ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ; ಎರಡನೇ ದಿನವೂ ನಿರಾಳ

ನಕಲು ನಡೆಯದಂತೆ ಬಿಗಿ ಕ್ರಮ, ಪಾಲಕರನ್ನು ನಿಯಂತ್ರಿಸಲು ಹೆಚ್ಚಿನ ಪೊಲೀಸ್‌ ಸಿಬ್ಬಂದಿ ನಿಯೋಜನೆ
Last Updated 27 ಜೂನ್ 2020, 16:03 IST
ಅಕ್ಷರ ಗಾತ್ರ

ಕಲಬುರ್ಗಿ: ಜಿಲ್ಲೆಯಲ್ಲಿ ಶನಿವಾರ ನಡೆದ ಎಸ್ಸೆಸ್ಸೆಲ್ಸಿ ಗಣಿತ ಪತ್ರಿಕೆ ಪರೀಕ್ಷೆ ಕೂಡ ಸುಸೂತ್ರವಾಗಿ ಮುಗಿಯಿತು. ಮೊದಲ ದಿನ ಇದ್ದ ಆತಂಕ ಶನಿವಾರ ಕಂಡುಬರಲಿಲ್ಲ. ವಿದ್ಯಾರ್ಥಿಗಳು ತುಸು ನಿರುಮ್ಮಳವಾಗಿಯೇ ಪರೀಕ್ಷಾ ಕೇಂದ್ರಗಳತ್ತ ಹೆಜ್ಜೆ ಹಾಕಿದರು.

ಮೊದಲ ದಿನ ಬೆಳಿಗ್ಗೆ 8ರ ಹೊತ್ತಿಗೇ ಪರೀಕ್ಷಾ ಕೇಂದ್ರಗಳತ್ತ ಧಾವಿಸಿದ್ದ ಮಕ್ಕಳು, ಎರಡನೇ ದಿನ ಅಷ್ಟೊಂದು ಧಾವಂತ ಮಾಡಲಿಲ್ಲ. 10.30ಕ್ಕೆ ಆರಂಭವಾದ ಪರೀಕ್ಷೆಗೆ 10 ಗಂಟೆಯ ಹೊತ್ತಿಗೆ ಬಂದರು. ನಿಯಮಾನುಸಾರ ಎಲ್ಲರನ್ನೂ ನಿರ್ದಿಷ್ಟ ಅಂತರದಲ್ಲಿ ನಿಲ್ಲಿಸಿ, ಥರ್ಮಲ್‌ ಸ್ಕ್ರೀನಿಂಗ್‌ ನಡೆಸಿ ಕೊಠಡಿ ಒಳಗೆ ಬಿಡಲಾಯಿತು. ಏಕಕಾಲಕ್ಕೆ ಬಹಳಷ್ಟು ಜನ ಮುಗಿಬೀಳದೇ, ಸಮಯದ ನಡುವೆ ಅಂತರ ಇಟ್ಟುಕೊಂಡು ಬಂದರು. ಇದರಿಂದ ಪರೀಕ್ಷಾ ಸಿಬ್ಬಂದಿಗೂ ಅಷ್ಟೇನು ಗಡಿಬಿಡಿ ಅನ್ನಿಸಲಿಲ್ಲ.

ಪರೀಕ್ಷಾ ಕೇಂದ್ರದ ಮುಂದೆ ಪಾಲಕರು ಗುಂಪಾಗಿ ಸೇರಿದ್ದು ಕಂಡುಬರಲಿಲ್ಲ. ವಾಹನಗಳ ಪಾರ್ಕಿಂಗ್‌ ಕೂಡ ಕಡಿಮೆ ಇತ್ತು. ಶಾಲಾ ವಾಹನ, ಸರ್ಕಾರಿ ಬಸ್‌, ಆಟೊ, ಬೈಕ್‌ ಹೀಗೆ ತಮಗೆ ಅನುಕೂಲವಾದ ವಾಹನಗಳಲ್ಲಿ ಮಕ್ಕಳು ಬಂದರು. ನೂತನ ವಿದ್ಯಾಲಯ ಪ್ರೌಢಶಾಲೆಯ ಮುಂದೆ ಮಾತ್ರ ಪಾಲಕರು ಅಲ್ಲಲ್ಲಿ ಗುಂಪುಗೂಡಿ ಮಾತನಾಡುತ್ತಿರುವುದು ಕಂಡುಬಂತು.

ನಕಲು ಚೀಟಿ ನೀಡಲು ತಡೆ: ಗುರುವಾರ ನಡೆದ ಮೊದಲ ಪರೀಕ್ಷೆಯ ದಿನ, ಕಲಬುರ್ಗಿ ನಗರದ ಹಳೇ ಜೇವರ್ಗಿ ರಸ್ತೆಯ ಸರ್ಕಾರಿ ಪ್ರೌಢಶಾಲೆ ಹಾಗೂ ಯಡ್ರಾಮಿಯ ಕನ್ಯಾ ಪ್ರೌಢಶಾಲೆಯಲ್ಲಿರುವ ಪರೀಕ್ಷಾ ಕೇಂದ್ರಗಳಲ್ಲಿ ಕೆಲ ವಿದ್ಯಾರ್ಥಿಗಳಿಗೆ ಅವರ ಸಂಬಂಧಿಕರು ನಕಲು ಚೀಟಿಗಳನ್ನು ನೀಡಲು ಯತ್ನಿಸಿದ್ದರು. ಈ ಕಾರಣ ಈ ಶಾಲೆಗಳ ಸುತ್ತ ಹೆಚ್ಚಿನ ಪೊಲೀಸ್‌ ಭದ್ರತೆ ಒದಗಿಸಲಾಗಿತ್ತು. ಶನಿವಾರ ಮತ್ತೆ ಇಂಥ ಪ್ರಕರಣಗಳು ಪತ್ತೆಯಾಗಿಲ್ಲ.‌

ಇಲ್ಲಿನ ಬಸ್‌ ನಿಲ್ದಾಣ ರಸ್ತೆಯಲ್ಲಿರುವ ನೊಬೆಲ್‌ ಪ್ರೌಢಶಾಲೆಯಲ್ಲಿ ಮಾಸ್ಕ್‌ ಹಾಗೂ ಕುಡಿಯುವ ನೀರಿನ ಬಾಟಲಿಗಳನ್ನು ಮರೆತು ಬಂದಿದ್ದ ವಿದ್ಯಾರ್ಥಿಗಳಿಗೆ, ಕೇಂದ್ರದಲ್ಲಿ ನಿಯೋಜನೆಗೊಂಡಿದ್ದ ಸಿಬ್ಬಂದಿಯೇ ವ್ಯವಸ್ಥೆ ಮಾಡಿದರು. ಎಲ್ಲರಿಗೂ ಪ್ರತ್ಯೇಕ ನೀರಿನ ಬಾಟಲಿ, ಮಾಸ್ಕ್‌ಗಳನ್ನು ನೀಡಿದರು. ಶಾಲೆಯ ಮುಖ್ಯಸ್ಥರಾದ ರಫಿಯಾ ರುಮಾನಾ, ಮೇಲ್ವಿಚಾರಕರಾದ ಶಶಿಕಲಾ ಸುಂದರಶೇಖರ್‌, ಕಸ್ಟೋಡಿಯನ್‌ ಸಂತೋಷ ಈ ವ್ಯವಸ್ಥೆ ಮಾಡಿದರು.

ಖುಷಿಯಿಂದ ಹೊರಬಂದ ಮಕ್ಕಳು: ‘ಕಬ್ಬಿಣದ ಕಡಲೆ’ ಎಂದೇ ಹೇಳುವ ಗಣಿತ ಪರೀಕ್ಷೆ ಮುಗಿಸಿದ ಖುಷಿ ವಿದ್ಯಾರ್ಥಿಗಳ ಮುಖದಲ್ಲಿ ಕಂಡುಬಂತು. ಪರೀಕ್ಷಾ ಕೇಂದ್ರದಿಂದ ಹೊರಬಂದ ಸಹಪಾಠಿಗಳೆಲ್ಲ ಒಬ್ಬರಿಗೊಬ್ಬರು ತಮ್ಮ ಅನುಭವ ಹಂಚಿಕೊಂಡರು. ಮತ್ತೆ ಕೆಲವರು ಕೈಕೈ ಕುಲುಕಿ ಶುಭಾಶಯಗಳನ್ನೂ ತಿಳಿಸಿದರು.

ಅಂಕಿ ಅಂಶ (ಎಸ್ಸೆಸ್ಸೆಲ್ಸಿ)

42,103: ಪರೀಕ್ಷೆಗೆ ನೋಂದಣಿ ಮಾಡಿಕೊಂಡವರು

39,369: ಗಣಿತ ಪರೀಕ್ಷೆಗೆ ಹಾಜರಾದವರು

2,734: ಗೈರಾದ ವಿದ್ಯಾರ್ಥಿಗಳು

256‌: ಕಂಟೇನ್ಮೆಂಟ್‌ ಝೋನ್‌ಗಳಿಂದ ಬಂದವರು

2,921:ಸರ್ಕಾರಿ ವಸತಿ ನಿಲಯಗಳಿಂದ ಬಂದವರು

20:ವಿಶೇಷ ಕೊಠಡಿಗಳಲ್ಲಿ ಕುಳಿತ ಪರೀಕ್ಷೆ ಬರೆದವರು

621: ವಲಸೆ ಬಂದ ವಿದ್ಯಾರ್ಥಿಗಳು

611: ಶನಿವಾರ ಪರೀಕ್ಷೆಗೆ ಹಾಜರಾದವರು

10‌: ಗೈರಾದ ವಲಸೆ ವಿದ್ಯಾರ್ಥಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT