ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಕಬ್ಬು ಬೆಳೆಗಾರರಿಂದ 26ರಂದು ಹೆದ್ದಾರಿ ಬಂದ್

ಸಭೆ ಕರೆಯದ ಜಿಲ್ಲಾಧಿಕಾರಿ ವಿಳಂಬ ನೀತಿಗೆ ಕುರಬೂರು ಶಾಂತಕುಮಾರ್ ಖಂಡನೆ
Last Updated 22 ನವೆಂಬರ್ 2021, 16:12 IST
ಅಕ್ಷರ ಗಾತ್ರ

ಕಲಬುರಗಿ: ಜಿಲ್ಲೆಯ ಕಬ್ಬು ಬೆಳೆಗಾರರನ್ನು ಆಲಿಸಲು ಜಿಲ್ಲಾಧಿಕಾರಿ ಅವರು ಇನ್ನೂ ಸಭೆ ಕರೆದಿಲ್ಲ. ಕಬ್ಬಿನ ಎಫ್‌ಆರ್‌ಪಿ ದರ ಪುನರ್‌ ಪರಿಶೀಲನೆ ಮಾಡಬೇಕು. ಕಬ್ಬು ಕಟಾವು ಸಾಗಾಣಿಕೆ ವೆಚ್ಚವನ್ನು ಕಾರ್ಖಾನೆಯವರೇ ಭರಿಸಬೇಕು ಎಂದು ಒತ್ತಾಯಿಸಿ ಇದೇ 26ರಂದು ರಾಜ್ಯದಾದ್ಯಂತ ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡಲಾಗುವುದು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರಬೂರು ಶಾಂತಕುಮಾರ್‌ ಪ್ರಕಟಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಬ್ಬು ದರ ನಿಗದಿ ಉಪ ಉತ್ಪನ್ನಗಳ ಲಾಭ ಹಂಚಿಕೆ ಕಬ್ಬಿನ ಬಾಕಿ ಹಣ ಕೊಡಿಸುವ ಬಗ್ಗೆ ಜಿಲ್ಲೆಯ ಕಬ್ಬು ಬೆಳೆಗಾರರು ಹೋರಾಟ ನಡೆಸುತ್ತಿದ್ದಾಗ ರೈತರ ಮನವಿಯನ್ನು ಸ್ವೀಕರಿಸುವ ಬದಲು ರೈತರನ್ನು ಬಂಧಿಸಿದ ಸರ್ವಾಧಿಕಾರಿ ವರ್ತನೆ ಖಂಡನೀಯ. ಇವರು ಜನಸೇವಕರು ಎಂಬುದನ್ನು ಮರೆತಿದ್ದಾರೆ. ಜನರ ತೆರಿಗೆ ಹಣದಿಂದ ಜೀವನ ನಡೆಯುತ್ತಿದೆ ಎಂಬುದನ್ನು ಮರೆಯಬಾರದು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

2022ರಲ್ಲಿ ರೈತರ ಆದಾಯ ದ್ವಿಗುಣ ಮಾಡುತ್ತೇವೆ ಎಂದು ಪ್ರಧಾನಿ ಹೇಳಿದ್ದಾರೆ. ಈಗ ರೈತರು ಹೆಚ್ಚಿನ ಹಣವನ್ನು ಕೂಲಿಕಾರರಿಗೆ ನೀಡಲು ವ್ಯಯ ಮಾಡುತ್ತಿದ್ದಾರೆ. ಆದ್ದರಿಂದ ರೈತರ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಖಾತ್ರಿಪಡಿಸಬೇಕು. ಇದಕ್ಕಾಗಿ ಕಾಯ್ದೆಯನ್ನು ಜಾರಿಗೊಳಿಸಬೇಕು. ಕೇಂದ್ರ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಮಳೆ, ಗಾಳಿ, ಚಳಿ ಲೆಕ್ಕಿಸದೇ ಹೋರಾಟ ಮಾಡಿ ತಮ್ಮ ಪ್ರಾಣ ಬಲಿದಾನ ಮಾಡಿದ ರೈತರ ಕುಟುಂಬಗಳಿಗೆ ₹ 25 ಲಕ್ಷ ಪರಿಹಾರ ನೀಡಲಿ’ ಎಂದು ಒತ್ತಾಯಿಸಿದರು.

ತೆಲಂಗಾಣ ಸರ್ಕಾರವೇ ಎಲ್ಲ 700 ರೈತ ಕುಟುಂಬಗಳಿಗೆ ತಲಾ ₹ 3 ಲಕ್ಷ ಪರಿಹಾರ ಘೋಷಣೆ ಮಾಡಿದೆ. ಇದರಿಂದ ಎಚ್ಚೆತ್ತುಕೊಂಡು ಪ್ರಧಾನಿ ನರೇಂದ್ರ ಮೋದಿ ಅವರು ತುರ್ತು ಕ್ರಮ ಕೈಗೊಳ್ಳಲಿ ಎಂದರು.

ರಾಜ್ಯದಲ್ಲಿ 7 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತ, ಮೆಕ್ಕೆಜೋಳ, ತೋಟಗಾರಿಕೆ ಬೆಳೆಗಳು ಹಾಳಾಗಿವೆ ಎಂದು ಅಂದಾಜಿಸಲಾಗಿದೆ. ಮಳೆಹಾನಿ, ಬೆಳೆನಷ್ಟ ಪರಿಹಾರವನ್ನು ವೈಜ್ಞಾನಿಕವಾಗಿ ನಿಗದಿಪಡಿಸಿ ಸಂಪೂರ್ಣ ನಷ್ಟವನ್ನು ಭರಿಸುವಂತಾಗಬೇಕು. ಇಂತಹ ರೈತರ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.

ಡಿಸೆಂಬರ್‌ 26ರಂದು ವಿಶ್ವ ರೈತರ ದಿನಾಚರಣೆಯನ್ನು ಮೈಸೂರಿನಲ್ಲಿ ವಿಶಿಷ್ಟವಾಗಿ ಆಚರಿಸಲಾಗುತ್ತದೆ ಎಂದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಗದೀಶ ಪಾಟೀಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧರ್ಮರಾಜ ಸಾಹು, ಶಾಂತವೀರಪ್ಪ ಕಲಬುರಗಿ, ನರಹರಿ ಪಾಟೀಲ, ಬಸವರಾಜ ಪಾಟೀಲ, ಶಾಂತವೀರ ಪಾಟೀಲ, ನಾಗೇಂದ್ರರಾವ್ ದೇಶಮುಖ, ಸತೀಶ್ ಹುಡಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT