ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪರಿಶಿಷ್ಟರ ಹಣ ದುರ್ಬಳಕೆ ಮಾಡಿದರೆ ಶಿಸ್ತು ಕ್ರಮ’: ಕೋಟ ಶ್ರೀನಿವಾಸ ಪೂಜಾರಿ

ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರಗತಿ ಪರಿಶೀಲನೆ
Last Updated 28 ಸೆಪ್ಟೆಂಬರ್ 2021, 16:14 IST
ಅಕ್ಷರ ಗಾತ್ರ

ಕಲಬುರ್ಗಿ: ‘ಪರಿಶಿಷ್ಟ ಜಾತಿಯವರ ಕಲ್ಯಾಣಕ್ಕಾಗಿ ಬಿಡುಗಡೆಯಾಗುವ ಹಣವನ್ನು ದುರ್ಬಳಕೆ ಮಾಡಿಕೊಂಡರೆ ಅಥವಾ ಸಕಾಲಕ್ಕೆ ಬಳಕೆ ಮಾಡದಿದ್ದರೆ ಅಂಥವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದು ಅನಿವಾರ್ಯ’ ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಎಚ್ಚರಿಕೆ ನೀಡಿದರು.‌

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಎರಡೂ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಮಾತನಾಡಿದ ಅವರು, ‘ಎಸ್‌ಸಿಪಿ–ಟಿಎಸ್‌ಪಿ ಅಡಿ ಮೀಸಲಿಟ್ಟ ಹಣವನ್ನು ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಕಲ್ಯಾಣಕ್ಕೇ ಬಳಕೆ ಮಾಡಬೇಕು. ಈ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ’ ಎಂದು ತಾಕೀತು ಮಾಡಿದರು.

ಯೋಜನೆಗಳನ್ನು ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಬೇಕು. ಈ ವಿಚಾರದಲ್ಲಿ ರಿಯಾಯಿತಿ ನೀಡುವ ಪ್ರಶ್ನೆಯೇ ಇಲ್ಲ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಕಲಬುರ್ಗಿ ತಾಲ್ಲೂಕಿನ ಅವರಾದ (ಬಿ) ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ವಸತಿ ನಿಲಯ ಆರಂಭಿಸುವ ಜಾಗಕ್ಕೆ ಸೂಕ್ತ ರಸ್ತೆಯೇ ಇಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದಾಗ, ಇಲಾಖೆಯಿಂದ ಕೋಟ್ಯಂತರ ಹಣ ಬಿಡುಗಡೆ ಮಾಡಿದರೂ ಇಂತಹ ದೋಷಪೂರಿತ ಜಾಗವನ್ನು ಆಯ್ಕೆ ಮಾಡಿಕೊಂಡಿದ್ದು ಏಕೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ವಸತಿ ಶಾಲೆ, ವಸತಿ ನಿಲಯದಂತಹ ಕಟ್ಟಡ ಕಾಮಗಾರಿಗಳನ್ನು 9 ತಿಂಗಳಿಂದ 15 ತಿಂಗಳೊಳಗಾಗಿ ಪೂರ್ಣಗೊಳಿಸಿ ಅದನ್ನು ಹಸ್ತಾಂತರಿಸಬೇಕು. ಕೆಲವು ಕಟ್ಟಡಗಳು ಮೂರ್ನಾಲ್ಕು ವರ್ಷಗಳಿಂದ ನಡೆಯುತ್ತಲೇ ಇವೆ. ಈ ರೂಢಿ ಒಳ್ಳೆಯದಲ್ಲ ಎಂದು ಲೋಕೋಪಯೋಗಿ ಇಲಾಖೆ ಹಾಗೂ ಕೆಆರ್‌ಐಡಿಎಲ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ವಿತರಣೆ ಹೊಣೆಯೂ ಗುತ್ತಿಗೆದಾರರದು: ವಿವಿಧ ವಸತಿ ನಿಲಯಗಳಿಗೆ ಆಹಾರ ಸಾಮಗ್ರಿ, ಮೊಟ್ಟೆ ಮತ್ತಿತರ ಸಾಮಗ್ರಿಗಳನ್ನು ಪೂರೈಕೆ ಮಾಡುವ ಹೊಣೆ ಮೂಲ ಗುತ್ತಿಗೆದಾರರದ್ದೇ ಆಗಿರುತ್ತದೆ. ಕೆಲವು ಕಡೆ ಅದನ್ನು ಬೇರೆಯವರಿಗೆ ವಹಿಸುತ್ತಿರುವ ಸಂಗತಿ ಗಮನಕ್ಕೆ ಬಂದಿದ್ದು, ಇದಕ್ಕೆ ಆಸ್ಪದ ಕೊಡಬೇಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿ 38 ವಸತಿ ಶಾಲೆಗಳಿದ್ದು,19 ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ ಉಳಿದವು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ 19 ಶಾಲೆಗಳ ಪೈಕಿ 13 ಶಾಲೆಗಳ ಸ್ವಂತ ಕಟ್ಟಡ ನಿರ್ಮಾಣ ವಿವಿಧ ತಾಲ್ಲೂಕಿನಲ್ಲಿ ಪ್ರಗತಿಯಲ್ಲಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ‌ ನಿರ್ದೇಶಕ ಎಂ.ಅಲ್ಲಾಬಕಷ್ ತಿಳಿಸಿದರು.

ಅ.2ಕ್ಕೆ ಸ್ವಚ್ಛತಾ ಅಭಿಯಾನ: ರಾಜ್ಯದಾದ್ಯಂತ ಸಮಾಜ ಕಲ್ಯಾಣ ಇಲಾಖೆಯ 2400, ಹಿಂದುಳಿದ ವರ್ಗದ 1500 ಹಾಗೂ ಕ್ರೈಸ್ ಸಂಸ್ಥೆಯ 800 ವಸತಿ ನಿಲಯ, ಶಾಲೆಗಳಲ್ಲಿ ಬರುವ ಅಕ್ಟೋಬರ್ 2ರಂದು ಗಾಂಧಿ ಜಯಂತಿ ದಿನದಂದು‌ ಸ್ವಚ್ಛತಾ ಅಭಿಯಾನ ಕೈಗೊಳ್ಳುವಂತೆ ಸಚಿವರು ನಿರ್ದೇಶನ ನೀಡಿದರು.

ಮೂರು ತಿಂಗಳ ಗಡುವು: ಸಮಾಜ ಕಲ್ಯಾಣ ಇಲಾಖೆಯ ಪ್ರಗತಿ ಕಾಲೊನಿ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯ ವಾಸಿಸುವ ಕಾಲೊನಿಗಳಲ್ಲಿ ಮೂಲಸೌಕರ್ಯ ಕಲ್ಪಿಸಲು 2018–19ನೇ ಸಾಲಿನಲ್ಲಿ ₹ 183 ಕೋಟಿ ಮೊತ್ತಕ್ಕೆ ಮಂಜೂರಾದ 1755 ಕಾಮಗಾರಿಗಳ ಪೈಕಿ 906 ಕಾಮಗಾರಿಗಳು ಇನ್ನೂ ಪ್ರಗತಿಯಲ್ಲಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು ಮುಂದಿನ 3 ತಿಂಗಳೊಳಗೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಗಡುವು‌
ನೀಡಿದರು.

ಶಾಸಕರಿಗೆ ₹ 2ರಿಂದ 3.50 ಕೋಟಿ: ರಾಜ್ಯದ‌ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಎಸ್.ಸಿ–ಎಸ್.ಟಿ ಸಮುದಾಯ ವಾಸಿಸುವ ಪ್ರದೇಶದಲ್ಲಿ ಮೂಲಸೌಕರ್ಯ ಕಾಮಗಾರಿಗಳನ್ನು ಶಾಸಕರ ಶಿಫಾರಸಿನ ಅನ್ವಯ ಕೈಗೊಳ್ಳಲು ಪ್ರತಿ ಕ್ಷೇತ್ರಕ್ಕೆ ₹ 2ರಿಂದ ₹ 3.50 ಕೋಟಿ ಅನುದಾನವನ್ನು ಆಯಾ ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆಗೆ ಬಿಡುಗಡೆ ಮಾಡಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಕಲ್ಯಾಣ‌ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ರಾಜಕುಮಾರ ಪಾಟೀಲ ತೇಲ್ಕೂರ, ಶಾಸಕರಾದ ಎಂ.ವೈ. ಪಾಟೀಲ, ಸುಭಾಷ ಆರ್. ಗುತ್ತೇದಾರ, ಡಾ. ಅವಿನಾಶ ಜಾಧವ, ವಿಧಾನ ಪರಿಷತ್ ಸದಸ್ಯರಾದ ಶಶೀಲ್‌ ಜಿ. ನಮೋಶಿ, ಬಿ.ಜಿ. ಪಾಟೀಲ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ವಿ. ಟೆಂಗಳಿ, ಕೃಷ್ಣಾ ಕಾಡಾ ಭೀಮರಾಯನಗುಡಿ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶರಣಪ್ಪ ತಳವಾರ, ರಾಜ್ಯ ಮಟ್ಟದ ಎಸ್ಸಿ, ಎಸ್ಟಿ ಅನುಷ್ಠಾನದ ಸಲಹೆಗಾರ ವೆಂಕಟಯ್ಯ, ಎಸ್ಸಿ, ಎಸ್ಟಿ ಕೋಶದ ನಿರ್ದೇಶಕಿ ನಿರ್ಮಲಾ, ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ, ಜಿಲ್ಲಾ ಪಂಚಾಯಿತಿ ಸಿಇಒ ಡಾ.ದಿಲೀಷ್ ಶಶಿ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ‌ ಮಟ್ಟದ ಅಧಿಕಾರಿಗಳು ಇದ್ದರು.

ಭವನಗಳು ಪೂರ್ಣಗೊಳಿಸಲು ಆದ್ಯತೆ

ಜಿಲ್ಲೆಯಲ್ಲಿ ಇದುವರೆಗೆ 418 ಸಮುದಾಯ ಭವನಗಳು ಮಂಜೂರಾಗಿ 151 ಕಟ್ಟಡ ಪೂರ್ಣಗೊಂಡಿದ್ದು, ಉಳಿದವು ಪ್ರಗತಿಯಲ್ಲಿವೆ‌. ರಾಜ್ಯದಲ್ಲಿ ಸುಮಾರು 7000ಕ್ಕೂ ಹೆಚ್ಚು ಭವನಗಳು ಮಂಜೂರಾಗಿದ್ದು, 3500 ಸಮುದಾಯ ಭವನಗಳು ಪೂರ್ಣಗೊಂಡಿವೆ. ಹೀಗಾಗಿ ಸದ್ಯಕ್ಕೆ ಹೊಸದಾಗಿ ಸಮುದಾಯ ಭವನ ಮಂಜೂರು ಮಾಡುವುದಿಲ್ಲ. ಬದಲಾಗಿ ಪ್ರಗತಿಯಲ್ಲಿರುವ ಎಲ್ಲಾ ಭವನಗಳನ್ನು ಪೂರ್ಣಗೊಳಿಸುವುದು ಪ್ರಥಮ ಆದ್ಯತೆಯಾಗಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT