ಶುಕ್ರವಾರ, ಸೆಪ್ಟೆಂಬರ್ 17, 2021
29 °C
ಪರೀಕ್ಷೆ ಬರೆದ ಎ‌ಲ್ಲ 38,523 ವಿದ್ಯಾರ್ಥಿಗಳೂ ತೇರ್ಗಡೆ, ಕಳೆದ ವರ್ಷಕ್ಕಿಂತ ಉತ್ತಮ ಶ್ರೇಣಿ ಪಡೆದ ಜಿಲ್ಲೆಯ ಮಕ್ಕಳು

ಕಲಬುರ್ಗಿ: ಎಸ್ಸೆಸ್ಸೆಲ್ಸಿ: 4,723 ಮಕ್ಕಳಿಗೆ ಅತ್ಯತ್ತಮ ಶ್ರೇಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಜಿಲ್ಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ. ಪರೀಕ್ಷೆ ಬರೆದ ಒಟ್ಟು 38,523 ವಿದ್ಯಾರ್ಥಿಗಳಲ್ಲಿ 4,723 ವಿದ್ಯಾರ್ಥಿಗಳು ಎ+ (ಶೇ 90ಕ್ಕಿಂತ ಹೆಚ್ಚು) ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಎ ಶ್ರೇಣಿಯಲ್ಲಿ (ಶೇ 80ರಿಂದ 90) 15,153, ಬಿ ಶ್ರೇಣಿಯಲ್ಲಿ (ಶೇ 60ರಿಂದ 80) 15,321 ಮಕ್ಕಳು ಸಾಧನೆ ತೋರಿದ್ದಾರೆ. 3326 ವಿದ್ಯಾರ್ಥಿಗಳು ಮಾತ್ರ ಸಿ ಶ್ರೇಣಿ (ಶೇ 35ರಿಂದ 60) ಪಡೆದಿದ್ದಾರೆ.

‘ಪರೀಕ್ಷೆ ಬರೆದ ಒಟ್ಟು ವಿದ್ಯಾರ್ಥಿಗಳನ್ನು ಪರಿಗಣನೆಗೆ ತೆಗೆದುಕೊಂಡರೆ ಎ+ ಶ್ರೇಣಿ ಪಡೆದವರ ಸಂಖ್ಯೆಯೂ ದೊಡ್ಡದಾಗಿದೆ. ಚಿಕ್ಕೋಡಿ, ಬೆಳಗಾವಿ, ಬಳ್ಳಾರಿ, ಬೆಂಗಳೂರು, ಉಡುಪಿ ಹೊರತುಪಡಿಸಿದರೆ ಎ+ ಶ್ರೇಣಿಯಲ್ಲಿ ಅತಿ ಹೆಚ್ಚು ಸ್ಥಾನ ಪಡೆದವರಲ್ಲಿ ಜಿಲ್ಲೆಯೇ ಮಕ್ಕಳೂ ಹೆಚ್ಚಾಗಿದ್ದಾರೆ. ಶ್ರೇಣಿ ಸಾಧಕರಲ್ಲಿ ಕಳೆದ ಬಾರಿಗಿಂತ ಈ ಬಾರಿ ಉತ್ತಮ ಸ್ಥಾನ ಸಿಕ್ಕಿದೆ’ ಎಂದು ಡಿಡಿಪಿಐ ಅಶೋಕ ಭಜಂತ್ರಿ ಮಾಹಿತಿ ನೀಡಿದರು.

ಒಟ್ಟು 38,523 ಮಕ್ಕಳು ಪ್ರಸಕ್ತ ಪರೀಕ್ಷೆಗೆ ಹಾಜರಾಗಿದ್ದು ಎಲ್ಲರೂ ಪಾಸಾಗಿದ್ದಾರೆ. ಇವರಲ್ಲಿ ರೆಗ್ಯುಲರ್‌ ಇದ್ದ 20,744 ಬಾಲಕರು, 17,779 ಬಾಲಕಿಯರು ಸೇರಿದ್ದಾರೆ. ರಿಪೀಟರ್ಸ್‌ನಲ್ಲಿ 3120 ಬಾಲಕರು, 1430 ಬಾಲಕಿಯರು ಸೇರಿ ಎಲ್ಲ 4550 ಮಂದಿಯೂ ಪಾಸಾಗಿದ್ದಾರೆ.

ಶಾಲಾವಾರು ಮಾಹಿತಿ: ಜಿಲ್ಲೆಯ ಸರ್ಕಾರಿ ಶಾಲೆಗಳ 18,830 ವಿದ್ಯಾರ್ಥಿಗಳು, ಅನುದಾನಿತ ಶಾಲೆಗಳ 4,045 ಹಾಗೂ ಅನುದಾನರಹಿತ ಶಲೆಗಳ 15,648 ಮಕ್ಕಳು ರೆಗ್ಯುಲರ್‌ ಆಗಿ ಪರೀಕ್ಷೆ ಬರೆದಿದ್ದಾರೆ. ಇದರಲ್ಲಿ ಬಾಲಕಿಯರು– 9,544 ಸರ್ಕಾರಿ ಶಾಲೆ, 1821 ಅನುದಾನಿತ ಶಾಲೆ, 9379 ಅನುದಾನರಹಿತ ಶಾಲೆಯವರು ಇದ್ದಾರೆ. ಅದೇ ರೀತಿ ಬಾಲಕರಲ್ಲಿ 9286 ಸರ್ಕಾರಿ ಶಾಲೆ, 2224 ಅನುದಾನಿತ ಶಾಲೆ ಹಾಗೂ 6269 ಅನುದಾನ ರಹಿತ ಶಾಲೆಗಳ ಬಾಲಕರು ಪಾಸಾಗಿದ್ದಾರೆ.

ಮಾಧ್ಯಮವಾರು: ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದ 14299 ಬಾಲಕರು ಹಾಗೂ 11595 ಬಾಲಕಿಯರು ಸೇರಿ 25894 ಮಂದಿ ಪಾಸಾಗಿದ್ದಾರೆ. ಇಂಗ್ಲಿಷ್‌ ಮಾಧ್ಯಮದಲ್ಲಿ 5509 ಹುಡುಗರು ಹಾಗೂ 3930 ಹುಡುಗಿಯರು ಸೇರಿ 9439 ಮಕ್ಕಳು ತೇರ್ಗಡೆಯಾಗಿದ್ದಾರೆ. ಉರ್ದು ಮಾಧ್ಯಮದಲ್ಲಿ 840 ಬಾಲಕರು, 2163 ಬಾಲಕಿಯರು ಸೇರಿ 3003 ಪಾಸಾಗಿದ್ದಾರೆ.

ಹೊರರಾಜ್ಯದ ಮಕ್ಕಳು: ತೆಲಗು ಮಾಧ್ಯಮದಲ್ಲಿ 24 ಬಾಲಕರು ಹಾಗೂ 13 ಬಾಲಕಿಯರು ಪಾಸಾಗಿದ್ದಾರೆ. ತಮಿಳು ಮಾಧ್ಯಮ ಶಾಲೆ ಇದ್ದರೂ ಯಾರೂ ಪರೀಕ್ಷೆಗೆ ಹಾಜರಾಗಿಲ್ಲ. 

ಅಂಗವಿಕಲರು: ದೈಹಿಕ ಅಂಗವಿಕಲತೆ ಹೊಂದಿದ 23 ಬಾಲಕರು, 23 ಬಾಲಕಿಯರು ಸೇರಿ 46 ಮಕ್ಕಳು ಪರೀಕ್ಷೆ ಬರೆದಿದ್ದು ಎಲ್ಲರೂ ಪಾಸಾಗಿದ್ದಾರೆ. ಅದೇ ರೀತಿ ಮಾನಸಿಕ ಅಸ್ವಸ್ಥತೆ ಹೊಂದಿದ ಮೂವರು ಬಾಲಕರು ಮಾತ್ರ ಪರೀಕ್ಷೆ ಬರೆದಿದ್ದು, ಅವರನ್ನೂ ಪಾಸ್ ಎಂದು ಪರಿಗಣಿಸಲಾಗಿದೆ. 21 ಮೂಕ ಬಾಲಕರು, 17 ಮೂಕ ಬಾಲಕಿಯರು ಸೇರಿ 38 ಮಕ್ಕಳು ತೇರ್ಗಡೆ ಹೊಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.