ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ ಫಲಿತಾಂಶ: ಕಲಬುರಗಿ ಜಿಲ್ಲೆ ದಶಕದ ಉತ್ತಮ ಸಾಧನೆ

ಜಿಲ್ಲೆಗೆ ಶೇ 85.83ರಷ್ಟು ಫಲಿತಾಂಶ ಸಿಹಿ ತಿನ್ನಿಸಿ ಸಂಭ್ರಮಿಸಿದ ಪೋಷಕರು
Last Updated 20 ಮೇ 2022, 5:01 IST
ಅಕ್ಷರ ಗಾತ್ರ

ಕಲಬುರಗಿ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಈ ಬಾರಿ ‘ಎ’ ಶ್ರೇಣಿ ಲಭಿಸಿದ್ದು, ಶೇ 85.83ರಷ್ಟು ಫಲಿತಾಂಶ ಬಂದಿದೆ. ಇದು ದಶಕದ ಅವಧಿಯಲ್ಲಿ ಬಂದಿರುವ ದಾಖಲೆಯ ಫಲಿತಾಂಶವಾಗಿದೆ.

2021–22ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಒಟ್ಟು 42,071 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅದರಲ್ಲಿ 36,112 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

2019–20 ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆ 22ನೇ ಸ್ಥಾನದಲ್ಲಿತ್ತು. ಕಳೆದ ವರ್ಷ ಕೋವಿಡ್‌ ಕಾರಣ ಪರೀಕ್ಷೆಗೆ ಹಾಜರಾದ ಎಲ್ಲ ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡಲಾಗಿತ್ತು. ಈ ವರ್ಷ ಜಿಲ್ಲಾವಾರು ಫಲಿತಾಂಶ ಪ್ರಕಟಿಸಿಲ್ಲ. ಅದರ ಬದಲು ಗ್ರೇಡ್‌ ನೀಡಲಾಗಿದೆ.

ಪರೀಕ್ಷೆ ಬರೆದ ಒಟ್ಟು ವಿದ್ಯಾರ್ಥಿಗಳಲ್ಲಿ 4,515 ವಿದ್ಯಾರ್ಥಿಗಳು ಎ+ (90ಕ್ಕಿಂ ಹೆಚ್ಚು ಅಂಕ) ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. 9,189 ವಿದ್ಯಾರ್ಥಿಗಳು ‘ಎ’ ಶ್ರೇಣಿ (80ರಿಂದ 89) ಪಡೆದಿದ್ದಾರೆ. 9,511 ವಿದ್ಯಾರ್ಥಿಗಳು ಬಿ + (70ರಿಂದ 79), 7,867 ವಿದ್ಯಾರ್ಥಿಗಳು ‘ಬಿ’ ಶ್ರೇಣಿ (60 ರಿಂದ 69) ಮತ್ತು 683 ವಿದ್ಯಾರ್ಥಿಗಳು ‘ಸಿ’ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.

ಫಲಿತಾಂಶದಲ್ಲಿ ಜಿಲ್ಲೆಯಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಪರೀಕ್ಷೆಗೆ ಹಾಜರಾದ 21,544 ಬಾಲಕರ ಪೈಕಿ 17,951 ಬಾಲಕರು ಉತ್ತೀರ್ಣರಾಗಿದ್ದಾರೆ. 20,527 ಬಾಲಕಿಯರು ಪರೀಕ್ಷೆ ಬರೆದಿದ್ದು, ಅದರಲ್ಲಿ 18,161 ತೇರ್ಗಡೆ ಹೊಂದಿದ್ದಾರೆ.

ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದ 27,754 ವಿದ್ಯಾರ್ಥಿಗಳ ಪೈಕಿ 23,321 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇಂಗ್ಲಿಷ್‌ ಮಾಧ್ಯಮದಲ್ಲಿ 11,040 ವಿದ್ಯಾರ್ಥಿಗಳ ಪೈಕಿ 10,252, ಹಿಂದಿ ಮಾಧ್ಯಮದಲ್ಲಿ ಪರೀಕ್ಷೆ ಬರೆದ 50 ವಿದ್ಯಾರ್ಥಿಗಳಲ್ಲಿ 37, ಮರಾಠಿ ಮಾಧ್ಯಮದಲ್ಲಿ 104 ವಿದ್ಯಾರ್ಥಿಗಳ ಪೈಕಿ 74, ತೆಲುಗು ಮಾಧ್ಯಮದಲ್ಲಿ 39 ವಿದ್ಯಾರ್ಥಿಗಳಲ್ಲಿ 28 ಮತ್ತು ಉರ್ದು ಮಾಧ್ಯಮದಲ್ಲಿ 3,084 ವಿದ್ಯಾರ್ಥಿಗಳಲ್ಲಿ 2,400 ಪಾಸಾಗಿದ್ದಾರೆ.

ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಮೇಲುಗೈ: ನಗರದ ಪ್ರದೇಶದಲ್ಲಿ 8,879 ಬಾಲಕರು, 8966 ಬಾಲಕಿಯರು ಸೇರಿದಂತೆ 17,845 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು. ಅದರಲ್ಲಿ 14,914 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಗ್ರಾಮೀಣ ಭಾಗದಲ್ಲಿ 12,665 ಬಾಲಕರು, 11,561 ಬಾಲಕಿಯರು ಸೇರಿದಂತೆ 24,226 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅದರಲ್ಲಿ 21,198 ವಿದ್ಯಾರ್ಥಿಗಳು ಪಾಸಾಗಿದ್ದಾರೆ.

ಕನ್ನಡ ವಿಷಯದಲ್ಲಿ 45 ವಿದ್ಯಾರ್ಥಿಗಳು, ಇಂಗ್ಲಿಷ್‌ –111, ಹಿಂದಿ–112, ಗಣಿತ–45, ವಿಜ್ಞಾನ– ಮತ್ತು ಸಮಾಜ ವಿಜ್ಞಾನ ವಿಷಯದಲ್ಲಿ 46 ವಿದ್ಯಾರ್ಥಿಗಳು ‘ಶೂನ್ಯ’ ಅಂಕ ಗಳಿಸಿದ್ದಾರೆ.

ಕಿತ್ತೂರು ರಾಣಿ ಚನ್ನಮ್ಮ ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ 2695 ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ 2521 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಎಸ್ಸೆಸ್ಸೆಲ್ಸಿ ಫಲಿತಾಂಶದ ಕುರಿತು ಪ್ರತಿಕ್ರಿಯಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಅಶೋಕ ಭಜಂತ್ರಿ ಮಾತನಾಡಿ, ಈ ಬಾರಿ ಜಿಲ್ಲೆಗೆ ಉತ್ತಮ ಫಲಿತಾಂಶ ಬಂದಿದ್ದು ಖುಷಿ ತಂದಿದೆ. ಮೂರು ಬಾರಿ ಪೂರ್ವ ಬಾರಿ ಪೂರ್ವಸಿದ್ಧತಾ ಪರೀಕ್ಷೆ ನಡೆಸಲಾಗಿತ್ತು. ಅಲ್ಲದೆ, ಪ್ರಿಲಿಮನರಿ ಪರೀಕ್ಷೆ ಏರ್ಪಡಿಸಲಾಗಿತ್ತು. ಇದೆಲ್ಲದರ ಪರಿಣಾಮ ಫಲಿತಾಂಶದಲ್ಲಿ ಸುಧಾರಣೆ ಆಗಿದೆ ಎಂದರು.

ಯಾವ ರೀತಿ ಪರೀಕ್ಷೆ ಎದುರಿಸ ಬೇಕು ಎಂಬ ಬಗ್ಗೆ ಮಕ್ಕಳಿಗೆ ಆತ್ಮವಿಶ್ವಾಸ ತುಂಬಲು ಮುಖ್ಯಶಿಕ್ಷಕರಿಗಾಗಿ ಸಂಪನ್ಮೂಲ ವ್ಯಕ್ತಿಗಳಿಂದ ಕಾರ್ಯಾಗಾರ ಏರ್ಪಡಿಸಲಾಗಿತ್ತು. ಸಂಘ ಸಂಸ್ಥೆಗಳು ಫೋನ್‌ಇನ್‌ ಕಾರ್ಯಕ್ರಮಗಳನ್ನು ಏರ್ಪಡಿಸಿ ವಿದ್ಯಾರ್ಥಿ ಗಳ ಗೊಂದಲ ಪರಿಹರಿಸುವ ಕೆಲಸ ಮಾಡಿದ್ದವು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಎ+ ಮತ್ತು ಎ ಶ್ರೇಣಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಸಿ ಶ್ರೇಣಿ ಪಡೆದ ವಿದ್ಯಾರ್ಥಿಗಳ ಸಂಖ್ಯೆ ತೀರಾ ಕಡಿಮೆ ಇದೆ ಎಂದರು.

ಎಸ್ಸೆಸ್ಸೆಲ್ಸಿ; ಜಿಲ್ಲೆಯ ಸಾಧಕರು
ನಗರದ ಸಂತೋಷ ಕಾಲೊನಿಯ ಮಿಲೇನಿಯಂ ಪ್ರೌಢಶಾಲೆಯ ಶ್ರೀಕಾಂತ ಶಿವಕುಮಾರ ಬೆಳ್ಳೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾನೆ.

ಕಲಬುರಗಿಯ ರಾಮನಗರದ ಶರಣಬಸವೇಶ್ವರ ವಸತಿ ಶಾಲೆಯ ಆದಿತ್ಯಾ ಮಠಪತಿ, ಪವನ ಪೋದ್ದಾರ, ವಿನಯಕುಮಾರ ಕಸಬೆಗೌಡ, ನೂತನ ವಿದ್ಯಾಲಯದ ಕನ್ಯಾ ಪ್ರೌಢಶಾಲೆಯ ಬನಶಂಕರಿ, ಸಂತೋಷ ಕಾಲೊನಿಯ ಮಿಲೇನಿಯಂ ಪ್ರೌಢಶಾಲೆಯ ಶರಣಬಸವ ಬಿ.ಪಾಟೀಲ, ಆಳಂದ ರಸ್ತೆಯ ಗಾಯತ್ರಿ ಕನ್ಯಾ ಪ್ರೌಢಶಾಲೆಯ ಸುಹಾಷಿನಿ ತಲಾ 624 ಅಂಕಗಳನ್ನು ಗಳಿಸಿದ್ದಾರೆ.

12 ವಿದ್ಯಾರ್ಥಿಗಳು 623 ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT