ಅವಕಾಶಗಳ ಸದುಪಯೋಗಕ್ಕೆ ಸಲಹೆ

7
ಗೋದುತಾಯಿ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟನಾ ಕಾರ್ಯಕ್ರಮ

ಅವಕಾಶಗಳ ಸದುಪಯೋಗಕ್ಕೆ ಸಲಹೆ

Published:
Updated:
Deccan Herald

ಕಲಬುರ್ಗಿ: ವಿದ್ಯಾರ್ಥಿನಿಯರು ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಹೆಚ್ಚಿನ ಸಾಧನೆ ಮಾಡಬೇಕು ಎಂದು ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಹೇಳಿದರು.

ನಗರದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಸಂಘ ‘ಕಲಾವಾಣಿ’ ಉದ್ಘಾಟಿಸಿ ಅವರು ಮಾತನಾಡಿದರು.

ಇದು ಡಿಜಿಟಲ್ ಯುಗ. ಸಾಕಷ್ಟು ಅವಕಾಶಗಳು ಸಿಗುತ್ತಿವೆ. ಸಿಕ್ಕ ಅವಕಾಶಗಳನ್ನು ಕೈಚೆಲ್ಲಬಾರದು. ನಮ್ಮ ಭವಿಷ್ಯವನ್ನು ನಾವೇ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಹೈದರಾಬಾದ್ ಕರ್ನಾಟಕ ಪ್ರದೇಶ ಹಿಂದುಳಿದಿದ್ದು, 371 (ಜೆ) ಅಡಿ ವಿಶೇಷ ಸ್ಥಾನಮಾನ ನೀಡಲಾಗಿದೆ. ಈ ಭಾಗದ ಮಹಿಳೆಯರು ಇತ್ತೀಚಿನ ದಿನಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸಾಧನೆ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.

ಮಹಿಳೆಗೆ ಮನೆಯಲ್ಲೇ ಮೊದಲು ತಾರತಮ್ಯ ಆರಂಭ ಆಗುತ್ತದೆ. ಪುರುಷರಿಗೆ ಕೊಡುವಷ್ಟು ಆದ್ಯತೆಯನ್ನು ಮಹಿಳೆಗೆ ನೀಡುವುದಿಲ್ಲ. ಇದು ನಿಲ್ಲಬೇಕು. ಹೆಣ್ಣುಮಕ್ಕಳು ಉನ್ನತ ಶಿಕ್ಷಣ ಪಡೆಯಬೇಕು ಎಂದು ಹೇಳಿದರು.

ಶರಣಬಸವೇಶ್ವರ ಸಂಸ್ಥಾನ ಮಹಿಳಾ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಇದು ಶ್ಲಾಘನೀಯ ಎಂದರು.

ನಮ್ಮ ಮುಂದಿನ ಜನಾಂಗ ನಮ್ಮನ್ನು ಅನುಕರಿಸುವಂತೆ ಮಾದರಿ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಮಹಿಳೆ ಎಲ್ಲ ಅಡೆತಡೆಗಳನ್ನು ಮೀರಿ ಸಾಧನೆ ಮಾಡಬೇಕು. ಯಾವುದೇ ಸಂದರ್ಭದಲ್ಲಿ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು ಎಂದು ಸಲಹೆ ನೀಡಿದರು.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಮಾತನಾಡಿ, ಶರಣ ಸಂಸ್ಥಾನ ಮತ್ತು ವಿದ್ಯಾವರ್ಧಕ ಸಂಘವು ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಿದೆ. ಜನರ ಸೇವೆ, ಸಮಾಜ ಸೇವೆಯನ್ನು ನಿತ್ಯ ಕಾಯಕದಂತೆ ಮಾಡಿಕೊಂಡು ಬರುತ್ತಿದೆ ಎಂದು ಹೇಳಿದರು.

ವಿದ್ಯಾರ್ಥಿ ಕಲ್ಯಾಣಾಧಿಕಾರಿ ಪ್ರೊ.ಶಾಂತಲಾ ನಿಷ್ಠಿ, ಸಾವಿತ್ರಿ ಜಂಬಲದಿನ್ನಿ, ವಿದ್ಯಾರ್ಥಿ ಪ್ರತಿನಿಧಿಗಳಾದ ಸೌಮ್ಯಶ್ರೀ, ಮಹಾದೇವಿ ಇದ್ದರು.

ಪ್ರಾಚಾರ್ಯೆ ಡಾ. ನೀಲಾಂಬಿಕಾ ಶೇರಿಕಾರ ಅಧ್ಯಕ್ಷತೆ ವಹಿಸಿದ್ದರು. ಶರಣಬಸವ ವಿವಿಯ ಕುಲಸಚಿವ ಡಾ.ಅನೀಲಕುಮಾರ ಬಿಡವೆ, ಡಾ.ಎಸ್.ಜಿ.ಡೊಳ್ಳೆಗೌಡರ್, ಪ್ರೊ.ಎಂ.ಆರ್. ಹುಗ್ಗಿ ಮತ್ತು ಕಾಲೇಜಿನ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸಂಗೀತ ವಿಭಾಗದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಪದ್ಮಿನಿ ಚಿಂಚನಸೂರ ಭರತನಾಟ್ಯ ಪ್ರದರ್ಶಿಸಿದರು. ಡಾ.ಪುಟ್ಟಮಣಿ ದೇವಿದಾಸ ಸ್ವಾಗತಿಸಿದರು. ಅಂಜನಾ ಮತ್ತು ಸೌಮ್ಯ ನಿರೂಪಿಸಿ, ಪ್ರೊ. ಜಾನಕಿ ಹೊಸೂರ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !