ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತೆ ಬಿಡಿ; ನಿರಾಳವಾಗಿ ಪರೀಕ್ಷೆ ಬರೆಯಿರಿ

ಮಾರ್ಚ್‌ 27ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ, ಇಲಾಖೆಯಿಂದ ಸಕಲ ಸಿದ್ಧತೆ, ವಿದ್ಯಾರ್ಥಿಗಳಿಗೆ ಶಿಕ್ಷಣಾಧಿಕಾರಿ ಕಿವಿಮಾತು
Last Updated 13 ಮಾರ್ಚ್ 2020, 11:49 IST
ಅಕ್ಷರ ಗಾತ್ರ

ಐಶ್ವರ್ಯ, ಪ್ರಮೋದ ಸುಗಂಧಿ, ಆದರ್ಶ ವಿದ್ಯಾಲಯ ಪೋಲಕಪಳ್ಳಿ, ಚಿಂಚೋಳಿ

l ರೇಖಾ ಗಣಿತ, ಅಂಕ ಗಣಿತ ಹಾಗೂ ಭೌತಶಾಸ್ತ್ರ ವಿಷಯಗಳ ಬಗ್ಗೆ ಕೊಂಚ ಹಿಂಜರಿಕೆ ಇದೆ, ಏನು ಮಾಡಬೇಕು?

ಯಾವ ವಿಷಯ ಅತಿ ಕಠಿಣವಾಗಿರುತ್ತದೋ ಅದನ್ನು ಹೆಚ್ಚು ಅಧ್ಯಯನ ಮಾಡಬೇಕು. ಈಗಾಗಲೇ ಶಿಕ್ಷಕರು ವಿಶೇಷ ತರಗತಿಗಳನ್ನು ನಡೆಸಿದ್ದಾರೆ. ಪೂರ್ವಭಾವಿ ಪರೀಕ್ಷೆಗಳನ್ನು ನಡೆಸಿದ್ದಾರೆ. ಇಲಾಖೆಯಿಂದಲೂ ಎರಡು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ನೀಡಲಾಗಿದೆ. ಅವುಗಳನ್ನು ಅಭ್ಯಾಸ ಮಾಡಿದರೆ ಇನ್ನಷ್ಟು ಪ್ರಶ್ನೆಗಳಿಗೆ ಉತ್ತರ ಬರೆಯಲು ಸಿದ್ಧತೆ ಮಾಡಿಕೊಳ್ಳಬಹುದು. ನಿಮ್ಮ ಶಾಲೆಯ ಮುಖ್ಯ ಶಿಕ್ಷಕರಿಗೂ ಈ ಬಗ್ಗೆ ಗಮನ ಹರಿಸುವಂತೆ ಸೂಚನೆ ನೀಡುತ್ತೇವೆ.

–ಸುಷ್ಮಾ,ಆದರ್ಶ ವಿದ್ಯಾಲಯ ಪೋಲಕಪಳ್ಳಿ, ಚಿಂಚೋಳಿ

l ಪರೀಕ್ಷೆಯಲ್ಲಿ ಕೆಲವರು ಕಾಪಿ ಮಾಡಿದರೆ ಹಗಲು ರಾತ್ರಿ ಓದಿದವರಿಗೆ ಅನ್ಯಾಯವಾಗುವುದಿಲ್ಲವೇ?

ನಕಲು (ಕಾಪಿ) ತಡಗಟ್ಟಲೆಂದೇ ಈ ಬಾರಿ ಸಾಕಷ್ಟು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರಶ್ನೆ ಪತ್ರಿಕೆ ಇಡುವ ಕೊಠಡಿ ಸೇರಿದಂತೆ ಎಲ್ಲ ಪರೀಕ್ಷಾ ಕೇಂದ್ರಗಳಿಗೂ ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ. ಯಾವ ಶಿಕ್ಷಕರ ಬಳಿಯೂ ಮೊಬೈಲ್‌ ಇರುವುದಿಲ್ಲ. ಇದರಿಂದಾಗಿ ಶೇ 100ರಷ್ಟು ಯಾವುದೇ ಬಗೆಯ ಪರೀಕ್ಷಾ ಅಕ್ರಮ ನಡೆಯುವುದಿಲ್ಲ. ಹಾಗಾಗಿ, ಧೈರ್ಯವಾಗಿ ಪರೀಕ್ಷೆ ಬರೆಯಿರಿ.

l ಸರ್ಕಾರಿ ಶಾಲೆ ಶಿಕ್ಷಕರು, ಆಳಂದ

2018–19ನೇ ಸಾಲಿನಲ್ಲಿ ತೀವ್ರ ನಿಗಾ ಕಲಿಕಾ ಕೇಂದ್ರವನ್ನು ನಿರ್ವಹಣೆ ಮಾಡಿದ್ದೇವೆ. ಅದರ ಗೌರವಧನ ಇನ್ನೂ ನಮಗೆ ತಲುಪಿಲ್ಲ

ಜಿಲ್ಲೆಯಾದ್ಯಂತ ಒಟ್ಟು 127 ತೀವ್ರ ನಿಗಾ ಕಲಿಕಾ ಕೇಂದ್ರಗಳನ್ನು ತೆರೆಯಲಾಗಿತ್ತು. ಅದನ್ನು ನಿರ್ವಹಿಸುವ ಶಿಕ್ಷಕರ ಗೌರವ ಧನವನ್ನು ಆಗಲೇ ಕ್ಷೇತ್ರ ಶಿಕ್ಷಣಾಧಿಕಾರಿ ಅವರ ಖಾತೆಗೆ ವರ್ಗಾವಣೆ ಮಾಡಲಾಗಿದೆ. ಅವರು ಈಗಾಗಲೇ ತಲುಪಿಸಬೇಕಿತ್ತು. ಎಲ್ಲಿ ಲೋಪವಾಗಿದೆ ಎಂಬುದನ್ನು ಪತ್ತೆ ಹಚ್ಚಿ ಆದಷ್ಟು ಬೇಗನೇ ಬಿಡುಗಡೆ ಮಾಡಿಸಲಾಗುವುದು.

l ಶರಣಪ್ಪ ಗೊರಬಾಳ, ಆಳಂದ

ಪರೀಕ್ಷಾ ಅಕ್ರಮ ತಡೆಗಟ್ಟಲು ಸಿ.ಸಿ. ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸುತ್ತಿದ್ದೀರಿ. ಇದರಿಂದ ಮಕ್ಕಳಲ್ಲಿ ಆತಂಕ ಮೂಡಿಸಿದಂತಾಗುವುದಿಲ್ಲವೇ?

ಮಕ್ಕಳಲ್ಲಿ ಆತಂಕ ಮೂಡುವ ಪ್ರಶ್ನೆಯೇ ಇಲ್ಲ. ಪರೀಕ್ಷೆಗೆ ಬಂದವರು ಅದನ್ನು ಗಮನಿಸುವುದೂ ಇಲ್ಲ. ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವೇ ಈ ಕ್ರಮ ಕೈಗೊಂಡಿದೆ.

l ಈರಣ್ಣ, ಹಲಕರ್ಟಿ

ಹಲಕರ್ಟಿ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆ ಆರಂಭಿಸಬೇಕು. ಪ್ರೌಢಶಾಲೆ ಇಲ್ಲದ್ದರಿಂದ ಬಡ ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ.

ಸರ್ಕಾರಕ್ಕೆ ಈ ಬಗ್ಗೆ ಮನವಿ ಸಲ್ಲಿಸಲಾಗುವುದು. ಡಿಡಿಪಿಐ ಅವರ ಗಮನಕ್ಕೂ ತರಲಾಗುವುದು.

ಮೊಬೈಲ್‌ ಬಳಸುವಂತಿಲ್ಲ‌

ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುವ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಕೊಠಡಿ ಮೇಲ್ವಿಚಾರಕರು ಸೇರಿದಂತೆ ಯಾರೊಬ್ಬರೂ ಮೊಬೈಲ್‌ ಬಳಸುವಂತಿಲ್ಲ. ಪರೀಕ್ಷಾ ಕೇಂದ್ರದ ಮುಖ್ಯಸ್ಥರೊಬ್ಬರು ಮಾತ್ರ ತುರ್ತು ಸಂದರ್ಭಗಳಲ್ಲಿ ಮೊಬೈಲ್‌ ಬಳಸಬಹುದಾದರೂ ಅವರು ಬೇಸಿಕ್‌ ಹ್ಯಾಂಡ್‌ಸೆಟ್‌ ಹೊಂದಿರಬೇಕು. ಮೊಬೈಲ್‌ ತಂದರೂ ಅದನ್ನು ಅಲ್ಲಿದ್ದ ಸಿಬ್ಬಂದಿಗೆ ಒಪ್ಪಿಸಬೇಕು. ಮೊಬೈಲ್‌ ಪಡೆದುಕೊಳ್ಳಲೆಂದೇ ಸಿಬ್ಬಂದಿಯೊಬ್ಬರನ್ನು ಈ ಬಾರಿ ನಿಯೋಜಿಸಲಾಗುತ್ತಿದೆ.

ಅತಿಸೂಕ್ಷ್ಮ ಕೇಂದ್ರಗಳು

ಕಲಬುರ್ಗಿ ತಾಲ್ಲೂಕಿನ ಪಟ್ಟಣ ಗ್ರಾಮದ ಸರ್ಕಾರಿ ಪ್ರೌಢಶಾಲೆ ಹಾಗೂ ಜೇವರ್ಗಿಯ ಸರ್ಕಾರಿ ಪ್ರೌಢಶಾಲೆಯನ್ನು ಅತಿ ಸೂಕ್ಷ್ಮ ಪರೀಕ್ಷಾ ಕೇಂದ್ರಗಳು ಎಂದು ಪರಿಗಣಿಸಲಾಗಿದೆ. ಅಲ್ಲಿ ಒಂದು ಪೊಲೀಸ್‌ ವ್ಯಾನ್‌ ನಿಲ್ಲಿಸಲಾಗುವುದು. ಹೆಚ್ಚುವರಿ ಪೊಲೀಸರನ್ನೂ ನಿಯೋಜಿಸುವಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅವರಿಗೆ ಮನವಿ ಇಲಾಖೆ ಸಲ್ಲಿಸಿದೆ.

43,082 ವಿದ್ಯಾರ್ಥಿಗಳು ಹಾಜರು: ಈ ಬಾರಿ ದಾಖಲೆಯ 43,082 ವಿದ್ಯಾರ್ಥಿಗಳು ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿದ್ದಾರೆ. ರಾಜ್ಯದಲ್ಲೇ ಅತಿ ಹೆಚ್ಚು ಪರೀಕ್ಷೆ ಬರೆಯುವ ಜಿಲ್ಲೆಗಳ ಪೈಕಿ ಕಲಬುರ್ಗಿ ಮೂರನೇ ಸ್ಥಾನದಲ್ಲಿದೆ.

ಅಫಜಲಪುರ–3530, ಆಳಂದ–5574, ಚಿಂಚೋಳಿ–2990, ಚಿತ್ತಾಪೂರ–5971, ಕ.ಉತ್ತರ–9827, ಜೇವರ್ಗಿ–4365, ಕ.ದಕ್ಷಿಣ–7736, ಸೇಡಂ–3089.

ಪರೀಕ್ಷೆ ಪರೀಕ್ಷೆ ಸಂದರ್ಭದಲ್ಲಿ ಮಕ್ಕಳ ಆರೋಗ್ಯ ಮೇಲೆ ನಿಗಾ ವಹಿಸಲು ಪರೀಕ್ಷಾ ಕೇಂದ್ರಗಳಲ್ಲೇ ವೈದ್ಯರು ಹಾಗೂ ಶುಶ್ರೂಷಕಿಯರ ಸೌಲಭ್ಯ ಕಲ್ಪಿಸಲಾಗಿದೆ. ಪ್ರತಿಯೊಂದು ಕೇಂದ್ರದಲ್ಲೂ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಇಡಲಾಗುತ್ತದೆ.

ಪರೀಕ್ಷೆಯಿಂದಾಗಿ ಮಕ್ಕಳುಭಯ ಪಡುವುದು, ತಲೆ ಸುತ್ತಿ ಬೀಳುವುದು, ಸರಿಯಾಗಿ ಊಟ– ನಿದ್ರೆ ಮಾಡದೇ ನಿರ್ಜಲೀಕರಣದಿಂದ ಸುಸ್ತಾಗುವುದು, ಉರಿ– ಜ್ವರ ಈ ತರಹದ ಸಮಸ್ಯೆಗಳು ಕಂಡುಬಂದಲ್ಲಿ ತಕ್ಷಣ ತಪಾಸಣೆ ನೀಡಲಾಗುತ್ತದೆ. ಕೊರೊನಾ ಭೀತಿಯನ್ನು ಬಿಟ್ಟು ಮಕ್ಕಳು ಪರೀಕ್ಷೆ ಬರೆಯಬಹುದು.ಭಯ ಪಡುವ ಅಗತ್ಯವಿಲ್ಲ ಎಂದು ಡಿಡಿಪಿಐ ತಿಳಿಸಿದ್ದಾರೆ.

ಈ ಬಾರಿ ಪ್ರಶ್ನೆ ಪತ್ರಿಕೆ ಕೇವಲ ಟಿಕ್‌ ಮಾರ್ಕ್‌ ಮಾಡುವಂತೆ ಇರುವುದಿಲ್ಲ. 3 ಅಂಕ, 5, 10 ಅಂಕದ ಉತ್ತರಗಳೂ ಇರುತ್ತವೆ. ಮಗು ತನ್ನ ಅಭಿವ್ಯಕ್ತಿಯನ್ನು ಉತ್ತರದಲ್ಲಿ ನೀಡಲು ತುಸು ಸಮಯ ಬೇಕಾಗುತ್ತದೆ. ಹಾಗಾಗಿ, ಪ್ರಥಮ ಹಾಗೂ ದ್ವಿತೀಯ ಭಾಷೆಗೆ 30 ನಿಮಿಷ ಹಾಗೂ ಇತರ ವಿಷಯಗಳಿಗೆ 15 ನಿಮಿಷ ಹೆಚ್ಚುವರಿ ಸಮಯ ನೀಡಲಾಗಿದೆ.‌

ಈ ಬಾರಿ ಪ್ರಶ್ನೆ ಹಾಗೂ ಉತ್ತರ ಒಂದೇ ಪತ್ರಿಕೆಯಲ್ಲಿ ಇರುವುದಿಲ್ಲ. ಎರಡೂ ಬೇರೆಬೇರೆಯಾಗೇ ಇರುತ್ತವೆ. ಮೊದಲು 36 ಪುಟಗಳ ಒಂದು ಶೀಟ್‌ ಕೊಡಲಾಗುತ್ತದೆ. ಮಗು ಅದನ್ನು ಮುಗಿಸಿದ ಮೇಲೆ ಸಪ್ಲಿಮೆಂಟ್‌ಗಳನ್ನೂ ಕೇಳಬಹುದು.

ಜಿಲ್ಲಾ ಕೇಂದ್ರ, ತಾಲ್ಲೂಕು ಕೇಂದ್ರ ಹಾಗೂ ಹೆಚ್ಚು ಶಾಲೆಗಳಿರುವ ಪಟ್ಟಣಗಳಲ್ಲಿ ಮಾತ್ರ ಕ್ಲಸ್ಟರ್‌ ಕೇಂದ್ರಗಳನ್ನು ಮಾಡಲಾಗುತ್ತಿದೆ. ಈ ಬಾರಿ ಇರುವ ಒಟ್ಟು 136 ಪರೀಕ್ಷಾ ಕೇಂದ್ರಗಳಲ್ಲಿ 66 ಕ್ಲಸ್ಟರ್‌ ಹಾಗೂ 61 ಕ್ಲಸ್ಟರ್‌ ರಹಿತ ಕೇಂದ್ರಗಳನ್ನು ಮಾಡಲಾಗಿದೆ. ಒಂದೊಂದೇ ಶಾಲೆ ಇರುವ ಕಡೆಗಳಲ್ಲಿ ಕ್ಲಸ್ಟರ್‌ ರಹಿತವಾಗಿಯೇ ಪರೀಕ್ಷೆಗಳು ನಡೆಯುತ್ತವೆ.

ಇದೂವರೆಗೂ ಪರೀಕ್ಷಾ ಕೇಂದ್ರದಲ್ಲಿ ಆಯ್ದ ಸ್ಥಳಗಳಲ್ಲಿ ಮಾತ್ರ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುತ್ತಿತ್ತು. ಆದರೆ, ಪ್ರಸಕ್ತ ವರ್ಷದಿಂದ ಪರೀಕ್ಷೆ ನಡೆಯುವ ಪ್ರತಿ ಕೊಠಡಿಯಲ್ಲೂ ಈ ಕ್ಯಾಮೆರಾ ಕಡ್ಡಾಯವಾಗಿ ಅಳವಡಿಸಬೇಕು. ಇದಕ್ಕಾಗಿ ಶಾಲೆಯಲ್ಲಿ ಇರುವ ₹ 40 ಸಾವಿರ ಸಂಚಿತ ನಿಧಿ ಬಳಸಬೇಕು ಎಂದು ಸರ್ಕಾರ ಸುತ್ತೋಲೆ ಹೊರಡಿಸಿದೆ.

‘ಸರ್ಕಾರಿ, ಅನುದಾನಿತ, ಅನುದಾನರಹಿತ ಎಲ್ಲ ಶಾಲೆಗಳಿಗೂ ಈ ಆದೇಶ ಅನ್ವಯಿಸುತ್ತದೆ. ಪರೀಕ್ಷೆಗೂ ಮುನ್ನವೇ ಸಿಸಿಟಿವಿ ಅಳವಡಿಸಿದ ಬಗ್ಗೆ ಆಯಾ ಮುಖ್ಯ ಶಿಕ್ಷಕರು ಕ್ಷೇತ್ರಶಿಕ್ಷಣಾಧಿಕಾರಿಗೆ ವರದಿ ಸಲ್ಲಿಸಬೇಕು. ಕ್ಷೇತ್ರಶಿಕ್ಷಣಾಧಿಕಾರಿಗಳು ಡಿಡಿಪಿಐ ಅವರಿಗೆ ಕಡ್ಡಾಯವಾಗಿ ಇದರ ಪಾಲನಾ ವರದಿ ನೀಡಬೇಕು. ಅಧಿಕಾರಿಗಳು ಭೇಟಿ ನೀಡಿದ ಸಂದರ್ಭದಲ್ಲಿ ಸಿಸಿಟಿವಿ ಕ್ಯಾಮೆರಾ ಇಲ್ಲದಿರುವುದು ಅಥವಾ ಬಂದ್‌ ಆಗಿರುವುದು ಕಂಡುಬಂದರೆ ಸಂಬಂಧಿಸಿದ ಮುಖ್ಯಶಿಕ್ಷಕ ಹಾಗೂ ಕ್ಷೇತ್ರಶಿಕ್ಷಣಾಧಿಕಾರಿಯನ್ನೇ ಗುರಿ ಮಾಡಲಾಗುವುದು’ ಎಂದು ಡಿಡಿಪಿಐ ಎಸ್‌.ಪಿ.ಬಾಡಗಂಡಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 1,931 ಕೊಠಡಿಗಳಲ್ಲಿ ಪರೀಕ್ಷೆಗಳು ನಡೆಯಲಿವೆ. ಇದರಲ್ಲಿ 1,413 ಕೊಠಡಿಗಳಲ್ಲಿ ಈಗಾಗಲೇ ಕ್ಯಾಮೆರಾ ಅಳವಡಿಸಲಾಗಿದೆ. ಇನ್ನುಳಿದ518 ಕೊಠಡಿಗಳಲ್ಲಿ ಶೀಘ್ರ ಅಳವಡಿಸಲು ಕ್ರಮ ವಹಿಸಲಾಗುವುದು ಎಂದೂ ಅಧಿಕಾರಿ ತಿಳಿಸಿದರು.

ಪರೀಕ್ಷಾ ಕೇಂದ್ರ ಗುರುತಿಸಿದ ಪ್ರತಿ ಶಾಲೆಯಲ್ಲೂ ಅಗತ್ಯ ಶೌಚಾಲಯ ಹಾಗೂ ಅದರೊಳಗೆ ನೀರಿನ ವ್ಯವಸ್ಥೆ ಇರುವಂತೆ ನೋಡಿಕೊಳ್ಳುವುದು ಕಡ್ಡಾಯ. ಇದನ್ನು ಆಯಾ ಶಾಲೆಗಳ ಮುಖ್ಯಶಿಕ್ಷಕರೇ ನಿಗಾ ವಹಿಸಬೇಕು. ಪರೀಕ್ಷೆ ಕೊಠಡಿಯಲ್ಲಿ ವಿದ್ಯಾರ್ಥಿಗಳಿಗೆ ನೀರು ಕೊಡಲು ಒಬ್ಬ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಮಕ್ಕಳು ಮನೆಯಿಂದಲೇ ಬಾಟಲಿ ತಂದರೆ ಚೆಕ್‌ ಮಾಡಿ ಒಳಗೆ ಬಿಡಲಾಗುತ್ತದೆ.

ಈಚೆಗೆ ನಡೆದ ಪಿಯು ಪರೀಕ್ಷೆಯ ಸಂದರ್ಭದಲ್ಲಿ ಕೆಲವು ಕೇಂದ್ರಗಳಲ್ಲಿ ಉತ್ತರ ಪತ್ರಿಕೆ ಬರೆಯಲು ಬಳಸುವ ರಟ್ಟಿನ ಪ್ಯಾಡ್‌ಗಳನ್ನೂ ಒಳಗೆ ಬಿಡಲಿಲ್ಲ. ಇದರಿಂದ ಕೆಲವು ವಿದ್ಯಾರ್ಥಿಗಳು ಗೊಂದಲಕ್ಕೆ ಈಡಾಗಿದ್ದರು. ಆದರೆ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಇಂಥ ಪ್ಯಾಡ್‌ಗಳಿಗೆ ಅವಕಾಶ ನೀಡಬಾರದು ಎಂಬ ಯಾವುದೇ ಆದೇಶ ಇಲ್ಲ. ಕೆಲವು ಡೆಸ್ಕ್‌ಗಳು ಸರಿಯಾಗಿ ಇಲ್ಲದ ಕಾರಣ ಮಕ್ಕಳಿಗೆ ಪ್ಯಾಡ್‌ ಮೇಲೆಯೇ ಬರೆದು ಅಭ್ಯಾಸವಿರುತ್ತದೆ. ಹಾಗಾಗಿ, ಇದಕ್ಕೆ ಯಾವುದೇ ತಕರಾರು ಇಲ್ಲ ಎಂದೂ ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT