ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೆ ಪತ್ರಿಕೆ ಹರಿಬಿಟ್ಟ ವ್ಯಕ್ತಿ ಪತ್ತೆಗೆ ಯತ್ನ

ಪರೀಕ್ಷಾ ಕೇಂದ್ರದ ಅಧೀಕ್ಷಕ ಬದಲು
Last Updated 2 ಜುಲೈ 2020, 17:13 IST
ಅಕ್ಷರ ಗಾತ್ರ

ಕಮಲಾಪುರ: ‘ಇಲ್ಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರದ ಒಳಗೆ ವಿದ್ಯಾರ್ಥಿ ಬಳಿ ಮೊಬೈಲ್‌ ಪತ್ತೆಯಾದ ಕಾರಣ, ಕೇಂದ್ರದ ಅಧೀಕ್ಷಕರನ್ನು ಗುರುವಾರ ಬದಲಾಯಿಸಲಾಗಿದೆ. ಇದರ ಬಗ್ಗೆ ಡಿಡಿಪಿಐ ಅವರಿಂದ ಇದರ ಪೂರ್ಣ ಮಾಹಿತಿ ಕೋರಿದ್ದೇನೆ. ಇನ್ನೆರಡು ದಿನ ಪರೀಕ್ಷೆಗಳು ನಡೆಯಲಿದ್ದು, ಬಳಿಕ ಪರಿಶೀಲಿಸಿ ಕ್ರಮ ಜರುಗಿಸಲಾಗುವುದು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಕಲಬುರ್ಗಿ ವಲಯದ ಹೆಚ್ಚುವರಿ ಆಯುಕ್ತ ನಲಿನ್‌ ಅತುಲ್‌ ಪ್ರತಿಕ್ರಿಯಿಸಿದರು.

‘ಬುಧವಾರ ನಡೆದ ಎಸ್ಸೆಸ್ಸೆಲ್ಸಿ ಸಮಾಜ ವಿಜ್ಞಾನ ಪರೀಕ್ಷೆ ಸಂದರ್ಭದಲ್ಲಿ ಕಮಲಾಪುರ ಸರ್ಕಾರಿ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿ ಮೊಬೈಲ್‌ ಪತ್ತೆಯಾಗಿದ್ದು, ಅದರ ವಾಟ್ಸ್ಆ್ಯಪ್‌ನಲ್ಲಿ ಪ್ರಶ್ನೆಪತ್ರಿಕೆ ಹರಿಬಿಡಲಾಗಿತ್ತು. ಮೊಬೈಲ್‌ ಸೇರಿದಂತೆ ಎಲ್ಲ ಎಲೆಕ್ಟ್ರಾನಿಕ್‌ ಉಪಕರಣ ತಪಾಸಣೆ ಮಾಡಲು ಒಬ್ಬ ಮೊಬೈಲ್‌ ಸ್ವಾಧೀನಾಧಿಕಾರಿಯನ್ನು ನೇಮಿಸಲಗಿದೆ. ಅದಾಗ್ಯೂ ಕೇಂದ್ರದ ಒಳಗೆ ಮೊಬೈಲ್‌ ಬಿಟ್ಟಿದ್ದು ಏಕೆ? ಹೇಗೆ ವಿದ್ಯಾರ್ಥಿ ಅದನ್ನು ಒಳಗೆ ಒಯ್ದ ಎಂದು ಕೂಲಂಕಶವಾಗಿ ಪರಿಶೀಲಿಸಲು ತಿಳಿಸಲಾಗಿದೆ. ಜತೆಗೆ, ವಿದ್ಯಾರ್ಥಿಯ ವಾಟ್ಸ್‌ಆ್ಯಪ್‌ಗೆ ಪ್ರಶ್ನೆ ಪತ್ರಿಕೆಯ ಚಿತ್ರ ಕಳುಹಿಸಿದ ವ್ಯಕ್ತಿಯ ಪತ್ತೆಗೆ ಪ್ರಯತ್ನ ಮುಂದುವರಿದಿದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ವ್ಯಕ್ತಿಯು ಚಿಂಚೋಳಿ ತಾಲ್ಲೂಕಿನ ಚಿಮ್ಮನಚೋಡ ಗ್ರಾಮಸ್ಥನಾಗಿದ್ದು, ಅಲ್ಲಿನ ಸರ್ಕಲ್ ಇನ್ಸ್‌ಪೆಕ್ಟರ್‌ಗೆ ತಿಳಿಸಿದ್ದೇವೆ. ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಅನುವು ಮಾಡಿಕೊಡಲಾಗಿದೆ. ಕೊಠಡಿ ಮೇಲ್ವಿಚಾರಕ ಹಾಗೂ ಮೊಬೈಲ್‌ ಜಾಗೃತದಳದವರ ಕುರಿತು ವರದಿ ಸಿದ್ದಪಡಿಸಲಾಗುತ್ತಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಿವಶರಣಪ್ಪ ಬನ್ನಿಕಟ್ಟಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT