ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಯ ಕ್ಷತ್ರಿಯ ಸಮಾಜದ ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಾಯ

ಕಲಬುರ್ಗಿಯಲ್ಲಿ ರಾಜ್ಯಮಟ್ಟದ ಪದಾಧಿಕಾರಿಗಳ ಸಾಧಾರಣ ಸಭೆ
Last Updated 25 ಆಗಸ್ಟ್ 2019, 14:33 IST
ಅಕ್ಷರ ಗಾತ್ರ

ಕಲಬುರ್ಗಿ: ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದರೂ ಕುಶಲಕರ್ಮಿ ವೃತ್ತಿಗಳಲ್ಲಿ ತೊಡಗಿರುವ ಸೋಮವಂಶ ಆರ್ಯ ಕ್ಷತ್ರಿಯ ಸಮಾಜದ ಅಭಿವೃದ್ಧಿಗೆ ಸರ್ಕಾರ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಸಮಾಜದ ಅಭಿವೃದ್ಧಿಗಾಗಿ ನಿಗಮ ಅಥವಾ ಮಂಡಳಿಯನ್ನು ಸ್ಥಾಪಿಸಬೇಕು ಎಂದು ಕರ್ನಾಟಕ ರಾಜ್ಯ ಸೋಮವಂಶ ಆರ್ಯ ಕ್ಷತ್ರಿಯ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಅಶೋಕ ಎಂ.ಗಾಯಕವಾಡ ಒತ್ತಾಯಿಸಿದರು.

ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಮಾಜದ ರಾಜ್ಯಮಟ್ಟದ ಪದಾಧಿಕಾರಿಗಳ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಆರ್ಯ ಕ್ಷತ್ರಿಯ ಸಮಾಜದವರು ಆರ್ಥಿಕವಾಗಿ ಬಹಳಷ್ಟು ಹಿಂದುಳಿದಿದ್ದು, ಇಂದಿಗೂ ಎಷ್ಟೋ ಜನರಿಗೆ ಸ್ವಂತ ಮನೆಗಳಿಲ್ಲ. ಉದ್ಯೋಗ ಭದ್ರತೆಯಿಲ್ಲ. ಹೀಗಾಗಿ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಇದೇ 26ರಂದು ಕಲಬುರ್ಗಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲಾಗುತ್ತಿದೆ ಎಂದರು.

ಸಮಾಜದ ಕುಲದೇವತೆ ನಿಮಿಷಾಂಬಾ ದೇಗುಲ ಮೈಸೂರಿನ ಗಂಜಾಂನಲ್ಲಿದ್ದು, ಅದು ಮುಜರಾಯಿ ಇಲಾಖೆ ಸುಪರ್ದಿಯಲ್ಲಿದೆ. ಆ ದೇವಸ್ಥಾನದ ನಿರ್ವಹಣೆಯನ್ನು ಸಮಾಜದ ಆಡಳಿತಕ್ಕೆ ಒಪ್ಪಿಸಬೇಕು. ಇಲ್ಲವೇ ಆಡಳಿತ ಮಂಡಳಿಯನ್ನು ಆರ್ಯ ಕ್ಷತ್ರಿಯ ಸಮಾಜದ ಇಬ್ಬರನ್ನು ಸದಸ್ಯರನ್ನಾಗಿ ನೇಮಕ ಮಾಡಬೇಕು. ಸಮಾಜದ ವತಿಯಿಂದ ಶಿಕ್ಷಣ ಸಂಸ್ಥೆ ಸ್ಥಾಪಿಸಲು ಉಚಿತವಾಗಿ 10 ಎಕರೆ ಸರ್ಕಾರಿ ಜಮೀನನ್ನು ನೀಡಬೇಕು. ಪ್ರತಿ ಜಿಲ್ಲೆ ಹಾಗೂ ತಾಲ್ಲೂಕುಗಳಲ್ಲಿ ವಿದ್ಯಾರ್ಥಿ ನಿಲಯ ಕಟ್ಟಿಸಿಕೊಡಬೇಕು. ಸಮುದಾಯ ಭವನವನ್ನು ನಿರ್ಮಿಸಬೇಕು. ಕೆಲವು ಕಡೆ ಸಮಾಜದ ಜಾಗ ಇದ್ದು, ಅಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಧನ ಸಹಾಯ ಮಾಡಬೇಕು. ಸಣ್ಣ ಪುಟ್ಟ ಉದ್ಯೋಗ ಮಾಡಿಕೊಂಡು ಉಪಜೀವನ ನಡೆಸುತ್ತಿರುವ ಸಮಾಜದ ಜನರಿಗೆ ಬಡ್ಡಿ ರಹಿತ ಸಾಲ ಹಾಗೂ ಶೈಕ್ಷಣಿಕ ಸಾಲ ಕೊಡುವ ವ್ಯವಸ್ಥೆ ಮಾಡಬೇಕು. ಪ್ರವರ್ಗ 1ರಲ್ಲಿರುವವರಿಗೆ ಶೇ 4ರಷ್ಟು ಮೀಸಲಾತಿ ಇದೆ. ಇದರಿಂದಾಗಿ ಸಮಾಜದವರಿಗೆ ಹೆಚ್ಚು ಸೌಲಭ್ಯ ಸಿಗುತ್ತಿಲ್ಲ. ಹೀಗಾಗಿ, ಆ ಪ್ರಮಾಣವನ್ನು ಶೇ 7ಕ್ಕೆ ವಿಸ್ತರಿಸಬೇಕು. ಇಲ್ಲವೇ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದರು.

ಆರ್ಯ ಕ್ಷತ್ರಿಯ ಸಮಾಜದ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಮೋಹನರಾವ್‌ ಪಿಂಪಳೆ ಮಾತನಾಡಿ, ‘ಡಿಸೆಂಬರ್‌ನಲ್ಲಿ ಕಲಬುರ್ಗಿಯಲ್ಲಿ ವಧುವರರ ಸಮಾವೇಶ ನಡೆಯಲಿದ್ದು, ಆಸಕ್ತರು ಇದರಲ್ಲಿ ಭಾಗವಹಿಸಬಹುದು’ ಎಂದು ಹೇಳಿದರು.

ಮುಖಂಡರಾದ ಶ್ರೀನಿವಾಸ ಪೇಟಕರ, ಗೋವಿಂದರಾಜ ಚಿತ್ತಾಪೂರ, ಪ್ರಕಾಶ ಕಸುಂದೆ, ಸುಧೀರ ದೇವದಾಸ, ಬಾಲಕೃಷ್ಣ ಚಿತ್ರಗಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT