ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ಉಚಿತ ಬಸ್‌ ಪಾಸ್‌ ನೀಡಲು ಒತ್ತಾಯಿಸಿ ಪ್ರತಿಭಟನೆ

ಎಐಡಿಎಸ್‌ಒ ಜಿಲ್ಲಾ ಘಟಕದ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳಿಂದ ಪ್ರತಿಭಟನೆ
Last Updated 5 ಅಕ್ಟೋಬರ್ 2021, 5:03 IST
ಅಕ್ಷರ ಗಾತ್ರ

ಕಲಬುರ್ಗಿ: ಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ ಪ್ರಸಕ್ತ ಬಸ್‌ ಪಾಸ್‌ಗಳನ್ನು ಉಚಿತವಾಗಿ ವಿತರಿಸಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ,ಎಐಡಿಎಸ್‌ಒ ಜಿಲ್ಲಾ ಘಟಕದ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಸಮಾವೇಶಗೊಂಡ ಪ್ರತಿಭಟನಾಕಾರರು, ಸಾರಿಗೆ ಸಚಿವರಿಗೆ ಬರೆದ ಮನವಿಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು.

ಈಗಾಗಲೇ ಹಿಂದಿನ ವರ್ಷದ ಬಸ್‌ ಪಾಸ್ ಅವಧಿ ಮುಗಿದಿದೆ. ಆದರೆ ಇನ್ನೂ ಹಲವು ಕೋರ್ಸ್‌ಗಳು, ತರಗತಿಗಳು ನಡೆದೇ ಇವೆ. ಮತ್ತೆ ಹಲವು ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ವರ್ಷದ ತರಗತಿಗಳೂ ಆರಂಭವಾಗಿದೆ. ಹೀಗಾಗಿ, ದೂರದ ಪಟ್ಟಣ ಹಾಗೂ ಹಳ್ಳಿಗಳಿಂದ ವಿದ್ಯಾರ್ಥಿಗಳು ನಗರಕ್ಕೆ ಬಸ್‌ ಟಿಕೆಟ್‌ ಪಡೆದು ಬರುವಂತಾಗಿದೆ. ಸಹಜವಾಗಿಯೇ ಗ್ರಾಮೀಣ ಪ್ರದೇಶದ ಪಾಲಕರಿಗೂ ಇದು ಹೊರೆಯಾಗುತ್ತಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಕಳೆದ ಎರಡು ವರ್ಷಗಳಿಂದ ಕೋವಿಡ್‌ ಸಾಂಕ್ರಾಮಿಕದ ಕಾರಣ ಹಳ್ಳಿಯ ಜನರೂ ತತ್ತರಿಸಿದ್ದಾರೆ. ಹಲವರಿಗೆ ಉದ್ಯೋಗವೇ ಇಲ್ಲ. ಜೀವನೋಪಾಯಕ್ಕೆ ಒಲಸೆ ಹೋಗಿದ್ದ ಬಡವರು, ಕಾರ್ಮಿಕರು ಮರಳಿ ಬಂದಿದ್ದಾರೆ. ಹೊಟ್ಟೆ ತುಂಬಿಸಿಕೊಳ್ಳುವುದೇ ಹೈರಾಣಾದಾಗ ಕಲಿಕೆಗೂ ಹಣ ಸುರಿಯಲು ಆಗದ ಸ್ಥಿತಿಯಲ್ಲಿದ್ದಾರೆ. ಇದರಿಂದ ಬಹಳಷ್ಟು ಮಕ್ಕಳು ಕಲಿಕೆಯಿಂದ ದೂರ ಉಳಿಯುವ ಅಪಾಯ ಎದುರಾಗಿದೆ. ರಾಜ್ಯದ ಮಕ್ಕಳ ಹಿತದೃಷ್ಟಿಯಿಂದ ಉಚಿತ ಬಸ್‌ ಪಾಸ್‌ ನೀಡುವುದು ತುಂಬ ಅಗತ್ಯ ಎಂದೂ ಹೇಳಿದ್ದಾರೆ.

ಕಳೆದ ವರ್ಷ ಕೂಡ ಶಾಲೆ– ಕಾಲೇಜು ಆರಂಭವಾಗುವ ಸಮಯಕ್ಕೆ ಲಾಕ್‌ಡೌನ್‌ ಘೋಷಣೆಯಾಯಿತು. ವಾರ್ಷಿಕ ಬಸ್‌ಪಾಸ್‌ ತೆಗೆಸಿದರೂ ವಿದ್ಯಾರ್ಥಿಗಳು ಅವುಗಳನ್ನು ಬಳಸಲು ಸಾಧ್ಯವಾಗಿಲ್ಲ. ಹಾಗಾಗಿ, ಪಾಸ್ ಅವಧಿ ಮುಗಿದವರಿಗೆ ಹೊಸ ಪಾಸ್‌ ಕೇಳದೇ ಹಿಂದಿನ ಪಾಸ್‌ ಅನ್ನೇ ಮುಂದುವರಿಸಬೇಕು ಎಂದೂ ಆಗ್ರಹಿಸಿದ್ದಾರೆ.

ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾ ಸಮಿತಿ ಸದಸ್ಯರಾದ ಶಿಲ್ಪಾ ಬಿ.ಕೆ., ಅರುಣ ಹಿರೇಬಾನರ್, ಗೋದಾವರಿ, ಭೀಮು ಆಂದೋಲ, ನಾಗರಾಜ,ಈರಣ್ಣ ಇಸಬಾ, ಪ್ರೀತಿ ಇಂಗಳಿಗಿ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT