ಬುಧವಾರ, ಜನವರಿ 22, 2020
16 °C
ಕಾಳಗಿ: ಉದ್ಯೋಗ ಖಾತ್ರಿ ಯೋಜನೆ ಪ್ರಾರಂಭಿಸಲು ಒತ್ತಾಯ

ಕೂಲಿಕಾರರಿಂದ ಅನಿರ್ದಿಷ್ಟಾವಧಿ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾಳಗಿ: ‘ಪಟ್ಟಣದಲ್ಲಿ ಆಗಸ್ಟ್ ತಿಂಗಳಿನಿಂದ ಸ್ಥಗಿತಗೊಂಡಿರುವ ಉದ್ಯೋಗ ಖಾತ್ರಿ ಯೋಜನೆಗೆ ಪುನಃ ಚಾಲನೆ ನೀಡಬೇಕು, ನೂತನ ಕಾಳಗಿ ತಾಲ್ಲೂಕಿಗೆ ಸಂಬಂಧಿಸಿದ ತಾಲ್ಲೂಕು ಮಟ್ಟದ ಎಲ್ಲ ಸರ್ಕಾರಿ ಕಚೇರಿಗಳನ್ನು ಶೀಘ್ರ ಆರಂಭಿಸಬೇಕು’ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಮತ್ತು ಕೂಲಿಕಾರರು ಆಗ್ರಹಿಸಿದರು.

ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಬುಧವಾರ ಇಲ್ಲಿನ ತಹಶೀಲ್ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು.

‘ಕಾಳಗಿ ತಾಲ್ಲೂಕನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸಬೇಕು, ಕೃಷಿ ಕೂಲಿ ಕಾರ್ಮಿಕರು ಉದ್ಯೋಗಕ್ಕಾಗಿ ವಲಸೆ ಹೋಗುವುದನ್ನು ತಪ್ಪಿಸಲು ಕಾಳಗಿ ಪಟ್ಟಣ ಪಂಚಾಯಿತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಮಾದರಿ ಕೆಲಸ ಪ್ರಾರಂಭಿಸಬೇಕು, ಕಾಳಗಿಯಲ್ಲಿ ಈ ಹಿಂದೆ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೆಲಸ ಮಾಡಿದ ಕೂಲಿಕಾರರಿಗೆ ಬಾಕಿ ವೇತನ ಪಾವತಿಸಬೇಕು’ ಎಂದು ಒತ್ತಾಯಿಸಿದರು.

‘ಡಾ.ಸ್ವಾಮಿನಾಥನ್ ವರದಿಯಂತೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ತೊಗರಿ ಖರೀದಿ ಕೇಂದ್ರ ತೆರೆದು ತೊಗರಿ ಖರೀದಿಸಬೇಕು, ಕಾಳಗಿ ಬಸ್ ನಿಲ್ದಾಣದಲ್ಲಿ ಮಹಿಳೆಯರಿಗೆ ಸುಲಭ್‌ ಶೌಚಾಲಯ ನಿರ್ಮಿಸಬೇಕು, ಪಡಿತರ ಆಹಾರಧಾನ್ಯ ವಿತರಣೆಯಲ್ಲಿ ಹೆಬ್ಬೆಟ್ಟಿನ ಗುರುತು ರದ್ದುಪಡಿಸಿ ಸರಳವಾಗಿ ಆಹಾರ ಧಾನ್ಯ ವಿತರಿಸಬೇಕು, ಕೃಷಿ ಕೂಲಿಕಾರರ ಮತ್ತು ಬಡ ರೈತರ ಉಪ ಕಸುಬುಗಳಿಗೆ ಯಾವುದೇ ಷರತ್ತಿಲ್ಲದೆ ₹1 ಲಕ್ಷ ಬ್ಯಾಂಕ್ ಸಾಲ ನೀಡಬೇಕು, ಎಂದು ಆಗ್ರಹಪಡಿಸಿದರು.

‘ರೈತರ ರಾಷ್ಟ್ರೀಕೃತ ಬ್ಯಾಂಕಿನ ರೈತರ ₹2 ಲಕ್ಷ ಮತ್ತು ಸಹಕಾರ ಸಂಘದ ₹1 ಲಕ್ಷ ಸಾಲ ಮನ್ನಾ ಮಾಡಬೇಕು, ಬಡ ಕುಟುಂಬಗಳು ಮನೆ ಕಟ್ಟಿಕೊಳ್ಳಲು ನಿವೇಶನ ಸಹಿತವಾಗಿ ಹಣ ಮಂಜೂರು ಮಾಡಬೇಕು’ ಎಂದು ಒತ್ತಾಯಿಸಿದರು.

ರೈತ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಅಶೋಕ ಮ್ಯಾಗೇರಿ, ರಾಜ್ಯ ಪ್ರಮುಖೆ ಮಲ್ಲಮ್ಮ ಕೋಡ್ಲಿ, ಸ್ಥಳೀಯ ಘಟಕದ ಅಧ್ಯಕ್ಷ ಸೇನಾಪತಿ ಕಡಬೂರ, ಕಾರ್ಯದರ್ಶಿ ಮಾರುತಿ ಸೇಗಾಂವಕರ್, ರಾಜಶೇಖರ ಜಿಲ್ಲಿ, ಬಸವರಾಜ ಗುಂಡನೋರ, ದೇವಿಂದ್ರ ಗುಂಡಮಿ, ರೇವಯ್ಯ ಸಾಲಿ, ಅಶೋಕ ಕೊರವಿ, ಪಾರ್ವತಿ ಬಾಬು, ಲಕ್ಷ್ಮೀ ಬಡಿಗೇರ, ಪ್ರೇಮಾ ನಾಗಪ್ಪ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು