ಕಾಳಗಿ ಬಳಿ ರಾಜ್ಯ ಹೆದ್ದಾರಿ ಅಪಾಯಕಾರಿ

7
ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿರುವುದೇ ಕಾಮಗಾರಿ ವಿಳಂಬಕ್ಕೆ ಕಾರಣ

ಕಾಳಗಿ ಬಳಿ ರಾಜ್ಯ ಹೆದ್ದಾರಿ ಅಪಾಯಕಾರಿ

Published:
Updated:

ಕಾಳಗಿ: ಕಲಬುರ್ಗಿ– ಚಿಂಚೋಳಿ ನಡುವೆ ಫಿರೋಜಾಬಾದ್‌– ಕಮಲಾಪುರ ರಾಜ್ಯ ಹೆದ್ದಾರಿ–125 ಸರಿಯಾದ ನಿರ್ವಹಣೆ ಇಲ್ಲದೆ ದಿನದಿಂದ ದಿನಕ್ಕೆ ಹಾಳಾಗುತ್ತಿದೆ. ಹೆದ್ದಾರಿಯ ಎರಡೂ ಬದಿ ಜಲ್ಲಿ ಕಿತ್ತುಹೋಗಿ ತಗ್ಗು ಬಿದ್ದು  ವಾಹನಗಳಿಗೆ ಅಪಾಯಕಾರಿಯಾಗಿದೆ.

ವಾಘ್ದಾರಿ– ರಿಬ್ಬನಪಲ್ಲಿ ರಾಜ್ಯ ಹೆದ್ದಾರಿ–10ರಲ್ಲಿರುವ ಮಾಡಬೂಳ ಕ್ರಾಸ್‌ನಿಂದ ಹಾದು ಬರುವ ಈ ಹೆದ್ದಾರಿ–125 ಕಾಳಗಿಯ ಅಂಬೇಡ್ಕರ್ ಚೌಕ್‌ನಿಂದ ಕೋಡ್ಲಿ ಕ್ರಾಸ್ ಮೂಲಕ ಕಮಲಾಪುರವನ್ನು ಸಂಪರ್ಕಿಸುತ್ತದೆ. ಕಾಳಗಿ, ಚಿಂಚೋಳಿ ತಾಲ್ಲೂಕುಗಳಲ್ಲಿ ಕರ್ತವ್ಯ ನಿರ್ವಹಿಸುವ ವಿವಿಧ ಇಲಾಖೆಗಳ ಬಹುತೇಕ ನೌಕರರು ಮತ್ತು ಈ ಭಾಗದ ನೂರಾರು ಹಳ್ಳಿಗಳ ಜನರು ಜಿಲ್ಲಾ ಕೇಂದ್ರಕ್ಕೆ ಈ ಮಾರ್ಗವನ್ನೇ ಅವಲಂಬಿಸಿದ್ದಾರೆ. ಅಷ್ಟೇ ಅಲ್ಲದೆ ತಾಂಡೂರ್ ಮೂಲಕ ನೆರೆ ರಾಜ್ಯ ಆಂಧ್ರ, ತೆಲಾಂಗಣಕ್ಕೆ ಈ ಮಾರ್ಗ ಸಮೀಪವಾಗಿದೆ.

ವಾಹನ ದಟ್ಟಣೆ ದಿನದಿಂದ ದಿನಕ್ಕೆ  ಹೆಚ್ಚಾಗುತ್ತಿದೆ. ಆದರೆ, ಸಣ್ಣ ಪುಟ್ಟ ದುರಸ್ತಿ ಮಾಡಿದ್ದು ಬಿಟ್ಟರೆ ಹೆದ್ದಾರಿಯ ಅಗಲೀಕರಣ ಅಥವಾ ಹೆದ್ದಾರಿಯ ಬದಿ ನಿರ್ವಹಣೆ ಬಗ್ಗೆ ಇದುವರೆಗೆ ಯಾರೊಬ್ಬರೂ ತಲೆಕೆಡಿಸಿಕೊಂಡಿಲ್ಲ’ ಎಂದು ವಾಹನ ಸವಾರರು ದೂರಿದ್ದಾರೆ.

‘ಕೋರವಾರದಿಂದ ಕೋಡ್ಲಿ ಕ್ರಾಸ್‌ವರೆಗಿನ 17 ಕಿ.ಮೀ ಎರಡೂ ಬದಿ  ಡಾಂಬರು ಭಾಗದ ಪಕ್ಕದ ಜಲ್ಲಿ ಕಲ್ಲುಗಳು ಕಿತ್ತು ಹೋಗಿ ತಗ್ಗು ಬಿದ್ದಿದೆ. ಅದರಲ್ಲಿ ಮಳೆ ಬಂದಾಗ ನೀರು ನಿಂತುಕೊಳ್ಳುತ್ತದೆ. ವಾಹನಗಳು ಎದುರು– ಬದುರು ಆದಾಗ ಎರಡೂ ವಾಹನಗಳು ಕೆಳಗೆ ಇಳಿಯುವುದು ಅನಿವಾರ್ಯವಾಗಿದೆ. ಬಳಿಕ ವಾಹನಗಳನ್ನು ಮೇಲೆ ಏರಿಸಬೇಕೆಂದರೆ ಹರಸಾಹಸವಾಗುತ್ತಿದೆ. ಅದರಲ್ಲೂ ರಾತ್ರಿಯಂತೂ ದೇವರೇ ಗತಿ’ ಎಂದು ವಾಹನ ಚಾಲಕ ಮಲ್ಲಿಕಾರ್ಜುನ ಹೇರೂರ ಹೇಳುತ್ತಾರೆ.

‘ಕೆಳಗಿಳಿಸಿದ ದೊಡ್ಡ ವಾಹನವನ್ನು ಕನಿಷ್ಠ ಒಂದು ಕಿ.ಮೀ ಹೀಗೇ ಚಲಿಸಿ ಹೇಗೊ ಮಾಡಿ ಹೆದ್ದಾರಿಗೆ ಹತ್ತಿಸಬಹುದಾಗಿದೆ. ಆದರೆ, ಬೈಕ್, ಟಂಟಂ, ಆಟೋ, ಜೀಪು ಮೊದಲಾದ ಸಣ್ಣ ವಾಹನಗಳು ಕೆಳಗಿಳಿದರೆ ಮೇಲೆ ಏರುವುದು ದೊಡ್ಡ ಯಾತನೆಯೇ ಸರಿ. ಈ ನಡುವೆ ಸ್ವಲ್ಪ ಆಯ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ’ ಎನ್ನುತ್ತಾರೆ ಬೈಕ್ ಸವಾರ ಬಾಬುರಾವ ತೊಟ್ನಳ್ಳಿ.

ಹೆದ್ದಾರಿಯ ಸ್ಥಿತಿ ಹಲವು ವರ್ಷಗಳಿಂದ ಹೀಗೆ ಇರುವುದರಿಂದ  ಚಾಲಕರಷ್ಟೇ ಅಲ್ಲ ಪ್ರಯಾಣಿಕರೂ ತೊಂದರೆ ಅನುಭವಿಸುತ್ತಿದ್ದಾರೆ. ವಾಹನಗಳು ಕೆಟ್ಟು ಹೋಗುವ ಭೀತಿಯಲ್ಲಿ ಮಾಲೀಕರೂ ನೋವು ಅನುಭವಿಸುತ್ತಿದ್ದಾರೆ. ಆದರೆ, ಹೆದ್ದಾರಿ ವ್ಯವಸ್ಥೆಯ ಬಗ್ಗೆ ಯಾರೊಬ್ಬ ಜನಪ್ರತಿನಿಧಿ ಅಥವಾ ಅಧಿಕಾರಿ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂಬ ಕೊರಗು ಕೇಳಿಬರುತ್ತಿದೆ.

ರಾಜ್ಯ ಹೆದ್ದಾರಿ ಕೆಲ ವರ್ಷಗಳ ಹಿಂದೆ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿದೆ. ಹಾಗೆ, ಕಾಮಗಾರಿ ನಿರ್ಮಾಣಕ್ಕೆ ಟೆಂಡರ್‌ ಮುಗಿದು ಸರ್ವೆ ಕೂಡ ಆಗಿದೆ. ಎಂದು ಹೆಸರು ಹೇಳಲು ಇಷ್ಟ ಪಡದ ಪಿಡಬ್ಲೂಡಿ ಅಧಿಕಾರಿಗಳು ‘ಪ್ರಜಾವಾಣಿ’ ಗೆ ತಿಳಿಸಿದರು.

ಗುಂಡಪ್ಪ ಕರೆಮನೋರ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !