ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಹಾಬಾದ್ | ಬೀದಿನಾಯಿ ಹಾವಳಿಗೆ ಬೇಸತ್ತ ಜನ

ಶಹಾಬಾದ್‌: ರಸ್ತೆ ಬದಿಯಲ್ಲಿ ತ್ಯಾಜ್ಯ ವಿಲೇವಾರಿಯಿಂದ ಬೀದಿನಾಯಿ ಹೆಚ್ಚಳ
Last Updated 24 ಆಗಸ್ಟ್ 2020, 12:53 IST
ಅಕ್ಷರ ಗಾತ್ರ

ಶಹಾಬಾದ್: ಎಲ್ಲೆಂದರಲ್ಲಿ ಬಿದ್ದಿರುವ ಕಸ. ಕಸದ ತೊಟ್ಟಿಯಲ್ಲಿ ಆಹಾರ ತಿಂದು ಮನೆಗಳಿಗೆ ನುಗ್ಗುವ ನಾಯಿಗಳ ದಂಡು. ಈ ನಾಯಿಗಳ ಉಪಟಳದಿಂದ ಪಾರಾಗಲು ಹರಸಾಹಸ ಪಡುತ್ತಿರುವ ಸಾರ್ವಜನಿಕರು.

–ಇದು ಕಲಬುರ್ಗಿ ಜಿಲ್ಲೆಯ ಅತಿ ದೊಡ್ಡ ನಗರವಾದ ಶಹಾಬಾದ್‌ನ ಪರಿಸ್ಥಿತಿ.

ನಗರಸಭೆ ವ್ಯಾಪ್ತಿಯ ವಿವಿಧ ಬಡಾವಣೆಗಳಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗಿದೆ. ಈಗಾಗಲೇ ಅನೇಕ ಜನರಿಗೆ ಈ ಬೀದಿ ನಾಯಿಗಳು ಕಚ್ಚಿವೆ. ಸಾರ್ವಜನಿಕರು, ಮಕ್ಕಳು ಹಾಗೂ ಮಹಿಳೆಯರು ರಸ್ತೆಗಳಲ್ಲಿ ಸಂಚರಿಸಲು ಆತಂಕಪಡುವ ವಾತಾವರಣ ಉಂಟಾಗಿದೆ. ಅಲ್ಲದೇ ಮನೆಯಿಂದ ಹೊರಹೋಗುವಾಗ ಮತ್ತು ಮನೆಗೆ ಹಿಂದಿರುಗುವಾಗ ಜೀವ ಕೈಯಲ್ಲಿ ಹಿಡಿದುಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ.

ನಗರದ ರೈಲು ನಿಲ್ದಾಣ ರಸ್ತೆ, ಹೊನಗುಂಟಾ ವೃತ್ತ, ಶ್ರೀರಾಮ ವೃತ್ತ, ತ್ರಿಶೂಲ ವೃತ್ತ, ಶಾಸ್ತ್ರಿ ವೃತ್ತ, ಮಿಲತ್ ನಗರ, ರಾಮ ಮೊಹಲ್ಲಾ ಸೇರಿದಂತೆ ಇತರ ಬಡಾವಣೆ ಮತ್ತು ಬೀದಿಗಳಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದೆ. ಅಲ್ಲಲ್ಲಿ ಗುಂಪು-ಗುಂಪಾಗಿ ಸಾಗುವ ಶ್ವಾನಗಳ ಹಿಂಡು ದಾರಿಯಲ್ಲಿ ಸಾಗುವವರನ್ನು ಕಂಡ ಕೂಡಲೇ ಬೊಗಳುತ್ತ ಕಚ್ಚಲು ಮುಂದಾಗುತ್ತಿವೆ. ಇದರಿಂದ ಜನರು ಭಯದಲ್ಲೇ ಓಡಾಡುವಂತಾಗಿದೆ. ಮನೆಯ ಮುಂದೆ ಆಟವಾಡುತ್ತಿದ್ದ ಮಕ್ಕಳಿಗೆ ಬೀದಿ ನಾಯಿಗಳು ಕಚ್ಚಿದ ಅನೇಕ ಪ್ರಕರಣಗಳಿವೆ.

‘ನಗರಸಭೆಯ ಅಧಿಕಾರಿಗಳು ಬೀದಿನಾಯಿಗಳ ಕಡಿವಾಣ ಹಾಕಲು ಸಂಪೂರ್ಣ ವಿಫಲರಾಗಿದ್ದಾರೆ. ಕಳೆದ ಒಂದು ವರ್ಷದಲ್ಲಿ ಬೀದಿ ನಾಯಿಗಳ ಕಡಿತಕ್ಕೆ ಸುಮಾರು ಜನ ತುತ್ತಾಗಿದ್ದಾರೆ. ಕಲ್ಯಾಣ ಮಂಟಪ, ಮನೆಯ ಹಾಗೂ ಮಾಂಸದ ತ್ಯಾಜ್ಯ ರಸ್ತೆಯ ಬದಿಯಲ್ಲಿ ಹಾಕುತ್ತಿರುವುದರಿಂದ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿವೆ. ಇದನ್ನು ನಿಯಂತ್ರಿಸುವಲ್ಲಿ ನಗರಸಭೆಯ ಅಧಿಕಾರಿಗಳು ವಿಫಲರಾಗಿದ್ದಾರೆ’ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

‘ನಗರದ ಪ್ರತಿ ಬಡಾವಣೆಯ ಗಲ್ಲಿ ಗಲ್ಲಿಗಳಲ್ಲಿ ಬೀದಿ ನಾಯಿಗಳು ಅಡ್ಡಾದಿಡ್ಡಿಯಾಗಿ ಮಲಗಿರುತ್ತವೆ. ಪಾದಚಾರಿಗಳು, ವಾಹನ ಸವಾರರು ಮತ್ತು ಮಕ್ಕಳು ಹೋದರೆ ಮೈ ಮೇಲೆಯೇ ಎರಗುತ್ತವೆ. ನಗರಸಭೆಯ ಅಧಿಕಾರಿಗಳು ಕೂಡಲೇ ಬೀದಿ ನಾಯಿಗಳನ್ನು ಹಿಡಿದು ಬೇರೆ ಕಡೆಗೆ ಸಾಗಿಸಿ, ಸಾರ್ವಜನಿಕರ ಸುಗಮ ಓಡಾಟಕ್ಕೆ ಅವಕಾಶ ಕಲ್ಪಿಸಿಕೊಡಬೇಕು’ ಎಂದು ಆಗ್ರಹಿಸಿದ್ದಾರೆ.

‘ಇತ್ತೀಚೆಗಷ್ಟೇ ನಗರದ ಕುಮಸುಮ್ ಎಂಬ ಐದು ವರ್ಷದ ಬಾಲಕಿಗೆ ಬೀದಿ ನಾಯಿಗಳ ದಾಳಿಯಿಂದ ಗಂಭೀರವಾದ ಗಾಯಗಳಾಗಿವೆ. ತಹಶೀಲ್ದಾರರು ಮತ್ತು ಪೌರಾಯುಕ್ತರು ನಾಯಿಗಳ ಹಾವಳಿಯನ್ನು ತಪ್ಪಿಸಬೇಕು’ ಎಂದು ನಗರದ ನಿವಾಸಿ ಮೆಹಬೂಬ ಬಂಗಡಿ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT