ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ತಲೆಮಾರಿನ ಹುಡುಗೀರು ನಾವು...

Last Updated 9 ಮಾರ್ಚ್ 2018, 4:20 IST
ಅಕ್ಷರ ಗಾತ್ರ

ಹೌದು, ನಾನ್ಯಾಕೆ ಗಂಡಾಗಬೇಕು?

ನನ್ನ ಅವ್ವ, ಅಂದರೆ ದೊಡ್ಡಮ್ಮ, ಅಡುಗೆ ಮಾಡಲೆಂದು, ತಾನೇ ಹೊರಗೆ ಹೋಗಿ, ದೊಡ್ಡ ಕಟ್ಟಿಗೆಯನ್ನು ದರದರ ಎಳೆದುಕೊಂಡು ಬಂದು, ಎಂಥ ಗಟ್ಟಿ ಕಾಂಡ ಇದ್ದರೂ ಸರಿ, ತಾನೇ ಅದನ್ನು ಇಬ್ಭಾಗ ಮಾಡಿ, ಅದರಿಂದ ಒಲೆ ಉರಿಸಿ ಎಲ್ಲರಿಗೂ ಊಟ ಹಾಕುತ್ತಿದ್ದಳು. ಅದನ್ನು ನೋಡುತ್ತಲೇ ಬೆಳೆದ ನನ್ನಲ್ಲೂ ಆ ‘ಗಟ್ಟಿತನ’ ಒಳಗೊಳಗೇ ಮೂಡಿತ್ತು.

ನಾನು ಬೆಳೆದ ವಾತಾವರಣವೇ ನನಗೆ ಹೆಣ್ಣೆಂದರೆ ಹೆಮ್ಮೆ ಮೂಡುವಂತೆ ಮಾಡುತ್ತದೆ. ನನ್ನ ಹಳ್ಳಿಯಲ್ಲಿ ಒಕ್ಕಲುತನ ಕುಟುಂಬ. ನಾವೆಲ್ಲಾ ನಮ್ಮ ಮನೆಗಷ್ಟೇ ಸೀಮಿತವಾಗಿರಲಿಲ್ಲ. ಎಲ್ಲೋ ಆಡಿಕೊಂಡು ಯಾರ್‍ಯಾರ ಕೈತುತ್ತಲ್ಲೋ ಬೆಳೆದವರು. ಎಲ್ಲೋ ಆಡುತ್ತಾ ಎಲ್ಲೋ ಬೀಳುತ್ತ ಏಳುತ್ತಿದ್ದವರು. ನಾನು ದೊಡ್ಡಮ್ಮಂದಿರು, ಅವ್ವಂದಿರು, ಚಿಕ್ಕಮ್ಮಂದಿರು, ಅತ್ತೆಯರು, ಅತ್ತಿಗೆಯರು, ಅಕ್ಕ ತಂಗಿಯರು ಎಲ್ಲರನ್ನೂ ನೋಡುತ್ತಲೇ ಬೆಳೆದವಳು. ಅವರೂ ಯಾವ ಗಂಡಸಿಗೂ ಕಡಿಮೆಯಿಲ್ಲದಂತೆಯೇ ದುಡಿದವರು, ಬೆಳೆದವರು. ಅವರನ್ನು ನೋಡುತ್ತಿದ್ದಾಗೆಲ್ಲಾ ನನಗೆ ಅನ್ನಿಸುತ್ತಿದ್ದುದು ಒಂದೇ. ಇವರಂತೆ ನಾನು ಯಾವಾಗ ಗಟ್ಟಿ ಆಗುತ್ತೇನೆ ಎಂದು. ಚಿಕ್ಕ ವಯಸ್ಸಿನಿಂದಲೂ ಆ ಗಟ್ಟಿಯಾಗುವ ಪ್ರಕ್ರಿಯೆ ನನ್ನನ್ನು ಆವರಿಸುತ್ತಲೇ ಬಂದಿದೆ.

ಇಂಥ ವಾತಾವರಣದಲ್ಲಿ ಬೆಳೆದ ನನಗೆ, ಇದುವರೆಗೂ, ಯಾಕಾದರೂ ಹೆಣ್ಣಾಗಿ ಹುಟ್ಟಿದೆನೋ ಎಂದು ತಮಾಷೆಗೂ ಅನ್ನಿಸಿಲ್ಲ. ವಿಷಾದದ ಒಂದೆಳೆಯೂ ನನ್ನಲ್ಲಿ ಹಾದುಹೋಗಿಲ್ಲ.

ಇನ್ನೂ ಒಂದು ಘಟನೆ ನೆನಪಿದೆ. ನಾವೆಲ್ಲಾ ಮಕ್ಕಳು ಆಟ ಆಡುತ್ತಾ ಬಿದ್ದುಬಿಟ್ಟರೆ, ಬಿದ್ದ ನಮ್ಮನ್ನು ಕಂಡು, ಹತ್ತಿರ ಕರೆದು ಯಾರೂ ಮುದ್ದು ಮಾಡುತ್ತಿರಲಿಲ್ಲ. ಚಿಕ್ಕಮ್ಮ, ದೊಡ್ಡಮ್ಮ, ಅತ್ತೆಯರಾದಿಯಾಗಿ ಎಲ್ಲರೂ ತಲೆಗೊಂದರಂತೆ, ತಲೆ ಮೇಲೆ ಬಾರಿಸುತ್ತಿದ್ದವರೇ. ಬಿದ್ದರೆ, ಧರ್ಮದೇಟು ಗ್ಯಾರಂಟಿ. ಅರಿಶಿನ ಹಚ್ಚೋರು, ಆರೈಕೆ ಮಾಡೋರು. ಆದರೆ ಮುಂದೆ ಬೀಳದಂತೆ ಎಚ್ಚರಿಕೆಯ ಗಂಟೆಯೂ ಆಗಿದ್ದರು. ಇದು ಹೆಣ್ತನಕ್ಕೂ ಹೊರತಲ್ಲ. ಏನೇ ಮಾಡಿದರೂ ಪ್ರಜ್ಞೆ ಇಟ್ಟುಕೊಂಡು ಮಾಡಬೇಕು ಎಂಬ ಅರಿವನ್ನು ಈ ಮೂಲಕವೇ ಮೂಡಿಸುತ್ತಿದ್ದರು. ಯಾವ ಶಿಕ್ಷಣ ಸಂಸ್ಥೆ ಈ ಅರಿವನ್ನು ನೀಡಲು ಸಾಧ್ಯ ಹೇಳಿ? ಬದುಕಿನ ಕುರಿತ ಇಂಥ ಹಲವು ಅರಿವುಗಳನ್ನು ನಮ್ಮ ಹಿರಿಯರೇ ನೀಡಿದ್ದಾರೆ.

ಒಕ್ಕಲು ಕುಟುಂಬದಲ್ಲಿ ಬಡತನ ಇರುತ್ತಿತ್ತು. ಹೆಣ್ಣು ಮಕ್ಕಳು, ಗಂಡು ಮಕ್ಕಳು ಎರಡೂ ಒಂದೇ ಅಲ್ಲಿ. ‘ಯತ್ವಾಸ ಮಾಡೋಕೆ ಏನಿದೆ’ ಎನ್ನುತ್ತಿದ್ದವರೇ ಹೆಚ್ಚು. ಹಾಗೆಂದು ತಾರತಮ್ಯ ಕಂಡೇ ಇಲ್ಲ ಎಂದೇನಿಲ್ಲ. ಆದರೆ ಏನನ್ನಾದರೂ ಎದುರಿಸಿ ನಿಲ್ಲುವ ಧೈರ್ಯ, ಹೋರಾಡುವ ಇಚ್ಛಾಶಕ್ತಿ ನಮ್ಮಲ್ಲಿ ಅವರೇ ಬೆಳೆಸಿದ್ದರು. ಎಲ್ಲವೂ ಮುಗೀತು ಎಂದು ಕೈಚೆಲ್ಲುವ ಮನಸ್ಥಿತಿ ರಕ್ತದಲ್ಲೇ ಇರಲಿಲ್ಲ. ನಮ್ಮ ಮೂಲ ಬೇರೇ ಹೀಗಿತ್ತು. ಎಂಥ ಸಂದರ್ಭದಲ್ಲೂ ಬೆಳೆಯುತ್ತಾ ಹೋಗುವುದೇ ಮುಖ್ಯ, ಮಿಕ್ಕೆಲ್ಲವೂ ಗೌಣ ಎಂದು ನಮ್ಮನ್ನು ಗಟ್ಟಿ ಮಾಡಿದ ಇವರನ್ನು ನೋಡುತ್ತಿದ್ದರೆ, ಹೆಣ್ಣೆಂದರೆ ಹೆಮ್ಮೆ ಅನ್ನಿಸದೇ ಇರಲು ಸಾಧ್ಯವೇ?

ಹೆಣ್ಣು ಮಕ್ಕಳನ್ನು ಕಾಡುವ ಸಮಸ್ಯೆಗಳು ಸಾಕಷ್ಟಿವೆ. ಅದರೆಡೆಗೆ ಸಿಟ್ಟು ಸೆಡವೂ ಇದೆ. ಅದನ್ನು ಪ್ರತಿಭಟಿಸುವ ಮನಸ್ಸು ನನ್ನದು. ಹಾಗೆಂದು ಸ್ತ್ರೀವಾದಿ, ಪುರುಷದ್ವೇಷಿ ಎಂದಲ್ಲ. ನಾನು ಗಂಡನ್ನು ದ್ವೇಷಿಸುವುದಿಲ್ಲ. ಆದರೆ ಮಹಿಳೆಯೆಡೆಗೆ ಅರ್ಥವಿಲ್ಲದೆ ಆತ ಹೇರುವ ಸಾಮಾಜಿಕ ವ್ಯವಸ್ಥೆಯನ್ನಷ್ಟೇ ನಾನು ಧಿಕ್ಕರಿಸುತ್ತೇನೆ. ನನಗೆ ಎಂದಿಗೂ ಹುಡುಗನಾಗಿ ಹುಟ್ಟಬೇಕು ಅನ್ನಿಸಿಯೇ ಇಲ್ಲ. ಹೆಣ್ತನವೇ ಸುಂದರ ಪ್ರಕ್ರಿಯೆ. ಅದನ್ನು ನಾನು ಎಂಜಾಯ್ ಮಾಡುತ್ತೇನೆ. ನಾನ್ಯಾಕೆ ಗಂಡಾಗಬೇಕು?

ಸುಮನಾ ಕಿತ್ತೂರು, ಚಿತ್ರ ನಿರ್ದೇಶಕಿ

***

ಅಸ್ಮಿತೆಯ ಹುಡುಕಾಟದಲ್ಲಿ...

ಮೊಲೆ ಮೂಡಿ ಬಂದಡೆ ಹೆಣ್ಣೆಂಬರು
ಮೀಸೆ ಕಾಸೆ ಬಂದಡೆ ಗಂಡೆಂಬರು
ಉಭಯದ ಜ್ಞಾನ ಹೆಣ್ಣೋ ಗಂಡೊ ನಾಸ್ತಿನಾಥ?
-ಗೊಗ್ಗವ್ವೆ

ಹೆಣ್ತನದ ಹೆಜ್ಜೆಗಳ ಜಾಡನ್ನು ನಾವುಗಳು ಹುಡುಕುತ್ತಾ ಸಾಗಿದಾಗ ಅಲ್ಲಿ ಮೊದಲು ಮಾತೃಪ್ರಧಾನ ಕುಟುಂಬವಿತ್ತು. ಆದರೆ, ಮಹಿಳೆಯರನ್ನು ಬರಬರುತ್ತಾ ಈ ವ್ಯವಸ್ಥೆಯಲ್ಲಿ ವ್ಯವಸ್ಥಿತವಾಗಿ ಮೂಲೆಗುಂಪಾಗಿಸುತ್ತ ಹೋದರು ಎಂಬುದು ಗೊತ್ತಾಗುತ್ತದೆ. ಹನ್ನೆರಡನೆಯ ಶತಮಾನದ ವಚನಾದಿ ಶರಣರು ಸಮಾನತೆಯ ಪ್ರತಿಪಾದನೆ ಮಾಡಿದರು. ಆಗ ಹಲವಾರು ಜನ ವಚನಕಾರ್ತಿಯರು ಬಂದರು. ಇಂತಹ ಇತಿಹಾಸ ನಮ್ಮದಾಗಿದ್ದರೂ ಹೆಣ್ಣನ್ನು ಗೌರವಿಸುವ ಪ್ರವೃತ್ತಿ ನಮ್ಮ ಸಮಾಜದಲ್ಲಿ ಮಾಯವಾಗಿದೆ. ಆದರೆ, ಹೆಣ್ಣಾಗಿ ಹುಟ್ಟಿದ್ದು ನನಗೆ ಹೆಮ್ಮೆಯಿದೆ.

ಗಂಡಸರು ಮುಖದ ಮೇಲೆ ಒಂದು ಸಣ್ಣ ಮೊಡವೆಯಾದರೆ ಅದನ್ನು ಚಿವುಟಿ ತೆಗೆದುಹಾಕುತ್ತಾರೆ. ಅದೇ ಸ್ತ್ರೀ ಮಾಂಸದ ಮುದ್ದೆಯನ್ನು ಒಡಲೊಳಗೆ ಒಂಬತ್ತು ತಿಂಗಳು ಕಾಪಿಟ್ಟು ಜೀವ ನೀಡುವ ಮತ್ತು ಜೀವ ಸಂಕುಲವನ್ನು ಉಳಿಸುವ ಕೆಲಸ ಮಾಡುತ್ತಾಳೆ. ಹೌದು, ಆ ತಾಕತ್ತು ಇರುವುದು ಅವಳಿಗೆ ಮಾತ್ರ. ಏನೆಲ್ಲ ಕಷ್ಟ, ನೋವುಗಳಿದ್ದರೂ ಸ್ತ್ರೀಯರು ತಮ್ಮ ಅಸ್ಮಿತೆಯನ್ನು ಹುಡುಕುತ್ತಾ ಹೊರಟಿದ್ದಾರೆ. ಚಳವಳಿ, ಹೋರಾಟಗಳು ಮಹಿಳೆಯರ ಅಸ್ಮಿತೆಗೆ ಉತ್ತರವನ್ನು ಕಂಡುಕೊಳ್ಳುವಲ್ಲಿ ಹೊಸ ಆಯಾಮ ನೀಡಿವೆ.

ಎಷ್ಟೋ ಜನ ಗಂಡಸರು ಹೆಣ್ಣಾಗಲು ಇಷ್ಟಪಡುತ್ತಾರೆ. ಇದೆಲ್ಲವನ್ನು ನಾವುಗಳು ನೋಡಿದಾಗ ಹೆಣ್ತನದ ಮೇಲೆ ಗೌರವ, ಅಭಿಮಾನ ಮೂಡುತ್ತದೆ. ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಎಂದರೆ ನನಗೆ ಹಬ್ಬವೇ. ಯಾಕೆಂದರೆ ನಾನು ಹೆಣ್ಣು. ನನ್ನ ಹೆಣ್ತನದ ಮೇಲೆ ನನಗೆ ಗೌರವವಿದೆ, ಅಭಿಮಾನವಿದೆ. ಅಂಥ ಹೆಣ್ತನಕ್ಕೆ ಮಿಡಿಯುವ ಎಲ್ಲ ಜೀವಗಳಿಗೆ ಮಹಿಳಾ ದಿನಾಚರಣೆಯ ಶುಭಾಶಯ ಕೋರುವೆ.

***

ತರತಮದ ಪಂಜರದಲ್ಲಿ ಬಿಡುಗಡೆಯ ಭರವಸೆ

ಸ್ನಾತಕೋತ್ತರ ಪದವಿ ಮೊದಲನೆಯ ವರ್ಷದ ರಜೆಯಲ್ಲಿ ಒಮ್ಮೆ ಸೋದರತ್ತೆಯ ಮನೆಗೆ ಹೋಗಿದ್ದಾಗ ಕುಟುಂಬದ ಹಿರಿಯರು ಮತ್ತು ನನ್ನದೇ ವಯಸ್ಸಿನ ನನ್ನ ಸೋದರ ಸಂಬಂಧಿಗಳ ನಡುವೆ ಒಂದಷ್ಟು ವಿಷಯಗಳ ಬಗ್ಗೆ ಮಾತುಕತೆ ನಡೆದಿತ್ತು. ಕಾಲೇಜಿನ ತರಗತಿಗಳಲ್ಲಿ, ವಿಚಾರ ಸಂಕಿರಣಗಳಲ್ಲಿ ವಾದ ಮಂಡನೆ ಮಾಡುವುದು ಬೇರೆ, ಸ್ನೇಹಿತರ ಮಧ್ಯೆ ವಾಗ್ವಾದಗಳು ಕೊಡುವ ಅನುಭವವೇ ಬೇರೆ. ಕುಟುಂಬದಲ್ಲಿ ನಡೆಯುವ ಚರ್ಚೆಗಳ ಸ್ವರೂಪವೇ ಮತ್ತೊಂದು. ನಾನು ತಲೆಯೆತ್ತಿ ಮೀಸಲಾತಿ ಕುರಿತು ಮಾತನಾಡಲಾರಂಭಿಸಿದೆ. ಸಾಕಷ್ಟು ವಾದವಿವಾದಗಳ ನಂತರವೂ ತಾತ, ಮಾವಂದಿರು ಲಿಂಗ ಪ್ರಾತಿನಿಧ್ಯದ ಬಗ್ಗೆ ಸ್ವಲ್ಪವೂ ವಿವೇಚನೆ ತೋರಲಿಲ್ಲ. ‘ನೀನಿನ್ನೂ ಸಣ್ಣವಳು. ತಿಳಿವಳಿಕೆ ಬೆಳೆದಿಲ್ಲ’ ಎಂದು, ಎಂದಿನಂತೆ ನನ್ನ ಬಾಯಿ ಮುಚ್ಚಿಸಿದರು.

ಹಾಳಾಗಲಿ, ಎಂದು ಪಕ್ಕದ ಬೀದಿಯಲ್ಲಿರುವ ಇನ್ನೊಬ್ಬ ಅತ್ತೆಯ ಮನೆಗೆ ಹೋಗುವ ಎಂದರೆ, ‘ರಾತ್ರಿ ಹತ್ತರ ಮೇಲಾಯ್ತು. ನೀವು ಹೆಣ್ಣು ಮಕ್ಕಳು. ಹಾಗೆಲ್ಲ ರಾತ್ರಿಯಲ್ಲಿ ಹೋಗಲಿಕ್ಕೆ ಬಿಡುವುದು ಸಾಧ್ಯವಿಲ್ಲ’ ಎಂಬ ಆದೇಶ ತೂರಿಬಂತು! ‘ಯಾಕಾಗೋದಿಲ್ಲ? ಹತ್ತು ಗಂಟೆ ಆಗೋದ್ರೆ ನಮ್ಮ ಕಾಲೇನು ಕರಗಿ ಹೋಗತ್ತಾ? ನೀವು ಹೋಗಲಿಕ್ಕೆ ಬಿಡ್ತಿಲ್ಲ ಅಷ್ಟೆ’ ಎಂದಳು ನನ್ನ ಅತ್ತೆಯ ಮಗಳು.

ಮಧ್ಯಮ ವರ್ಗದ, ಮೇಲ್ಜಾತಿ ಅಥವಾ ದಬ್ಬಾಳಿಕೆಗಾರ (oppressive) ಜಾತಿಯ, ಆಂಗ್ಲ ಶಿಕ್ಷಣ ಪಡೆದಿರುವ, ನಗರದ ಹುಡುಗಿಯಾದ ನನಗೆ ಗೊತ್ತಿದ್ದದ್ದು ಒಂದೇ ರೀತಿಯ ತಾರತಮ್ಯ, ಹೆಣ್ಣಾದದ್ದು. ‘ಶ್ರೇಷ್ಠ ಜಾತಿ’ಯ, ಸುಸಂಸ್ಕೃತ, ಸುಶಿಕ್ಷಿತರ ಕುಟುಂಬದಲ್ಲಿ ತಾರತಮ್ಯ ಎಲ್ಲಿದೆ? ಎಲ್ಲಿದೆ ದಬ್ಬಾಳಿಕೆ? ಉತ್ತರ ನೀಡುವುದು ಕಷ್ಟ. ಮತ್ತೊಂದು ಧರ್ಮ, ಜಾತಿ, ವರ್ಗದ ಗಂಡಸೇ ರಾಕ್ಷಸ ಎಂದು ನಂಬಿಸಿಬಿಡುತ್ತಾರಲ್ಲ, ಅಂತಹವರನ್ನೇ ರಕ್ತ ಸಂಬಂಧಿಗಳು ಎಂದು ಅಕ್ಕರೆಯಿಂದ ಕರೆಯಲು ನಮಗೆ ಕುಟುಂಬದಲ್ಲಿ ಕಲಿಸಲಾಗುತ್ತದೆ. ಹಾಗೆಂದು ಹುಟ್ಟಿದ ಸಮಯದಲ್ಲಿ ನನ್ನನ್ನು ಹೆಣ್ಣು ಎಂದು ಯಾಕಾದರೂ ಗುರುತಿಸಿದರೋ ಎಂದು ಬೇಸರಿಸಲೂ ಆಗುವುದಿಲ್ಲ.

‘ಹುಟ್ಟಿದ ಸಮಯದಲ್ಲಿ ಗುರುತಿಸುವುದು, ಜಾತಿ– ಪಿತೃಪ್ರಭುತ್ವ ಅಂತೆಲ್ಲ ಮಾತನಾಡೋದು ಎಲ್ಲಿ ಕಲಿತೆಯಮ್ಮಾ? ಬುದ್ಧಿಜೀವಿಗಳ ಹಾಗೆ ಆಡುತ್ತೀಯಲ್ಲ...’ ಆಹಾ.. ಅದೇನೇನು ಮಾತುಗಳನ್ನು ಕೇಳಿಲ್ಲ ನಾನು! ನನ್ನನ್ನು ಗಂಡು ಮಗುವಾಗಿ ಗುರುತಿಸಿದ್ದರೆ, ಪ್ರಾಯಶಃ ಈ ಮಾತುಗಳು ಇಂಥ ಸ್ತ್ರೀ ದ್ವೇಷಿ ಛಾಯೆ ಪಡೆಯುತ್ತಿರಲಿಲ್ಲ.
ವಿಶ್ವವಿದ್ಯಾಲಯಗಳಂತಹ ರಾಜಕೀಯ ಇತಿಹಾಸವುಳ್ಳ ಸ್ಥಳಗಳಲ್ಲಿ ಕಲಿಯಲು ಬಹಳಷ್ಟು ಸಿಗುತ್ತದೆ. ನಮ್ಮಲ್ಲಿ ಎಷ್ಟು ವೈವಿಧ್ಯ ಇರುವುದೋ ಅಷ್ಟು ಒಳ್ಳೆಯದು. ಒಬ್ಬರಿಂದೊಬ್ಬರು ನಮ್ಮ ನಮ್ಮ ಸ್ಥಳಗಳಿಂದ, ಅನುಭವಗಳಿಂದ, ವ್ಯಕ್ತಿನಿಷ್ಠತೆಯಿಂದ ಹೊಸತನ್ನು ಕಲಿಯುತ್ತೇವೆ. ನಿಜವಾದ ಒಳಗೊಳ್ಳುವಿಕೆಯಿರುವ ಒಂದು ಸಮಾಜ ಹೇಗಿರಬಹುದು ಎಂಬ ಕನಸುಗಳನ್ನು ಕಟ್ಟುತ್ತೇವೆ. ಆದರೆ ಕುಟುಂಬದ ರೂಢಿಗತ ವ್ಯವಸ್ಥೆಯಲ್ಲಿ ಇದು ಊಹಿಸಲಾಗದಷ್ಟು ಕಷ್ಟ.

ಮಹಿಳಾ ಹಾಗೂ ಕ್ವಿಯರ್ ಆಂದೋಲನಗಳಿಂದ, ಅಧ್ಯಯನಗಳಿಂದ ಸಿಗುವ ಶಕ್ತಿ, ಪ್ರೇರಣೆಯ ಬಗ್ಗೆ ಇಲ್ಲಿ ಹೇಳಲು ಇಷ್ಟಪಡುತ್ತೇನೆ. ಲಿಂಗಗಳು ಎರಡು (ಅಥವಾ ಮೂರು) ಮಾತ್ರವಲ್ಲ. ಜಗತ್ತಿನಲ್ಲಿ ನಾವು ಎಷ್ಟು ಮಂದಿ ಇದ್ದೇವೋ ಅಷ್ಟೇ ಲಿಂಗಗಳೂ ಇರಬಹುದಾದ ಸಾಧ್ಯತೆಯನ್ನು ಈ ಹೋರಾಟಗಳು ತಿಳಿಸಿಕೊಡುತ್ತವೆ. ಇಂತಹ ಅಧ್ಯಯನಗಳಲ್ಲಿ ಬೆರೆತು, ಇವುಗಳಿಗೆ ಸಂಬಂಧಪಟ್ಟ ಕೆಲಸಗಳಲ್ಲಿ ತೊಡಗಿಸಿಕೊಂಡಾಗ ಒಂದು ರೀತಿಯ ಹೆಮ್ಮೆ, ನೆಮ್ಮದಿ, ಬಿಡುಗಡೆಯ ಭರವಸೆ.  

***

ಒಬ್ಬ ಮನುಷ್ಯ ಜೀವಿಯಷ್ಟೇ

ವೈಚಾರಿಕತೆ ಮತ್ತು ವೈಜ್ಞಾನಿಕ ದೃಷ್ಟಿಯನ್ನೇ ಜೀವಾಳ ಮಾಡಿಕೊಂಡಿರುವ ತಂದೆ–ತಾಯಿ ನನ್ನ ವ್ಯಕ್ತಿತ್ವದ ಹಿಂದಿರುವ ಮೂಲ ಶಕ್ತಿ. ನಾನು ಹೆಣ್ಣಾಗಿ ಹುಟ್ಟಿದರೂ ಬೆಳೆದದ್ದು ಮಾತ್ರ ಒಬ್ಬ ಮನುಷ್ಯ ಜೀವಿಯಾಗಿ ಅಷ್ಟೇ. ನನ್ನ ಈ ರೀತಿಯ ಸಹಜ ಬೆಳವಣಿಗೆ ಸಾಧ್ಯವಾದದ್ದು ನನ್ನ ಕೌಟುಂಬಿಕ ವಾತಾವರಣದಿಂದಾಗಿ. ಹುಟ್ಟು ಆಕಸ್ಮಿಕ. ನಾವು ಯಾವ ಭೌಗೋಳಿಕ ಪ್ರದೇಶದಲ್ಲಿ, ಯಾವ ಧರ್ಮ-ಜಾತಿ ಅಥವಾ ಯಾವ ಕುಟುಂಬದಲ್ಲಿ ಹುಟ್ಟುತ್ತೇವೆ ಎಂಬುದು ಕೇವಲ ಆಕಸ್ಮಿಕ ಘಟನೆ. ಹಾಗಾಗಿ ನನ್ನ ಇಂದಿನ ಮತಧರ್ಮನಿರಪೇಕ್ಷ, ವೈಚಾರಿಕ ಮತ್ತು ಸ್ವತಂತ್ರ ವ್ಯಕ್ತಿತ್ವಕ್ಕೆ ನಾನು ಕಾರಣ ಎಂದು ಹೇಳಿಕೊಳ್ಳಲು ಸಾಧ್ಯವೇ ಇಲ್ಲ. ಜಾತಿ ಮತ್ತು ಧರ್ಮಗಳ ಯಾವುದೇ ಸೋಂಕಿಲ್ಲದೆ ಬೆಳೆದ ನಾನು ಈ ಬಂಧನಗಳಿಂದ ಬಿಡಿಸಿಕೊಳ್ಳುವ ಸಂದರ್ಭವೇ ಬರಲಿಲ್ಲ. ಒಬ್ಬ ನಾಸ್ತಿಕಳಾಗಿರುವ ನಾನು ಮಾನವತಾವಾದಕ್ಕೂ ಮೀರಿ ಜೀವಪ್ರೀತಿಯನ್ನು ಮತ್ತು ಅಂತಃಕರಣವನ್ನು ಬೆಳೆಸಿಕೊಳ್ಳಲು ನಿರಂತರವಾಗಿ ಶ್ರಮಿಸಬೇಕಿದೆ ಎಂಬುದನ್ನು ಅರಿತಿದ್ದೇನೆ. ಈ ಮನಸ್ಥಿತಿಯಲ್ಲಿರುವ ನಾನು ವೈಯಕ್ತಿಕವಾಗಿ ನನ್ನ ಲಿಂಗದ ಬಗ್ಗೆ ವಿಶೇಷವಾಗಿ ಚಿಂತಿಸಿಲ್ಲ. ಒಬ್ಬ ಮನುಷ್ಯಳಂತೆಯೇ ಯೋಚಿಸುತ್ತೇನೆ.

ಜೈವಿಕವಾಗಿರುವ ಸಹಜ ಲಿಂಗ ವ್ಯತ್ಯಾಸಗಳನ್ನು ಹೊರತುಪಡಿಸಿಯೂ ನಮಗೆಲ್ಲರಿಗೂ ಲಿಂಗಾತೀತವಾಗಿ ಯೋಚಿಸುವ ಮತ್ತು ಉದಾರ ಮನಸ್ಥಿತಿಯನ್ನು ಹೊಂದುವ ಶಕ್ತಿಯಿದೆ ಎಂಬುದು ನನ್ನ ಬಲವಾದ ನಂಬಿಕೆ. ಈ ನಿಟ್ಟಿನಲ್ಲಿ ನಾನು ಪ್ರತಿಕ್ಷಣವೂ ನನ್ನ ಯೋಚನೆಗಳು ಮತ್ತು ನಡವಳಿಕೆಗಳನ್ನು ಪರೀಕ್ಷಿಸಿಕೊಳ್ಳುತ್ತಿರುತ್ತೇನೆ.

ಕುಟುಂಬದಾಚೆಯ ನನ್ನ ಅನುಭವಗಳು ಜೈವಿಕ ಲಿಂಗ ವ್ಯತ್ಯಾಸಗಳಾಚೆಗಿರುವ ಸಾಮಾಜಿಕ ಅಸಮಾನತೆಗಳ ಅರಿವನ್ನು ಮೂಡಿಸಿವೆ. ನನ್ನ ಜೀವನದುದ್ದಕ್ಕೂ ನನ್ನ ಗ್ರಹಿಕೆಗೆ ಸಿಲುಕಿರುವ ಈ ಲಿಂಗ ಅಸಮಾನತೆಗಿರುವ ಹಲವು ಕಾರಣಗಳ ಬಗ್ಗೆ ನಿರಂತರ ಅಧ್ಯಯನಕ್ಕಿಳಿಯುವಂತೆ ಮಾಡಿವೆ. ನನ್ನ ಜೀವನದ ಹಲವು ಸ್ತರಗಳಲ್ಲಿ ನಾನೂ ಲಿಂಗ ಅಸಮಾನತೆಯ ಬಾಹುಗಳಿಗೆ ಸಿಲುಕಿರುವುದು ನಿಜ. ಆದರೆ ಅವಮಾನಗೊಂಡಾಗ, ಅವಕಾಶ ವಂಚಿತಳಾದಾಗ, ನೋವುಂಡಾಗ ನನ್ನಲ್ಲಿ ಮತ್ತಷ್ಟು ಅನುಭವಗಳ ಪ್ರಪಂಚಗಳು ತೆರೆದುಕೊಂಡಿವೆ.

ಮೊದಮೊದಲು ಈ ಅವಮಾನಗಳು ನನ್ನಲ್ಲಿ ಕ್ರೋಧವನ್ನು ಉಂಟುಮಾಡು ತ್ತಿದ್ದರೂ ಮುಂದಿನ ದಿನಗಳಲ್ಲಿ ಈ ಅವಮಾನಗಳೇ ನನ್ನಲ್ಲಿ ಇನ್ನೂ ಹೆಚ್ಚು ಪ್ರೀತಿಸುವ ಅಂತಃಕರಣವನ್ನು ಬೆಳೆಸಿಕೊಳ್ಳಲು ಸಹಾಯ ಮಾಡಿವೆ. ನೋವುಂಡಿರುವ ನಮಗೆ ಇತರರ ನೋವು ತಕ್ಷಣವೇ ತಾಕುತ್ತದೆ. ಯಾರನ್ನೂ ಅವಮಾನಿಸಬಾರದು ಎಂಬ ಜವಾಬ್ದಾರಿ ತಂದುಕೊಡುತ್ತದೆ.

ಹಾಗೆಯೇ ಅವಕಾಶವಂಚಿತ ನನ್ನ ಗೆಳತಿಯರ ಪರ ನನ್ನ ಪ್ರಾಮಾಣಿಕ ಪ್ರಯತ್ನವಿರಬೇಕು ಎಂಬುದನ್ನು ಕಲಿಸಿಕೊಟ್ಟಿದೆ. ನೇರಾನೇರ ಮಾನವ ಹಕ್ಕುಗಳನ್ನು ತೀವ್ರವಾಗಿ ಪ್ರತಿಪಾದಿಸುವ ಮನಸ್ಸನ್ನು ತಂದುಕೊಟ್ಟಿದೆ.

ಆದರೆ ಲಿಂಗ ಅಸಮಾನತೆ ಉಸಿರಾಡುತ್ತಿರಲು ಮಹಿಳೆಯರಾದ ನಾವೂ ಪಾಲುದಾರರಾಗಿರುವುದು ನನಗೆ ವಿಷಾದ ತಂದುಕೊಟ್ಟಿದೆ. ಹೆಣ್ಣು ಕೂಡ ಹಲವು ಸಂದರ್ಭಗಳಲ್ಲಿ ಮನುಷ್ಯ ಸ್ವಭಾವಗಳಾದ ಅಹಂಕಾರ, ದ್ವೇಷ, ಮತ್ಸರ, ಇನ್ನಿತರ ಭಾವೋದ್ವೇಗಗಳಿಗೆ ಒಳಗಾಗುತ್ತ ಇನ್ನೊಬ್ಬ ಹೆಣ್ಣಿಗೆ ಕೊಡುವ ಹಿಂಸೆ ಕೆಲವೊಮ್ಮೆ ಲಿಂಗಾತೀತವಾಗಿ ಗಂಡಸರಿಗೂ ಹರಿಯುವುದನ್ನು ನಾನು ಗಮನಿಸಿದ್ದೇನೆ, ಅನುಭವಿಸಿದ್ದೇನೆ. ಇಲ್ಲಿ ನಮಗೆ ಬೇಕಾಗಿರುವುದು ಜೀವಪ್ರೀತಿಯ ಮೌಲ್ಯಗಳೇ ಹೊರತು ಮತ್ತೇನಲ್ಲ. 

***

ದೇಹ ರಚನೆ ಮೀರಿ ಇನ್ನೇನಿಲ್ಲ!

ನಾನು ಹೆಣ್ಣಾಗಿ ಹುಟ್ಟಿದ ಒಂದೇ ಕಾರಣಕ್ಕೆ ಹೆಮ್ಮೆ ಮತ್ತು ಬೇಸರ ಪಟ್ಟ ಕ್ಷಣಗಳಾವುವು ಅಂತ ಕೇಳಿಕೊಂಡರೆ ಉತ್ತರ ಸುಲಭಕ್ಕೆ ಹೊಳೆಯುವುದಿಲ್ಲ. ಏಕೆಂದರೆ ದೇಹ ರಚನೆಯನ್ನು ಹೊರತುಪಡಿಸಿ ಹೆಣ್ಣು-ಗಂಡುಗಳಿಗೆ ಇನ್ನಾವುದೇ ವ್ಯತ್ಯಾಸವಿಲ್ಲ ಎಂಬುದನ್ನೇ ನಾನು ಗಾಢವಾಗಿ ನಂಬುತ್ತೇನೆ. ‘ಹೆಣ್ಣಾಗಿದ್ದಕ್ಕೆ ಅವಳು ಸಹನಾಮೂರ್ತಿ, ಗಂಡಾಗಿದ್ದಕ್ಕೆ ಅವನಿಗೆ ಕೋಪ ಹೆಚ್ಚು ಪಾಪ’ ಎಂಬುದೆಲ್ಲ ನಾವು ಸಾಮಾಜಿಕವಾಗಿ ಕಟ್ಟಿಕೊಂಡ ‘ಮಿಥ್’ ಅಂದರೆ ಕಟ್ಟುಕತೆಗಳಷ್ಟೇ. ನಾಜೂಕಾಗಿ ಅಡುಗೆ ಮಾಡಿಟ್ಟು ಮಕ್ಕಳಿಗೆ ತಾಳ್ಮೆಯಿಂದ ಹೋಮ್‍ವರ್ಕ್ ಮಾಡಿಸುವ ಗಂಡಸರೂ, ಕಿರಿಕಿರಿಯಾದಾಗ ಚಪ್ಪಲಿ ಮೆಟ್ಟಿ ದಾಪುಗಾಲಲ್ಲಿ ಮನೆಯಿಂದ ಹೊರನಡೆದುಬಿಡಬಲ್ಲ ಹೆಂಗಸರೂ ನಮ್ಮ ನಡುವೆಯೇ ಇದ್ದಾರೆ.

ಹಾಗೆಯೇ ಹೆಣ್ಣಿಗಿಂತ ಗಂಡು ಶಕ್ತಿಶಾಲಿ ಎಂಬುದನ್ನೂ ನಾನು ಒಪ್ಪುವುದಿಲ್ಲ. ಏಕೆಂದರೆ ಗಂಡಸರಿಗಿಂತ ಶಕ್ತಿಶಾಲಿಯಾದ ಎಷ್ಟೋ ಹೆಂಗಸರನ್ನು ನಾನು ಕಂಡಿದ್ದೇನೆ. ಅಷ್ಟಲ್ಲದೇ ದೈಹಿಕ ಕಸರತ್ತು ಮತ್ತು ಸೂಕ್ತ ತಂತ್ರಗಳ ಮೂಲಕ ಯಾವ ಹೆಣ್ಣು ಬೇಕಾದರೂ ಎಂಥ ಗಂಡನ್ನೂ ಸದೆಬಡಿಯಬಹುದು ಎಂಬುದನ್ನು ಒಪ್ಪುತ್ತೇನೆ.
ಹೀಗಾಗಿ ದೇಹ ರಚನೆಯನ್ನಷ್ಟೇ ಗಮನದಲ್ಲಿಟ್ಟುಕೊಂಡು ಹೆಣ್ಣಿನ ದೇಹದಲ್ಲಿ ಹುಟ್ಟಿದ ಕಾರಣಕ್ಕಷ್ಟೇ ನನಗಾದ ಒಂದು ಮಧುರ ಅನುಭವವನ್ನು, ಮತ್ತೊಂದು ಬೇಸರವನ್ನು ಇಲ್ಲಿ ಹಂಚಿಕೊಳ್ಳಬಯಸುವೆ.

ಕಳೆದ ವರ್ಷ ಹುಬ್ಬಳ್ಳಿಯ ನಮ್ಮ ತಾಯಿಯ ಮನೆಗೆ ಹೋದಾಗ ನನ್ನ ಬಾಲ್ಯದ ಗೆಳತಿ ಡೀನಾ ಮನೆಗೆ ಬಂದಿದ್ದಳು. ಅವಳಿಗೆ ನಾಲ್ಕು ತಿಂಗಳ ಮುದ್ದಾದ ಮಗುವಿತ್ತು. ಏನೇನೋ ಮಾತನಾಡಿಯಾದ ಮೇಲೆ ಮಗುವನ್ನು ಎತ್ತಿಕೊಳ್ಳುತ್ತೀಯೇನು ಅಂತ ನನ್ನನ್ನು ಕೇಳಿದಳು. ಅಷ್ಟು ಚಿಕ್ಕ ಮಗುವನ್ನು ಒಮ್ಮೆಯೂ ಎತ್ತಿಕೊಂಡ ಅನುಭವವಿರದ ನಾನು ತುಸು ತತ್ತರಿಸಿದೆ. ಎಡಗೈಯಲ್ಲಿ ಹೀಗೆ ನೆತ್ತಿ ಹಿಡಿದುಕೋ, ಬಲಗೈಯಲ್ಲಿ ಹೀಗೆ ಸೊಂಟಕ್ಕೆ ಆಸರೆ ಕೊಡು ಅಂತೆಲ್ಲ ಹೇಳುತ್ತ ಆ ಪುಟ್ಟ ಮೃದು ದೇವರಂಥ ಮಗುವನ್ನು ಡೀನಾ ನನ್ನ ಮಡಿಲಲ್ಲಿರಿಸಿದಳು.

ಅವರಮ್ಮನ ದನಿಗೋ, ಮಡಿಲು ಬದಲಾಗಿದ್ದಕ್ಕೋ ಮಲಗಿದ್ದ ಮಗು ಒಮ್ಮೆಲೇ ಎಚ್ಚರಗೊಂಡಿತು. ತನ್ನ ಪುಟ್ಟ ಪುಟ್ಟ ಕಣ್ಣು ಕೈಗಳನ್ನು ಅತ್ತಿತ್ತ ಸಂಜ್ಞೆಮಾಡಿ, ತುಸು ಕುಸುಕುಸು ಅಂದು ಎದೆಯ ಬಳಿ ಮುಖವಿಟ್ಟು ನನ್ನನ್ನೇ ಅವರಮ್ಮ ಅಂದುಕೊಂಡಿತು. ಕಣ್ಣಲ್ಲಿ ಕಣ್ಣಿಟ್ಟು ದೃಷ್ಟಿ ಸೇರಿಸಿ ನಗುವ ಮಿನುಗಿಸಿತು. ಡೀನಾ ಒಮ್ಮೆಲೇ ಎಚ್ಚೆತ್ತು ‘ಓಹ್, ಹಸಿವಾಯ್ತು ಅಂತ ಕಾಣ್ತದೆ’ ಅಂತಂದು ಮಗುವನ್ನು ತನ್ನ ಬಳಿ ಕರೆದುಕೊಂಡು ಹಾಲು ಕುಡಿಸಲು ತೊಡಗಿದಳು.

ಇದೆಲ್ಲ ಒಂದರೆಕ್ಷಣದಲ್ಲಿಯೇ ನಡೆದುಹೋಗಿದ್ದು. ಆದರೆ ಮಗುವಿನ ಮುದ್ದು ಸ್ಪರ್ಶದ ಈ ಮಧುರ ಅನುಭವ ನನ್ನಲ್ಲಿ ವಿವರಿಸಲಾಗದ ರೋಮಾಂಚನವನ್ನು ಉಂಟುಮಾಡಿತು. ಗಂಡು ದೇಹದಲ್ಲಿ ಹುಟ್ಟಿದ್ದರೆ ಈ ಅನುಭವ ಸವಿಯಲು ಸಾಧ್ಯವಿರಲಿಲ್ಲವಲ್ಲ ಎಂಬ ಭಾವನೆ ಒಂದು ಕ್ಷಣ ಮಿಂಚಿಹೋಗಿದ್ದು ಸುಳ್ಳಲ್ಲ.

ಇನ್ನು ಹೆಣ್ಣುದೇಹದ ಕುರಿತು ಬೇಸರದ ವಿಷಯಕ್ಕೆ ಬರುವುದಾದರೆ, ಗಂಡಾಗಿ ಹುಟ್ಟಿದಾಗ ಆ ಜೆಂಡರ್‌ನ ಜೊತೆಗೇ ಒಂದು ವಿಚಿತ್ರ ಆತ್ಮವಿಶ್ವಾಸವನ್ನು ನಮ್ಮ ಸಮಾಜವೇ ದಯಪಾಲಿಸಿಬಿಡುತ್ತದೆ. ಇಲ್ಲಿ ನಾನು ಕೇವಲ ಭಾರತೀಯ ಸಮಾಜದ ಬಗ್ಗೆ ಮಾತನಾಡುತ್ತಿಲ್ಲ. ನಾವು ಮುಂದುವರೆದಿದೆ ಎಂದುಕೊಂಡ ಯಾವುದೇ ಪಾಶ್ಚಿಮಾತ್ಯ ಸಮಾಜದಲ್ಲೂ ಹೆಣ್ಣನ್ನು ಎರಡನೆಯ ದರ್ಜೆಯ ನಾಗರಿಕಳನ್ನಾಗಿಯೇ ನೋಡಲಾಗುತ್ತದೆ. ಹೆಣ್ಣುದೇಹದಲ್ಲಿ ಹುಟ್ಟಿದ ಒಂದೇ ಕಾರಣಕ್ಕೆ ವಿಲಕ್ಷಣ ಪೂರ್ವಾಗ್ರಹಕ್ಕೆ ಒಳಗಾಗಬೇಕಾಗುತ್ತದೆ.

ಇದು ಖಂಡಿತ ಸಹಜವಲ್ಲ ಅಂತ ನನ್ನ ಅನಿಸಿಕೆ. ಮಾನವ ಸಂತತಿ ಮುಂದುವರೆಯಲು ನೆರವಾಗುವ ಸೃಷ್ಟಿಕಾರ್ಯಕ್ಕೆ ಮಾತ್ರ ಎರಡು ಬಗೆಯ ದೇಹದಲ್ಲಿ ಹುಟ್ಟಿರುವ ಮನುಷ್ಯರಲ್ಲಿ ಒಂದು ಜೆಂಡರ್ ಶ್ರೇಷ್ಠವಾದದ್ದು, ಇನ್ನೊಂದು ಕನಿಷ್ಠವಾದದ್ದು ಎಂಬ ವಾದವೇ ಅರ್ಥಹೀನ. ಹೆಣ್ಣುಗಳನ್ನು ಈ ಪಕ್ಷಪಾತಕ್ಕೆ ತನಗೇ ಗೊತ್ತಿಲ್ಲದೇ ಇಡೀ ಸಮಾಜ ಗುರಿಯಾಗಿಸುತ್ತದೆ.

ಹೀಗಾಗಿ ನನ್ನನ್ನೂ ಒಳಗೊಂಡು ಪ್ರಪಂಚದ ಯಾವುದೇ ಹೆಣ್ಣು ದನಿಯೆತ್ತಿದಳೆಂದರೆ, ಆತ್ಮವಿಶ್ವಾಸ ತೋರಿದಳೆಂದರೆ, ಅದನ್ನು ನಮಗ್ಯಾರೂ ಹುಟ್ಟಿನಿಂದ ಕೊಟ್ಟಿದ್ದಲ್ಲ, ಕಾಲಕ್ರಮೇಣ ಹಟತೊಟ್ಟು ಪಡೆದದ್ದು. ತನ್ನತನವನ್ನು ಕಾಪಾಡಿಕೊಳ್ಳುವ ಒಂದು ಸಣ್ಣ ಸಹಜ ವಾಂಛೆಗೂ ಹೆಣ್ಣು ಪ್ರತಿಕ್ಷಣ ಸಮಾಜದ ಜೊತೆ ಗಂಡಿಗಿಂತ ಹೆಚ್ಚು ಹೋರಾಡಬೇಕು.

ಕೆಲವೊಮ್ಮೆ ಈ ಒದ್ದಾಟದಲ್ಲಿ ಪ್ರಯಾಸಪಡುವಾಗ, ‘ಗಂಡು’ ಎಂಬ ಜೆಂಡರ್‌ನ ಜೊತೆಯಲ್ಲೇ ಉಚಿತವಾಗಿ ದೊರಕುವ ಆತ್ಮವಿಶ್ವಾಸಕ್ಕೇ ಮನಸ್ಸು ಹಂಬಲಿಸಿದ್ದಿದೆ.

***

ಆ ಮುಕ್ತತೆ ಈಗೇಕಿಲ್ಲ

‘ನಾನೊಂದು ಮಾಂತ್ರಿಕ ಹೆಣ್ಣು, ಅದ್ಭುತ ಸೃಷ್ಟಿ - ನಾನು ನಾನೇ! ಈಗ ನಿಮಗೆ ತಿಳಿಯಬಹುದು ನಾನೇಕೆ ತಲೆತಗ್ಗಿಸಿ ನಡೆಯುವುದಿಲ್ಲವೆಂದು ಹಾಗೆ ನೋಡಿದರೆ ನಾನು ಕಿರುಚುವುದಿಲ್ಲ, ಕುಣಿಯುವುದಿಲ್ಲ, ಜೋರಾಗಿ ಮಾತನಾಡುವುದೂ ಇಲ್ಲ. ಆದರೂ ನಾನು ಹಾದುಹೋಗುವಾಗ ನಿಮಗೆ ಹೆಮ್ಮೆ ಎನಿಸುತ್ತದೆ’
- ಮಾಯಾ ಏಂಜಲೋ

ಅಜ್ಜಿಯ ಕಬ್ಬಿಣದ ಪೆಟ್ಟಿಗೆಯಲ್ಲಿ ಒಂದು ಅಂಚು ಕಪ್ಪಾದ ಸೀರೆ, ಬೆರಳಿಗೇರದ ಉಂಗುರ, ಬೆಳ್ಳಿ ಕಂದಿದ ಕುಂಕುಮದ ಭರಣಿ, ಹರಳಿರದ ಒಂಟಿ ನಕ್ಷತ್ರ ಓಲೆ ಇತ್ಯಾದಿ ವಸ್ತುಗಳನ್ನು ಕಂಡಿದ್ದ ಅಮ್ಮನಿಗೆ ಅವು ಹೆಣ್ಣಿನ ಬದುಕಿನ ಅವ್ಯಕ್ತ ಮಜಲುಗಳ ರೂಪಕವಾಗಿ ಕಂಡು, ಎಲ್ಲವೂ ಮುಚ್ಚಿಟ್ಟ ಅಡುಗೆಯ ಹಾಗೆ ನಿಗೂಢವಾಗಿತ್ತು. ಪಕ್ವಾನ್ನದ ಪರಿಮಳವನ್ನು ಊಹಿಸಿಕೊಂಡು ಅರ್ಥ ಮಾಡಿಕೊಂಡಿದ್ದ ಅಮ್ಮನೆಂಬ ಕವಿಗೆ (ಎಂ.ಆರ್.ಕಮಲಾ) ತಾನು ಹೆಚ್ಚು ಮುಕ್ತವಾಗಿರ ಬೇಕೆಂಬ ಭಾವ ಬಲಿದಿತ್ತು. ಹಾಗೆ ಬದುಕನ್ನು ನಡೆಸುತ್ತಿದ್ದಾಳೆ ಕೂಡ. ನಾನು ಹುಟ್ಟಿದ ಸಂದರ್ಭ ದಲ್ಲಿ ಹೆಣ್ಣಾಗುವುದು ಹೆಮ್ಮೆ ಎನ್ನುವ ಭಾವದಲ್ಲಿ ‘ರಿಪಬ್ಲಿಕ್ ನರ್ಸಿಂಗ್ ಹೋಂನ ಲೇಬರ್ ವಾರ್ಡ್’ ಎಂಬ ಕವಿತೆಯೊಂದನ್ನು ಬರೆದಿದ್ದಳು. ಕಾಲೇಜಿಗೆ ಬರುವವರೆಗೂ ನಾನದನ್ನು ಓದಿಯೂ ಇರಲಿಲ್ಲ. ಓದದೆಯೂ ಪ್ರತಿಕ್ಷಣವೂ ಹೆಣ್ತನದ ಖುಷಿಯನ್ನು ಅನುಭವಿಸುವ ಮುಕ್ತ ಪರಿಸರದಲ್ಲಿ ಬಾಲ್ಯ ಕಳೆದಿದ್ದೆ. ನಾನು ಮತ್ತು ನನ್ನ ಅಣ್ಣ ಸಿನಿಮಾ, ಸಂಗೀತ, ನೃತ್ಯ, ಸಾಹಿತ್ಯ ವಿಷಯಗಳೆಲ್ಲವನ್ನು ಸಮಾನವಾಗಿ ಚರ್ಚಿಸುತ್ತಿದ್ದೆವು.

ಕ್ರಿಕೆಟ್ಟು, ಗಿಲ್ಲಿ ದಾಂಡಿನಂಥ ಆಟಗಳನ್ನು ಒಟ್ಟಿಗೆ ಆಡುತ್ತಿದ್ದೆವು. ಯಾವ ವಿಷಯದಲ್ಲೂ ಹೆಣ್ಣು-ಗಂಡು ಎಂಬ ಭೇದವೇ ಇರಲಿಲ್ಲ. ಮೂರು ತಲೆಮಾರಿನಿಂದಲೂ ಹೆಣ್ಣು ಮಕ್ಕಳಿರದ ನಮ್ಮ ಕುಟುಂಬದಲ್ಲಿ ನನ್ನ ಹುಟ್ಟು ಅತ್ಯಂತ ಖುಷಿ ತಂದಿತ್ತು. ನನ್ನ ಹಾಡು, ನೃತ್ಯ, ಚಿತ್ರಕಲೆ, ನಾಟಕ, ಆಟ, ಕಲಿಕೆ ಪ್ರತಿಯೊಂದು ಗಳಿಗೆಯೂ ಅಮ್ಮನ ಸಂಭ್ರಮವನ್ನು ಇಮ್ಮಡಿಸಿ ಅದು ನನ್ನ ಮುಖ ದಲ್ಲೂ ಪ್ರತಿಫಲಿಸಿ ಹೆಣ್ಣೆನ್ನುವ ಹೆಮ್ಮೆಯನ್ನು ಹೆಚ್ಚಿಸುತ್ತಿತ್ತು. ಆದರೆ ಇಷ್ಟು ಮುಕ್ತವಾಗಿ ಬೆಳೆಸಿದ್ದ ಅಮ್ಮ, ನಾನು ಹೈಸ್ಕೂಲ್ ಮೆಟ್ಟಿಲೇರುತ್ತಿದ್ದಂತೆ ಕೊಂಚ ತಡವಾಗಿ ಬಂದರೂ ತಳಮಳಗೊಳ್ಳುತ್ತಿದ್ದಳು, ಜೋಪಾನ ವಾಗಿರಬೇಕೆಂಬ ಸಂದೇಶವನ್ನು ಪದೇ ಪದೇ ಸೂಚ್ಯವಾಗಿ ರವಾನಿಸುತ್ತಿದ್ದಳು. ಹುಡುಗ ರೊಂದಿಗೆ ಮಾತನಾಡುವುದನ್ನು ಎಂದೂ ವಿರೋಧಿಸದ ಅಮ್ಮ, ಬೀದಿಯಲ್ಲಿ ನಿಂತು ಮಾತನಾಡುತ್ತಿದ್ದಾಗಲೆಲ್ಲ, ‘ಒಳಗೆ ಬಂದು ಎಷ್ಟಾದರೂ ಹರಟೆ ಹೊಡಿಯಿರಿ’ ಎಂದು ನಗುತ್ತಲೇ ಹೇಳುತ್ತಿದ್ದಳು. ಅವಳ ನಗುವಿನ ಹಿಂದೆ ನಿರಾಳತೆಯೇ ಇರುತ್ತಿರಲಿಲ್ಲ.

ಏಕೋ ಅವಳು ನನ್ನ ಸ್ವಾತಂತ್ರ್ಯ ಕಸಿದುಕೊಳ್ಳುತ್ತಿದ್ದಾಳೆ, ಕಟ್ಟಿಹಾಕುತ್ತಿದ್ದಾಳೆ ಎಂದು ಅನ್ನಿಸಿದ್ದು ನಿಜ. ಅವಳಿಗೆ ಹೆದರಿಕೆ, ಅನುಮಾನಗಳು ಇದ್ದದ್ದು ತಾನು ಆತ್ಮವಿಶ್ವಾಸ ನೀಡಿ ಬೆಳೆಸಿದ ಮಗಳ ಮೇಲಲ್ಲ, ಹೊರಗಿನ ಕ್ರೂರ ಸಮಾಜದ ಬಗ್ಗೆ ಎಂಬುದು ತಿಳಿದಿದ್ದು ತೀರಾ ಇತ್ತೀಚೆಗಷ್ಟೇ. ಕಂಡವರೆಲ್ಲ ಹೆಣ್ಣು ಮಕ್ಕಳು ಎಚ್ಚರದಿಂದಿರಬೇಕು ಎಂದು ಉಪದೇಶದ ಮಾತುಗಳನ್ನಾಡಲು ಆರಂಭಿಸಿದಾಗ ‘ಯಾಕಾದರೂ ಹೆಣ್ಣಾಗಿ ಹುಟ್ಟಿದೆ’ ಎಂದೆನಿಸಿದ್ದಿದೆ. ಈಗ ಸುದ್ದಿ ಪತ್ರಿಕೆಗಳಲ್ಲಿ ಬರುವ ಭಯಾನಕ ಘಟನೆ ಗಳು ತಲ್ಲಣಿಸುವಂತೆ ಮಾಡಿದರೂ ಬದುಕನ್ನು ಸವಾಲಿನಂತೆ ಎದುರಿಸುವ ದಿಟ್ಟತನವನ್ನು ನನ್ನ ಬಾಲ್ಯ ನನಗೆ ನೀಡಿದೆ.

ಹೆಣ್ಣು ಎಂಬ ವಿಶಿಷ್ಟತೆ, ಅಸ್ಮಿತೆ ಕೊಡುವ ಶಕ್ತಿ ಅಮ್ಮ ನನ್ನ ಮೇಲೆ ಬರೆದ ಈ ಪದ್ಯದಲ್ಲಿ ಅತ್ಯಂತ ಸಾಂದ್ರವಾಗಿ ಅಭಿವ್ಯಕ್ತಗೊಂಡಿದೆ. ಇದರ ಮುಂದುವರಿಕೆಯೇ ನಾನು ಅಥವಾ ಎಲ್ಲ ಹೆಣ್ಣು ಮಕ್ಕಳು!

ಹೌದು ಮಗು, ಹೆಣ್ಣೆಂದರೆ ನೋವ ನುಂಗಬೇಕು, ಬಿಕ್ಕದೆ ಮುಕ್ಕಬೇಕು, ಆದರೂ ಜೀವಸೃಷ್ಟಿಯ ಹರ್ಷ, ಆ ಸ್ಪರ್ಶ ಗಂಡಿಗೆಲ್ಲಿ ದಕ್ಕಬೇಕು! 

***

ಸೂರ್ಯಗೋಲವೇ ಚಂದಿರನಾದಾಗ...

‘ಪರಂಪರೆಯ ಮಣ್ಣ ಪದರದೊಳಗೆ ಅದೆಷ್ಟೇ ತುಳಿದರೂ, ಮುಚ್ಚಿದರೂ, ದಮನಿಸಿದಷ್ಟೂ ಗಟ್ಟಿಯಾಗಿ ಎದ್ದು ನಿಂತಿದ್ದಾಳೆ ಹೆಣ್ಣು; ಸೂರ್ಯಗೋಲವನ್ನು ಚಂದಿರನಂತೆ ಹಿತವಾಗಿಸಿ ಕೊಂಡು ಮೈತುಂಬ ಚಿಗುರು ಹೊತ್ತ ಚೈತನ್ಯವಾಗಿ…’ ಎಂದೆನ್ನುವ ನಭಾ ಒಕ್ಕುಂದ ‘ಕಾಮನಬಿಲ್ಲು’ ರೂಪಿಸಿದ ಹುಡುಗಿಯರ ಸಂಚಿಕೆಗೆ ಅಂದವಾದ ಕಲಾಕೃತಿಯನ್ನು ರಚಿಸಿಕೊಟ್ಟವಳು.

ಆಕೆ ಧಾರವಾಡದ ಕರ್ನಾಟಕ ಕಲಾ ಕಾಲೇಜಿನಲ್ಲಿ ಪಿ.ಯು.ಸಿ ಪ್ರಥಮ ವರ್ಷದ ವಿದ್ಯಾರ್ಥಿನಿ. ಚಿತ್ರ ರಚನೆ, ಬರಹಗಳ ಬಗ್ಗೆ ಅವಳಿಗೆ ಅಪಾರ ಪ್ರೀತಿ. ನಭಾಳ ಕಾವ್ಯ ಕೃಷಿಯಲ್ಲಿ ಈಗಾಗಲೇ ‘ಚಿಟ್ಟೆ’ ಕವನ ಸಂಕಲನ ಗರಿಬಿಚ್ಚಿದೆ. ಅವಳ ಕುಂಚದಲ್ಲಿ ಅರಳಿದ ಕಲಾಕೃತಿಗಳ ಏಕವ್ಯಕ್ತಿ ಪ್ರದರ್ಶನ ಕಲಾಪ್ರಿಯರ ಮೆಚ್ಚುಗೆ ಗಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT