ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾಭಿಮಾನ ಬಡಿದೆಬ್ಬಿಸಿದ ವಿಲೀನ ಹೋರಾಟ

Last Updated 17 ಸೆಪ್ಟೆಂಬರ್ 2021, 4:07 IST
ಅಕ್ಷರ ಗಾತ್ರ

ಕಲಬುರ್ಗಿ: ಕಲ್ಯಾಣ ಕರ್ನಾಟಕ ಉತ್ಸವ ದಿನಾಚಣೆಯು ಕೇವಲ ‘ವಿಮೋಚನಾ’ ದಿನವಾಗದೇ, ಈ ಭಾಗದ ಸ್ವಾಭಿಮಾನದ ಉತ್ಸವವೂ ಆಗಿದೆ. 1947ರ ಆಗಸ್ಟ್‌ 15ರಂದು ಭಾರತಕ್ಕೆ ಸಿಕ್ಕ ಸ್ವಾತಂತ್ರ್ಯವು ಅಹಿಂಸೆಯ ಹೋರಾಟವಾಗಿತ್ತು. ಆದರೆ, ಒಂದು ವರ್ಷದ ಬಳಿಕ; ಅಂದರೆ 1948ರ ಸೆಪ್ಟೆಂಬರ್‌ 17ರಂದು ನಿಜಾಮ ಸಂಸ್ಥಾನವನ್ನು ಒಕ್ಕೂಟ ವ್ಯವಸ್ಥೆಗೆ ಸೇರಿಸಲು ಸಂಘರ್ಷಕ್ಕೆ ಇಳಿಯುವ ಅನಿವಾರ್ಯ ಬಂದಿತ್ತು. ಇದರೊಂದಿಗೆ ಈಗಿನ ಕಲ್ಯಾಣ ಕರ್ನಾಟಕ ಭಾಗ ಕೂಡ ಭಾರತದ ಭಾಗವಾಗಿ ಪರಿಗಣಿಸಲ್ಪಟ್ಟಿತು.

1948ರ ಸೆಪ್ಟೆಂಬರ್ 13ರಂದು ಅಂದಿನ ಗೃಹ ಸಚಿವ ಸರ್ದಾರ್‌ ವಲ್ಲಭಭಾಯಿ ಪಟೇಲ್ ಅವರು ‘ಆಪರೇಷನ್ ಪೋಲೊ’‌ ಎಂಬ ಪೊಲೀಸ್ ಕಾರ್ಯಾಚರಣೆ ಮೂಲಕ ಹೈದರಾಬಾದ್‌ಗೆಮುತ್ತಿಗೆ ಹಾಕಿದರು. ಐದು ದಿನಗಳ ಕಾಲ ಈ ಭಾಗದಲ್ಲಿ ಯುದ್ಧದ ವಾತಾವರಣ ಮನೆ ಮಾಡಿತ್ತು. ಪಟೇಲ್‌ ಅವರಯೋಧರ ಬಿಗು ಎಷ್ಟಿತ್ತೆಂದರೆ ಕೇವಲ ಐದೇ ದಿನಗಳಲ್ಲಿ ಅಂದರೆ; ಸೆ.17ರಂದು ನಿಜಾಮ ಶರಣಾಗತನಾದ.

ಇಣುಕು ನೋಟ: ನಿಜಾಮ್‌ ಸಂಸ್ಥಾನದಲ್ಲಿ ಮಹಾರಾಷ್ಟ್ರದ ವಿದರ್ಭ, ತೆಲಂಗಾಣ ಮತ್ತು ಕರ್ನಾಟಕದ ಆಗಿನ ಕಲಬುರ್ಗಿ, ಬೀದರ್‌ ಮತ್ತು ರಾಯಚೂರು ಜಿಲ್ಲೆಗಳು ಇದ್ದವು. ಒಕ್ಕೂಟ ವ್ಯವಸ್ಥೆಗೆ ಒಪ್ಪದ ಕಾರಣ ನಿಜಾಮನ ವಿರುದ್ಧ ಜನ ಚಳವಳಿಗೆ ಇಳಿದರು.ಇದರಿಂದ ಸಿಟ್ಟಿಗೆದ್ದ ನಿಜಾಮ, ಜನರ ಹೋರಾಟದ ಮನೋಬಲ ಕುಗ್ಗಿಸಲು ‘ರಜಾಕಾರ ಪಡೆ’ ರಚಿಸಿ ಬೇರೆಬೇರೆ ರೀತಿಹಿಂಸೆಗೆ ಮುಂದಾದ. ಆತನ ವಿರುದ್ಧ ಬಂಡೆದ್ದವರನ್ನೆಲ್ಲ ಸೆರೆವಾಸಕ್ಕೆ ತಳ್ಳಿದ. ಆಗ ಕೇಂದ್ರದ ಆಗಿನ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಆ‍ಪರೇಷನ್‌ ಪೋಲೊ ಮಾಡಿ ಯಶಸ್ವಿಯಾದರು.

ವಿಶೇಷ ಸ್ಥಾನಮಾನಕ್ಕೂ ಹೋರಾಟ: ನಿಜಾಮ್‌ ಆಡಳಿತದ ಒಂದು ಭಾಗವಾಗಿದ್ದ ಈ ಪ್ರದೇಶವು ಭೌಗೋಳಿಕ, ಚಾರಿತ್ರಿಕ, ರಾಜಕೀಯ ಕಾರಣದಿಂದ ಹಿಂದುಳಿದ ಕಾರಣ, ವಿಶೇಷ ಸ್ಥಾನಮಾನ ಕಲ್ಪಿಸುವಂತೆ ಜನ ಒತ್ತಾಯಿಸಿದರು. ಕ್ರಮೇಣ ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಅಸ್ತಿತ್ವಕ್ಕೆ ಬಂತು. ವೈಜನಾಥ ಪಾಟೀಲ ಅವರು ಆ ಸಮಿತಿಯ ನೇತೃತ್ವ ವಹಿಸಿದರು. ಪ್ರತ್ಯೇಕ ರಾಜ್ಯಕ್ಕೆ ಹೋರಾಟ,ಪ್ರತ್ಯೇಕ ರಾಜ್ಯದ ಧ್ವಜಾರೋಹಣ ಸಹ ನಡೆದವು.

ವಿಶೇಷ ಸ್ಥಾನಮಾನ ಕೋರಿ ತಮ್ಮ ಅಧಿಕಾರದ ಅಧಿಕಾರವಧಿಯಲ್ಲಿ ಎಸ್‌.ಎಂ.ಕೃಷ್ಣ, ಧರ್ಮಸಿಂಗ್ ಮತ್ತುಬಿ.ಎಸ್.ಯಡಿಯೂರಪ್ಪ ಅವರು ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರಿದರು. ಕೆ.ಬಿ.ಶಾಣಪ್ಪ ರಾಜ್ಯಸಭೆಯಲ್ಲಿ ವಿಶೇಷ ಸ್ಥಾನಮಾನಕ್ಕಾಗಿ ಖಾಸಗಿ ಮಸೂದೆ ಮಂಡಿಸಿದರು.

ಕಾಂಗ್ರೆಸ್‌ ನೇತೃತ್ವದ ಯುಪಿಎ–2 ಸರ್ಕಾರದಲ್ಲಿ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಮತ್ತು ಸಂಸದರಾಗಿದ್ದ ಎನ್.ಧರ್ಮಸಿಂಗ್ ಅವರ ವಿಶೇಷ ಪ್ರಯತ್ನದ ಫಲವಾಗಿ ಈ ಭಾಗದ ಆರು ಜಿಲ್ಲೆಗಳಿಗೆ 371 (ಜೆ) ಕಲಂ ಒಳಗೊಂಡ118ನೇ ತಿದ್ದುಪಡಿಗೆ 2012ರ ಡಿಸೆಂಬರ್‌ನಲ್ಲಿ ಸಂಸತ್ತು ಸರ್ವಾನುಮತದ ಅನುಮೋದನೆ ನೀಡಿತು. ತಿದ್ದುಪಡಿ ಮಸೂದೆಗೆ 2013ರ ಜನವರಿ 1ರಂದು ರಾಷ್ಟ್ರಪತಿ ಸಹಿ ಹಾಕಿದರು. ರಾಜ್ಯ ಸರ್ಕಾರವೂ ಶಿಕ್ಷಣ–ಉದ್ಯೋಗ ಮೀಸಲಾತಿ ಮತ್ತು ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ವಿಶೇಷ ಅನುದಾನ ನೀಡುವ ಕಾಯ್ದೆ ರೂಪಿಸಿ ಜಾರಿಗೊಳಿಸಿತು.

ಮರು ನಾಮಕರಣ: ‘ಹೈದರಾಬಾದ್‌ ಕರ್ನಾಟಕ’ಕ್ಕೆ ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡುವ ಮೂಲಕ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಈ ಭಾಗದ ಜನರಿಗೆ ಅಂಟಿದ್ದ ‘ಗುಲಾಮಗಿರಿಯ ಸಂಕೋಲೆ’ ಕಳಚುವಂತೆಮಾಡಿದ್ದು ಮತ್ತೊಂದು ಇತಿಹಾಸ. 2019ರ ಸೆಪ್ಟೆಂಬರ್ 17ರಂದು ಮುಖ್ಯಮಂತ್ರಿ ಯಡಿಯೂರಪ್ಪ ಘೋಷಿಸಿದ್ದರು. 12ನೇ ಶತಮಾನದಲ್ಲೇ ಸಮಾಜದ ಪರಿವರ್ತನೆಗೆ ನಾಂದಿಹಾಡಿದ ಶರಣರ ಈ ನಾಡಿಗೆ ‘ಕಲ್ಯಾಣ ಕರ್ನಾಟಕ’ ಎಂದು ನಾಮಕರಣ ಮಾಡಬೇಕು ಎಂಬುದು ಈ ಭಾಗದ ಜನರ ಬೇಡಿಕೆಯಾಗಿತ್ತು. ಆ ಬಗ್ಗೆ ಹೋರಾಟಗಳೂ ನಡೆದಿದ್ದವು. ಹೆಸರು ಬದಲಿಸುವುದು ಭಾವನಾತ್ಮಕ ವಿಷಯವೂ ಆಗಿತ್ತು. ಹೈದರಾಬಾದ್ ಕರ್ನಾಟಕ ಎಂಬ ಹೆಸರು ಕೇಳಿದರೆ ಹಿಂದುಳಿದ ಎಂಬ ಕೀಳರಿಮೆ ಭಾವ ಬರುತ್ತಿತ್ತು. ದಾಸ್ಯ, ಸಾಂಸ್ಕೃತಿಕ ದಾರಿದ್ರ್ಯದ ಸಂಕೇತವಾಗಿತ್ತು ಎನ್ನುವುದು ಹೋರಾಟಗಾರರ ಅಭಿಮತ.

ಬೋಸ್‌ ಒಡನಾಡಿಗಳಿಂದಲೇ ಯುದ್ಧ ತರಬೇತಿ

ಆಪರೇಷನ್‌ ಪೋಲೊ ಆರಂಭವಾದ ಮೇಲೆ ರಜಾಕಾರರ ಪ್ರತಿರೋಧ ಕ್ರೌರ್ಯದಿಂದ ಕೂಡಿತ್ತು. ಯೋಧರ ಶಿಬಿರಗಳ ಮೇಲೆ ಅಮಾನವೀಯ ದಾಳಿ ಮಾಡಲು ಅವರುಹಿಂಜರಿಯಲಿಲ್ಲ. ಇದರಿಂದ ತಪ್ಪಿಸಿಕೊಳ್ಳಲು ತುಕುಡಿಗಳ ಶಿಬಿರಗಳನ್ನು ಗದಗ ಪಂಚಾಕ್ಷರಿ ಗವಾಯಿಗಳ ಮಠದಆವರಣಕ್ಕೆ ಸ್ಥಳಾಂತರಿಸಲಾಗಿತ್ತು. ಆ ಮಠದ ಆವರಣದಲ್ಲೇ ಬಂದೂಕು ಚಲಾಯಿಸುವ ತರಬೇತಿ ನೀಡಲಾಯಿತು. ಸುಭಾಷಚಂದ್ರ ಬೋಸ್‌ ಅವರ ಐಎನ್‌ಎ ಸೇನೆಯಲ್ಲಿದ್ದ ಯೋಧರೇ ಖುದ್ದಾಗಿ ಈ ತರಬೇತಿ ನೀಡಿದರು ಎಂಬುದು ಹಿರಿಯರು ನೀಡುವ ಮಾಹಿತಿ.

ಗಮನಾರ್ಹವೆಂದರೆ ಈ ಕಾರ್ಯಾಚರಣೆ ನಡೆದಿದ್ದು ನಿಜಾಮನ ವಿರುದ್ಧವಲ್ಲ; ಆತನ ರಾಜ್ಯದ ರಕ್ಷಣೆಗೆ ನಿಂತಿದ್ದ ರಜಾಕಾರರ ವಿರುದ್ಧ. ಅದೂ ಅಲ್ಲದೇ ಭಾರತೀಯ ಸೈನಿಕರೇ ಇದ್ದರೂ ಇದನ್ನು ಸೇನಾ ಕಾರ್ಯಾಚರಣೆ ಎನ್ನುವುದು ಸಾಧ್ಯವಿರಲಿಲ್ಲ. ತನ್ನದೇ ದೇಶದಲ್ಲಿ ಸೇನಾ ಕಾರ್ಯಾಚರಣೆ ನಡೆಸುವುದು ಅಸಾಧ್ಯವಾದ್ದರಿಂದ ಪೊಲೀಸ್‌ ಕಾರ್ಯಾಚರಣೆ ಎಂದು ಪರಿಗಣಿಸಲಾಯಿತು ಎನ್ನುವುದು ಈಗ ಇತಿಹಾಸ.

box-2

ವಿಲೀನ ದಿನಾಚರಣೆ ಎನ್ನುವುದೇ ಸೂಕ್ತ

ಈ ಹಿಂದೆ ಆಚರಿಸುತ್ತಿದ್ದ ಹೈದರಾಬಾದ್‌ ಕರ್ನಾಟಕ ವಿಮೋಚನಾ ದಿನಾಚರಣೆ ಅಥವಾ ಈಗ ಆಚರಿಸುವ ಕಲ್ಯಾಣ ಕರ್ನಾಟಕ ಉತ್ಸವ ಎರಡೂ ಸಮಂಜಸವಲ್ಲ. ಈ ದಿನವನ್ನು ಕೇವಲ ‘ವಿಲೀನ ದಿನಾಚರಣೆ’ ಎಂದೇ ಕರೆಯುವುದು ಸೂಕ್ತ. ಇಲ್ಲಿ ಯಾರು– ಯಾರಿಂದಲೂ ವಿಮೋಚನೆ ಪಡೆದಿಲ್ಲ. ಹೈದರಾಬಾದ್‌ ಸಂಸ್ಥಾನವು ಒಕ್ಕೂಟ ವ್ಯವಸ್ಥೆಯಲ್ಲಿ ಸೇರಿಕೊಂಡಿದೆ ಅಷ್ಟೇ. ವಿಮೋಚನಾ ದಿನ ಎನ್ನುವುದರಲ್ಲಿ ಮತೀಯ ವಾಸನೆಯೂ ಅಡಗಿದ್ದರಿಂದ ಹಿರಿಯರು ಕೂಡ ಇದಕ್ಕೆ ಸಮ್ಮತಿಸಿರಲಿಲ್ಲ.

–ರಾಘವೇಂದ್ರ ಕುಷ್ಟಗಿ, ಸಂಸ್ಥಾಪಕ, ಜನಸಂಗ್ರಾಮ ಪರಿಷತ್‌

*

ಸಮಗ್ರ ಆಚರಣೆ ಮುಂದುವರಿಸಿ

ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಎನ್ನುವುದು ಅಷ್ಟೊಂದು ಸೂಕ್ತವಲ್ಲ. ನಿಜಾಮ್‌ಶಾಹಿಯಿಂದ ಬಿಡುಗಡೆ ಹೊಂದಿ ಭಾರತದೊಳಗೆ ವಿಲೀನವಾದ ಎಲ್ಲ ಪ್ರದೇಶಗಳನ್ನೂ ಸೇರಿಸಿಕೊಂಡು ಈ ದಿನದ ಆಚರಣೆ ನಡೆಸುವುದು ಸೂಕ್ತ. ಅದು ಸಮಗ್ರವಾಗಿದ್ದರೆ ಇತಿಹಾಸಕ್ಕೆ ಅರ್ಥ ಬರುತ್ತದೆ. ಅದೂ ಅಲ್ಲದೇ, ಈ ದಿನವನ್ನು ಸೆಪ್ಟೆಂಬರ್‌ 17 ಅಥವಾ 18; ಯಾವಾಗ ಆಚರಿಸಬೇಕು ಎಂಬ ಬಗ್ಗೆಯೂ ಗೊಂದಲಗಳಿವೆ. 1948ರ ಸೆಪ್ಟೆಂಬರ್‌ 17ರಂದು ಸಂಜೆ 5 ಗಂಟೆಗೆ ನಿಜಾಮನು ರೇಡಿಯೊ ಮೂಲಕ ‘ನಾನು ನನ್ನ ಸಂಸ್ಥಾನವನ್ನು ಭಾರತದಲ್ಲಿ ವಿಲೀನಗೊಳಿಸುತ್ತೇನೆ’ ಎಂದು ಘೋಷಿಸಿದ. ಆದರೆ, ಸೆ. 18ರಂದು ಸರ್ದಾರ್‌ ಪ‍ಟೇಲ್‌ ಅವರು ಹೈದರಾಬಾದ್‌ಗೆ ಬಂದು ವಿಲೀನ ಪ್ರಕ್ರಿಯೆ ಮುಗಿಸಿ, ನಿಜಾಮನ ಸಹಿ ಪಡೆದರು. ಹಾಗಾಗಿ, ಈ ದಿನಾಚರಣೆ ಎಂದು ನಡೆಯಬೇಕು ಎಂಬ ಬಗ್ಗೆಯೂ ಇತಿಹಾಸಕಾರರು ಚರ್ಚಿಸಬೇಕಿದೆ.

–ಉಪಾಧ್ಯಕ್ಷ, ರಜಾಕ್ ಉಸ್ತಾದ್, ಹೈದರಾಬಾದ್‌ ಕರ್ನಾಟಕ ಹೋರಾಟ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT