸಾವಿರ ಜನ ವಾಸವಿದ್ದಾರೆ. ಬಹುತೇಕ ಮಂದಿಗೆ ಸಮರ್ಪಕ ವ್ಯವಸ್ಥೆ ಇಲ್ಲ.ವರ್ಷದಿಂದ ವರ್ಷಕ್ಕೆ ಈ ಕೊಳೆಗೇರಿಗಳ ಸ್ಥಿತಿ ಹದಗೆಡುತ್ತಿದೆ.

‘ಮಹಾನಗರ ಪಾಲಿಕೆ ಅಧಿಕಾರಿಗಳೇ ಸಮೀಕ್ಷೆ ನಡೆಸಿ ನಗರದಲ್ಲಿ 53 ಕೊಳೆಗೇರಿಗಳಿವೆ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ. ಆದರೂ ಈವರೆಗೆ ನಮಗೆ ಹಕ್ಕು ಪತ್ರ ನೀಡಿಲ್ಲ. ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯವರುಡಬರಾಬಾದ್‌ ಮಾರ್ಗದಲ್ಲಿ 1024 ಮನೆಗಳನ್ನು ನಿರ್ಮಿಸಿದ್ದು ಅವುಗಳಲ್ಲಿ 704 ಮನೆ ಹಂಚಿಕೆಯಾಗಿವೆ. ಕೆಸಟಗಿ ರಸ್ತೆಯಲ್ಲಿ 300 ಮನೆಗಳು ನಿರ್ಮಾಣ ಹಂತದಲ್ಲಿವೆ’ ಎಂದು ಕೊಳೆಗೇರಿ ನಿವಾಸಿಗಳು ತಿಳಿಸಿದರು.‌

ಕೊಳಗೇರಿ ಪ್ರದೇಶದ ವಿವರ: ಪಂಚಶೀಲ ನಗರ, ಬಾಪುಜಿ ನಗರ, ಬುದ್ಧ ನಗರ ಸಂಜೀವ ನಗರ, ವಡ್ಡರವಾಡಾ, ಕನಕ ನಗರಮ ಹೀರಾಪುರ ಹರಿಜನವಾಡಾ, ಬ್ರಹ್ಮಪುರ ಬಡಾವಣೆ, ಸುಂದರ ನಗರ, ಜೈ ಭೀಮನಗರ, ಕುಟುಂಬ ಕಲ್ಯಾಣ ನಗರ ಇವು ನಗರದ ಪ್ರಮುಖ ಕೊಳೆಗೇರಿ ಪ್ರದೇಶಗಳು.

ಬಹುತೇಕ ಕಡೆ ಶುದ್ಧ ಕುಡಿಯುವ ನೀರಿನ ಘಟಕ ಇಲ್ಲ. ಅವರಿಗೆ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ ವಾಸಸ್ಥಳ ದೃಢೀಕರಣ ಪತ್ರ ಸಿಕ್ಕಿಲ್ಲ. ನಮೂನೆ –3ರಲ್ಲಿ ಖಾತೆ ಮಾಡಿಕೊಟ್ಟಿಲ್ಲ ಎಂಬುದು ಅಲ್ಲಿಯವರ ದೂರು.

‘ಎಲ್ಲಿಯೂ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲ. ಅವು ದುರ್ನಾತ ಬೀರುತ್ತಿದ್ದು, ಮಲಿನ ನೀರು ಸರಾಗವಾಗಿ ಹರಿಯುವುದಿಲ್ಲ. ಬಹುತೇಕ ಮಂದಿ ಟಿನ್‌, ಶೆಡ್‌ಗಳಂತಹ ಮನೆಗಳಲ್ಲಿಯೇ ವಾಸವಿದ್ದಾರೆ. ಉತ್ತಮ ರಸ್ತೆ, ನೀರು ಪೂರೈಕೆ ಸೇರಿದಂತೆ ಹಲವು ಸೌಕರ್ಯಗಳಿಗಾಗಿ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಹಲವು ಬಾರಿ ಮನವಿಪತ್ರ ಸಲ್ಲಿಸಿದ್ದೇವೆ. ಆದರೆ, ಈವರೆಗೆ ಬೇಡಿಕೆ ಈಡೇರಿಲ್ಲ’ ಎಂದು ನಿವಾಸಿಗಳು ಬೇಸರದಿಂದ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT