ಅನುದಾನಿತ, ಅನುದಾನರಹಿತ ಶಾಲೆಗಳಿಗೆ ತೂಗುಗತ್ತಿ

7
ಎಸ್ಸೆಸ್ಸೆಲ್ಸಿ: 25ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿಗಳಿದ್ದರೆ ಮಾನ್ಯತೆ ರದ್ದು

ಅನುದಾನಿತ, ಅನುದಾನರಹಿತ ಶಾಲೆಗಳಿಗೆ ತೂಗುಗತ್ತಿ

Published:
Updated:
Deccan Herald

ಕಲಬುರ್ಗಿ: ಜಿಲ್ಲೆಯ ಅನುದಾನಿತ ಮತ್ತು ಅನುದಾನರಹಿತ ಪ್ರೌಢಶಾಲೆಗಳಲ್ಲಿ ಪ್ರಸಕ್ತ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ 25ಕ್ಕಿಂತ ಕಡಿಮೆ ಇದ್ದರೆ ಅಂತಹ ಶಿಕ್ಷಣ ಸಂಸ್ಥೆಗಳ ಮಾನ್ಯತೆಯನ್ನು ನವೀಕರಣ ಮಾಡಬಾರದು ಎಂದು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಖಾಸಗಿ ಶಿಕ್ಷಣ ಸಂಸ್ಥೆಗಳು ನಿಗದಿತ ಸಮಯಕ್ಕೆ ಮಾನ್ಯತೆಯನ್ನು ನವೀಕರಣಗೊಳಿಸುವುದು ಕಡ್ಡಾಯ. ಅಲ್ಲದೆ, ಎಸ್ಸೆಸ್ಸೆಲ್ಸಿಯಲ್ಲಿ ಕನಿಷ್ಠ 25 ವಿದ್ಯಾರ್ಥಿಗಳು ಇರಲೇಬೇಕು ಎಂಬ ಷರತ್ತು ವಿಧಿಸಲಾಗಿದೆ. ಮಾನ್ಯತೆ ನವೀಕರಣವಾಗದಿದ್ದಲ್ಲಿ ಆ ಶಾಲೆಗಳಲ್ಲಿ ಓದುತ್ತಿರುವ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವುದು ಕಷ್ಟ ಸಾಧ್ಯವಾಗುತ್ತದೆ. ಆದ್ದರಿಂದ ಉಪ ನಿರ್ದೇಶಕರು ಈ ಬಗ್ಗೆ ಕೂಡಲೇ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.

ಅನುದಾನಿತ ಪ್ರೌಢಶಾಲೆಗಳಿಗೆ ಸಂಬಂಧಿಸಿದಂತೆ ಮಾನ್ಯತೆ ನವೀಕರಣವಾಗದ ಶಾಲೆಗಳನ್ನು ಪಟ್ಟಿ ಮಾಡಬೇಕು. ನಿಗದಿತ ಸಂಖ್ಯಾಬಲ ಹೊಂದಿರದ ಶಾಲೆಗಳಿಗೆ ನೋಟಿಸ್ ಜಾರಿ ಮಾಡಿ, ಮಾನ್ಯತೆಯನ್ನು ಹಿಂಪಡೆಯುವ ಕುರಿತು ಸಂಬಂಧಿಸಿದ ಮೇಲಾಧಿಕಾರಿಗಳಿಗೆ ಶಿಫಾರಸು ಮಾಡಬೇಕು ಎಂದು ಡಿಡಿಪಿಐಗಳಿಗೆ ಸೂಚಿಸಲಾಗಿದೆ.

ಅನುದಾನರಹಿತ ಶಾಲೆಗಳಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿರುವ ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾಗಬಾರದು ಎಂಬ ಕಾರಣಕ್ಕೆ ಮತ್ತು ಪ್ರತಿ ತರಗತಿಯಲ್ಲಿ ಕನಿಷ್ಠ 25 ವಿದ್ಯಾರ್ಥಿಗಳ ಸಂಖ್ಯೆಗೆ ವಿನಾಯಿತಿ ನೀಡಿ 2018–19ನೇ ಸಾಲಿಗೆ ಮಾತ್ರ ಅನ್ವಯವಾಗುವಂತೆ ಮಾನ್ಯತೆ ನವೀಕರಣಕ್ಕೆ ಅನುಮತಿ ನೀಡಲಾಗಿದೆ.

‘ಸರ್ಕಾರಿ ಪ್ರೌಢಶಾಲೆಗಳಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ 25ಕ್ಕಿಂತ ಕಡಿಮೆ ಇದ್ದರೂ ಪರೀಕ್ಷೆ ಬರೆಯಲು ಯಾವುದೇ ತೊಂದರೆ ಇಲ್ಲ. ಆದರೆ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ ಕನಿಷ್ಠ 25 ವಿದ್ಯಾರ್ಥಿಗಳು ಇರುವುದು ಕಡ್ಡಾಯ. ಇಲ್ಲವಾದಲ್ಲಿ ಅನುದಾನಿತ ಶಾಲೆಗಳಿಗೆ ಸರ್ಕಾರದಿಂದ ನೀಡಲಾಗುತ್ತಿರುವ ಅನುದಾನವನ್ನು ಕಡಿತಗೊಳಿಸಲಾಗುತ್ತದೆ. ಅನುದಾನರಹಿತ ಶಾಲೆಗಳ ಮಾನ್ಯತೆ ರದ್ದುಗೊಳಿಸಲಾಗುತ್ತದೆ’ ಎಂದು ಶಿಕ್ಷಣ ಇಲಾಖೆ ಮೂಲಗಳು ಹೇಳುತ್ತವೆ.

‘ಅನುದಾನರಹಿತ ಶಾಲೆಗಳ ಮಾನ್ಯತೆಯನ್ನು ಒಂದು ವರ್ಷ ನವೀಕರಿಸದಿದ್ದರೆ ಆ ಶಾಲೆಯ ಮಾನ್ಯತೆ ರದ್ದಾಗುತ್ತದೆ. ಇಂತಹ ಸಂದರ್ಭದಲ್ಲಿ ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳನ್ನು ಸಮೀಪದ ಸರ್ಕಾರಿ ಶಾಲೆಗೆ ವರ್ಗಾವಣೆ ಮಾಡಿ, ಬಾಹ್ಯ ವಿದ್ಯಾರ್ಥಿಗಳಾಗಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗುತ್ತದೆ. 2016–17ರಲ್ಲಿ ಜಿಲ್ಲೆಯಲ್ಲಿ 8 ಶಾಲೆಗಳ ವಿದ್ಯಾರ್ಥಿಗಳು ಬಾಹ್ಯ ವಿದ್ಯಾರ್ಥಿಗಳಾಗಿ ಪರೀಕ್ಷೆಗೆ ಹಾಜರಾಗಿದ್ದಾರೆ’ ಎಂಬುದು ಮೂಲಗಳ ವಿವರಣೆ.

‘ಶಿಕ್ಷಣ ಇಲಾಖೆಯು ಪ್ರತಿ ವರ್ಷ ಇಂತಹ ಸುತ್ತೋಲೆಯನ್ನು ಹೊರಡಿಸುತ್ತದೆ. ಆದರೆ, ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಕೊನೆ ಗಳಿಗೆಯಲ್ಲಿ ಪರೀಕ್ಷೆಗೆ ಹಾಜರಾಗಲು ಅವಕಾಶ ಕಲ್ಪಿಸುತ್ತದೆ’ ಎಂಬುದು ಮೂಲಗಳ ಹೇಳಿಕೆ.

**

ಜಿಲ್ಲೆಯಲ್ಲಿರುವ ಶಾಲೆಗಳು

ಶಾಲೆ

ಪ್ರಾಥಮಿಕ ಪ್ರೌಢಶಾಲೆ
ಸರ್ಕಾರಿ 1,777 293
ಅನುದಾನಿತ 215 117
ಅನುದಾನರಹಿತ 727 323

**

ಶಾಲಾವಾರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಮಾಹಿತಿ ಈ ವಾರದಲ್ಲಿ ಲಭ್ಯವಾಗಲಿದೆ. ಕಳೆದ ವರ್ಷ 8 ಅನುದಾನರಹಿತ ಪ್ರೌಢಶಾಲೆಗಳ ಮಾನ್ಯತೆಯನ್ನು ರದ್ದುಗೊಳಿಸಲಾಗಿದೆ.
-ಶಾಂತಗೌಡ ಪಾಟೀಲ, ಡಿಡಿಪಿಐ, ಕಲಬುರ್ಗಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !